ಪರ್ಯಾಯ ಭೂಮಿ ಪಡೆಯಲು ಕ್ರಮ ವಹಿಸುವಂತೆ ಸೂಚಿಸಿದ ಈಶ್ವರ್ ಖಂಡ್ರೆ

2 years ago

#IshwarKhandre #suggested #action #alternative #land

ಬೆಳಗಾವಿ: ರಾಜ್ಯದಲ್ಲಿ ಅತ್ಯಂತ ಕಡಿಮೆ ಅರಣ್ಯ ವ್ಯಾಪ್ತಿ ಇರುವ ವಿಜಯಪುರದಲ್ಲಿ ಆಲಮಟ್ಟಿ ಜಲಾಶಯ ಮೊದಲ ಹಂತದ ನಿರ್ಮಾಣಕ್ಕೆ 1989ರಲ್ಲಿ 101 ಹೆಕ್ಟೇರ್ ಅರಣ್ಯ ಭೂಮಿ ನೀಡಲಾಗಿದ್ದರೂ, ಈವರೆಗೆ ಬದಲಿ ಭೂಮಿ (ಪರ್ಯಾಯ) ಪಡೆಯದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಅರಣ್ಯ, ಸಚಿವ ಈಶ್ವರ್ ಬಿ ಖಂಡ್ರೆ, ಕೂಡಲೇ ಪರ್ಯಾಯ ಭೂಮಿ ಪಡೆಯಲು ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಭಾಲ್ಕಿಯಿಂದ ಬೆಳಗಾವಿ ಅಧಿವೇಶನಕ್ಕೆ ತೆರಳುವ ಮಾರ್ಗದಲ್ಲಿ ವಿಜಯಪುರದ ಅರಣ್ಯ ಇಲಾಖೆಯ ಅತಿಥಿ ಗೃಹದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಎರಡು ಮತ್ತು ಮೂರನೇ ಹಂತ ಸೇರಿ ಒಟ್ಟು 435ಕ್ಕೂ ಹೆಚ್ಚು ಹೆಕ್ಟೇರ್ ಅರಣ್ಯ ಭೂಮಿ ನೀಡಬೇಕಾಗಿದ್ದು, ಭೂಮಿ ಪಡೆದು ಅರಣ್ಯ ಬೆಳೆಸಲು ಕ್ರಮ ವಹಿಸುವಂತೆ ಸೂಚನೆ ನೀಡಿದರು.

ವಿಜಯಪುರದಲ್ಲಿ ಹಸಿರು ವಲಯ ವ್ಯಾಪ್ತಿ (ಹಸಿರು ಹೊದಿಕೆ) ಕಡಿಮೆ ಇದ್ದು, ಇಲ್ಲಿ ಎತ್ತರದ ಸಸಿಗಳನ್ನು ನೆಡುವ ಮೂಲಕ ಹಸಿರು ಹೊದಿಕೆ ಹೆಚ್ಚಿಸಬೇಕು. ರಾಷ್ಟ್ರೀಯ ಹೆದ್ದಾರಿಗಳಲ್ಲಿ ಬಫರ್ (ಮೀಸಲು) ವಲಯದ ಹೊರಗೆ ಕನಿಷ್ಠ ಎರಡು ಮತ್ತು ಮೂರು ಸಾಲು ಮರಗಳನ್ನು ಬೆಳೆಸಲು ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶಿಸಿದರು.

ಜೊತೆಗೆ ಗಣಿ ಕಂಪನಿಗಳು ಅರಣ್ಯ ಇಲಾಖೆಗೆ ನೀಡಬೇಕಾದ ತೀರುವಳಿ ಭೂಮಿ ನೀಡದೇ ಇದ್ದಲ್ಲಿ, ಸ್ವಯಂ ಪ್ರೇರಿತವಾಗಿ ತಮ್ಮ ಜಮೀನು ಮಾರಾಟ ಮಾಡಲು ರೈತರಿಂದ ಜಮೀನು ಖರೀದಿಸಿಕೊಡುವಂತೆ ಮತ್ತು ಪ್ರತಿ ವರ್ಷ ಕನಿಷ್ಠ ಶೇ.1ರಷ್ಟು ಹಸಿರು ಹೊದಿಕೆ ಹೆಚ್ಚಿಸಬೇಕು ಎಂದು ಸೂಚನೆ ನೀಡಿದರು.

ಸಾಮಾಜಿಕ ಅರಣ್ಯೀಕರಣದಡಿ ಮುಂದಿನ ವರ್ಷ ಕನಿಷ್ಠ 10 ಲಕ್ಷ ಸಸಿ ನೆಡಲು ಗುರಿ ಹಾಕಿಕೊಳ್ಳುವಂತೆ ಮತ್ತು ಅದಕ್ಕಾಗಿ ಸಸಿಗಳನ್ನು ಬೆಳೆಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

Leave a Reply