ಗೋಹಿಂಸೆ ಹಾಗೂ ಗೋಹತ್ಯೆ ಕುರಿತು ತನಿಖೆಗೆ ಆದೇಶಿಸಲಾಗಿದೆ: ಡಾ.ಜಿ.ಪರಮೇಶ್ವರ್

1 year ago

ಬೆಂಗಳೂರು: ರಾಜ್ಯದಲ್ಲಿ ಗೋಹಿಂಸೆ ಹಾಗೂ ಗೋಹತ್ಯೆ ಪ್ರಕರಣಗಳು ಹೆಚ್ಚುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ ತನಿಖೆಗೆ ಆದೇಶಿಸಿದೆ.

ಚಾಮರಾಜಪೇಟೆ ಹಸು ಕೆಚ್ಚಲು ಕೊಯ್ದ ಘಟನೆ ಬೆನ್ನಲ್ಲೇ ಹೊನ್ನಾವರದಲ್ಲಿ ಹಸು ಕೊಂದಿರುವ ಘಟನೆ ವರದಿಯಾಗಿತ್ತು. ಎಲ್ಲೆಡೆ ತೀವ್ರ ವಿರೋಧ ಹಾಗೂ ಟೀಕೆಗಳು ವ್ಯಕ್ತವಾಗುತ್ತಿರುವ ಬೆನ್ನಲ್ಲೇ ತನಿಖೆಗೆ ಆದೇಶಿಸಲಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸುದ್ದಿಗಾರರಿಗೆ ತಿಳಿಸಿದರು.

ರಾಜ್ಯದಲ್ಲಿ ನಡೆಯುತ್ತಿರುವ ಗೋಹತ್ಯೆ ಹಾಗೂ ಗೋಹಿಂಸೆ ಪ್ರಕರಣಗಳಿಗೆ ಪರಿಹಾರ ಕಂಡುಕೊಳ್ಳುವ ಅಗತ್ಯವಿದೆ. ಈ ಘಟನೆಗಳನ್ನು ಗಂಭೀರವಾಗಿ ತೆಗೆದುಕೊಳ್ಳುವಂತೆ ಪೊಲೀಸರಿಗೆ ಮತ್ತೊಮ್ಮೆ ಸೂಚನೆ ನೀಡಿದ್ದೇನೆ ಎಂದರು.

ಈ ರೀತಿಯ ಮನಸ್ಥಿತಿ ಇರುವವರನ್ನು ಮೊದಲು ಗುರುತಿಸಬೇಕು. ಕೃತ್ಯದ ಹಿಂದೆ ಬೇರೆ ಯಾರಾದ್ದಾದರೂ ಪ್ರಚೋದನೆ ಇದೆಯೇ? ಅಥವಾ ವೈಯಕ್ತಿಕವಾಗಿ ಕೃತ್ಯ ಎಸಗುತ್ತಿದ್ದಾರೆಯೇ ಅಥವಾ ಸಂಘಟನೆಗಳಿವೆಯೇ ಎಂಬೆಲ್ಲಾ ವಿಚಾರಗಳನ್ನು ತನಿಖೆ ನಡೆಸುವಂತೆ ಪೊಲೀಸರಿಗೆ ಸೂಚನೆ ನೀಡಿದ್ದೇನೆ ಎಂದರು.

ಇದೇ ವೇಳೆ ಸೆಂಟ್ರಲ್ ಜೈಲು ವಿಭಜನೆ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹವನ್ನು ವಿಭಾಗಿಸುವ ಯಾವುದೇ ಪ್ರಸ್ತಾವನೆಗಳು ಸದ್ಯಕ್ಕೆ ಸರ್ಕಾರದ ಮುಂದಿಲ್ಲ ಎಂದರು.

ಆದರೆ, ರಾಜ್ಯದ ಎಲ್ಲಾ ಜೈಲುಗಳಲ್ಲಿ ನಡೆಯುತ್ತಿರುವ ನಿಯಮ ಬಾಹಿರ ಚಟುವಟಿಕೆಗಳನ್ನು ಹತ್ತಿಕ್ಕಲು ಕಠಿಣ ಕ್ರಮ ಜರುಗಿಸಲಾಗುವುದು. ಬಹಳ ವರ್ಷಗಳಿಂದಲೂ ಬಂಧೀಖಾನೆ ಇಲಾಖೆಗೆ ನೇಮಕ ನಡೆದಿಲ್ಲ. ಹೀಗಾಗಿ ಮುಂದಿನ ದಿನಗಳಲ್ಲಿ ಸಿಬ್ಬಂದಿ ನೇಮಕಾತಿಗೆ ಅಗತ್ಯ ಪ್ರಸ್ತಾವನೆ ಸಲ್ಲಿಸಲಾಗಿದೆ. ನೇಮಕಾತಿ ಬಳಿಕ ವ್ಯವಸ್ಥೆ ಸುಧಾರಣೆಯಾಗಲಿದೆ ಎಂದರು.

Leave a Reply