ನಮೂನೆ 57ರ ಅಕ್ರಮ-ಸಕ್ರಮಕ್ಕೆ ಆ್ಯಪ್
ಶಿವಮೊಗ್ಗ: ನಮೂನೆ 57ರ ಅಕ್ರಮ ಸಕ್ರಮ ಪ್ರಕರಣಗಳೂ ಆದಷ್ಟು ಶೀಘ್ರದಲ್ಲಿ ಇತ್ಯರ್ಥ ಮಾಡಬೇಕು. ಈ ನಿಟ್ಟಿನಲ್ಲಿ ಅಕ್ರಮ-ಸಕ್ರಮ ಸಮಿತಿಯನ್ನು ಶೀಘ್ರದಲ್ಲಿ ನೇಮಕ ಮಾಡಲಾಗುವುದು. ಈ ಪ್ರಕರಣಗಳ ಇತ್ಯರ್ಥಕ್ಕೆ ಅಧಿಕಾರಿಗಳಿಗೆ ತಾಂತ್ರಿಕ ಸಹಾಯವನ್ನೂ ಒದಗಿಸಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
ಶಿವಮೊಗ್ಗ ಜಿಲ್ಲೆಯಲ್ಲಿ ಬುಧವಾರ ಕಂದಾಯ ಇಲಾಖೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಅಕ್ರಮ-ಸಕ್ರಮ ಅರ್ಜಿದಾರರು ನಿಜಕ್ಕೂ ಆ ಭೂಮಿಯಲ್ಲಿ ಕೃಷಿಯಲ್ಲಿ ತೊಡಗಿದ್ದಾರಾ? ಎಂಬ ಮಾಹಿತಿಯನ್ನು ಗೂಗಲ್ ಇಮೇಜ್ ಮೂಲಕ ಅಧಿಕಾರಿಗಳಿಗೆ ಒದಗಿಸಲಾಗುವುದು. ಈ ಸಂಬಂಧ ಆ್ಯಪ್ ಅಭಿವೃದ್ಧಿಪಡಿಸಲಾಗುತ್ತಿದೆ. ಜಿಯೋ ಫೆನ್ಸಿಂಗ್ ಅನ್ನು ಅಳೆಯಲು, ಸ್ಥಳಕ್ಕೆ ಭೇಟಿ ನೀಡಲು ಮತ್ತು ಸಂಬಂಧಿತ ವಿವರಗಳನ್ನು ಗ್ರಾಮ ಆಡಳಿತ ಅಧಿಕಾರಿಗಳು ಅಪ್ಲಿಕೇಷನ್ ಮೂಲಕ ಅಪ್ಲೋಡ್ ಮಾಡಬಹುದು. ಇದರ ಸಹಾಯದಿಂದ ನಮೂನೆ 57ರ ಪ್ರಕರಣವನ್ನು ಇತ್ಯರ್ಥಗೊಳಿಸಬಹುದು ಎಂದು ಅವರು ಮಾಹಿತಿ ನೀಡಿದರು.
ಸರ್ಕಾರಿ ಭೂಮಿಯನ್ನು ಪತ್ತೆಹಚ್ಚುವ ಹಾಗೂ ಒತ್ತುವರಿಯಾಗದಿರುವುದನ್ನು ತಡೆಯುವ ಸಲುವಾಗಿ ಮತ್ತೊಂದು ಆ್ಯಪ್ ಅಭಿವೃದ್ಧಿಪಡಿಸುವ ಚಿಂತನೆಯೂ ಇದೆ. ಗ್ರಾಮ ಲೆಕ್ಕಾಧಿಕಾರಿ ಪ್ರತಿ ಮೂರು ತಿಂಗಳಿಗೊಮ್ಮೆ ಸರ್ಕಾರಿ ಜಮೀನಿಗೆ ಭೇಟಿ ನೀಡಿ ವರದಿ ಸಲ್ಲಿಸುವ “ಬೀಟ್”ವ್ಯವಸ್ಥೆಗೆ ಈ ಆ್ಯಪ್ ಸಹಕಾರಿಯಾಗಲಿದೆ ಎಂದು ತಿಳಿಸಿದರು.
94ಸಿ ಹಾಗೂ 94ಸಿಸಿ ಪ್ರಕರಣಗಳನ್ನೂ ಕಾನೂನು ಪ್ರಕಾರವೇ ಇತ್ಯರ್ಥಗೊಳಿಸಬೇಕು. ಈ ವಿಚಾರದಲ್ಲಿ ಅಧಿಕಾರಿಗಳು, ರೈತರ ಹಾಗೂ ಜನಸಾಮಾನ್ಯರ ಪರ ಕೆಲಸ ನಿರ್ವಹಿಸಬೇಕೆ ವಿನಃ ಭೂಮಾಫಿಯಾ ಪರ ಕೆಲಸ ನಿರ್ವಹಿಸಬಾರದು ಎಂದು ಕಿವಿಮಾತು ಹೇಳಿದರು.




