ಕಾಂಗ್ರೆಸ್ ಭೋಜನ ಕೂಟದಲ್ಲಿ ಭಾಗಿಯಾದ ಬಿಜೆಪಿ ಶಾಸಕರು

2 years ago

ಬೆಳಗಾವಿ: ಲೋಕಸಭೆ ಚುನಾವಣೆಗೆ ಸಿದ್ಧತೆ ನಡೆದಿರುವ ಬೆನ್ನಲ್ಲೇ ಬೆಳಗಾವಿಯಲ್ಲಿ ನಿನ್ನೆ ತಡ ರಾತ್ರಿ ನಡೆದ ಕಾಂಗ್ರೆಸ್ ಶಾಸಕರ ಔತಣಕೂಟದಲ್ಲಿ ಬಿಜೆಪಿಯ 3 ಶಾಸಕರುಳು ಭಾಗವಹಿಸುವ ಮೂಲಕ ಹೊಸ ಲೆಕ್ಕಾಚಾರ ಶುರುವಾಗಿದೆ. ಆದರೆ ಈ ಕುರಿತು ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್, ಇದೊಂದು ಔತಣ ಕೂಟ. ಇದರಲ್ಲಿ ಸ್ನೇಹಿತರಾದ ಶಾಸಕರು ಭಾಗವಹಿಸಿದ್ದಕ್ಕೆ ವಿಶೇಷ ಅರ್ಥ ಕಲ್ಪಿಸಬೇಕಿಲ್ಲ ಎಂದರೆ, ಇದು‌ ಶಿಸ್ತಿನ ಉಲ್ಲಂಘನೆ ಅಲ್ಲ ಎಂದು ಬಿಜೆಪಿ ಸ್ಪಷ್ಟೀಕರಣ ನೀಡಿದೆ.

ಬೆಳಗಾವಿ ಹೊರ ವಲಯದಲ್ಲಿರುವ ಖಾಸಗಿ ರೆಸಾರ್ಟ್‌ನಲ್ಲಿ ನಿನ್ನೆ ರಾತ್ರಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಯಿತು ಸಭೆಯ ನಂತರ ಶಾಸಕರುಗಳಿಗೆ ಔತಣ ಕೂಟ ಆಯೋಜಿಸಲಾಗಿತ್ತು. ಈ ಔತಣ ಕೂಟದಲ್ಲಿ ಬಿಜೆಪಿ ಶಾಸಕರುಗಳಾದ ಎಸ್.ಟಿ. ಸೋಮಶೇಖರ್, ಶಿವರಾಮ್ ಹೆಬ್ಬಾರ್ ಹಾಗೂ ವಿಧಾನಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಪಾಲ್ಗೊಂಡಿದ್ದರು.

ಇವರು ಕಾಂಗ್ರೆಸ್ ಸೇರುತ್ತಾರೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸೋಮಶೇಖರ್ ಮತ್ತು ಹೆಬ್ಬಾರ್ ಕಾಂಗ್ರೆಸ್ ಅಭ್ಯರ್ಥಿಗಳಾಗಿ‌ ಕಣಕ್ಕಿಳಿಯಲಿದ್ದಾರೆ‌ ಎನ್ನಲಾಗಿದ್ದು, ಇವರ ಹಾಜರಿ ಕುತೂಹಲ ಕೆರಳಿಸಿದೆ.

ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಕಾಂಗ್ರೆಸ್‌ನಲ್ಲಿ ಎಸ್.ಟಿ. ಸೋಮಶೇಖರ್, ಶಿವರಾಮ್ ಹೆಬ್ಬಾರ್ ಹಾಗೂ ಜೆಡಿಎಸ್‌ನ ವಿಶ್ವನಾಥ್ ರವರು ಆಪರೇಷನ್ ಕಮಲಕ್ಕೆ ಒಳಗಾಗಿ ಬಿಜೆಪಿ ಸೇರಿ ಸಮ್ಮಿಶ್ರ ಸರ್ಕಾರದ ಪಥನವಾಗಿ ಬಿಜೆಪಿ ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರವಹಿಸಿದ್ದರು.

ಬಿಜೆಪಿ ಸರ್ಕಾರದಲ್ಲಿ ಎಸ್.ಟಿ. ಸೋಮಶೇಖರ್, ಶಿವರಾಮ್ ಹೆಬ್ಬಾರ್ ಸಚಿವರಾಗಿದ್ದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋತು ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆ ಬಿಜೆಪಿಯಿಂದ ಗೆದ್ದಿದ್ದ ಈ ಇಬ್ಬರು ಮತ್ತೆ ಕಾಂಗ್ರೆಸ್‌ನತ್ತ ವಾಲಿದ್ದರು.

ಬಿಜೆಪಿಯಲ್ಲಿ ತಮ್ಮನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದ ಇವರು, ಕಾಂಗ್ರೆಸ್ ಸೇರಲು ತಯಾರಿ ನಡೆಸಿದ್ದರು. ಈ ಎಲ್ಲದರ ಮಧ್ಯೆ ಅಧಿವೇಶನದಲ್ಲೂ ಬಿಜೆಪಿ ನಡೆಸುವ ಧರಣಿ ಸಭಾತ್ಯಾಗದಲ್ಲಿ ಎಸ್.ಟಿ. ಸೋಮಶೇಖರ್, ಶಿವರಾಮ್ ಹೆಬ್ಬಾರ್ ಭಾಗಿಯಾಗುತ್ತಿರಲಿಲ್ಲ. ಈಗ ಅಧಿವೇಶನ ಸಂದರ್ಭದಲ್ಲಿ ಕಾಂಗ್ರೆಸ್ ಶಾಸಕಾಂಗ ಸಭೆಯ ಔತಣಕೂಟದಲ್ಲಿ ಇವರು ಭಾಗಿಯಾಗಿರುವುದು ಕಾಂಗ್ರೆಸ್ ಸೇರುವುದನ್ನು ಖಚಿತಗೊಳಿಸಿದೆ.

ಬಿಜೆಪಿ ಶಾಸಕರಾದ ಎಸ್.ಟಿ. ಸೋಮಶೇಖರ್, ಶಿವರಾಮ್ ಹೆಬ್ಬಾರ್ ನಿನ್ನೆ ರಾತ್ರಿ ನಡೆದ ಕಾಂಗ್ರೆಸ್ ಪಕ್ಷದ ಸಭೆಗೆ ಬಂದಿಲ್ಲ. ಭೋಜನ ಕೂಟಕ್ಕೆ ಬಂದಿದ್ದರು ಅಷ್ಟೇ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಸ್ಪಷ್ಟನೆ ನೀಡಿದ್ದಾರೆ.

ಔತಣಕೂಟಕ್ಕೆ ಎಸ್.ಟಿ. ಸೋಮಶೇಖರ್, ಶಿವರಾಮ್ ಹೆಬ್ಬಾರ್, ವಿಶ್ವನಾಥ್ ಸೇರಿದಂತೆ ಅನ್ಯ ಪಕ್ಷದ ಹತ್ತು ಶಾಸಕರು ಬಂದಿದ್ದರು. ಇವರು ಸಿಎಲ್‌ಪಿ ಸಭೆಗೆ ಬಂದಿಲ್ಲ. ನಮ್ಮ ಶಾಸಕಾಂಗ ಪಕ್ಷದ ಸಭೆಗ ಅವರು ಏಕೆ ಬರುತ್ತಾರೆ ಅವರು ನಮ್ಮ ಪಕ್ಷದ ಶಾಸಕರಲ್ಲ. ನಮ್ಮ ಆಹ್ವಾನದ ಮೇರೆಗೆ ಭೋಜಕೂಟ ಸಭೆಯಲ್ಲಿ ಪಾಲ್ಗೊಂಡಿದ್ದಾರೆ ಅಷ್ಟೇ ಎಂದರು.

ಕಾಂಗ್ರೆಸ್ ಶಾಸಕರ ಭೋಜನ ಕೂಟದ ಸಭೆಗೆ ಬಿಜೆಪಿ ಶಾಸಕರಾದ ಎಸ್.ಟಿ. ಸೋಮಶೇಖರ್, ಶಿವರಾಮ್ ಹೆಬ್ಬಾರ್ ಭಾಗಿಯಾಗಿರುವುದು ಪಕ್ಷದ ಶಿಸ್ತು ಉಲ್ಲಂಘನೆ ಅಲ್ಲ. ಅವರು ಊಟಕ್ಕೆ ಕರೆದಿದ್ದಾರೆ ಇವರು ಹೋಗಿದ್ದಾರೆ ಅಷ್ಟೇ. ಈ ಬಗ್ಗೆ ಎಸ್.ಟಿ. ಸೋಮಶೇಖರ್ ನನ್ನ ಬಳಿ ಮಾತನಾಡಿದ್ದಾರೆ ಎಂದು ಅಶೋಕ್ ಹೇಳಿದ್ದಾರೆ.

ಭೋಜನಕೂಟದಲ್ಲಿ ಪಾಲ್ಗೊಂಡಿರುವ ಹೆಬ್ಬಾರ್ ಮತ್ತು ವಿಶ್ವನಾಥ್ ಜತೆಯೂ ಮಾತನಾಡುತ್ತೇನೆ. ಕಳೆದ ಮೂರು ತಿಂಗಳಿಂದ ಇಂತಹ ಘಟನೆಗಳು ನಡೆಯುತ್ತಿವೆ. ಏನೇ ಇರಲಿ ಎಲ್ಲವನ್ನು ಮಾತನಾಡಿ ಸರಿಪಡಿಸಿಕೊಳ್ಳೋಣ. ಅವರು ಭೋಜನ ಕೂಟಕ್ಕೆ ಹೋಗಿದ್ದನ್ನೇ ಶಿಸ್ತು ಉಲ್ಲಂಘನೆ ಎಂದು ಹೇಳುವುದು ತಪ್ಪಾಗುತ್ತದೆ ಎಂದರು.

Leave a Reply