ಬೆಂಗಳೂರು: ಪ್ಯಾಕ್ ಮಾಡಲಾದ ಆಹಾರ ಪದಾರ್ಥಗಳನ್ನು ಇಂತಿಷ್ಟೇ ಕಾಲಾವಧಿಯಲ್ಲಿ ಬಳಕೆ ಮಾಡಬೇಕು. ಈ ಅವಧಿ ಮುಗಿದ ನಂತರ ಅವುಗಳನ್ನು ಸೇವನೆ ಮಾಡಿದರೆ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಲಿದೆ.
ಇದು ಎಲ್ಲರಿಗೂ ಗೊತ್ತಿದ್ದರೂ ಬಳಕೆ ಮಾಡುವ ಅವಧಿ ಮೀರಿದ ಆಹಾರ ಸಾಮಾಗ್ರಿಗಳನ್ನು ಅಕ್ರಮವಾಗಿ ದಾಸ್ತಾನು ಮಾಡಿಕೊಂಡು ಹೋಟೆಲ್ ಸೇರಿದಂತೆ ಕೆಲವು ಗ್ರಾಹಕರಿಗೆ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿರುವ ಜಾಲವೊಂದು ಬೆಂಗಳೂರಿನಲ್ಲಿ ಕಾರ್ಯ ನಿರ್ವಹಿಸುತ್ತಿದೆ.
ಈ ಬಗ್ಗೆ ಖಚಿತ ಮಾಹಿತಿ ಪಡೆದ ಸಿಸಿಬಿ ಪೊಲೀಸ್ ಮತ್ತು ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ, ಅಕ್ರಮವೊಂದನ್ನು ಬಯಲಿಗೆಳೆದಿದ್ದಾರೆ.
ಕಾಟನ್‍ಪೇಟೆಯ ನಲಬಂದ ಲೇನ್, ಎ.ಎಸ್.ಚಾರ್ ಸ್ಟ್ರೀಟ್ ಕ್ರಾಸ್ ನ ಅರಿಹಂತ್ ಟ್ರೇಡಿಂಗ್ ಕಂಪನಿಗೆ ಸೇರಿದ ಅಂಗಡಿಗಳ ಮೇಲೆ ದಾಳಿ ನಡೆಸಿದ ತಂಡಕ್ಕೆ ಇಲ್ಲಿ ಅವಧಿ ಮೀರಿದ ಆಹಾರ ಪದಾರ್ಥಗಳನ್ನು ಅಕ್ರಮವಾಗಿ ದಾಸ್ತಾನು ಮಾಡಿಕೊಂಡು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿರುವ ಅಂಶ ಪತ್ತೆಯಾಗಿದೆ.
ಅರಿಹಂತ್ ಟ್ರೇಡಿಂಗ್ ಕಂಪನಿಯ ಅಂಗಡಿ ಮತ್ತು ಗೋದಾಮಿನಲ್ಲಿ ಅವಧಿ ಮೀರಿದ ಆಹಾರ ಪದಾರ್ಥಗಳ ಅಕ್ರಮ ದಾಸ್ತಾನಿನ ಕುರಿತು ಅಂಗಡಿಯ ಮಾಲೀಕರನ್ನು ಅಧಿಕಾರಿಗಳು ಪ್ರಶ್ನಿಸಿದಾಗ ಹಲವು ಆಘಾತಕಾರಿ ಅಂಶ ಬೆಳಕಿಗೆ ಬಂದಿವೆ.
ಇವರು ನೀಡಿದ ಮಾಹಿತಿ ಪಡೆದು ರಾಣಾಸಿಂಗ್ ಪೇಟೆಯ ಶ್ರೀಲಕ್ಷ್ಮಿ ಟ್ರೇಡರ್ಸ್ ಗೊಡೋನ್ ಮೇಲೆ ದಾಳಿ ನಡೆಸಿ ಪ್ರತಿಷ್ಟಿತ ಕಂಪನಿಗಳ ಅವಧಿ ಮೀರಿದ ಬಿಸ್ಕೆಟ್ ಮತು ಚಾಕಲೇಟ್‍ಗಳು, ಅಡಿಗೆ ಎಣ್ಣೆ, ಹಾಲಿನ ಪೌಡರ್ ಸೇರಿ ಇತರೆ ಆಹಾರ ಪದಾರ್ಥಗಳನ್ನು ಪತ್ತೆ ಮಾಡಲಾಗಿವೆ.
ಅವಧಿ ಮೀರಿದ ಆಹಾರ ಪದಾರ್ಥಗಳ ಅಕ್ರಮ ದಾಸ್ತಾನು ಮತ್ತು ಮಾರಾಟದ ಕುರಿತು ಆಹಾರ ಸುರಕ್ಷತಾ ಕಾಯ್ದೆ ಅಡಿಯಲ್ಲಿ ನೋಟೀಸ್ ನೀಡಿ ಕ್ರಮ ಕೈಗೊಂಡಿರುತ್ತಾರೆ.
ಸಿಸಿಬಿ ಅಧಿಕಾರಿಗಳು ಮತ್ತು ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳ ಈ ಜಂಟಿ ಕಾರ್ಯಾಚರಣೆಯಿಂದಾಗಿ ಸಾರ್ವಜನಿಕರ ಆರೋಗ್ಯದ ಮೇಲೆ ಉಂಟಾಗಬಹುದಾಗಿದ್ದ ದುಷ್ಪರಿಣಾಮವನ್ನು ತಪ್ಪಿಸಿದಂತಾಗಿದೆ ಎಂದು ಜಂಟಿ ಪೊಲೀಸ್ ಆಯುಕ್ತ ಶರಣಪ್ಪ ತಿಳಿಸಿದರು.




