ಬೆಂಗಳೂರು: 2024ರ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಿಂದ ಕನಿಷ್ಠ 20 ಸಂಸದರನ್ನು ಆಯ್ಕೆ ಮಾಡಿ ಕಳುಹಿಸಬೇಕೆಂದು ರಾಜ್ಯ ಕಾಂಗ್ರೆಸ್ ನಾಯಕರಿಗೆ ಸೂಚಿಸಿರುವ ಹೈಕಮಾಂಡ್ ಅಗತ್ಯ ಬಿದ್ದರೆ ಕೆಲವು ಕ್ಷೇತ್ರಗಳಲ್ಲಿ ಸಚಿವರನ್ನು ಕಣಕ್ಕಿಳಿಸಲು ತೀರ್ಮಾನ ಮಾಡಿದೆ.
ಚುನಾವಣೆ ಕಾರ್ಯತಂತ್ರದ ಕುರಿತು ಚರ್ಚೆ ನಡೆಸಲು ಬೆಂಗಳೂರಿಗೆ ಆಗಮಿಸಿರುವ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಪಕ್ಷದ ಎಲ್ಲಾ ನಾಯಕರೊಂದಿಗೆ ಅನೌಪಚಾರಿಕವಾಗಿ ಮಾತುಕತೆ ನಡೆಸಿದ್ದು ಹೈಕಮಾಂಡ್ ಸಂದೇಶವನ್ನು ರಾಜ್ಯದ ನಾಯಕರಿಗೆ ತಲುಪಿಸಿದ್ದಾರೆ.
ಚುನಾವಣೆ ಕಾರ್ಯತಂತ್ರದ ಕುರಿತು ನಾಳೆ ರಾಜ್ಯದ ಎಲ್ಲಾ ಮಂತ್ರಿಗಳು ಮತ್ತು ಹಿರಿಯ ನಾಯಕರೊಂದಿಗೆ ಬೆಂಗಳೂರಿನಲ್ಲಿ ಸಭೆ ಆಯೋಜಿಸಲಾಗಿದೆ. ಈ ಸಭೆಯಲ್ಲಿ ಅಭ್ಯರ್ಥಿಗಳ ಆಯ್ಕೆ, ಪ್ರಚಾರ ತಂತ್ರ ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚೆ ನಡೆಯಲಿದೆ. ಇದಾದ ನಂತರ ರಾಜ್ಯದ ಎಲ್ಲ ಲೋಕಸಭಾ ಕ್ಷೇತ್ರಗಳಿಗೆ ಉಸ್ತುವಾರಿಯಾಗಿ ನೇಮಿಸಿರುವ ಮಂತ್ರಿಗಳು ದೆಹಲಿಗೆ ತೆರಳಲಿದ್ದಾರೆ. ಈ ಹಿನ್ನೆಲೆಯಲ್ಲಿ ಗುರುವಾರ ನಿಗದಿಯಾಗಿದ್ದ ರಾಜ್ಯ ಸಚಿವ ಸಂಪುಟ ಸಭೆಯನ್ನು ಮುಂದೂಡಲಾಗಿದೆ.
ಗುರುವಾರ ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ನಡೆಯಲಿದೆ. ಸಭೆಯಲ್ಲಿ ರಾಜ್ಯದ ಚುನಾವಣೆ ಕಾರ್ಯತಂತ್ರ, ಪ್ರಚಾರದ ಪ್ರಮುಖ ವಿಷಯ ಹಾಗೂ ಅಭ್ಯರ್ಥಿಗಳ ಆಯ್ಕೆ ಕುರಿತು ಚರ್ಚೆಗಳು ನಡೆಯಲಿವೆ. ಕೆಲವು ಕ್ಷೇತ್ರಗಳಿಗೆ ಸಚಿವರನ್ನು ಕಣಕ್ಕಿಳಿಸುವ ಕುರಿತು ನಿರ್ಧಾರ ಪ್ರಕಟವಾಗುವ ಸಾಧ್ಯತೆ ಇದೆ.
ಪ್ರಮುಖವಾಗಿ ಬೆಳಗಾವಿಯಿಂದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಉತ್ತರ ಕನ್ನಡದಿಂದ ಹಿರಿಯ ನಾಯಕ ಆರ್.ವಿ.ದೇಶಪಾಂಡೆ, ಕೋಲಾರದಿಂದ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ, ತುಮಕೂರಿನಿಂದ ಸಹಕಾರ ಸಚಿವ ಕೆ.ಎನ್.ರಾಜಣ್ಣ, ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ್, ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಮತ್ತು ಚಾಮರಾಜನಗರದಿಂದ ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹಾದೇವಪ್ಪ ಅವರನ್ನು ಚುನಾವಣೆ ಕಣಕ್ಕಿಳಿಸುವ ಕುರಿತು ಚರ್ಚೆಗಳು ನಡೆದಿವೆ.
ಇನ್ನೂ ರಾಜಧಾನಿ ಬೆಂಗಳೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಕಳೆದ 15 ವರ್ಷಗಳಿಂದ ಆಯ್ಕೆಯಾಗಿಲ್ಲ. ಬಿಜೆಪಿ ಸತತವಾಗಿ ಆಯ್ಕೆಯಾಗುವ ಮೂಲಕ ದಾಖಲೆ ನಿರ್ಮಿಸಿದ್ದು ಇದಕ್ಕೆ ಇತಿಶ್ರೀ ಹಾಡುವ ದೃಷ್ಟಿಯಿಂದ ಮಂತ್ರಿಗಳಾದ ಕಂದಾಯ ಸಚಿವ ಕೃಷ್ಣಭೈರೇಗೌಡ ಮತ್ತು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರನ್ನು ಬೆಂಗಳೂರಿನ ದಕ್ಷಿಣ ಮತ್ತು ಕೇಂದ್ರ ಲೋಕಸಭಾ ಕ್ಷೇತ್ರಗಳಿಂದ ಕಣಕ್ಕಿಳಿಸಲು ಚಿಂತನೆ ನಡೆದಿದೆ.
ಈ ನಡುವೆ ಸುರ್ಜೇವಾಲಾ ಅವರನ್ನು ಭೇಟಿ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಡಾ. ಪರಮೇಶ್ವರ್, ಲೋಕಸಭಾ ಚುನಾವಣೆ ತಯಾರಿ ಕುರಿತು ಮಾತುಕತೆ ನಡೆಯಿತು. ಈ ವೇಳೆ ಕೆಲವು ಸಚಿವರು ಚುನಾವಣೆಗೆ ಸ್ಪರ್ಧಿಸಲು ಹೈಕಮಾಂಡ್ ಆಸಕ್ತಿ ಹೊಂದಿದೆ ಎಂಬ ಅಂಶವನ್ನು ಬಹಿರಂಗಪಡಿಸಿದರು.
ಕಳೆದ ಬಾರಿ ಕೃಷ್ಣಭೈರೇಗೌಡ ಅವರನ್ನು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಸಲಾಗಿತ್ತು. ಅದನ್ನು ಉದಾಹರಣೆಯಾಗಿ ಚರ್ಚಿಸಲಾಗಿದ್ದು, ಸಂದರ್ಭ ಬಂದರೆ ಸಚಿವರು ಸ್ಪರ್ಧಿಗಳಾಗಲು ಸಿದ್ಧವಾಗಿರಬೇಕಾಗುತ್ತದೆ ಎಂದು ಹೈಕಮಾಂಡ್ ತಿಳಿಸಿದೆ ಎಂದರು.
ಅಭ್ಯರ್ಥಿಗಳ ಆಯ್ಕೆಗೆ ಸಂಬಂಧಪಟ್ಟಂತೆ ಈಗಾಗಲೇ ಚರ್ಚೆಗಳಾಗಿವೆ. ಯಾರೆಲ್ಲಾ ಆಕಾಂಕ್ಷಿಗಳಿದ್ದಾರೆ, ಸಮರ್ಥರು ಯಾರು, ಜಾತಿವಾರು ಲೆಕ್ಕಾಚಾರವೇನು, ಯಾರನ್ನು ಕಣಕ್ಕಿಳಿಸಬೇಕು ಎಂಬ ಮಾಹಿತಿಗಳು ಈಗಾಗಲೇ ಲಭ್ಯವಿದೆ. ಅದರ ಆಧಾರದ ಮೇಲೆ ಮುಂದಿನ ಚರ್ಚೆಗಳು ನಡೆಯಲಿವೆ. ಎರಡು ದಿನ ಬಿಟ್ಟು ಎಲ್ಲಾ ಸಚಿವರೂ ದೆಹಲಿಗೆ ಭೇಟಿ ನೀಡಿ ಹೈಕಮಾಂಡ್ ನಾಯಕರ ಜೊತೆ ಚರ್ಚೆ ನಡೆಸಲಿದ್ದೇವೆ ಎಂದರು.
ಲೋಕಸಭೆ ಚುನಾವಣೆ – 2024 ಕಾಂಗ್ರೆಸ್ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ
ಬಾಗಲಕೋಟೆ – ವೀಣಾ ಕಾಶಪ್ಪನವರ್
ಬೆಂಗಳೂರು ಕೇಂದ್ರ – ದಿನೇಶ್ ಗುಂಡೂರಾವ್
ಬೆಂಗಳೂರು ದಕ್ಷಿಣ – ಕೃಷ್ಣ ಬೈರೇಗೌಡ
ಬೆಂಗಳೂರು ಗ್ರಾಮಾಂತರ – ಡಿ.ಕೆ.ಸುರೇಶ್
ಬೆಳಗಾವಿ – ಅಂತಿಮವಾಗಿಲ್ಲ
ಬಳ್ಳಾರಿ – ಎನ್.ವೈ.ಗೋಪಾಲಕೃಷ್ಣ ಅಥವಾ ವಿ.ಎಸ್.ಉಗ್ರಪ್ಪ (ಎಸ್.ಟಿ)
ಬೀದರ್ – ಈಶ್ವರ್ ಖಂಡ್ರೆ
ಬಿಜಾಪುರ – ಪ್ರಿಯಾಂಕ್ ಖರ್ಗೆ (ಎಸ್.ಸಿ)
ಚಾಮರಾಜನಗರ – ಡಾ.ಎಚ್.ಸಿ.ಮಹದೇವಪ್ಪ
ಚಿಕ್ಕಬಳ್ಳಾಪುರ – ಶರತ್ ಬಚ್ಚೇಗೌಡ
ಚಿಕ್ಕೋಡಿ – ಅಂತಿಮವಾಗಿಲ್ಲ
ಚಿತ್ರದುರ್ಗ – ಎಚ್.ಆಂಜನೇಯ (ಎಸ್.ಸಿ) / ಚಂದ್ರಪ್ಪ
ದಕ್ಷಿಣ ಕನ್ನಡ – ಬಿ.ಕೆ.ಹರಿಪ್ರಸಾದ್
ದಾವಣಗೆರೆ – ಎಸ್.ಎಸ್.ಮಲ್ಲಿಕಾರ್ಜುನ್
ಧಾರವಾಡ – ಜಗದೀಶ್ ಶೆಟ್ಟರ್
ಗುಲಬರ್ಗಾ – ಮಲ್ಲಿಕಾರ್ಜುನ ಖರ್ಗೆ (SC)
ಹಾಸನ – ಅಂತಿಮವಾಗಿಲ್ಲ
ಹಾವೇರಿ – ಸಲೀಂ ಅಹಮದ್
ಕೋಲಾರ – ಕೆ.ಎಚ್.ಮುನಿಯಪ್ಪ (ಎಸ್.ಸಿ)
ಕೊಪ್ಪಳ – ಅಂತಿಮವಾಗಿಲ್ಲ
ಮಂಡ್ಯ – ರಮ್ಯ
ಮೈಸೂರು – ಯತೀಂದ್ರ ಸಿದ್ದರಾಮಯ್ಯ
ರಾಯಚೂರು – ರವಿಕುಮಾರ್ ಪಾಟೀಲ್ (ಎಸ್.ಟಿ)
ಶಿವಮೊಗ್ಗ – ಗೀತಾ ಶಿವರಾಜ್ ಕುಮಾರ್ \ ಆಯನೂರು ಮಂಜುನಾಥ್
ತುಮಕೂರು – ಕೆ.ಎನ್.ರಾಜಣ್ಣ \ ವಿ.ಸೋಮಣ್ಣ (ಬಿಜೆಪಿಯಿಂದ ಕರೆತಂದು)
ಉಡುಪಿ – ಚಿಕ್ಕಮಗಳೂರು – ಪ್ರಿಯಾಂಕ ಗಾಂಧಿ
ಉತ್ತರ ಕನ್ನಡ – ಆರ್.ವಿ.ದೇಶಪಾಂಡೆ




