ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಹೂಡಿಕೆ ಪ್ರಮಾಣ ಹೆಚ್ಚಳ: ಎಂ.ಬಿ.ಪಾಟೀಲ್

3 years ago

#Increase #investment #rate #Congress #government #power #MBPatil

ಬೆಂಗಳೂರು: ರಾಜ್ಯದಲ್ಲಿ ನೂತನ ಸರಕಾರ ಅಸ್ತಿತ್ವಕ್ಕೆ ಬಂದ ಕೇವಲ ಎರಡು ತಿಂಗಳಲ್ಲಿ ಫಾಕ್ಸ್ಕಾನ್ ಮತ್ತು ಐಬಿಸಿ ತರಹದ ದಿಗ್ಗಜ ಕಂಪನಿಗಳು ರಾಜ್ಯದಲ್ಲಿ ಅಪಾರ ಪ್ರಮಾಣದ ಹೂಡಿಕೆಗೆ ಮುಂದೆ ಬಂದಿವೆ ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಹರ್ಷ ವ್ಯಕ್ತಪಡಿಸಿದರು.

ಯೋಜನಾ ಇಲಾಖೆ ಆಯೋಜಿಸಿದ್ದ ಶಿಕ್ಷಣ ಕುರಿತ ಕಾರ್ಪೊರೇಟ್ ಸಂಸ್ಥೆಗಳ ಸಾಮಾಜಿಕ ಹೊಣೆಗಾರಿಕೆ ಸಮಾವೇಶದಲ್ಲಿ ಮಾತನಾಡಿದ ಅವರು, ಸಿಎಸ್ಆರ್ ಪಾಲುದಾರರು ರಾಜ್ಯದ ಸುಸ್ಥಿರ ಅಭಿವೃದ್ಧಿ ಗುರಿಗಳೊಂದಿಗೆ ತಮ್ಮ ಗುರಿಗಳನ್ನೂ ಸೇರಿಸಿಕೊಳ್ಳುವುದು ಅಗತ್ಯವಾಗಿದೆ. ಇದರ ಜತೆಗೆ ಮುಂದಿನ ದಿನಗಳಲ್ಲಿ ಸಿಎಸ್ಆರ್ ಚಟುವಟಿಕೆಗಳು ಮತ್ತಷ್ಟು ವ್ಯಾಪಕಗೊಳ್ಳಬೇಕಾದ ಅಗತ್ಯವಿದೆ. ಇಂತಹ ಸಮಗ್ರ ಅಭಿವೃದ್ಧಿಯನ್ನು ಗಮನದಲ್ಲಿ ಇಟ್ಟುಕೊಂಡೇ ಪ್ರಮುಖ ವಲಯಗಳಿಗೆ ಸಂಬಂಧಿಸಿದಂತೆ ವಿಷನ್ ಗ್ರೂಪ್ಗಳನ್ನು ರಚಿಸಲಾಗುತ್ತಿದೆ ಎಂದರು.

ಪ್ರತೀಕ್ಷಣವೂ ಬದಲಾಗುತ್ತಿರುವ ಜಗತ್ತಿನಲ್ಲಿ ನಮ್ಮ ವಿದ್ಯಾರ್ಥಿಗಳು ಸ್ಪರ್ಧಿಸಬೇಕಾಗಿದೆ. ಇದಕ್ಕಾಗಿ ರಾಜ್ಯದಲ್ಲಿ ಆಧುನಿಕ ತಂತ್ರಜ್ಞಾನ ಇತ್ಯಾದಿಗಳನ್ನು ಕಲಿಕೆಯ ಕ್ರಮದ ಭಾಗವನ್ನಾಗಿ ಮಾಡಿಕೊಳ್ಳಲು ನಿರ್ಧರಿಸಲಾಗಿದೆ. ಮಕ್ಕಳಿಗೆ ಸರಿಯಾದ ಜ್ಞಾನ ಮತ್ತು ಅಗತ್ಯ ಕೌಶಲ್ಯಗಳೆರಡನ್ನೂ ಕಲಿಸಲಾಗುವುದು. ಈ ನಿಟ್ಟಿನಲ್ಲಿ ಕಂಪನಿಗಳ ಸಿಎಸ್ಆರ್ ಚಟುವಟಿಕೆಗಳಿಗೆ ತಮ್ಮ ಸಂಪೂರ್ಣ ಬೆಂಬಲವಿರಲಿದೆ ಎಂದು ಅವರು ಆಶ್ವಾಸನೆ ನೀಡಿದರು.

ಸಮಾರಂಭದಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್, ಪ್ರಾಥಮಿಕ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಗೃಹ ಸಚಿವ ಜಿ.ಪರಮೇಶ್ವರ್, ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ್ ಪಾಟೀಲ್, ಯೋಜನಾ ಇಲಾಖೆ ಸಚಿವ ಡಿ.ಸುಧಾಕರ್ ಹಾಗೂ ಮುಖ್ಯಮಂತ್ರಿಗಳ ಸಲಹೆಗಾರ ಗೋವಿಂದರಾಜ್ ಉಪಸ್ಥಿತರಿದ್ದರು.

Leave a Reply