ಇತ್ತೀಚೆಗೆ ನಿಧನನಾದ ನನ್ನ ಸೋದರ ಸಂಬಂಧಿ ಕೆ,ಟಿ.ಕೃಷ್ಣನ ಉತ್ತರಕ್ರಿಯಾದಿ ಕಾರ್ಯಕ್ಕೆ ಈ ದಿನ ಊರಿಗೆ ಹೋಗಿ ಬಂದೆ. ಮದ್ದೂರಿನಿಂದ ಬೆಸಗರಹಳ್ಳಿ ಮಾರ್ಗವಾಗಿ ಕೊಪ್ಪಕ್ಕೆ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದಾಗ, ಬೆಸಗರಹಳ್ಳಿ ಪ್ರವೇಶಿಸುತ್ತಿದ್ದಂತೆ ನನ್ನ ಎಂಟನೇ ತರಗತಿ ಸಹಪಾಠಿ ಬಿ.ಎಲ್. ಅಂಬುಜಾಳ ಮನೆಯ ಮುಂದೆ ಬಸ್ ಹಾಯ್ದು ಹೋಗುವಾಗ ಆಕೆ ನೆನಪಾಗಿ ಮನಸ್ಸು ಭಾವೋದ್ರೇಕಕ್ಕೆ ಒಳಗಾಯಿತು. ಜೊತೆಗೆ ಇನ್ನೊಬ್ಬ ಸಹಪಾಠಿ ಬಿ.ಎಸ್. ಮಂಜುನಾಥ ಸಹ ನೆನಪಾದನು. ಇವರಿಬ್ಬರೂ ನಂತರದ ದಿನಗಳಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು.
ನನ್ನೂರಿನಲ್ಲಿ ಹೈಸ್ಕೂಲ್ ಇಲ್ಲದ ಕಾರಣಕ್ಕಾಗಿ ಎಂಟು ಕಿಲೊಮೀಟರ್ ದೂರದ ಬೆಸಗರಳ್ಳಿ ಸರ್ಕಾರಿ ಪ್ರೌಢಶಾಲೆಗೆ 1969 ರಲ್ಲಿ ನಾನು ದಾಖಲಾಗಿದ್ದೆ. ಏಳನೇ ತರಗತಿಯಲ್ಲಿ ಶೆಕಡಾ 69 ರಷ್ಟು ಅಂಕ ತೆಗೆದಿದ್ದ ಕಾರಣಕ್ಕಾಗಿ ಕೇವಲ ಹದಿನಾರು ಮುಸ್ಲಿಂ ಹುಡುಗರು ಮತ್ತು ಹುಡಗಿಯರು ಇದ್ದ ಇಂಗ್ಲೀಷ್ ಮಾಧ್ಯಮಕ್ಕೆ ಶಾಲೆಯ ಹೆಡ್ ಮಾಸ್ಟರ್ ಸುಬ್ಬಯ್ಯ ಎಂಬುವವರು ನನ್ನನ್ನು ಅಲ್ಲಿಗೆ ಹಾಕಿದ್ದರು. ಇಂಗ್ಲೀಷ್, ಕನ್ನಡ, ಹಿಂದಿ ತರಗತಿಗಳಿಗೆ ಈ ಎಲ್ಲಾ ಸಹಪಾಠಿಗಳ ಜೊತೆ ಸೇರಿ ಪಾಠ ಕೇಳುತ್ತಿದ್ದೆ.
ಬೆಳಿಗ್ಗೆ ಮನೆಯಲ್ಲಿ ಉಳಿದಿದ್ದ ತಂಗಳು ರಾಗಿ ಮುದ್ದೆಯನ್ನು ಮೊಸರಿನಲ್ಲಿ ಕಲೆಸಿಕೊಂಡು ತಿಂದು, ನನ್ನ ಅಜ್ಜಿ ( ಅಪ್ಪನ ತಾಯಿ) ಕೊಡುತ್ತಿದ್ದ ಹತ್ತು ಪೈಸೆಯನ್ನು ಜೇಬಿನಲ್ಲಿಟ್ಟುಕೊಂಡು ಬೆಸಗರಹಳ್ಳಿಗೆ ನಡೆದು ಬರುತ್ತಿದ್ದೆ. ಮಧ್ಯಾಹ್ನ ಭೋಜನಕ್ಕೆ ಶಾಲೆ ಬಿಟ್ಟಾಗ ಎಲ್ಲರೂ ಊಟಕ್ಕೆ ಹೋದರೆ, ನಾನು ಅಂಗಡಿಯಲ್ಲಿ ಐದು ಪೈಸೆಗೆ ಬೊಗಸೆ ತುಂಬಾ ಕಡಲೆ ಕಾಯಿ ತೆಗೆದುಕೊಂಡು ತಿಂದು ಬಾವಿಯಲ್ಲಿ ನೀರು ಸೇದಿಕೊಂಡು ಹೊಟ್ಟೆ ತುಂಬಾ ನೀರು ಕುಡಿಯುತ್ತಿದ್ದೆ. ನಾನು ಹಸಿವಿನಿಂದ ಬಳಲುವುದನ್ನು ನೋಡಿ ಅಂಬುಜಾ, ಜಗಿ ಬಾರೋ ಎಂದು ಕೈ ಹಿಡಿದು ಕರೆದುಕೊಂಡು ಹೋಗಿ ಶಾಲೆಯ ಪಕ್ಕದಲ್ಲಿದ್ದ ಪಟೇಲ್ ಲಿಂಗೇಗೌಡ ಎಂಬ ಆಕೆಯ ತಂದೆಯರಿಗೆ ಮತ್ತು ತಾಯಿಗೆ ಪರಿಚಯಿಸಿ ಮನೆಯಲ್ಲಿ ಊಟ ಹಾಕಿಸುತ್ತಿದ್ದಳು.
ಬೆಸಗರಹಳ್ಳಿಯ ಪ್ರಸಿದ್ಧ ವ್ಯಾಪಾರಸ್ಥರಾಗಿದ್ದ ಲಿಂಗಾಯುತ ಸಮುದಾಯದ ಬಸಪ್ಪ ಎಂಬುವರ ಪುತ್ರ ಮಂಜುನಾಥ ನಾನು ಹಣವಿಲ್ಲದೆ ನೋಟ್ ಬುಕ್, ಇಂಕ್ ಬಾಟಲ್, ಪೆನ್, ಪಠ್ಯ ಪುಸ್ತಕ ತೆಗೆದುಕೊಳ್ಳಲು ಒದ್ದಾಡುವಾಗ, ತನ್ನ ಅಂಗಡಿಯಿಂದ ಇವುಗಳನ್ನು ತಂದು ನನಗೆ ನೀಡಿ ಶಿಕ್ಷಣಕ್ಕೆ ನೆರವಾಗುತ್ತಿದ್ದ. ಅಂಬುಜಾ ಎಸ್.ಎಸ್.ಎಲ್.ಸಿ. ನಂತರ ತನ್ನ ಸೋದರ ಮಾವನನ್ನು ವಿವಾಹವಾಗಿ ನಂತರ ಆತ್ಮಹತ್ಯೆ ಮಾಡಿಕೊಂಡಳು. ಮಂಜು ತನ್ನ ಮನೆಯ ಮೂರನೇ ಮಹಡಿಯಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡನು.
ಈ ಎರಡು ಜೀವಗಳನ್ನು ನೆನದು ಮನಸ್ಸು ಭಾವೋದ್ರೇಕಕ್ಕೆ ಒಳಗಾಗಿತ್ತು. ಬಸ್ ಕೊಪ್ಪಕ್ಕೆ ಹೋಗುವ ಮಾರ್ಗದಲ್ಲಿ ನಾನು ಓದುತ್ತಿದ್ದ ಹೈಸ್ಕೂಲ್ ಬಳಿ ಬರುತ್ತಿದ್ದಂತೆ ಅಲ್ಲಿನ ಬಾಗೆಮರನ್ನು ನೋಡಿದಾಕ್ಷಣ, ನನಗೆ ಅರಿವಿಲ್ಲದಂತೆ ಕಣ್ಣಿರ ಕಟ್ಟೆ ಒಡೆಯಿತು. ಕರವಸ್ತç ತೆಗೆದುಕೊಂಡು ಮುಖ ಮುಚ್ಚಿ ಮನಸ್ಸನ್ನು ತಹಬದಿಗೆ ತಂದುಕೊಂಡೆ. ಏಕೆಂದರೆ, ಚಿತ್ರದಲ್ಲಿರುವ ಈ ಬಾಗೆಮರವು ಅಂದಿನ ನನ್ನ ಅಪಮಾನಕ್ಕೆ ಸಾಕ್ಷಿಯಾಗಿ ನಿಂತಿದ್ದ ಮಾದರಿಯಲ್ಲಿ, ಎಲ್ಲಾ ಅಪಮಾನಗಳನ್ನು ಮೆಟ್ಟಿ ನಿಂತು ಬದುಕು ಕಟ್ಟಿಕೊಂಡ ನನ್ನ ಹೋರಾಟದ ಬದುಕಿಗೆ ಇಂದಿಗೂ ಸಾಕ್ಷಿಯಾಗಿ ನಿಂತಿದೆ.
ಆ ದಿನ ನನಗಿನ್ನೂ ನೆನಪಿದೆ. ಅದು 1969 ರ ಜುಲೈ 11 ಅಥವಾ 12 ಇರಬೇಕು. ಚೆಂದ್ರನ ಮೇಲೆ ಅಮೇರಿಕಾದ ನೀಲ್ ಆರ್ಮಸ್ಟಾಂಗ್ ಮೊದಲ ಹೆಜ್ಜೆಯ ಗುರುತನ್ನು ಮೂಡಿಸಿದ ಮಹತ್ವದ ದಿನ. ಆ ದಿನ ಶಾಲೆಯ ಪ್ರಾರ್ಥನೆಯಾದ ನಂತರ ಶಾಳೆಯ ಫೀಜು ಕಟ್ಟದೇ ಇರುವ ವಿಧ್ಯಾರ್ಥಿಗಳನ್ನು ಹೊರತು ಪಡಿಸಿ ಇತರೆ ವಿದ್ಯಾರ್ಥಿಗಳು ತರಗತಿಗೆ ಹೋಗಬೇಕೆಂದು ಶಿಕ್ಷಕರು ಹೇಳಿದ ನಂತರ ಎಲ್ಲರೂ ತರಗತಿಗೆ ಹೋದರು. ನಾನೂ ಸೇರಿದಂತೆ ನಾಲ್ಕು ಮಂದಿ ವಿದ್ಯಾರ್ಥಿಗಳು ಆ ವರ್ಷದ ವಾರ್ಷಿಕ ಶುಲ್ಕ ಹದಿಮೂರು ರೂಪಾಯಿಗಳನ್ನು ಇನ್ನೂ ಪಾವತಿಸಿರಲಿಲ್ಲ. ಹಾಗಾಗಿ ನಮ್ಮನ್ನು ಮರದ ಕೆಳೆಗೆ ನಿಲ್ಲಿಸಿ ಎರಡು ಕೈಗಳನ್ನು ಮೇಲಕ್ಕೆ ಎತ್ತಿಸಿ, ಒಂಟಿಗಾಲಿನಲ್ಲಿ ನಿಲ್ಲಿಸಿದ್ದರು.
ನಾನು ಧರಿಸಿದ್ದ ಕಾಕಿ ನಿಕ್ಕರ್ ಹಿಂಬದಿಯಲ್ಲಿ ಹರಿದು ಹೋಗಿತ್ತು. ಮೊದಲ ಪಿರಿಯಡ್ ಮುಗಿದ ನಂತರ ಕೆಲವು ತರಗತಿಯ ಹುಡುಗರು ಆಟಕ್ಕೆ ಬಂದರು. ತಿಕದ ಬಳಿ ನನ್ನ ನಿಕ್ಕರ್ ಹರಿದು ಹೋಗಿದ್ದನ್ನು ಕಂಡ ಅವರು ಬಯಲಿನಲ್ಲಿ ಬಿದ್ದಿದ್ದ ಹಳೆಯ ಕಾಗದದ ಚೂರುಗಳನ್ನು ತಂದು ಪೋಸ್ಟ್ ಡಬ್ಬಕ್ಕೆ ಕಾಗದ ಹಾಕುವಂತೆ ಹಾಕಿ, ಪೋಸ್ಟ್ ಎಂದು ಹೇಳಿಕೊಂಡು ಜೋರಾಗಿ ನಗುತ್ತಿದ್ದರು. ಒಂಟಿಗಾಲಿನಲ್ಲಿ ನಿಲ್ಲಿಸಿದ ಶಿಕ್ಷೆಗಿಂತ ಉಳ್ಳವರ ಮನೆಯ ಹುಡುಗರು ನನ್ನನ್ನ ಅಪಮಾನ ಮಾಡಿದ ವೈಖರಿಗೆ ನನ್ನ ಕಣ್ಣಿನಲ್ಲಿ ಹರಿದ ಕಣ್ಣಿರ ಧಾರೆ ನನ್ನ ಕೆನ್ನೆ ಮಾತ್ರವಲ್ಲ, ಎದೆಯನ್ನು ತೋಯಿಸಿಬಿಟ್ಟಿತು. ಆ ಕ್ಷಣದಲ್ಲಿ ನಾನು ಈ ಜಗತ್ತನನ್ನು ಮೆಟ್ಟಿ ನಿಲ್ಲಬೇಕು, ನನ್ನನ್ನು ಅಪಮಾನಿಸಿದ ಸಮಾಜ ನನ್ನತ್ತ ತಿರುಗಿ ನೋಡಬೇಕು ಎಂದು ತೀರ್ಮಾನಿಸಿದೆ. ಈ ನಿರ್ಧಾರವನ್ನು ಎದೆಯೊಳಗೆ ಅಳಿಸಿಹೋಗದಂತೆ ಶಿಲಾ ಶಾಸನದಂತೆ ಆ ದಿನ ಬರೆದಿಟ್ಟುಕೊಂಡೆ.
1972 ರಲ್ಲಿ ಎಸ್.ಎಸ್.ಎಲ್.ಸಿ.ಯ ಪ್ರಥಮ ಪ್ರಯತ್ನದಲ್ಲಿ ನಾನು ಇಂಗ್ಲೀಷ್ ಮತ್ತು ವಿಜ್ಞಾನದಲ್ಲಿ ಪೇಲಾದೆ. ಸೆಪ್ಟಂಬರ್ ತಿಂಗಳಿನಲ್ಲಿ ಪಾಸಾದೆ. ಆ ಕಾಲದಲ್ಲಿ ಪೊಲೀಸ್ ಹುದ್ದೆಗೆ, ಕಂಡಕ್ಟರ್ ಹುದ್ದೆಗೆ, ವಿಲೇಜ್ ಅಕೌಟೆಂಟ್ ಹುದ್ದೆಗೆ ಮತ್ತು ಪ್ರೈಮರಿ ಶಾಲಾ ಶಿಕ್ಷಕರ ಹುದ್ದೆಗೆ ಅರ್ಜಿ ಸಲ್ಲಿಸಿದರೆ ತಕ್ಷಣ ಉದ್ಯೋಗ ದೊರಕುತ್ತಿತ್ತು. ಪೊಲಿಸ್ ಹುದ್ದೆಗೆ ಅರ್ಜಿ ಹಾಕಿದವರನ್ನು ಮನೆಗೆ ಬಂದು ಎಳೆದುಕೊಂಡು ಹೋಗುತ್ತಿದ್ದರು. ಶಾಲಾ ಶಿಕ್ಷಕರ ಹುದ್ದೆಗೆ ನೇಮಕಾತಿ ಮಾಡಿಕೊಂಡು ಹತ್ತು ತಿಂಗಳು ತರಬೇತಿ ನಿಡುತ್ತಿದ್ದರು. ನನ್ನ ಅಪ್ಪನಿಗೆ ಮಗನಿಗೆ ಸರ್ಕಾರಿ ಉದ್ಯೋಗ ಸಿಗುತ್ತದೆ ಎಂಬ ಖುಷಿಯಾಗಿತ್ತು.
ಆದರೆ, ನಾನು ಉದ್ಯೋಗಕ್ಕೆ ಹೋಗಲು ನಿರಾಕರಿಸಿ, ಪಿ.ಯು.ಸಿ. ಓದುತ್ತೇನೆ ಎಂದಾಗ, ಆ ದಿನ ಸೆಪ್ಟಂಬರ್ ತಿಂಗಳ ಮಳೆಗಾಲದಲ್ಲಿ ಹೊಲದಲ್ಲಿ ರಾಗಿ ನಾಟಿ ಮಾಡುತ್ತಿದ್ದ ನನ್ನ ಅಪ್ಪ, ನನ್ನನ್ನು ಹೊಲದಲ್ಲಿ ಅಟ್ಟಾಡಿಸಿಕೊಂಡು ಹೊಡೆದಿದ್ದನು. ಬೆನ್ನು ಮೂಳೆಗೆ ಬಿದ್ದ ಕೋಲಿನ ಏಟನ್ನು ತಡೆಯಲಾರದೆ, ಹೊಲದ ತೆವರಿನ ಬಳಿ ಇದ್ದ ಬಸರಿ ಮರದ ಅಡಿಯಲ್ಲಿ ಮಕಾಡ ಮಲಗಿ ಬಿಕ್ಕಳಿಸಿ ಅಳುತ್ತಿದ್ದ ನನ್ನನ್ನು ನನ್ನ ಮನೆಯ ಶಾಶ್ವತ ಕೂಲಿಯಾಳು ಆಗಿದ್ದ ದಲಿತ ಸಮುದಾಯದ ತಿಮ್ಮಮ್ಮ ಮತ್ತು ಆಕೆಯ ಪುತ್ರಿ ಹೊನ್ನಿ ಸಮಾಧಾನ ಪಡೆಸಿದ್ದರು. ಅಂದು ಪೆಟ್ಟು ತಿಂದ ಭೂಮಿಯನ್ನು ಅದರ ನೆನಪಿಗಾಗಿ ಆ ಒಂದು ಎಕರೆ ಭೂಮಿಯನ್ನು ನಾನು ಪಿತ್ರಾರ್ಜಿತ ಆಸ್ತಿಯಾಗಿ ಈಗ ಪಡೆದಿದ್ದೀನಿ. ಮನೆ, ತೋಟ, ಯಾವುದರಲ್ಲಿಯೂ ಪಾಲು ಪಡೆದಿಲ್ಲ. ಈಗ ಆ ಭೂಮಿಯಲ್ಲಿ ಊರಿನಲ್ಲಿರುವ ನನ್ನ ತಮ್ಮ ಕಬ್ಬು, ರಾಗಿ ಬೆಳೆದು ಕೊಂಡು ಅನುಭವಿಸುತ್ತಿದ್ದಾನೆ. ನಾನು ಅವನಿಂದ ಏನನ್ನೂ ಪಡೆಯುತ್ತಿಲ್ಲ.
ಉದ್ಯೋಗಕ್ಕೆ ಹೋಗಲಿಲ್ಲ ಎಂಬ ಕಾರಣಕ್ಕಾಗಿ ನನ್ನ ಅಪ್ಪ ನನ್ನನ್ನು ಎರಡು ವರ್ಷ ಹಸು,ಕುರಿ ಮೇಯಿಸಲು ಹಾಕಿದ್ದನು. ನನ್ನ ಬದುಕಿನ ಪುಣ್ಯ ಎಂಬಂತೆ 1974 ರಲ್ಲಿ ನನ್ನೂರಿಗೆ ಬಂದ ಪಿ.ಡಬ್ಲು.ಡಿ. ಇಂಜಿಯರ್ ಒಬ್ಬರ ಪುತ್ರಿಯ ಕಣ್ಣಿಗೆ ನಾನು ಬಿದ್ದ ಫಲವಾಗಿ ಅವಳನ್ನು ವಿವಾಹವಾಗುವ ಸಲುವಾಗಿ ಮತ್ತೇ 1975 ರಿಂದ ಶಿಕ್ಷಣ ಮುಂದುವರಿಸಿದೆ. 1981 ರಲ್ಲಿ ಡಿಗ್ರಿ ಮುಗಿಸಿದ ನಾನು 1989 ರಲ್ಲಿ ಆಕೆಯನ್ನು ವಿವಾಹವಾದ ನಂತರ 1990 ರಿಂದ 92 ರವರೆಗೆ ಎಂ.ಎ. ಅರ್ಥಶಾಸ್ತç, 1992ರಿಂದ 1995 ರವರೆಗೆ ಎಲ್.ಎಲ್.ಬಿ. ಪದವಿ ಕೋರ್ಸ್, ಆನಂತರ ಹಂಪಿ.ವಿ.ವಿಯಲ್ಲಿ ಅರ್ಥಶಾಸ್ತ್ರದಲ್ಲಿ ಡಿ.ಲಿಟ್ ಪದವಿ ಪಡೆದೆ. ಆನಂತರ ಲೇಖಕನಾಗಿ, ಪತ್ರಕರ್ತನಾಗಿ ಬದುಕಿದ್ದು ಈಗ ಇತಿಹಾಸ.
ಬಾಲ್ಯದಲ್ಲಿ ನಾನು ಅನುಭವಿಸಿದ ಅಪಮಾನದ ಒಂದೇ ಕಾರಣಕ್ಕಾಗಿ 68ನೇ ವರ್ಷದ ಇಲ್ಲಿಯವರೆಗೆ ಯಾವುದೇ ಅಧಿಕಾರಸ್ಥ ವ್ಯಕ್ತಿಗಳ ಎದುರು ಅವರು ರಾಜಕಾರಣಿಯಾಗಿರಲಿ ಅಥವಾ ಅಧಿಕಾರಿಗಳಾಗಿರಲಿ ಅವರೆದುರು ನಾನು ಕೈ ಕಟ್ಟಿ ನಿಲ್ಲಲಿಲ್ಲ. ಹಲ್ಲು ಗಿಂಜಲಿಲ್ಲ. ನನ್ನ ಸಿಟ್ಟು ಮತ್ತು ಆಕ್ರೋಶ ಇವುಗಳಲ್ಲಿ ದ್ವೇಷವಿಲ್ಲ. ಇದನ್ನು ನನ್ನೂರಿನ ಜನ, ಬೆಸಗರಹಳ್ಳಿಯ ಜನ ಮತ್ತು ನನ್ನ ಮಿತ್ರರು ಮತ್ತು ನನ್ನ ಮಂಡ್ಯ ಜಿಲ್ಲೆಯ ಜನತೆ ಅರ್ಥ ಮಾಡಿಕೊಂಡಿದ್ದಾರೆ. ಜಗಿ ಅಥವಾ ಜಗಣ್ಣ ಸಿಟ್ಟಿನ ಮನುಷ್ಯ ಎಂದು ಮಾತನಾಡಬಲ್ಲರೇ ಹೊರತು, ಕೆಡುಕಿನ ಮನುಷ್ಯ ಎಂದು ಯಾರೂ ಭಾವಿಸಿಲ್ಲ. ಹುಟ್ಟಿದ ಮತ್ತು ಬೆಳೆದ ನೆಲದ ಸಂಸ್ಕೃತಿಯ ಈ ಪ್ರೀತಿ ನನ್ನ ಪಾಲಿಗೆ ಅತಿ ದೊಡ್ಡ ಸಂಪತ್ತು. ಅದು ನನ್ನನ್ನು ಅಪ್ಪಟ ಮನುಷ್ಯನನ್ನಾಗಿ ಮಾಡಿದೆ. ಊರಿನ ಕಡೆ ಹೋದರೆ ಸಾಕು, ಬಾಲ್ಯದ ನೆನಪುಗಳು, ಬಾಲ್ಯದ ಗೆಳೆಯರು ನೆನಪಾಗುತ್ತಾರೆ ಕಳೆದವಾರ ಬೆಸಗರಹಳ್ಳಿಯ ಹೈಸ್ಕೂಲು ಸಹಪಾಠಿ ಬಿ.ರಘು ಜೊತೆ ಮಾತನಾಡುತ್ತಾ, ಅವರ ಮನೆಯಲ್ಲಿ ಊಟ ಮಾಡಿದ ಕ್ಷಣಗಳನ್ನು ನೆನದು ಕಣ್ಣೀರು ಹಾಕಿದ್ದೆ.
ನನಗೆ ನೆರವಾದವರು ಮತ್ತು ಅನ್ನ ಹಾಕಿದವರನ್ನು ನಾನು ಇಂದಿಗೂ ಕೂಡಾ ತಿನ್ನುವ ಅನ್ನದ ಜೊತೆ ಮತ್ತು ಉಸಿರಾಡುವ ಗಾಳಿಯ ಜೊತೆ ಕೃತಜ್ಞತೆಯಿಂದ ಸ್ಮರಿಸುತ್ತೇನೆ.
– ಜಗದೀಶ್ ಕೊಪ್ಪ, ಹಿರಿಯ ಪತ್ರಕರ್ತರು



