ಮೈಸೂರು: ಮೊನ್ನೆ-ಮೊನ್ನೆಯಷ್ಟೆ ಕರ್ನಾಟಕ ವಿಧಾನಸಭೆಗೆ ಚುನಾವಣೆ ನಡೆದಿದೆ. ಹೀಗಿರುವಾಗ ರಾಜ್ಯ ವಿಧಾನಸಭೆ ವಿಸರ್ಜಿಸಲು ಸಾಧ್ಯವೇ? ಹೀಗಾಗಿ ಒಂದು ರಾಷ್ಟ್ರ, ಒಂದು ಚುನಾವಣೆ ಜಾರಿಗೊಳಿಸುವುದು ಕಾರ್ಯತಃ ಸಾಧ್ಯವಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಪ್ರತಿಪಾದಿಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವು ರಾಜ್ಯಗಳಲ್ಲಿ ಇತ್ತೀಚೆಗಷ್ಟೇ ಚುನಾವಣೆ ನಡೆದಿದೆ. ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಈ ಎಲ್ಲ ರಾಜ್ಯ ವಿಧಾನಸಭೆಗಳನ್ನು ವಿಸರ್ಜಿಸಲು ಸಾಧ್ಯವಿದೆಯೇ ಅಥವಾ ಚುನಾವಣೆ ನಡೆಯುವವರೆಗೂ ರಾಷ್ಟ್ರಪತಿ ಅಧಿಕಾರ ಹೇರಲು ಸಾಧ್ಯವಿದೆಯೇ? ಇಂತಹ ಸಂದರ್ಭಗಳು ಉದ್ಭವಿಸುವ ಸಾಧ್ಯತೆಯಿಂದಾಗಿ ಒಂದು ರಾಷ್ಟ್ರ, ಒಂದು ಚುನಾವಣೆ ಜಾರಿಗೊಳಿಸುವುದು ಕಾರ್ಯತಃ ಸಾಧ್ಯವಿಲ್ಲ ಎಂದು ಹೇಳಿದರು.
ಕರ್ನಾಟಕ ವಿಧಾನಸಭೆ ಚುನಾವಣೆಯ ಫಲಿತಾಂಶವು ಪ್ರಧಾನಿ ನರೇಂದ್ರ ಮೋದಿ ಮೇಲೆ ಬಹಳ ದೊಡ್ಡ ಪರಿಣಾಮ ಬೀರಿದೆ. ಹೀಗಾಗಿ, ಒಂದು ದೇಶ ಒಂದು ಚುನಾವಣೆ ಬಗ್ಗೆ ಮಾತನಾಡುತ್ತಿದ್ದಾರೆ ಎಂದರು.
ನಾನು ಕರ್ನಾಟಕಕ್ಕೆ ಬಂದು ಮಾಯ–ಮಂತ್ರ ಮಾಡಿಬಿಡುತ್ತೇನೆ, ರ್ಯಾಲಿ, ರೋಡ್ ಶೋ ನಡೆಸಿದರೆ ಪರಿಸ್ಥಿತಿ ಬದಲಾಗುತ್ತದೆ ಎಂದು ಭಾವಿಸಿದ್ದರು. ಆದರೆ, ಅವರು ಹೋದಲ್ಲೆಲ್ಲಾ ನಾವು ದೊಡ್ಡ ಅಂತರದಲ್ಲಿ ಗೆದ್ದಿದ್ದೇವೆ. ಇದರಿಂದಾಗಿ ಪ್ರಧಾನಿಗೆ ಹತಾಶೆ ಶುರುವಾಗಿದೆ. ಹೀಗಾಗಿಯೇ ಅವರಿಗೆ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಲೂ ಸಾಧ್ಯವಾಗಿಲ್ಲ. ಅದಕ್ಕೆ ಇಷ್ಟವೂ ಇಲ್ಲ. ಕರ್ನಾಟಕ ಬಿಜೆಪಿ ಬಗ್ಗೆ ಅವರಿಗೆ ತಾತ್ಸಾರ ಬಂದು ಬಿಟ್ಟಿದೆ ಎಂದು ವ್ಯಂಗ್ಯವಾಡಿದರು.
ಸಿದ್ದರಾಮಯ್ಯ ಹಿಂದೆ ಬಿಜೆಪಿ ಪಕ್ಷಕ್ಕೆ ಹೋಗಲು ಪ್ರಯತ್ನಿಸಿದ್ದರು ಎಂಬ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಆರೋಪಕ್ಕೆ ಪ್ರತಿಕ್ರಿಯೆ ನೀಡಿ, ನನ್ನ ರಾಜಕೀಯ ಜೀವನದಲ್ಲಿ ಕೋಮುವಾದಿ ಪಕ್ಷಗಳ ವಿರುದ್ಧ ಹೋರಾಟ ಮಾಡುತ್ತಿದ್ದೇನೆ. ಅವರು ಕುಟುಂಬ ರಾಜಕಾರಣಕ್ಕಾಗಿ ಬಿಜೆಪಿಯವರೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ. ಯಾವುದೇ ಕಾರಣಕ್ಕೂ ಕೋಮುವಾದಿಗಳ ಜೊತೆ ರಾಜಿ ಮಾಡಿಕೊಳ್ಳುವುದಿಲ್ಲ ಎಂದರು.
ಬರ ಘೋಷಣೆ: ಬರ ಪೀಡಿತ ಪ್ರದೇಶ ಘೋಷಣೆಗಾಗಿ ಕೇಂದ್ರ ಸರ್ಕಾರದ ಮಾರ್ಗಸೂಚಿಯನ್ವಯ 62 ತಾಲ್ಲೂಕುಗಳು ಗುರುತಿಸಲಾಗಿದೆ. ಆದರೆ ಇನ್ನೂ ಹೆಚ್ಚಿನ ಪ್ರದೇಶದಲ್ಲಿ ಬರದ ಛಾಯೆ ಇದೆ. ಒಟ್ಟಾರೆ 136 ತಾಲ್ಲೂಕು ಬರಪೀಡಿತ ಪರಿಸ್ಥಿತಿಯ ವರದಿ ಪಡೆಯಲಾಗುತ್ತಿದೆ ಎಂದು ತಿಳಿಸಿದರು.
ಈ ವರದಿ ಬಂದ ನಂತರ ಮುಂದಿನ ಸಚಿವಸಂಪುಟ ಸಭೆಯಲ್ಲಿ ಈ ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದರು.



