ಬಿಜೆಪಿಯವರು ನಾಡಗೀತೆಗೆ ಎಷ್ಟು ಗೌರವ ಕೊಡುತ್ತಾರೆಂಬುದು ಅರ್ಥವಾಗುತ್ತದೆ: ಟಿ.ಎ.ನಾರಾಯಣ ಗೌಡ

3 years ago

ಶಿವಮೊಗ್ಗದಲ್ಲಿ ಬಿಜೆಪಿ ಚುನಾವಣಾ ಉಸ್ತುವಾರಿ ಅಣ್ಣಾಮಲೈ ಅವರ ನೇತೃತ್ವದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ತಮಿಳರನ್ನು ಓಲೈಸುವ ದೃಷ್ಟಿಯಿಂದ ತಮಿಳು ನಾಡಗೀತೆ ಹಾಡಿಸಿರುವುದು ಅಕ್ಷಮ್ಯ. ಅಣ್ಣಾಮಲೈ ಕುಮ್ಮಕ್ಕಿನಿಂದಲೇ ಈ ಘಟನೆ ನಡೆದಿರುವುದು ಸ್ಪಷ್ಟ. ಇದನ್ನು ಕರ್ನಾಟಕ ರಕ್ಷಣಾ ವೇದಿಕೆ ಖಂಡಿಸುತ್ತದೆ.

ಸಮಾಧಾನದ ವಿಷಯವೆಂದರೆ ಬಿಜೆಪಿ ನಾಯಕ ಕೆ.ಎಸ್.ಈಶ್ವರಪ್ಪ ಸಕಾಲಿಕವಾಗಿ ಮಧ್ಯಪ್ರವೇಶ ಮಾಡಿ ತಮಿಳು ನಾಡಗೀತೆ ನಿಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಕರ್ನಾಟಕದ ನಾಡಗೀತೆ ಹಾಡಲು ಕರೆದರೆ ಯಾರೂ ಸಹ ಮುಂದೆ ಬಂದಿಲ್ಲ. ಬಿಜೆಪಿಯವರು ನಾಡಗೀತೆಗೆ ಎಷ್ಟು ಗೌರವ ಕೊಡುತ್ತಾರೆಂಬುದು ಅರ್ಥವಾಗುತ್ತದೆ.

ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸಂತೋಷ್ ಎಂಬುವವರು ಈ ಚುನಾವಣೆಯಲ್ಲಿ ಕನ್ನಡೇತರನ್ನು ಓಲೈಸಲು ಪಕ್ಷದ ಮುಖಂಡರಿಗೆ ಕರೆ ನೀಡಿರುವ ಸುದ್ದಿ ಮಾಧ್ಯಮಗಳಲ್ಲಿ ಪ್ರಕಟವಾಗಿತ್ತು. ಇದಕ್ಕೆ ಪೂರಕವಾಗಿಯೇ ಶಿವಮೊಗ್ಗದಲ್ಲಿ ತಮಿಳರ ಸಮಾವೇಶ ನಡೆಸಲಾಗಿದೆ.

ಕನ್ನಡಿಗರಿಗೆ ತಮಿಳರ ಬಗ್ಗೆಯಾಗಲೀ, ತಮಿಳು ನಾಡಗೀತೆ ಬಗ್ಗೆಯಾಗಲೀ ಅಗೌರವವಿಲ್ಲ. ಆದರೆ ಕರ್ನಾಟಕದಲ್ಲಿ ತಮಿಳು ನಾಡಗೀತೆ ಹಾಡಿಸುವ ಔಚಿತ್ಯವಾದರೂ ಏನು? ತಮಿಳರ‌ನ್ನು ಓಲೈಸಲು ಬಿಜೆಪಿ ಇಷ್ಟು ಕೆಳಮಟ್ಟಕ್ಕೆ ಇಳಿಯಬೇಕಾಗಿರಲಿಲ್ಲ. ತಾಕತ್ತಿದ್ದರೆ ಇದೇ ಅಣ್ಣಾಮಲೈ ತಮಿಳುನಾಡಿನಲ್ಲಿ ಕನ್ನಡಿಗರ ಸಮಾವೇಶ ನಡೆಸಿ ಕರ್ನಾಟಕದ ನಾಡಗೀತೆ ಹಾಡಿಸಲಿ ನೋಡೋಣ.

ಅಣ್ಣಾಮಲೈ ಅಪ್ಪಟ ಕನ್ನಡಿಗರು ವಾಸಿಸುವ ಬೆಂಗಳೂರಿನ‌ ಗೋವಿಂದರಾಜನಗರ ಕ್ಷೇತ್ರದಲ್ಲಿ ತಮಿಳಿನಲ್ಲಿ ಪ್ರಚಾರ ಭಾಷಣ ನಡೆಸಿದ್ದಾರೆ. ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷನಿಗೆ ಕರ್ನಾಟಕದಲ್ಲಿ ಏನು ಕೆಲಸ? ಇಂಥ ಕೀಳುಮಟ್ಟದ ಓಲೈಕೆ ರಾಜಕಾರಣದಿಂದ ಬಿಜೆಪಿಗೆ ನಷ್ಟವೇ ಹೊರತು ಲಾಭವಿಲ್ಲ ಎಂಬುದನ್ನು ಆ ಪಕ್ಷದವರು ಮನಗಾಣಬೇಕು.

ಚುನಾವಣೆ ಸಂದರ್ಭದಲ್ಲಿ ಹಲವು ರಾಜಕೀಯ ಪಕ್ಷಗಳು ಬೇರೆ ರಾಜ್ಯಗಳ ರಾಜಕಾರಣಿಗಳು, ಚಿತ್ರನಟರನ್ನು ಕರೆಯಿಸಿ ಬೇರೆ ಬೇರೆ ಭಾಷೆಗಳಲ್ಲಿ ಭಾಷಣ ಮಾಡಿಸಿ ಕನ್ನಡಿಗರನ್ನು ಅಪಮಾನಿಸುತ್ತಿದ್ದಾರೆ. ಇದು ನಾಡದ್ರೋಹದ ಕೆಲಸ. ಇಂಥವರಿಗೆ ಮತದಾನ‌ ಸಂದರ್ಭದಲ್ಲಿ ಸರಿಯಾದ ಉತ್ತರವನ್ನು ಕನ್ನಡಿಗರು ನೀಡಬೇಕು.

  • ಟಿ.ಎ.ನಾರಾಯಣಗೌಡ, ರಾಜ್ಯಾಧ್ಯಕ್ಷ, ಕರ್ನಾಟಕ ರಕ್ಷಣಾ ವೇದಿಕೆ

Leave a Reply