ಹಿಂಸಾಚಾರ ಹಾಗೂ ಮೆಣಸಿನಕಾಯಿ ದರ ಕುಸಿತ ಕುರಿತು ತನಿಖೆಗೆ ಆದೇಶಿಸಲಾಗಿದೆ: ಡಾ.ಜಿ.ಪರಮೇಶ್ವರ್

2 years ago

ಬೆಂಗಳೂರು: ಹಾವೇರಿ ಜಿಲ್ಲೆ ಬ್ಯಾಡಗಿಯ ಕೃಷಿ ಮಾರುಕಟ್ಟೆಯಲ್ಲಿ ನಡೆದ ಹಿಂಸಾಚಾರ ಹಾಗೂ ಮೆಣಸಿನ ಕಾಯಿ ದರ ಕುಸಿತ ಕುರಿತಂತೆ ತನಿಖೆ ನಡೆಸಲು ಆದೇಶಿಸಲಾಗಿದೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕ್ವಿಂಟಾಲ್‍ಗೆ 20 ಸಾವಿರ ರೂ.ಗಳಿದ್ದ ಮೆಣಸಿನಕಾಯಿಯ ದರ ಏಕಾಏಕಿ 8 ಸಾವಿರಕ್ಕೆ ಕುಸಿದಿದೆ. ಇದರಿಂದ ನಷ್ಟಕ್ಕೊಳಗಾಗುವ ಆತಂಕದಲ್ಲಿ ರೈತರು ಸಹಜವಾಗಿಯೇ ಪ್ರತಿಕ್ರಿಯಿಸಿದ್ದಾರೆ. ಏಕಾಏಕಿ ಆ ಪ್ರಮಾಣದಲ್ಲಿ ಧಾರಣೆ ಕುಸಿಯಲು ಯಾರು ಕಾರಣ ಎಂಬುದನ್ನು ತನಿಖೆ ನಡೆಸಲು ಮುಖ್ಯಮಂತ್ರಿ ಸೂಚಿಸಿದ್ದಾರೆ ಎಂದರು.

ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಏಷ್ಯಾದಲ್ಲೇ ದೊಡ್ಡದಾಗಿದೆ. ಅಲ್ಲಿಗೆ ರಾಜ್ಯ ಹಾಗೂ ಆಂಧ್ರ ಪ್ರದೇಶದ ರೈತರು, ವರ್ತಕರು ಬರುತ್ತಾರೆ. ಗಲಾಟೆ ಯಾರು ಮಾಡಿದರು, ಬೆಂಕಿ ಯಾರು ಹಚ್ಚಿದ್ದು ಎಂಬ ವಿಚಾರಣೆ ನಡೆಯುತ್ತಿದೆ. ಪೊಲೀಸರು ಈವರೆಗೂ 45ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದರು.

ಆರೇಳು ವಾಹನಗಳನ್ನು ಸುಟ್ಟುಹಾಕಲಾಗಿದೆ. ಬೆಂಕಿ ನಂದಿಸಲು ಬಂದಿದ್ದ ಅಗ್ನಿಶಾಮಕ ದಳದ ವಾಹನಕ್ಕೂ ಬೆಂಕಿ ಹಚ್ಚಲಾಗಿದೆ. ಘಟನೆಯಿಂದ ತಮಗೂ ತುಂಬಾ ಬೇಸರವಾಗಿದೆ ಎಂದರು.

ಗಲಾಟೆಗೆ ಯಾರು ಕಾರಣ ಅಥವಾ ದರ ಕುಸಿತದ ಹಿಂದೆ ಸಂಚಿದೆಯೇ ಎಂಬುದನ್ನು ಪತ್ತೆ ಹಚ್ಚಲು ಮುಖ್ಯಮಂತ್ರಿಗಳು ಸೂಚಿಸಿದ್ದಾರೆ ಎಂದರು.

ಮೆಣಸಿನಕಾಯಿ ಧಾರಣೆಯನ್ನು ಎಪಿಎಂಸಿಯವರೇ ನಿಯಂತ್ರಿಸುತ್ತಿದ್ದರು. ಇದ್ದಕ್ಕಿದ್ದಂತೆ ದರ ಕುಸಿಯಲು ಏನು ಕಾರಣ ಎಂಬುದನ್ನು ಪತ್ತೆ ಹಚ್ಚಲಾಗುವುದು ಎಂದರು.

ಇತ್ತೀಚೆಗೆ ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬ್ಯಾಡಗಿ ಮೂಲದ ಆರೋಪಿ ನಾಶಿಪುಡಿ ಎಂಬುವರನ್ನು ಬಂಧಿಸಿರುವುದಕ್ಕೂ, ಈ ಗಲಭೆ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟೀಕರಣ ನೀಡಿದರು.

Leave a Reply