ಬೆಳಗಾವಿ: ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ 2023ರ ಮುಂಗಾರು ಹಂಗಾಮಿನ ಬೆಳೆ ಕಟಾವು ಅಂತಿಮ ಹಂತದಲ್ಲಿದೆ. ಇದರ ಇಳುವರಿ ಆಧಾರದ ಮೇಲೆ ಹಾನಿಗೆ ವಿಮೆ ಪರಿಹಾರ ನೀಡಲಾಗುವುದು ಎಂದು ಕೃಷಿ ಸಚಿವ ಚೆಲುವರಾಯಸ್ವಾಮಿ ವಿಧಾನಸಭೆಗೆ ತಿಳಿಸಿದರು.
ಪ್ರಶ್ನೋತ್ತರ ವೇಳೆಯಲ್ಲಿ ಶರಣು ಸಲಗರ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಬೆಳೆ ಕಟಾವಿನ ಲೆಕ್ಕಚಾರ ಮಾಡಿ ವಿಮಾ ಸಂಸ್ಥೆಯವರಿಂದ ವಿಮೆ ಹಣವನ್ನು ಕಾಲಮಿತಿಯಲ್ಲಿ ರೈತರಿಗೆ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ 2023ರ ಮುಂಗಾರು ಹಂಗಾಮಿನಲ್ಲಿ ವಿವಿಧ ಬೆಳೆಗಳಿಗೆ ರೈತರು ನೋಂದಣಿ ಮಾಡಿಕೊಂಡಿರುತ್ತಾರೆ. ನಿರ್ಧಿಷ್ಟ ಪ್ರಕೃತಿ ವಿಕೋಪದಡಿ ಬೆಳೆ ನಷ್ಟ ಉಂಟಾದ ಕುರಿತು ಅನುಷ್ಠಾನ ವಿಮಾ ಸಂಸ್ಥೆಗೆ ಮಾಹಿತಿ ನೀಡಲಾಗಿದೆ. ಈ ಮಾಹಿತಿ ಕುರಿತು ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯ ಪರಿಷ್ಕೃತ ಮಾರ್ಗಸೂಚಿಯನ್ವಯ ಜಿಲ್ಲಾಮಟ್ಟದ ಜಂಟಿ ಸಮಿತಿ ಜಂಟಿ ಸಮೀಕ್ಷೆ ಕೈಗೊಂಡು ಸಮೀಕ್ಷೆಯ ವರದಿಯನ್ವಯ ಬೆಳೆ ವಿಮೆ ಪರಿಹಾರ ಮೊತ್ತವನ್ನು ಇತ್ಯರ್ಥಪಡಿಸುವ ಪ್ರಕ್ರಿಯೆ ಪ್ರಗತಿಯಲ್ಲಿರುತ್ತದೆ ಎಂದರು.
ಬಸವಕಲ್ಯಾಣ ಕ್ಷೇತ್ರದಲ್ಲಿ ಸೋಯಾ ಅವರೆ ಹಾಗೂ ಇತರೆ ಮಳೆಯಾಶ್ರೀತ ಬೆಳೆಗಳನ್ನು ಅಧಿಸೂಚಿಸಲಾಗಿದೆ. ಸೋಯಾ ಅವರೆ ಬೆಳೆಗೆ 24,240 ರೈತರು ಮತ್ತು ತೊಗರಿ ಬೆಳೆಗೆ 23,386 ರೈತರು ನೋಂದಣಿ ಮಾಡಿರುತ್ತಾರೆ. ಸೆಪ್ಟೆಂಬರ್ ಮತ್ತು ಅಕ್ಟೋಬರ್ 2023ರ ಮಾಹೆಯಲ್ಲಿ ಬಿದ್ದಂತಹ ಹೆಚ್ಚಿನ ಮಳೆಯಿಂದ ಈ ಕ್ಷೇತ್ರದಲ್ಲಿ ಸೋಯಾ ಅವರೇ ಬೆಳೆಗೆ ಒಟ್ಟು 1556 ರೈತರಿಂದ ಮತ್ತು ತೊಗರಿ ಬೆಳೆಗೆ 1249 ರೈತರಿಂದ ಸ್ಥಳ ನಿರ್ದಿಷ್ಟ ಪ್ರಕೃತಿ ವಿಕೋಪದಡಿ ಬೆಳೆನಷ್ಟ ಉಂಟಾದ ಕುರಿತು ಅನುಷ್ಠಾನ ವಿಮಾ ಸಂಸ್ಥೆಗೆ ಮಾಹಿತಿ ನೀಡಲಾಗಿದೆ ಎಂದು ಹೇಳಿದರು.




