ಕಲಬುರ್ಗಿ: ಭ್ರಷ್ಟ ಹಣದಿಂದ ಅಧಿಕಾರಕ್ಕೆ ಬಂದಿರುವ ಅನೈತಿಕ ಸರ್ಕಾರ ರಾಜ್ಯದಲ್ಲಿದೆ. ಲೂಟಿ ಮಾಡಿರುವುದೊಂದೇ ಈ ಸರ್ಕಾರದ ಸಾಧನೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಪ್ರಜಾಧ್ವನಿ ಯಾತ್ರೆಯ ಅಂಗವಾಗಿ ಕಲಬುರಗಿ ಜಿಲ್ಲೆಯ ಚಿತ್ತಾಪುರದಲ್ಲಿ ಇಂದು ನಡೆದ ಬೈಕ್ ರ್ಯಾಲಿ ಹಾಗೂ ಬಹಿರಂಗ ಸಮಾವೇಶದಲ್ಲಿ ಭಾಗವಹಿಸಿ ಮಾತಾಡಿದ ಅವರು, ಇದನ್ನು (ರಾಜ್ಯ ಸರ್ಕಾರವನ್ನು) ಅಲಿಬಾಬಾ ಮತ್ತು 40 ಮಂದಿ ಕಳ್ಳರ ಗುಂಪು ಎಂದರೆ ಸಿದ್ದರಾಮಯ್ಯನವರು ಮುಖ್ಯಮಂತ್ರಿಗಳ ನಿಂದನೆ ಮಾಡುತ್ತಿದ್ದಾರೆ ಎಂದು ಹೇಳುತ್ತಾರೆ. ನನ್ನ ಮೇಲಿನ ಈ ಆರೋಪವನ್ನು ರಾಜ್ಯದ ಜನ ಒಪ್ಪುತ್ತಾರ? ಎಂದು ಪ್ರಶ್ನಿಸಿದರು.
ವಿಧಾನಸೌಧದ ಗೋಡೆಗೆ ಹೋಗಿ ಕಿವಿ ಕೊಟ್ಟರೆ ಲಂಚ, ಲಂಚ, ಲಂಚ ಎಂದು ಪಿಸುಗುಟ್ಟುತ್ತದೆ. ಒಂದು ಗುತ್ತಿಗೆ ಕಾಮಗಾರಿಗೆ 40% ಲಂಚ ಕೊಡಲೇಬೇಕು. ಇದನ್ನು ಹೇಳಿರುವುದು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷರಾದ ಕೆಂಪಣ್ಣನವರು. ನರೇಂದ್ರ ಮೋದಿ ಅವರಿಗೆ ನಮ್ಮನ್ನು ಕಮಿಷನ್ ಕಿರುಕುಳದಿಂದ ಕಾಪಾಡಿ ಎಂದು ಪತ್ರ ಬರೆದು ಒಂದುವರೆ ವರ್ಷ ಆಯಿತು, ನ ಖಾವೂಂಗ, ನ ಖಾನೆದೂಂಗ ಎನ್ನುವ ಮೋದಿ ಅವರು ಯಾಕೆ ಕ್ರಮ ಕೈಗೊಂಡಿಲ್ಲ? ಎಂದು ಪ್ರಶ್ನಿಸಿದರು.
ಬೆಳಗಾವಿಯ ಬಿಜೆಪಿ ಕಾರ್ಯಕರ್ತ, ಗುತ್ತಿಗೆದಾರ ಸಂತೋಷ್ ಪಾಟೀಲ್ ಅವರು 40% ಕಮಿಷನ್ ನೀಡಿಲ್ಲ ಎಂದು ಸಚಿವರಾಗಿದ್ದ ಈಶ್ವರಪ್ಪ ಅವರು ಬಿಲ್ ಹಣ ನೀಡದೆ ಕಿರುಕುಳ ನೀಡಿದ್ದಕ್ಕೆ ಆತ ಆತ್ಮಹತ್ಯೆ ಮಾಡಿಕೊಂಡ. ಸಂತೋಷ್ ಪಾಟೀಲ್ ಸಾವಿಗೆ ಈಶ್ವರಪ್ಪ ಕಾರಣ ಎಂದು ಆತನ ಕುಟುಂಬದವರು ಹೇಳಿದ್ರು, ಸಾಯುವ ಮೊದಲು ಸಂತೋಷ್ ಪಾಟೀಲ್ ಡೆತ್ ನೋಟ್ ಕೂಡ ಬರೆದಿಟ್ಟಿದ್ದರು. ಇಂಥವರನ್ನು ಜೈಲಿಗೆ ಹಾಕುವ ಬದಲು ಮೂರೇ ತಿಂಗಳಲ್ಲಿ ಕ್ಲೀನ್ ಚಿಟ್ ಕೊಡಿಸಿದ್ದಾರೆ. ಸರ್ಕಾರದ ಭ್ರಷ್ಟಾಚಾರಕ್ಕೆ ದಾಖಲೆ ಕೇಳುವ ಬೊಮ್ಮಾಯಿಗೆ ಇದಕ್ಕಿಂತ ಒಳ್ಳೆ ದಾಖಲೆ ಬೇಕ? ಎಂದರು.
ಕೊರೊನಾ ಕಾಲದಲ್ಲಿ ಖರೀದಿ ಮಾಡಿರುವ ವಸ್ತುಗಳಲ್ಲಿ ಭ್ರಷ್ಟಾಚಾರ ಮಾಡಿ ಸುಮಾರು 2,000 ಕೋಟಿ ಲಂಚ ತಿಂದಿದ್ದಾರೆ. ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದ್ದರಿಂದ ಜನರಿಗೆ ಆಸ್ಪತ್ರೆ, ಬೆಡ್, ಔಷಧಿ, ಆಕ್ಸಿಜನ್ ಕೊಡಲಾಗದೆ ಲಕ್ಷಾಂತರ ಜೀವಗಳ ಬಲಿ ಪಡೆದರು. ಇವೆಲ್ಲವುಗಳನ್ನು ಒಳಗೊಂಡ ಬಿಜೆಪಿ ಸರ್ಕಾರದ ಕರ್ಮಕಾಂಡಗಳು ಎಂಬ ಆರೋಪ ಪಟ್ಟಿಯನ್ನು ಸಿದ್ಧ ಮಾಡಿ ಜನರ ಮುಂದಿಟ್ಟಿದ್ದೇವೆ. ರಾಜ್ಯ ಅಭಿವೃದ್ಧಿ ಆಗಬೇಕಾದರೆ ಈ ಸರ್ಕಾರ ತೊಲಗಬೇಕು. ನಾವು ಅಧಿಕಾರದಲ್ಲಿದ್ದಾಗ ನಮ್ಮ ಮೇಲೆ ಯಾವ ಆರೋಪಗಳು ಇರಲಿಲ್ಲ, ಗುತ್ತಿಗೆದಾರರ ಸಂಘದವರು ಪತ್ರ ಬರೆದಿರಲಿಲ್ಲ. ರಾಜ್ಯದ ಜನ ಮತ್ತೆ ನಮಗೆ ಅಧಿಕಾರ ನೀಡಿದರೆ ಭ್ರಷ್ಟಾಚಾರ ರಹಿತವಾದ, ಪಾರದರ್ಶಕ ಆಡಳಿತವನ್ನು ನೀಡುತ್ತೇವೆ ಎಂದರು.




