ಬೆಂಗಳೂರು: ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಕ್ಕೆ ಕೊಡಬೇಕ್ಕಿದ್ದ ನೂರಾರು ಕೋಟಿ ರೂಪಾಯಿ GST ಹಣ ಬಿ.ಬಿ.ಎಂ.ಪಿ.ಯಲ್ಲಿ ವಂಚಿಸಿರುವ ಬೃಹತ್ ಹಗರಣದ ಬಗ್ಗೆ ಮಾಹಿತಿ ಹಕ್ಕು ಅಧ್ಯಯನ ಕೇಂದ್ರದ ಮ್ಯಾನೇಜಿಂಗ್ ಟ್ರಸ್ಟಿ ಬಿ. ಹೆಚ್. ವೀರೇಶ್ ಮತ್ತು ಮಾಹಿತಿ ಹಕ್ಕು ಅಧ್ಯಯನ ಸಂಸ್ಥೆ ಮ್ಯಾನೇಜಿಂಗ್ ಟ್ರಸ್ಟಿ ಬಿ.ಬಿ.ಎಂ.ಪಿ.ಯ ಜಿ.ಎಸ್.ಟಿ. ನಿರ್ವಹಣೆಯಲ್ಲಿ ವಿಫಲರಾಗಿರುವುದರ ಮಾಹಿತಿ ನೀಡಿದರು.
ಮಹಾನಗರ ಪಾಲಿಕೆಯಲ್ಲಿ ಜಿ.ಎಸ್.ಟಿ. ಕಾನೂನಿನ ಅಸಮರ್ಪಕ ಅನುಷ್ಠಾನದಿಂದ ಪಾಲಿಕೆಗೆ ಮತ್ತು ಸರ್ಕಾರಕ್ಕೆ ಆಗುತ್ತಿರುವ ಆರ್ಥಿಕ ನಷ್ಟ ತಡೆಯುವ ಬಗ್ಗೆ ಅವರು ವಿವರಿಸಿದರು. ಮಹಾನಗರ ಪಾಲಿಕೆ ಹೊರಡಿಸಿರುವ ಸುತ್ತೋಲೆ ನಂ. ಮುಲೆಪ ಪಿ.ಆರ್./ಜಿ.ಎಸ್.ಟಿ.-01/17-18 ದಿನಾಂಕ 21.9.2017 ರಲ್ಲಿ ಸೂಚಿಸಿರುವಂತೆ ಬಿಲ್ ಗಳನ್ನು ಪಾವತಿಸುವಾಗ ಈ ಕೆಳಕಂಡ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಬೇಕಾಗಿರುತ್ತದೆ ಎಂದರು.
ದಿನಾಂಕ 1.07.2017 ರ ನಂತರ ಅನ್ವಯವಾಗುವಂತೆ ನಿರ್ವಹಿಸುವ ಕಾಮಗಾರಿಗಳಿಗೆ/ಸರಬರಾಜುಗಳಿಗೆ ಗುತ್ತಿಗೆದಾರರಿಂದ ಕಾಯಿದೆಯಲ್ಲಿ ನಿಗದಿಪಡಿಸಿರುವ ಮಾನದಂಡದಂತೆ Invoice (ಬಿಲ್)ನ್ನು ನೀಡಲು ಸಂಬಂಧಪಟ್ಟ ಗುತ್ತಿಗೆದಾರರಿಗೆ/ಸರಬರಾಜುದಾರರಿಗೆ ಸೂಚಿಸುವುದು. ಎಲ್ಲ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಹಾಲಿ ಚಾಲ್ತಿಯಲ್ಲಿರುವ C. C. Bill ಜೊತೆಯಲ್ಲಿ ಕಾಯಿದೆಯಲ್ಲಿ ನಿಗದಿಪಡಿಸಿರುವ ಕ್ರಮಾಂಕಿತ ಗುತ್ತಿಗೆದಾರರ Invoice (ಬಿಲ್) ನ್ನು ಗುತ್ತಿಗೆದಾರರಿಂದ ಪಡೆಯುವುದು. ಸದರಿ Invoice (ಬಿಲ್)ನಲ್ಲಿ ಗುತ್ತಿಗೆದಾರರು ನಿರ್ವಹಿಸಿದ ಕಾಮಗಾರಿಯ ವೆಚ್ಚದ ಮೊತ್ತ CGST ಮತ್ತು SGST ಪ್ರತ್ಯೇಕವಾಗಿ ವಿಂಗಡಿಸಿ 2 (work done cost + CGST + SGST = Bill Amount). ಕಾಮಗಾರಿಗಳಿಗೆ ಮುಂಗಡ ಹಣ ಪಾವತಿಸುವ ಸಂದರ್ಭದಲ್ಲೂ ಸಹ ಮೇಲಿನಂತೆ ಕ್ರಮವಹಿಸುವುದು ಎಂಬ ಉಲ್ಲೇಖವಿದೆ ಎಂದರು.
ಆದರೆ ಪಾಲಿಕೆಯಲ್ಲಿ ಬಿಲ್ ಪಾವತಿಸುವಾಗ ಯಾವ ಬಿಲ್ ಗಳಲ್ಲೂ ಗುತ್ತಿಗೆದಾರರು ನಿರ್ವಹಿಸಿದ ಕಾಮಗಾರಿಯ ವೆಚ್ಚದ ಮೊತ್ತ, CGST ಮತ್ತು SGST ಪ್ರತ್ಯೇಕವಾಗಿ ವಿಂಗಡಿಸಿ ನೀಡುತ್ತಿಲ್ಲ. GST Invoice ಗಳನ್ನು ಸಹ ಸಲ್ಲಿಸುತ್ತಿಲ್ಲ. ಇವುಗಳನ್ನು Integrated Finance Management ನಲ್ಲೂ ಅಪ್ ಲೋಡ್ ಮಾಡುತ್ತಿಲ್ಲ. ಇದರಿಂದ ಪಾಲಿಕೆಯು ಅನಾವಶ್ಯಕವಾಗಿ ಹೆಚ್ಚಿನ ತೆರಿಗೆ ನೀಡಬೇಕಾದ ಸಂಧರ್ಭ ಒದಗಿದೆ. ಇದರಿಂದ ಸದರಿ ಕಾಮಗಾರಿಗೆ ಉಪಯೋಗಿಸಿದ ಕಬ್ಬಿಣ, ಸಿಮೆಂಟ್, ಕಾಂಕ್ರೀಟ್, ಮರಳು, ಜಲ್ಲಿ ಮುಂತಾದ ವಿವರಗಳು ಮತ್ತು ಅವುಗಳಿಗೆ ಸಂದಾಯವಾದ ಜಿ.ಎಸ್.ಟಿ. ತೆರಿಗೆಯ ವಿವರ ಲಭ್ಯವಾಗುವುದಿಲ್ಲ ಎಂದರು.
GST Invoice ಗಳನ್ನು ಸಲ್ಲಿಸುವುದರಿಂದ ಸದರಿ ಕಾಮಗಾರಿಗೆ ಉಪಯೋಗಿಸಿದ ವಸ್ತುಗಳ ವಿವರದ ಸಹಾಯದಿಂದ ಕಾಮಗಾರಿಯ ಗುಣಮಟ್ಟವನ್ನು ಅಳೆಯಬಹುದಾಗಿರುತ್ತದೆ. ಇದು ಕಾಮಗಾರಿ ನಡೆಸದೆ ಬೋಗಸ್ ಬಿಲ್ ಗಳನ್ನು ನೀಡಿ ಹಣ ಲಪಟಾಯಿಸುತ್ತಿರುವವರಿಗೆ ಕಡಿವಾಣ ಹಾಕಿದಂತಾಗುತ್ತದೆ ಎಂದರು.
GST Invoice ಗಳನ್ನು ಸಲ್ಲಿಸದಿರುವ ಮತ್ತು ಇವುಗಳನ್ನು Integrated Finance Management ಗೆ ಅಪ್ ಲೋಡ್ ಮಾಡದ ಸಂಧರ್ಭದಲ್ಲಿ ಯಾವುದೇ ಕಾರಣಕ್ಕೂ ಅಂಥಹ ಬಿಲ್ ಗಳನ್ನು ಪಾವತಿ ಮಾಡದಂತೆ ಕಟ್ಟುನಿಟ್ಟಿನ ಸೂಚನೆ ನೀಡುವಂತೆ ಆದೇಶಿಸಬೇಕೆಂದು ಆಗ್ರಹಿಸಿದರು.
ಇದಲ್ಲದೆ ದಿನಾಂಕ 1.1.2022 ರ ನಂತರ ಸಲ್ಲಿಸಲಾಗುವ ಕಾಮಗಾರಿಗಳಿಗೆ ಸಂಬಂಧಿಸಿದ ಎಲ್ಲ ಬಿಲ್ ಗಳ ಮೇಲೆ ಶೇಕಡಾ 12ರ ಬದಲಾಗಿ ಶೇಕಡಾ 18ರಷ್ಟು ಜಿ.ಎಸ್.ಟಿ. ಪಾವತಿಸಬೇಕಾಗಿರುತ್ತದೆ. ಆದರೆ ಈ ಬಗ್ಗೆ ಯಾವುದೇ ಒಪ್ಪಂದವನ್ನು ಗುತ್ತಿಗೆದಾರರ ಜೊತ ಮಾಡಿಕೊಳ್ಳುವುದರಲ್ಲಿ ಪಾಲಿಕೆಯು ವಿಫಲವಾಗಿದೆ. ಇದರಿಂದ ಹೆಚ್ಚುವರಿ ಹೊರೆಯನ್ನು ಪಾಲಿಕೆಯೇ ಹೊರಬೇಕಾಗಿದೆ. ಇದರಿಂದ ಪಾಲಿಕೆಗೆ ಅನಾವಶ್ಯಕ ಆರ್ಥಿಕ ಹೊರೆ ಉಂಟಾಗಲಿದೆ. ಇದರಂತೆ 01.01.2022ರ ನಂತರ ಸಲ್ಲಿಸುವ ಬಿಲ್ ಗಳಿಗೆ ಸಂಬಂಧಿಸಿದಂತೆ ಹೆಚ್ಚುವರಿ ಶೇಕಡಾ ಆರರಂತೆ ಸಂದಾಯ ಮಾಡಬೇಕಾದ ತೆರಿಗೆ ಹಣವನ್ನು ಕಾಮಗಾರಿಯು ಗುತ್ತಿಗೆದಾರಿಂದ ವಿಳಂಬವಾಗಿದ್ದರೆ, ಅಂಥಹ ಸಂಧರ್ಭದಲ್ಲಿ ಗುತ್ತಿಗೆದಾರರಿಂದಲೇ ವಸೂಲು ಮಾಡಬೇಕಾಗಿರುತ್ತದೆ. ಇದರಿಂದ ಪಾಲಿಕೆಗೆ ಉಂಟಾಗುವ ಆರ್ಥಿಕ ನಷ್ಟವನ್ನು ತಡೆಯಬಹುದಾಗಿರುತ್ತದೆ. ಈ ಬಗ್ಗೆ ಸೂಕ್ತ ಮಾರ್ಗಸೂಚಿಯನ್ನು ಹೊರಡಿಸಬೇಕು ಎಂದು ಒತ್ತಾಯಿಸಿದರು.
ಕಾಮಗಾರಿಯ ವಿಳಂಬವು ಅಧಿಕಾರಿಗಳ ನಿರ್ಲಕ್ಷ್ಯದಿಂದ ಉಂಟಾಗಿದ್ದರೆ ಅವರಿಂದ ವಸೂಲು ಮಾಡುವಂತೆಯೂ ಮತ್ತು ವಿಳಂಬವು ಗುತ್ತಿಗೆದಾರರಿಂದ ಉಂಟಾಗಿದ್ದಲ್ಲಿ ಗುತ್ತಿಗೆದಾರರಿಂದಲೇ ವಸೂಲು ಮಾಡುವಂತೆ ಆದೇಶಿಸಬೇಕೆಂದು ಈ ಮೂಲಕ ಆಗ್ರಹಿಸಿದರು.
ಕರ್ನಾಟಕ ಗೂಡ್ಸ್ ಮತ್ತು ಸರ್ವೀಸಸ್ ಕಾಯಿದೆಯ ಸೆಕ್ಷನ್ 14ರ ಅನ್ವಯ ಗುತ್ತಿಗೆದಾರರು 1.1.2022ರ ಮುಂಚೆ ಸಲ್ಲಿಸಿರುವ ಬಿಲ್ ಗಳಿಗೆ ಟ್ರ್ಯಾಕ್ ಇನ್ ವಾಯ್ ಸಲ್ಲಿಸದೇ ಇರುವುದರಿಂದ ಪಾವತಿಗೆ ಬಾಕಿ ಉಳಿದಿರುವ ಎಲ್ಲ ಬಿಲ್ ಗಳ ಮೇಲೆ ಶೇಕಡಾ 18 ರಷ್ಟು ತೆರಿಗೆಯನ್ನು ಅಂದರೆ ಶೇಕಡಾ 6 ರಷ್ಟು ಹೆಚ್ಚುವರಿ ತೆರಿಗೆಯನ್ನು ಕಟ್ಟಬೇಕಾಗಿರುತ್ತದೆ. ಇದುವರೆವಿಗೂ ಸುಮಾರು ಎರಡು ಸಾವಿರ ಕೋಟಿ ರೂ.ಗಳಿಗೂ ಹೆಚ್ಚಿನ ಬಾಕಿ ಉಳಿದಿರುವ ಬಿಲ್ ಗಳಿಂದ ಸುಮಾರು 120 ಕೋಟಿ ರೂ.ಗಳ ಹೆಚ್ಚುವರಿ ತೆರಿಗೆಯನ್ನು ಸಲ್ಲಿಸಬೇಕಾಗಿರುತ್ತದೆ. ಗುತ್ತಿಗೆದಾರರು ಈ ತೆರಿಗೆಯನ್ನು ಕಟ್ಟದಿದ್ದಲ್ಲಿ ಇದರ ಜವಾಬ್ದಾರಿ ಪಾಲಿಕೆಯದಾಗಿರುತ್ತದೆ ಎಂದರು.
ಈ ಹಿನ್ನೆಲೆಯಲ್ಲಿ ಇನ್ನು ಮುಂದೆ ಗುತ್ತಿಗೆದಾರರು ಬಿಲ್ ಗಳನ್ನು ಸಲ್ಲಿಸುವಾಗ ಅದರ ಜೊತೆಯಲ್ಲಿ GST Tax Invoice ಗಳನ್ನು ಕಡ್ಡಾಯವಾಗಿ ಸಲ್ಲಿಸುವಂತೆ ಮತ್ತು ಎಲ್ಲ ಬಿಲ್ ಗಳಲ್ಲಿ ಗುತ್ತಿಗೆದಾರರು ನಿರ್ವಹಿಸಿದ ಕಾಮಗಾರಿಯ ವೆಚ್ಚದ ಮೊತ್ರ CGST ಮತ್ತು SGST ಪ್ರತ್ಯೇಕವಾಗಿ ವಿಂಗಡಿಸಿ (work done cost + CGST + SGST = Bill Amount). ಕಡ್ಡಾಯವಾಗಿ ನೀಡುವಂತೆ ಆದೇಶಿಸಬೇಕೆಂದು ಆಗ್ರಹಿಸಿದರು.
ಈ ಕಾನೂನಿನ ದುರ್ಬಳಕೆ ಮಾಡಿ ಸರ್ಕಾರಕ್ಕೆ ಸಲ್ಲಬೇಕಾದ ತೆರಿಗೆಯನ್ನು ವಂಚಿಸುತ್ತಿರುವ ಪ್ರಕರಣಗಳನ್ನು ತಡೆಯುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮವನ್ನು ತೆಗೆದುಕೊಳ್ಳುವುದರ ಮೂಲಕ ಆರ್ಥಿಕ ಅಪರಾಧಗಳಿಗೆ ಕಡಿವಾಣ ಹಾಕಬೇಕಾಗಿದೆ. ಆದುದರಿಂದ ಇನ್ನು ಮುಂದೆ ಹಣವನ್ನು ಪಾವತಿಮಾಡುವ ಮೊದಲು ಸುತ್ತೋಲೆಯಲ್ಲಿ ಸೂಚಿಸಿರುವ ಕ್ರಮಗಳನ್ನು ಕಡ್ಡಾಯವಾಗಿ ಅನುಸರಿಸಿದೆಯೇ ಎಂಬುದನ್ನು ಪರೀಕ್ಷಿಸಿ ಬಿಲ್ ಪಾವತಿಮಾಡುವಂತೆ ಕ್ರಮತೆಗೆದುಕೊಳ್ಳಬೇಕೆಂದು ಒತ್ತಾಯಿಸಿದರು.



