ಸಚಿವ ಎಸ್ ಟಿ ಸೋಮಶೇಖರ್ ಬಂಧನ ಸಾಧ್ಯವೇ?

4 years ago

BDA ಲಂಚ ಪ್ರಕರಣದಲ್ಲಿ ಸಚಿವ ಎಸ್ ಟಿ ಸೋಮಶೇಖರ್ ಮತ್ತಿತರರ ವಿರುದ್ಧ ಲೋಕಾಯುಕ್ತ ಪೊಲೀಸರು ಒಂದು ತಿಂಗಳ ಹಿಂದೆಯೇ ಎಫ್ ಐ ಆರ್ ದಾಖಲಿಸಿದ್ದಾರೆ.ಅದನ್ನು ರದ್ದುಗೊಳಿಸುವಂತೆ ಅವರು ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು.ಆ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.ಈ FIR ಅನ್ವಯ ಸಚಿವ ಸೋಮಶೇಖರ್ ಅವರನ್ನು ಬಂಧಿಸುವಂತೆ ರಾಜ್ಯ ಆಮ್ ಆದ್ಮಿ ಪಕ್ಷದ ಮುಖಂಡರು ಒಂದು ತಿಂಗಳ ಹಿಂದೆಯೇ ಒತ್ತಾಯಿಸಿದ್ದರು.ಈಗಲಾದರೂ ಸಚಿವರನ್ನು ಬಂಧಿಸುವ ಸಾಧ್ಯತೆಯಿದೆಯೇ?

ಸುಮಾರು 42/43 ವರ್ಷಗಳ ಹಿಂದೆ N B ಭಟ್ ಎಂಬ ದಿಟ್ಟ ಐಪಿಎಸ್ ಅಧಿಕಾರಿಯಿದ್ದರು.ಈಗ ಅವರು ಇದ್ದಿದ್ದರೆ ಒಂದು ತಿಂಗಳ ಹಿಂದೆಯೇ ಸಚಿವರನ್ನು ಬಂಧಿಸಿ ಬಿಡುತ್ತಿದ್ದರು.
ಗುಂಡೂರಾವ್ ಸಂಪುಟದಲ್ಲಿ ರೇಣುಕಾ ರಾಜೇಂದ್ರನ್ ಎಂಬ ಸಚಿವೆ ಇದ್ದರು.ಮೆಡಿಕಲ್ ಸೀಟು ಕೊಡಿಸುವುದಾಗಿ ಅಭ್ಯರ್ಥಿಯೊಬ್ಬರಿಂದ ಲಂಚ ಪಡೆದಿದ್ದರು.ಆದರೆ ಆ ಅಭ್ಯರ್ಥಿಗೆ MBBS ಸೀಟು ದೊರೆಯಲಿಲ್ಲ. ಆಗ ಅವರ ಪೋಷಕರು ಹಣವನ್ನು ವಾಪಾಸ್ ಕೊಡುವಂತೆ ಪಟ್ಟು ಹಿಡಿದರು.ಅವರಿಗೆ ರೇಣುಕಾ ರಾಜೇಂದ್ರನ್ ಒಂದು ಚೆಕ್ ನೀಡಿದ್ದರು.ಆದರೆ ಆ ಚೆಕ್ ಬೌನ್ಸ್ ಆಯಿತು.ಪೋಷಕರು ಸಚಿವೆ ವಿರುದ್ಧ ದೂರು ದಾಖಲಿಸಿದರು.ಕಾಶ್ಮೀರ ಪ್ರವಾಸ ಪೂರೈಸಿ ಬೆಂಗಳೂರಿಗೆ ಮರಳಿದ ಸಚಿವೆ ರೇಣುಕಾ ರಾಜೇಂದ್ರನ್ ಅವರನ್ನು DIG N B ಭಟ್ ವಿಮಾನ ನಿಲ್ದಾಣದಲ್ಲಿಯೇ ಬಂಧಿಸಿಬಿಟ್ಟರು.ಯಾರಿಗೂ ಸುಳಿವು ನೀಡದೆ ಸಮೀಪದ ಮಾರ್ಗದಲ್ಲಿ ಸಚಿವೆಯನ್ನು ಕರೆದುಕೊಂಡು ಹೋಗಿ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿ ಜೈಲಿಗೆ ತಳ್ಳಿದರು.ಆಗ ಮೊಬೈಲ್ ಫೋನು ಮತ್ತು 24x 7 ಟಿವಿ ಚಾನೆಲ್ಲುಗಳು ಇರಲಿಲ್ಲ .ರೇಣುಕಾ ರಾಜೇಂದ್ರನ್ ಜೈಲಿನಿಂದಲೇ ಮುಖ್ಯಮಂತ್ರಿ ಗುಂಡೂ ರಾವ್ ಅವರಿಗೆ ರಾಜೀನಾಮೆ ಪತ್ರವನ್ನು ಕಳುಹಿಸಿದರು.
ಈ ಘಟನೆಯಿಂದ ಗುಂಡೂರಾವ್ ಕೆಂಡಾ ಮಂಡಲರಾದರು.ಮುಖ್ಯಮಂತ್ರಿಯವರ ಪೂರ್ವಾನುಮತಿಯಿಲ್ಲದೆ ಸಚಿವರೊಬ್ಬರನ್ನು ಬಂಧಿಸಿದ ಈ ಪೊಲೀಸ್ ಅಧಿಕಾರಿಯ ವರ್ತನೆಯನ್ನು ಸಹಿಸಿಕೊಳ್ಳಲು ಅವರಿಗೆ ಸಾಧ್ಯವಾಗಲಿಲ್ಲ.NB ಭಟ್ ಅವರಿಂದ ಕೂಡಲೇ ವಿವರಣೆ ಕೋರಿದರು .ಗುಂಡೂರಾವ್ ಅವರಿಗೆ NB ಭಟ್ ನೀಡಿದ್ದ ವಿವರಣೆ ಈ ರೀತಿ ಇತ್ತು :”Crpc ಮತ್ತು IPC ಅಡಿಯಲ್ಲಿ cognizable ಅಪರಾಧ ಮಾಡಿರುವ ಯಾವುದೇ ವ್ಯಕ್ತಿಯನ್ನು ಪೊಲೀಸ್ ಠಾಣೆಯೊಂದರ ಯಾವುದೇ ಸಬ್ ಇನ್ಸ್ಪೆಕ್ಟರ್ ಅರೆಸ್ಟ್ ಮಾಡಬಹುದು.ಅದಕ್ಕೆ ಸರ್ಕಾರದ ಪೂರ್ವಾನುಮತಿಯ ಅಗತ್ಯವಿಲ್ಲ .”ಈ ವಿವರಣೆಯನ್ನು ಅರ್ಥ ಮಾಡಿಕೊಳ್ಳುವ ಸ್ಥಿತಿಯಲ್ಲಿ ಗುಂಡೂರಾವ್ ಇರಲಿಲ್ಲ .ತಮ್ಮ ಸರ್ಕಾರಕ್ಕೆ ಅವಮಾನ ಮಾಡಿರುವ ಈ ಉದ್ಧಟ ಅಧಿಕಾರಿಯನ್ನು ರಾಜ್ಯದಿಂದಲೇ ಗಡಿಪಾರು ಮಾಡಬೇಕು ಎಂದು ನಿರ್ಧರಿಸಿದರು .”ಅವರನ್ನು ಅಸ್ಸಾಮಿಗೆ transfer ಮಾಡಿ “ಎಂದು ಮುಖ್ಯ ಕಾರ್ಯದರ್ಶಿಯವರಿಗೆ ತಾಕೀತು ಮಾಡಿದರು.”ಸರ್ ನಾವು ಅವರನ್ನು ಅಸ್ಸಾಮಿಗೆ ವರ್ಗಾವಣೆ ಮಾಡಲು ಸಾಧ್ಯವಿಲ್ಲ .ಕೇಕೇಂದ್ರದ ಗೃಹ ಸಚಿವಾಲಯ ಅದನ್ನು ಮಾಡಬೇಕು”ಎಂದು ಮನವರಿಕೆ ಮಾಡಲು ಮುಖ್ಯ ಕಾರ್ಯದರ್ಶಿ ಪ್ರಯತ್ನಿಸಿದರು.”ನೀವು ದೆಹಲಿಗೆ ಹೋಗಿ ಈ ಕೆಲಸವನ್ನು ಮಾಡಿಸಿ “ಎಂದು CM ಫರ್ಮಾನು ಹೊರಡಿಸಿದರು.ದೆಹಲಿಯಲ್ಲಿ ಒಂದು ವಾರ ಮೊಕ್ಕಾಂ ಹೂಡಿದ್ದ ಮುಖ್ಯ ಕಾರ್ಯದರ್ಶಿಯವರು “ಈ ಐಪಿಎಸ್ ಅಧಿಕಾರಿಯನ್ನು ಸೆಂಟ್ರಲ್ deputation ಮೇಲೆ ಕರೆಸಿಕೊಂಡು ಯಾವುದಾದರೂ north east ರಾಜ್ಯಗಳಿಗೆ posting ಮಾಡಿ ” ಎಂದು ದುಂಬಾಲು ಬಿದ್ದರು.ಈ ವೇಳೆಗಾಗಲೇ ಸಂಜಯ್ ಗಾಂಧಿ ನಿಧನರಾದ್ದರಿಂದ ಗುಂಡೂರಾವ್ ಅವರಿಗೆ ಕೇಂದ್ರ ಸರ್ಕಾರದ ಮಟ್ಟದಲ್ಲಿ ಅಷ್ಟೊಂದು ಶಕ್ತಿ ಇರಲಿಲ್ಲ.ಆದರೆ ಪ್ರಧಾನಿ ಇಂದಿರಾ ಗಾಂಧಿಯವರಿಗೆ ಗುಂಡೂ ರಾವ್ ಮತ್ತು ಎಫ್ ಎಂ ಖಾನ್ ಬಗ್ಗೆ ಸ್ವಲ್ಪ ವಿಶ್ವಾಸವಿತ್ತು.ಇಂದಿರಾ ಅಧಿಕಾರ ಕಳೆದುಕೊಂಡಿದ್ದಾಗ (1977-1980) ಒಮ್ಮೆ ಕೊಡಗಿನಲ್ಲಿ ಪ್ರವಾಸ ಮಾಡಿದ್ದರು .ಆಗ ಜನತಾ ಪಕ್ಷದ ಕಾರ್ಯಕರ್ತರು ಅವರ ವಾಹನದ ಮೇಲೆ ಕಲ್ಲುಗಳನ್ನು ಎಸೆದಿದ್ದರು .ಆಗ ಗುಂಡೂರಾವ್ ಮತ್ತು ಎಫ್ ಎಂ ಖಾನ್ ಬಿದಿರಿನ ದೊಡ್ಡ ಛತ್ರಿಗಳನ್ನು ಅಡ್ಡ ಹಿಡಿದು ಇಂದಿರಾ ಅವರಿಗೆ ರಕ್ಷಣೆ ನೀಡಿದ್ದರು.ಕೊನೆಗೂ ಪ್ರಧಾನಿ ಇಂದಿರಾ ಅವರ ನಿರ್ದೇಶನದ ಮೇರೆಗೆ NB ಭಟ್ ಅವರನ್ನು ಗುವಾಹಟಿಗೆ ವರ್ಗಾವಣೆ ಮಾಡಲಾಯಿತು.ಆದರೆ ಇದನ್ನು ಪ್ರತಿಭಟಿಸಿ NB ಭಟ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದರು LLM ಪದವೀಧರರಾಗಿರುವ ಅವರು ಬೆಂಗಳೂರಿನ ಹೈ ಕೋರ್ಟಿನಲ್ಲಿ ವಕೀಲಿ ವೃತ್ತಿ ಆರಂಭಿಸಿದರು .ಈಗ ಅವರಿಗೆ ಸುಮಾರು 82/83 ವರ್ಷಗಳು ಇರಬಹುದು.ಸರ್ವಿಸ್ ಮ್ಯಾಟರ್ಸ್ ನಲ್ಲಿ ಅವರು ಎತ್ತಿದ ಕೈ.
ಇನ್ನು ಎರಡು ದಿನಗಳಲ್ಲಿ ದೂರುದಾರರಾಗಿರುವ TJ ಅಬ್ರಹಾಂ ಲೋಕಾಯುಕ್ತ ಪೊಲೀಸರನ್ನು ಭೇಟಿ ಮಾಡಿ ಸಚಿವ ಸೋಮಶೇಖರ್ ಅವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಲಿದ್ದಾರೆ.ಅಲ್ಲಿಯವರೆಗೂ ಮಾಧ್ಯಮಗಳು ಮತ್ತು ಪ್ರತಿ ಪಕ್ಷಗಳು ಗಾಢ ನಿದ್ರೆಯಲ್ಲಿ ಇರುತ್ತವೆ.(ಈ ಲೇಖನ ಬರೆಯಲು ನಿವೃತ್ತ ACS ಬಾಲಸುಬ್ರಹ್ಮಣಿಯಂ ಅವರ FALL FROM GRACE ಕೃತಿಯಲ್ಲಿರುವ ಅಮೂಲ್ಯವಾಗಿರುವ ಮಾಹಿತಿಗಳನ್ನು ಬಳಸಿಕೊಂಡಿದ್ದೇನೆ.ಅವರಿಗೆ ಧನ್ಯವಾದಗಳು ).

– ರುದ್ರಪ್ಪ ಚನ್ನಬಸಪ್ಪ, ಹಿರಿಯ ಪತ್ರಕರ್ತರು

Leave a Reply