ಈಗ ಜೆಡಿಎಸ್‌ನ B team_ಬಿಜೆಪಿ!?
ರಾಜಕಾರಣದ ಬೇರುಗಳು ಸಡಿಲಾದ ಕಾಲವಿದು.
ಇದೇನು ಅಚ್ಚರಿಯ ವಿಷಯ ಅಲ್ಲ. ಹಿಂದೆ ಅವರು ಹೀಗೇ ಸಿಎಂ ಆಗಿದ್ದರು. ಈಗ ವಿಪಕ್ಷ ನಾಯಕರಾಗಬಹುದೇನೊ. ಆದರೆ, ಇಲ್ಲಿ ರಾಷ್ಟ್ರೀಯ ಪಕ್ಷ ಬಿಜೆಪಿ ಲೋಕಸಭೆ ಚುನಾವಣೆ ಗೆಲ್ಲಲು ರಾಜ್ಯದಲ್ಲಿ ಪಕ್ಷವನ್ನು ಜೆಡಿಎಸ್‌ನ ಭತ್ತದ ಹೊರೆಗೆ ಕಟ್ಟಿ, ಹಿಂದಿನ ಸಾಲಲ್ಲಿ ಕುಳಿತು ಮೂರನೆಯ ಸ್ಥಾನಕ್ಕೆ ಇಳಿಯಲು ತಯಾರಾದಂತಿದೆ.
ಹಿಂದೆಯೂ ತನಗೆ ಹೆಚ್ಚು ಸ್ಥಾನ ಬಂದಿದ್ದರೂ ಕುಮಾರಸ್ವಾಮಿಯವರನ್ನು ಸಿಎಂ ಮಾಡಿದ್ದೂ ಹಿಂಗೆಯೇ. ಆಗಲೂ ಈಗಲೂ ಅನಿವಾರ್ಯ ಇರುವುದು ಬಿಜೆಪಿಗೇ ಹೊರತು ಕುಮಾರಸ್ವಾಮಿಯವರಿಗಲ್ಲ. ಹಾಗೆಯೇ ಹಿಂದೆ ಕಾಂಗ್ರೆಸ್‌ಗೇ ಜೆಡಿಎಸ್ ಜತೆ ಸೇರುವ ಅವಸರ ಇತ್ತೇ ಹೊರತು ಕುಮಾರಣ್ಣನಿಗಲ್ಲ.
ಇನ್ನೊಂದು ಮಾತು; ಈಗ ಬರೋ ಟೀಕೆ ಎಂದರೆ ಬಿಜೆಪಿಯ B team ಜೆಡಿಎಸ್ ಅಲ್ಲ, ಜೆಡಿಎಸ್‌ನ B team ಬಿಜೆಪಿ. ಏನಾದರಾಗಲಿ ಎಲ್ಲರಿಗೂ ಅಧಿಕಾರ ಬೇಕು. ಅದರಲ್ಲೂ ಈ ದಿನಗಳಲ್ಲಿ ಬಿಜೆಪಿಗೆ ಹೆಚ್ಚು ಹೆಚ್ಚು. ಅದೇ ಚಾಣಕ್ಯ ನೀತಿ, ಮತ್ತೇನಲ್ಲ. ಇಂತಹದ್ದು ದೇಶ ಆ ದಿನಗಳಲ್ಲಿ ಈ ಮಟ್ಟದಲ್ಲಿ ನೋಡಿರಲಿಲ್ಲ. ಎಲ್ಲೋ ಒಂದೆರಡು ರಾಜ್ಯಗಳಲ್ಲಿ ಅಧಿಕಾರಕ್ಕಾಗಿ ತಮಗೆ ಆಗದವರ ಜತೆ ಹೊಂದಿಕೊಳ್ಳುತ್ತಿದ್ದರು. ಆದರೆ, ಈಗ ಅದೇ ಕೆಲಸವಾಗಿದೆ. ಪಕ್ಷದ ಸಿದ್ದಾಂತ, ಜನಪರತೆ, ಪ್ರಜಾಪ್ರಭುತ್ವದ ಉಳಿವು, ಜನರ ಕಾಳಜಿ, ನೈತಿಕತೆ, ಸ್ವಚ್ಛ ರಾಜಕಾರಣ, ಭ್ರಷ್ಟಾಚಾರ ರಹಿತ ಸೇವೆ ಎಲ್ಲ ಹೊಯ್ತು.
ಇನ್ನು, ಕುಮಾರಸ್ವಾಮಿಯವರದು ಹೇಳಬೇಕಿಲ್ಲ. ಜಾಣ ರಾಜಕಾರಣಿ. ಇವರಿಗೆ ‘ಅವರ’ ದಾಹ ಗೊತ್ತು. ಇವರಿಗೂ ಹೆಂಗೋ ಅಧಿಕಾರ ಬೇಕು. ಹೆಸರಲ್ಲೇ ಇರುವ ‘ಜಾತ್ಯತೀತತೆ’, ಸಿದ್ಧಾಂತ, ಜನ ಪ್ರಶ್ನಿಸುತ್ತಾರೆನ್ನುವ ಅಳುಕು ಇಲ್ಲ. ಅನಾಯಾಸವಾಗೇ ಎರಡು ಸಲ ಅಧಿಕಾರ ಸಿಕ್ಕಿದೆ. ಈಗ ವಿಪಕ್ಷ ನಾಯಕನ ಖುರ್ಚಿ, ಮುಂದೆ ಬಿಜೆಪಿ ಗೆದ್ದರೆ ಜೆಡಿಎಸ್‌ಗೆ ಮಂತ್ರಿ ಸ್ಥಾನಗಳ ಮಾತುಗಳು ಮನೆ ಮಾಡಿವೆ.
ಬಿಡಿ; ಸದ್ಯ ರಾಜಕಾರಣ ಎಂದರೆ ಅಧಿಕಾರ. ಅದು ಪಡೆಯಲು ಬಂಡವಾಳ ಹಾಕೋದು, ಪಡೆಯೋದು ಅಷ್ಟೇ. ಭಾಳ ತಲೆ ಕೆಡಿಸಿಕೊಳ್ಳಬಾರದು.
ಧನ್ಯ ನಾವು ಪ್ರಜೆಗಳು.
– ಶಿವಕುಮಾರ್ ಉಪ್ಪಿನ, ಪತ್ರಕರ್ತ




