ಬೆಂಗಳೂರಿನ ಸಂಚಾರ ದಟ್ಟಣೆ ಶಾಶ್ವತ ಪರಿಹಾರಕ್ಕೆ ಅಂತಾರಾಷ್ಟ್ರೀಯ ಗುಣಮಟ್ಟದ ಯೋಜನೆ: ಡಿ.ಕೆ.ಶಿವಕುಮಾರ್

3 years ago

#International #standard #project #permanent #solution #traffic #congestion #Bangalore #DKSivakumar

ದೆಹಲಿ: ಬೆಂಗಳೂರಿನ ಸಂಚಾರ ದಟ್ಟಣೆಯನ್ನು ಶಾಶ್ವತವಾಗಿ ಪರಿಹರಿಸಲು ಅಂತಾರಾಷ್ಟ್ರೀಯ ಗುಣಮಟ್ಟದ ಯೋಜನೆ ರೂಪಿಸಲು ರಾಜ್ಯಸರ್ಕಾರ ನಿರ್ಧರಿಸಿದೆ. ಈ ಸಂಬಂಧ ಕೇಂದ್ರ ಹೆದ್ದಾರಿ ಹಾಗೂ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಅವರನ್ನು ತಾವು ಭೇಟಿ ಮಾಡಿ ಚರ್ಚೆ ನಡೆಸಿದ್ದೇನೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.

ದೆಹಲಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬೆಂಗಳೂರು ಸಂಪರ್ಕಿಸುವ ಹೆದ್ದಾರಿಗಳಿಂದ ಆಗಮಿಸುವ ವಾಹನಗಳು ನಗರದೊಳಗೆ ಬಂದು ದಟ್ಟಣೆಯನ್ನು ಹೆಚ್ಚಿಸುತ್ತಿವೆ. ಇದಕ್ಕೆ ಸೂಕ್ತವಾದ ಪರಿಹಾರ ಕಂಡುಕೊಳ್ಳಬೇಕು. ಕೇಂದ್ರ ಸರ್ಕಾರ ಕೂಡ ಈ ನಿಟ್ಟಿನಲ್ಲಿ ಆಸಕ್ತಿ ಹೊಂದಿದೆ ಎಂದರು.

ನಿತಿನ್ ಗಡ್ಕರಿಯವರೊಂದಿಗೆ ಚರ್ಚೆ ನಡೆಸಿದ ಮೇಲೆ ಉತ್ತಮ ಯೋಜನೆ ರೂಪಿಸುವಂತೆ ಸಲಹೆ ನೀಡಿದ್ದಾರೆ. ಈಗಾಗಲೇ ನಗಾರಭಿವೃದ್ಧಿ ಹಾಗೂ ಬಿಬಿಎಂಪಿ ಸಹಯೋಗದಲ್ಲಿ ಇದಕ್ಕೆ ಚಾಲನೆ ನೀಡಲಾಗಿದೆ. ಜುಲೈ 14 ರಿಂದಲೇ ಆಸಕ್ತರಿಂದ ಬಿಡ್ ಆಹ್ವಾನಿಸಲಾಗಿದೆ. ಇದಕ್ಕೆ ಆಗಸ್ಟ್ 8 ಕೊನೆ ದಿನ. ಅಷ್ಟರೊಳಗೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸಂಸ್ಥೆಗಳು ಆಸಕ್ತಿ ವ್ಯಕ್ತಪಡಿಸುವ ಬಿಡ್ನಲ್ಲಿ ಭಾಗವಹಿಸಬಹುದು ಎಂದರು.

ಬೆಂಗಳೂರಿನಲ್ಲಿ ಸಂಚಾರವನ್ನು ವೈಜ್ಞಾನಿಕವಾಗಿ ನಿರ್ವಹಣೆ ಮಾಡಬೇಕಿದೆ. ಇದಕ್ಕಾಗಿ ಮೇಲ್ಸೇತುವೆ, ಸುರಂಗ ಮಾರ್ಗ ಸೇರಿದಂತೆ ಯಾವ ವಿಧಾನಗಳು ಸೂಕ್ತ ಎಂಬುದನ್ನು ಪರಿಶೀಲಿಸಿ ವರದಿ ಸಲ್ಲಿಸಬೇಕಿದೆ. ವಿಸ್ತೃತ ಯೋಜನೆ ಸಿದ್ಧಗೊಳಿಸುವ ಹಂತದಲ್ಲಿ ಹಣಕಾಸಿನ ಹೊಂದಾಣಿಕೆ ತಾಂತ್ರಿಕ ಸಾಧಕ-ಬಾಧಕಗಳು, ಯೋಜನೆಯ ಔಚಿತ್ಯ, ನಿರ್ಮಾಣ ಮತ್ತು ನಿರ್ವಹಣೆ ಮಾದರಿ ಸೇರಿದಂತೆ ಇತರೆ ವಿಷಯಗಳ ಕುರಿತು ಅಧ್ಯಯನ ಹಾಗೂ ಸಮೀಕ್ಷಾತ್ಮಕ ವರದಿಯನ್ನು ನೀಡಲು ಜಾಗತಿಕ ಟೆಂಡರ್ ಆಹ್ವಾನಿಸಲಾಗಿದೆ ಎಂದರು.

ಈಗಾಗಲೇ ಸಿಂಗಾಪುರ, ಚೀನಾ, ಇಸ್ರೇಲ್ ಸೇರಿದಂತೆ ಹಲವಾರು ಕಂಪೆನಿಗಳು ತಮಗೆ ಮನವಿ ನೀಡಿವೆ. ಬಿಡ್ನಲ್ಲಿ ಭಾಗವಹಿಸುವಂತೆ ಅವರಿಗೆ ಸಲಹೆ ನೀಡಿದ್ದೇನೆ. ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳು ಇದರಲ್ಲಿ ಭಾಗವಹಿಸಬೇಕು. ಪಾರದರ್ಶಕ ವ್ಯವಸ್ಥೆ ಮೂಲಕ ಯೋಜನೆ ಜಾರಿಯಾಗಬೇಕೆಂದು ತಮ್ಮ ಆಶಯ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಯೋಜನೆ ವಿನ್ಯಾಸಗೊಳ್ಳಬೇಕು ಜೊತೆಗೆ ಸಾಮೂಹಿಕ ಸಾರಿಗೆ ಸದ್ಬಳಕೆಗೂ ಕೂಡ ಚರ್ಚೆಯಾಗಬೇಕು ಎಂದರು.

Leave a Reply