ಮಾನ್ಯ ಶ್ರೀ ಸಿದ್ಧರಾಮಯ್ಯನವರೇ, ನಿಮಗೆ ಹಿತವಚನ ಅಥವಾ ಬುದ್ದಿವಾದ ಹೇಳುವಷ್ಟು ದೊಡ್ಡ ಮನುಷ್ಯ ನಾನಲ್ಲ. ಆದರೆ, ನನ್ನ ನಲವತ್ತು ವರ್ಷಗಳ ಸಾರ್ವಜನಿಕ ಬದುಕಿನಲ್ಲಿ ವಿಶೇಷವಾಗಿ ಪತ್ರಿಕೋದ್ಯಮದಲ್ಲಿ ಸೇವೆ ಸಲ್ಲಿಸುತ್ತಾ ನಾನು ಗ್ರಹಿಸಿದ ಅನುಭವ ಮತ್ತು ಬದುಕಿಗೆ ಅಳವಡಿಸಿಕೊಂಡ ತಾತ್ವಿಕ ಸಿದ್ಧಾಂತಗಳನ್ನು ಮಾತ್ರ ಇಲ್ಲಿ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೀನಿ.
ಈವರೆಗೆ ನಿಮ್ಮನ್ನು ಎಂದಿಗೂ ಖಾಸಗಿ ಭೇಟಿಯಾದವನಲ್ಲ. 2003ರಲ್ಲಿ ಉದಯ ಟಿ.ವಿ.ಯ ಮುಖಾಮುಖಿ ಕಾರ್ಯಕ್ರಮಕ್ಕೆ ನೀವು ಬಂದಾಗ, ನನ್ನ ಸಹೋದ್ಯೋಗಿ ತೇಜಸ್ವಿನಿ ಗೌಡ ಮೇಕಪ್ ರೂಂ ನಲ್ಲಿ ಇದ್ದ ಕಾರಣ ನಾನು ನಿಮ್ಮನ್ನು ಸ್ವಾಗತಿಸಿ ಅತಿಥಿಗಳ ಕೋಣೆಗೆ ಕರೆದೊಯ್ದಿದ್ದೆ. ಆ ದಿನ ನಿಮ್ಮ ಆರೋಗ್ಯ ಸರಿ ಇರಲಿಲ್ಲ. ‘’ಶೂಟಿಂಗ್ ಮುಗಿಯುವವರೆಗೂ ನೀನು ನನ್ನ ಜೊತೆ ಇರಪ್ಪಾ, ಆಯಮ್ಮನ ಜೊತೆ ನಾನು ಶೌಚಾಲಯಕ್ಕೆ ಹೋಗಬೇಕು ಎಂದು ಹೇಳಲು ಆಗುವುದಿಲ್ಲ’’ ಎಂದು ಹೇಳಿದಾಗ ನಿಮಗೆ ಚಹಾ ಬದಲು ಅನಾನಸ್ ಜ್ಯೂಸ್ ತರಿಸಿ ಕುಡಿಸಿ ಸ್ಟುಡಿಯೊಗೆ ಕರೆದೊಯ್ದೆ. ಜೊತೆಗೆ ಶೂಟಿಂಗ್ ಮುಗಿಯುವವರೆಗೂ ನಿಮ್ಮ ಜೊತೆ ಸ್ಟುಡಿಯೋದಲ್ಲಿ ಕುಳಿತಿದ್ದೆ. ನೀವು ಆರಾಮವಾಗಿ ಎಲ್ಲವನ್ನು ಮುಗಿಸಿ ಬಂದಾಗ, ವಿಶೇಷ ಚಹಾ ತರಿಸಿ ನಿಮಗೆ ಬಲವಂತ ಮಾಡಿ ಕುಡಿಸಿ ಕಳುಹಿಸಿಕೊಟ್ಟಿದ್ದೆ. ಆ ದಿನ ನಿಮ್ಮ ಪ್ರಾಮಾಣಿಕ ಹಾಗೂ ಮುಚ್ಚುಮರೆ ಇಲ್ಲದೆ ಎಲ್ಲವನ್ನೂ ಹೇಳಿಕೊಳ್ಳುವ ಸೌಜನ್ಯವನ್ನು ನೋಡಿ ನಾನು ಬೆರಗಾಗಿದ್ದೆ.
ಈ ಘಟನೆಯ ನಂತರ 2016ರಲ್ಲಿ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ರಾಜ್ಯ ಸರ್ಕಾರ ನೀಡುವ 2015 ಪರಿಸರ ಪತ್ರಿಕೋದ್ಯಮ ಪ್ರಶಸ್ತಿಯನ್ನು ನಿಮ್ಮಿಂದ ಸ್ವೀಕರಿಸಿದ್ದೆ. ಆ ದಿನ ಪರಸ್ಪರ ಮಾತಿಗೆ ಅವಕಾಶ ಇಲ್ಲದಿದ್ದ ಕಾರಣ ಮುಗುಳ್ನಗೆ ಮಾತ್ರ ನಮ್ಮಿಬ್ಬರ ನಡುವೆ ವಿನಿಮಯವಾಗಿತ್ತು. ಈ ಎರಡು ಪ್ರಸಂಗಗಳನ್ನು ಹೊರತು ಪಡಿಸಿದರೆ, ನಾನು ಮತ್ತೇ ನಿಮ್ಮನ್ನು ಭೇಟಿಯಾಗಲಿಲ್ಲ. ನನ್ನ ಕ್ಷೇತ್ರದ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರನ್ನ ಹೊರತು ಪಡಿಸಿದರೆ, ಈಗಿನ ಯಾವ ರಾಜಕಾರಣಿಗಳ ಜೊತೆಗೂ ನನಗೆ ಸಂಪರ್ಕವಿಲ್ಲ. ನಿಮ್ಮ ಸಮಾಜವಾದಿ ಚಿಂತನೆ ಹಾಗೂ ಬಡವರ ಬಗೆಗಿನ ಕಾಳಜಿಗಳನ್ನು ನಾನು ಹಲವಾರು ಸೈದ್ಧಾಂತಿಕ ಭಿನ್ನಾಭಿಪ್ರಾಯಗಳ ನಡುವೆಯೂ ಗೌರವಿಸುತ್ತಾ ಬಂದವನು.
ಇದೀಗ ವೃತ್ತಿಯಲ್ಲಿ ಪತ್ರಕರ್ತರಾಗಿರುವ ವೀಶ್ವೇಶ್ವರ ಭಟ್ಟ ಅವರ ಮೂರು ಕೃತಿಗಳ ಲೋಕಾರ್ಪಣೆಗೆ ನೀವು ಭಾಗಿಯಾಗುತ್ತಿರುವುದು ಸಾರ್ವಜನಿಕವಾಗಿ ಚರ್ಚೆಯಾಗುತ್ತಿದೆ. ನಾಡಿನ ಓರ್ವ ಮುಖ್ಯಂತ್ರಿಯಾಗಿ ಪತ್ರಕರ್ತನ ಪುಸ್ತಕ ಬಿಡುಗಡೆಗೆ ಭಾಗವಹಿಸಿದರೆ ತಪ್ಪೇನು? ಎಂಬ ಪ್ರಶ್ನೆಯೂ ಹಲವರಿಂದ ಕೇಳಿ ಬರುತ್ತಿದೆ. ಇದು ನಿಮ್ಮ ಅಭಿಪ್ರಾಯ ಆಗಿರಲೂಬಹುದು. ಆದರೆ, ಈ ವಿಷಯದಲ್ಲಿ ಒಂದು ಸ್ಪಷ್ಟೀಕರಣ ನೀಡಲು ಬಯಸುತ್ತೇನೆ. ನೀವು, ನಾನು ಮತ್ತು ನನ್ನ ತಲೆಮಾರಿನ ಅನೇಕ ಗೆಳೆಯರೆಲ್ಲಾ ಓದಿಕೊಂಡಿರುವ ಲೋಹಿಯಾ ಅವರು ರಾಜಕಾರಣಿ ಅಥವಾ ಜನಪ್ರತಿನಿಧಿಯ ಕರ್ತವ್ಯದ ಬಗ್ಗೆ ಹೀಗೆ ಹೇಳುತ್ತಾರೆ. ಈ ಮಾತನ್ನು ಕರ್ನಾಟಕದಲ್ಲಿ ಶಾಂತವೇರಿ ಗೋಪಾಲಗೌಡರು ಆಚರಣೆಗೆ ತಂದಿದ್ದರು.
‘’ಒಂದು ಕ್ಷೇತ್ರದ ಜನಪ್ರತಿನಿಧಿಯಾಗಿ ನೀವುಗಳು ನಿಮಗೆ ಮತ ಚಲಾಯಿಸದೇ ಇರುವ ವ್ಯಕ್ತಿಯ ಹಾಗೂ ಕುಟುಂಬದ ರಕ್ಷಣೆಯನ್ನು ನೋಡಿಕೊಳ್ಳಬೇಕಾದ್ದು ನಿಮ್ಮ ಕರ್ತವ್ಯ. ಏಕೆಂದರೆ, ಜನಪ್ರತಿನಿಧಿ ಎಂದರೆ, ಎಲ್ಲಾ ಜಾತಿ, ಧರ್ಮ, ಮತ್ತು ವರ್ಗಗಳ ರಕ್ಷಕನಾಗಿ ನೀವು ಕಾರ್ಯನಿರ್ವಹಿಸಬೇಕು’’
ಇದು ಲೋಹಿಯಾ ಅವರ ಮಾತು. ನಿಮಗೆ ಅಥವಾ ನೀವು ಪ್ರತಿನಿಧಿಸುವ ಪಕ್ಷಕ್ಕೆ ಮತನೀಡದ ವ್ಯಕ್ತಿಗೆ ಅಥವಾ ಆತನ ಸಮುದಾಯದ ಕ್ಷೇಮವನ್ನು ಬಯಸುವುದರಲ್ಲಿ ತಪ್ಪೇನಿಲ್ಲ. ಆದರೆ, ಬದುಕಿನುದ್ದಕ್ಕೂ ಈ ನಾಡಿನ ಪ್ರಗತಿಪರರನ್ನು, ಚಿಂತಕರನ್ನು ಲೇವಡಿ ಮಾಡಿಕೊಂಡು, ಲಂಕೇಶ್, ಯು.ಆರ್.ಅನಂತಮೂರ್ತಿ, ಗಿರೀಶ್ ಕಾರ್ನಾಡ್, ಡಿ.ಆರ್.ನಾಗರಾಜ್, ಗೌರಿ ಲಂಕೇಶ್ ಸೇರಿದಂತೆ ಎಲ್ಲರನ್ನು ತೆಗಳಿ ಲೇವಡಿ ಮಾಡಿ ಬರೆದಿರುವ ಲೇಖನಗಳ ಕೃತಿಯನ್ನು ನೀವು ಬಿಡುಗಡೆ ಮಾಡಲು ನಿಮ್ಮ ಆತ್ಮ ಸಾಕ್ಷಿ ಒಪ್ಪುತ್ತದೆಯಾ?
ವಿಶ್ವೇಶ್ವರ ಭಟ್ಟರು ನಿಮಗೆ ಮತ ಹಾಕುವುದಿಲ್ಲ. ಜೊತೆಗೆ ಹಾಕಿಲ್ಲ. ಆ ವ್ಯಕ್ತಿಯ ಜೊತೆಗಿನ ಸಂಬಂಧಕ್ಕೆ ನನ್ನ ಅಡ್ಡಿಯಿಲ್ಲ. ನಿಮ್ಮ ನಿವಾಸಕ್ಕೆ ಅಥವಾ ಕಚೇರಿಗೆ ಕರೆಸಿ ಭಟ್ಟರ ಜೊತೆ ಕಾಫಿ ಕುಡಿಯಿರಿ ಅಥವಾ ತಿಂಡಿ ತಿನ್ನಿರಿ ನನ್ನ ಅಭ್ಯಂತರವಿಲ್ಲ. ಆದರೆ, ನೀವು ನಂಬಿದ ಸಿದ್ದಾಂತ, ನಂಬಿಕೆಗಳು ಮತ್ತು ಧೋರಣೆಗಳನ್ನು ಲೇವಡಿ ಮಾಡಿರುವ ಸಂಪಾದಕೀಯ ಲೇಖನಗಳ ಕೃತಿಯನ್ನು ನೀವು ಬಿಡುಗಡೆ ಮಾಡುವುದು ಎಷ್ಟು ಸರಿ ಮತ್ತೊಮ್ಮೆ ಆಲೋಚಿಸಬೇಕಾಗಿ ವಿನಂತಿ.
ವಿಶ್ವೇಶ್ವರ ಭಟ್ಟರು ನನಗೂ ಸಹ ಕಳೆದ ಇಪ್ಪತ್ತೈದು ವರ್ಷಗಳಿಂದ ಸ್ನೇಹಿತರು. ಆದರೆ, ನಮ್ಮಿಬ್ಬರ ಸಂಬಂಧ ಸಭೆ ಸಮಾರಂಭಗಳಲ್ಲಿ ಭೇಟಿಯಾದಾಗ ನಮಸ್ಕರಿಸುವುದು, ಹಲೋ ಎನ್ನುವುದು ಇಲ್ಲವೆ ಅರ್ಧ ಕಪ್ ಕಾಫಿ ಕುಡಿಯುವುದಕ್ಕೆ ಮಾತ್ರ ಸೀಮಿತವಾಗಿದೆ. ಏಕೆಂದರೆ, ನಮ್ಮಿಬ್ಬರ ವೈಯಕ್ತಿಕ ಹಾಗೂ ನಾವು ನಂಬಿರುವ ತಾತ್ವಿಕ ಸಿದ್ಧಾಂತಗಳು ಬೇರೆ ಬೇರೆಯಾಗಿರುವುದರಿಂದ ಅಲ್ಲಿ ಸಂವಾದ ಅಥವಾ ಸಂಬಂಧಕ್ಕೆ ಅವಕಾಶವೇ ಇಲ್ಲ.
ನನಗೆ ವೇದ, ಉಪನಿಷತ್ ಅಥವಾ ಭಗವದ್ಗೀತೆ, ರಾಮಾಯಣ, ಮಹಾಭಾರತ ಇವೆಲ್ಲವುಗಳಿಗಿಂತ ನನ್ನೆದೆಯ ಆತ್ಮಸಾಕ್ಷಿಯ ನುಡಿಗಳು ಮತ್ತು ಅದರ ಪ್ರಜ್ಞೆ ಮುಖ್ಯವಾಗಿದೆ. ಸಾಧ್ಯವಾದರೆ, ನೀವು ವಿಶ್ವೇಶ್ವರ ಭಟ್ಟರು ಬರೆದಿರುವ ಲಂಗೋಟಿ ಎಂಬ ಲೇಖನವನ್ನು ತರಿಸಿಕೊಂಡು ಓದಿರಿ. ನಂತರ ನಿಮ್ಮ ಆತ್ಮಸಾಕ್ಷಿಯ ರೀತಿಯಲ್ಲಿ ನಡೆದುಕೊಳ್ಳಿ. ನನ್ನ ಅಭ್ಯಂತರವಿಲ್ಲ.
ಇಂತಿ ಪ್ರೀತಿಯಿಂದ ನಿಮ್ಮವ
ಡಾ.ಎನ್.ಜಗದೀಶ್ ಕೊಪ್ಪ, ಮೈಸೂರು



