ಕಾಂಗ್ರೆಸ್ ದೇವಾಲಯಗಳ ಆದಾಯವನ್ನು ಮಸೀದಿ, ಚರ್ಚ್ ಗಳಿಗೆ ವ್ಯಯಿಸುತ್ತಿದೆಯೇ?

2 years ago

ಬಿಜೆಪಿ ನಾಯಕರೇ ಓಟಿಗಾಗಿ ಸುಳ್ಳುಗಳನ್ನು ಹೇಳಬೇಡಿ

ಇತ್ತೀಚಿನ ದಿನಗಳಲ್ಲಿ ಅದರಲ್ಲೂ ವಿಶೇಷವಾಗಿ 2013 ರಿಂದ 2018ರವರೆಗೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಂತಹ ಸಂದರ್ಭದಲ್ಲಿ ಮತ್ತು ಈಗ ಕಾಂಗ್ರೆಸ್ ಸರ್ಕಾರ ಆಡಳಿತ ನಡೆಸುತ್ತಿರುವ ದಿನಗಳಲ್ಲಿ ಬಿ.ಜೆ.ಪಿಯ ನಾಯಕರು ತಮ್ಮ ವಾಟ್ಸಪ್ ಮತ್ತು ಫೇಸ್ ಬುಕ್ ವಿಶ್ವವಿದ್ಯಾನಿಲಯದಲ್ಲಿ ಸರ್ಕಾರದ ವಿರುದ್ಧ ಸುಳ್ಳು ಸುದ್ದಿಗಳನ್ನು ಮಾಡುವ ಉಪಕುಲಪತಿಗಳಾಗಿ ತಮ್ಮದೇ ಆದ ಸಾವಿರಾರು ಜನರ ಪಡೆಯನ್ನು ಕಟ್ಟಿಕೊಂಡು ಸುಳ್ಳು ಸುಳ್ಳು ಸುದ್ದಿಗಳನ್ನು ಪ್ರತಿದಿನವೂ ಪ್ರಚಾರ ಮಾಡುತ್ತಾ ಕಾಂಗ್ರೆಸ್ ಸರ್ಕಾರದ ವಿರುದ್ಧ ಜನರಲ್ಲಿ ಕೆಟ್ಟ ಭಾವನೆ ಬರುವಂತೆ ಕರ್ತವ್ಯವನ್ನು ನಿರ್ವಹಿಸುತ್ತಿದ್ದಾರೆ.

ಇದಕ್ಕೆ ಇತ್ತೀಚೆಗೆ ಸಾಕ್ಷಿ ಎಂಬಂತೆ ಹಿಂದೂ ದೇವಾಲಯಗಳಲ್ಲಿ ಸಂಗ್ರಹವಾಗುವ ಸಂಪನ್ಮೂಲವನ್ನು ಮಸೀದಿ ಮತ್ತು ಚರ್ಚ್ಗಳ ಅಭಿವೃದ್ಧಿಗೆ ಬಳಸುತ್ತಾರೆ. ಮುಸ್ಲಿಂ ಮತ್ತು ಕ್ರೈಸ್ತ ಧರ್ಮದ ಪ್ರಚಾರಕ್ಕೆ ಸಂಪನ್ಮೂಲವನ್ನು ನೀಡುತ್ತಾರೆ ಎಂಬ ಸತ್ಯವಲ್ಲದ ಸುದ್ದಿಯನ್ನು ದೊಡ್ಡ ದೊಡ್ಡ ರೀತಿಯಲ್ಲಿ ವೇದಿಕೆಗಳ ಮೇಲೆ ನಿಂತು ಅಬ್ಬರಿಸುತ್ತಾರೆ.

ಧಾರ್ಮಿಕ ದತ್ತಿ ಇಲಾಖೆಯ ಸ್ಥಾಪನೆಯ ನಂತರ 1980ರಲ್ಲಿ ಅಂದು ಮುಖ್ಯಮಂತ್ರಿಗಳಾಗಿದ್ದ ಆರ್. ಗುಂಡೂರಾಯರು ಈ ಇಲಾಖೆಗೆ ಸುಧೀಂದ್ರರಾವ್ ಕಸಬೆ ಎಂಬುವವರನ್ನು ಮಂತ್ರಿಯನ್ನಾಗಿಸಿ ಪ್ರಥಮ ಬಾರಿಗೆ ಅರ್ಚಕರಿಗೆ ಹೆಚ್ಚಿನ ಸೌಕರ್ಯ ಮತ್ತು ಸಂಬಳದ ವ್ಯವಸ್ಥೆಯನ್ನು ಮಾಡಿರುತ್ತಾರೆ. ಅಂದು ಇದ್ದದ್ದು ಸಹ ಕಾಂಗ್ರೆಸ್ ಸರ್ಕಾರ ಎಂಬುದು ನೆನಪಿರಲಿ.

ತದನಂತರ ಬಂಗಾರಪ್ಪನವರು ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಮುಜರಾಯಿ ಇಲಾಖೆಗೆ ಸೇರದೇ ಇರುವ ಸಣ್ಣಪುಟ್ಟ ದೇವಾಲಯಗಳು ಅದರಲ್ಲೂ ವಿಶೇಷವಾಗಿ ದುಡಿಯುವ ಜನ ಪೂಜಿಸುವ ದೇವಾಲಯಗಳಿಗೆ ಆರಾಧಾನ ಯೋಜನಾ ಅಡಿಯಲ್ಲಿ ಪ್ರತಿಯೊಂದು ವಿಧಾನಸಭಾ ಕ್ಷೇತ್ರಕ್ಕೆ ಅನುದಾನವನ್ನು ನೀಡಿ ಅವುಗಳ ಅಭಿವೃದ್ಧಿಗೆ ಯೋಜನೆಯನ್ನು ರೂಪಿಸಿರುತ್ತಾರೆ. ಇದನ್ನು ಮಾಡಿದ್ದು, ಕಾಂಗ್ರೆಸ್ ಸರ್ಕಾರ ಎಂಬುದು ನೆನಪಿರಲಿ.

ಎಸ್.ಎಂ.ಕೃಷ್ಣರವರು ಮುಖ್ಯಮಂತ್ರಿಯಾಗಿದ್ದಾಗ ಅನೇಕ ದೇವಾಲಯಗಳ ಅಭಿವೃದ್ಧಿಗಾಗಿ ಪ್ರಾಧಿಕಾರಗಳನ್ನು ರಚಿಸಿದರು. ಸಿದ್ದರಾಮಯ್ಯನವರು ಮೊದಲ ಬಾರಿಗೆ ಮುಖ್ಯಮಂತ್ರಿಯಾದಾಗ ಚಾಮುಂಡಿ ಬೆಟ್ಟದ ಅಭಿವೃದ್ಧಿಗೆ 350 ಕೋಟಿ ರೂ.ಗೂ ಹೆಚ್ಚು ಅನುದಾನವನ್ನು ನೀಡಿದರು. ಮಹದೇಶ್ವರ ಬೆಟ್ಟದ ಅಭಿವೃದ್ಧಿಗೆ ಅನುದಾನವನ್ನು ನೀಡುವುದರ ಜೊತೆಗೆ ಪ್ರಾಧಿಕಾರವನ್ನು ರಚಿಸಿಕೊಟ್ಟರು. ತಾವು ಶಾಸಕರಾಗಿದ್ದ ಬಾದಾಮಿ ಕ್ಷೇತ್ರದ ಬನಶಂಕರಿ ದೇವಾಲಯದ ಅಭಿವೃದ್ಧಿ ಇವರ ಅವಧಿಯಲ್ಲಿ ಆದಷ್ಟು ಬೇರೆ ಯಾರ ಕಾಲದಲ್ಲೂ ಆಗಿರುವುದಿಲ್ಲ.

ರಾಮಲಿಂಗಾರೆಡ್ಡಿಯವರು ಸಿದ್ದರಾಮಯ್ಯನವರ ಸಂಪುಟದಲ್ಲಿ ಸಾರಿಗೆ ಖಾತೆ ಜೊತೆಗೆ ಮುಜರಾಯಿ ಇಲಾಖೆಯನ್ನು ವಹಿಸಿಕೊಂಡ ಮೇಲೆ ಸಾಕಷ್ಟು ಸುಧಾರಣೆಗಳನ್ನು ಮಾಡಿರುತ್ತಾರೆ.
ಕೆಲವು ಸುಧಾರಣೆಗಳು:

  1. ಅರ್ಚಕರ ಆರೋಗ್ಯಕ್ಕಾಗಿ ಯೋಜನೆಗಳು
  2. ಅರ್ಚಕರ ಮಕ್ಕಳ ವಿದ್ಯಾಭ್ಯಾಸಕ್ಕೆ ಯೋಜನೆಗಳು
  3. ಅರ್ಚಕರ ಅಕಾಲಿಕ ಮರಣಕ್ಕೆ ಕುಟುಂಬ ನಿರ್ವಹಣೆಗಾಗಿ ಆರ್ಥಿಕ ನೆರವು
  4. ದಕ್ಷಿಣ ಕಾಶಿ ಪ್ರವಾಸಕ್ಕೆ ಪ್ರಯಾಣಿಕರಿಗೆ ಸಹಾಯಧನ
  5. ಕಾಶಿ ಯಾತ್ರೆಯ ಪ್ರಯಾಣಿಕರಿಗೆ ಸಹಾಯಧನದ ಮೊತ್ತದ ಹೆಚ್ಚಳ
  6. ದೇವಾಲಯಗಳಲ್ಲಿ ಆರೈಕೆ ಕೇಂದ್ರಗಳು ಎಂಬ ಹೆಸರಿನಲ್ಲಿ ಮಕ್ಕಳಿಗೆ ಹಾಲುಣಿಸಲು ಪ್ರತ್ಯೇಕ ಕೊಠಡಿಗಳು
  7. ‘ಸಿ’ ದರ್ಜೆಗೆ ಸೇರಿದ 34 ಸಾವಿರ ದೇವಾಲಯದ ಆರ್ಚಕರಿಗೆ ವಸತಿ ಯೋಜನೆಯಡಿಯಲ್ಲಿ ಮನೆಗಳನ್ನು ನಿರ್ಮಿಸಿಕೊಡುವುದು.
  8. ಉಚಿತ ವಿದ್ಯುತ್ ಮತ್ತು ನೀರಿನ ವ್ಯವಸ್ಥೆ ಇದಲ್ಲದೇ ಪ್ರಮುಖವಾಗಿ 2013ರಲ್ಲಿ ದೇವಾಲಯಕ್ಕೆ ನೀಡುತ್ತಿದ್ದ ಸ್ವಸ್ತಿಕ್ ನಿಧಿಯನ್ನು ರೂ.12,000/- ಗಳಿಂದ ರೂ. 24,000/- 2015ರಲ್ಲಿ, 2017ರಲ್ಲಿ 36,000/- ರೂ.ಗಳಿಗೆ, ತದನಂತರ 48,000/- ರೂ.ಗಳಿಗೆ, ಈಗ ರೂ. 60,000/-ಗಳಿಗೆ ಏರಿಕೆಯನ್ನು ಮಾಡಿರುವುದು ಇದೇ ಕಾಂಗ್ರೆಸ್ ಸರ್ಕಾರ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ, ಸಚಿವರಾದ ರಾಮಲಿಂಗಾ ರೆಡ್ಡಿರವರು ಎಂಬುದು ನೆನಪಿರಲಿ. ಹೀಗೆ ಪಟ್ಟಿ ಮಾಡುತ್ತಾ ಹೋದರೆ ಯಾವ ಸರ್ಕಾರದಲ್ಲೂ ಮಾಡದಷ್ಟು ಅನುಕೂಲವನ್ನು ಮಾಡಿದ್ದಾರೆ.

ಹಿಂದೂ ದೇವಾಲಯದ ಆದಾಯವನ್ನು ಮೊದಲಿನಿಂದಲೂ ಸಹ ಆಯಾ ದೇವಾಲಯಗಳ ಅಭಿವೃದ್ಧಿಗೆ ಬಳಸಲಾಗುತ್ತದೆ. ‘ಸಿ’ ದರ್ಜೆ ದೇವಾಲಯಗಳಿಗೆ ಇದರ ಪಾಲನ್ನು ನೀಡುತ್ತಾರೆ. ಈಗ ರಾಮಲಿಂಗಾರೆಡ್ಡಿರವರು ಮತ್ತೊಂದು ಆದೇಶವನ್ನು ಹೊರಡಿಸಿ ಆಯಾ ದೇವಾಲಯದ ಹಣವನ್ನು ಆಯಾ ದೇವಾಲಯಗಳ ಅಭಿವೃದ್ಧಿಗೆ ಮಾತ್ರವೇ ಬಳಸಬೇಕು ಎಂಬ ಆದೇಶವನ್ನು ಹೊರಡಿಸಿದ್ದಾರೆ.

ಯಾವ ಕಾಲದಲ್ಲೂ ಸಹ ಹಿಂದೂ ದೇವಾಲಯದ ಹಣವನ್ನು ಮಸೀದಿ ಮತ್ತು ಚರ್ಚ್ಗಳ ಅಭಿವೃದ್ಧಿಗೆ ನೀಡಿರುವುದಿಲ್ಲ. ಕಾಂಗ್ರೆಸ್ ಸರ್ಕಾರವಿದ್ದಾಗ ಈ ಮಾತುಗಳನ್ನಾಡುವ ಬಿ.ಜೆ.ಪಿ. ಮತ್ತು ಅವರ ಯುನಿವರ್ಸಿಟಿ ಸದಸ್ಯರಿಗೆ ಒಂದು ವೇಳೆ ಇಂತಹ ಪದ್ಧತಿ ಇದ್ದಿದ್ದರೆ ಅವರದೇ ಸರ್ಕಾರವಿದ್ದಾಗ ರದ್ದು ಮಾಡಿದ ಆದೇಶವನ್ನು ಹೊರಡಿಸಬೇಕಾಗಿತ್ತು. ಈ ಹಿನ್ನೆಲೆಯಲ್ಲಿ ನೋಡಿದಾಗ ಇವರ ಆರೋಪಗಳೆಲ್ಲವೂ ಕೇವಲ ಭಾವನೆಗಳನ್ನು ಕೆರಳಿಸುವ ಕುತಂತ್ರವಾಗಿರುತ್ತದೆ. ಸಾಕ್ಷಿಗಳಿಲ್ಲದೇ ಆರೋಪ ಮಾಡುವುದೇ ಬಿ.ಜೆ.ಪಿ.ಯವರ ಗುಣವಾಗಿರುತ್ತದೆ. ನೀರು, ನೆರಳಿಲ್ಲದ ಅರ್ಚಕರಿಗೆ ಸೂರಿಲ್ಲದ ದೇವಾಲಯಗಳು ಬಿಜೆಪಿ ಸರ್ಕಾರಗಳಿದ್ದಾಗ ಕಣ್ಣಿಗೆ ಕಾಣಿಸಲೇ ಇಲ್ಲವೇ?

  • ಕೆ.ಎಸ್. ನಾಗರಾಜ್, ಬೆಂಗಳೂರು

Leave a Reply