ವಿಶ್ವದಲ್ಲಿಯೇ ಭಾರತ ದೇಶ ಅತ್ಯಂತ ಬಲಿಷ್ಠವಾದ ಆರ್ಥಿಕತೆಯನ್ನು ಹೊಂದಿದೆ. ಆರ್ಥಿಕವಾಗಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ರಾಷ್ಟ್ರವಾಗಿದೆ. ಆರ್ಥಿಕತೆಯಲ್ಲಿ ಐದನೇ ಸ್ಥಾನದಲ್ಲಿದೆ ಎಂಬ ಅಬ್ಬರದ ಪ್ರಚಾರದ ಮಾತುಗಳು ಬಿ.ಜೆ.ಪಿ.ಯ ಪಂಚಾಯ್ತಿ ಸದಸ್ಯನಿಂದ ಹಿಡಿದು ಪ್ರಧಾನಮಂತ್ರಿಯ ತನಕ ಪ್ರತಿದಿನ ಉದ್ಘಾರವಾಗುತ್ತಲೇ ಇದೆ. ಇದು ಸತ್ಯವೆನ್ನುವುದಾದರೆ ಕಳೆದ ಎರಡು ವರ್ಷದ ಅವಧಿಯಲ್ಲಿ ರಿಸರ್ವ್ ಬ್ಯಾಂಕಿನವರು ಸಾಲದ ಮೇಲಿನ ಬಡ್ಡಿಯ ದರವನ್ನು ಶೇಕಡಾ 3ರಷ್ಟು ಹೆಚ್ಚಳ ಮಾಡಿರುವ ಕಾರಣವಾದರೂ ಏನು?
ಇದು ಸತ್ಯವೇ ಎನಿಸುವುದಾದರೆ ಇಂದು ದೇಶದ ಸಾಲದ ಮೊತ್ತ ಈ ವರ್ಷದ 19 ಲಕ್ಷ ಕೋಟಿ ರೂಪಾಯಿಗಳನ್ನು ಹೊರತು ಪಡಿಸಿ 154 ಲಕ್ಷ ಕೋಟಿಗಳ ತನಕ ಏರಿಕೆಯಾಗಿರುವ ಕಾರಣವಾದರೂ ಏನು?
ಇದು ಸತ್ಯ ಎನಿಸುವುದಾದರೆ ಹಾಲು, ಮೊಸರಿನಿಂದ ಹಿಡಿದು ಎಲ್ಲಾ ಪದಾರ್ಥಗಳ ಮೇಲೆ ಜಿ.ಎಸ್.ಟಿ. ದರವನ್ನು ಶೇಕಡಾ 32ರ ತನಕ ವಿಧಿಸುತ್ತಿರುವ ಕಾರಣವಾದರೂ ಏನು?
ಇದು ಸತ್ಯ ಎನಿಸುವುದಾದರೆ ಪ್ರತಿದಿನ ನಾಗರಿಕರು ಬಳಸುವ ಆಹಾರ ಪದಾರ್ಥಗಳ ಬೆಲೆ ಏರುತ್ತಲೇ ಇರುವ ಕಾರಣವಾದರೂ ಏನು?
ಇದು ಸತ್ಯ ಎನಿಸುವುದಾದರೆ ಕೈಗಾರಿಕೋದ್ಯಮಿಗಳು, ಸಣ್ಣಪುಟ್ಟ ವ್ಯಾಪಾರಸ್ಥರು, ವ್ಯವಹಾರದಲ್ಲಿ ನಷ್ಟವನ್ನು ಅನುಭವಿಸಿ ಸಹಕಾರಿ ಬ್ಯಾಂಕ್‌ಗಳಿಂದ ಹಿಡಿದು ರಾಷ್ಟ್ರೀಕೃತ ಬ್ಯಾಂಕ್‌ಗಳ ತನಕ ಸಾಲವನ್ನು ಮರುಪಾವತಿ ಮಾಡದೇ ಎಲ್ಲಾ ಬ್ಯಾಂಕ್‌ಗಳಲ್ಲಿ ಎನ್‌ಪಿಎ ಹೆಚ್ಚಾಗಿರುವ ಕಾರಣವಾದರೂ ಏನು?
ಇದು ಸತ್ಯ ಎನಿಸುವುದಾದರೆ ಡಿಸೇಲ್, ಪೆಟ್ರೋಲ್ ಮತ್ತು ಅಡಿಗೆ ಅನಿಲದ ದರ ಕಳೆದ ಅವಧಿಯಲ್ಲಿ ಶೇಕಡಾ 200ರಷ್ಟು ಹೆಚ್ಚಾಗಿರುವ ಕಾರಣವಾದರೂ ಏನು?
ಇದು ಸತ್ಯ ಎನಿಸುವುದಾದರೆ ಕರ್ನಾಟಕ ರಾಜ್ಯವೂ ಸೇರಿದಂತೆ ಎಲ್ಲಾ ರಾಜ್ಯಗಳ ಸಾಲದ ಪ್ರಮಾಣಹೆ ಚ್ಚಾಗಿರುವ ಕಾರಣವಾದರೂ ಏನು?
ಇದು ಸತ್ಯ ಎನಿಸುವುದಾದರೆ ಜನಸಾಮಾನ್ಯರಿಗೆ ಯಾವುದೇ ರೀತಿಯ ಅನುಕೂಲತೆಗಳು ಆಗದೆ ಬಡವರು ಮತ್ತು ಮಧ್ಯಮ ವರ್ಗದವರು ಸಾಲದ ಸುಳಿಗೆ ಸಿಕ್ಕಿ ಮರ್ಯಾದೆಗಳಿಗೆ ಅಂಜಿ ಸಾಮೂಹಿಕ ಆತ್ಮಹತ್ಯೆಯಂತಹ ಅಪಾಯಕಾರಿ ಹಾದಿಯನ್ನು ಹಿಡಿಯುತ್ತಿರುವ ಕಾರಣವಾದರೂ ಏನು?
ಇದು ಸತ್ಯ ಎನಿಸುವುದಾದರೆ ದೇಶದಲ್ಲಿ ಅನೇಕ ಕೈಗಾರಿಕೆಗಳು ಮುಚ್ಚಲ್ಪಟ್ಟು ನಿರುದ್ಯೋಗದ ಪ್ರಮಾಣ ಹೆಚ್ಚಾಗುತ್ತಲೇ ಹತಾಶೆಗೊಂಡ ಯುವಜನತೆ ತಮ್ಮ ಬದುಕನ್ನು ಹಾಳು ಮಾಡಿಕೊಳ್ಳುತ್ತಿರುವ ಕಾರಣವಾದರೂ ಏನು?
ಕೇವಲ ಜನಸಾಮಾನ್ಯರ ಲೆಕ್ಕವಿಲ್ಲದಷ್ಟು ತೆರಿಗೆಯನ್ನು ಜಿ.ಎಸ್.ಟಿ. ರೂಪದಲ್ಲಿ ಮತ್ತು ಬ್ಯಾಂಕ್‌ಗಳಲ್ಲಿ ಗ್ರಾಹಕರಿಗೆ ಬೇರೆ ಬೇರೆ ರೂಪದಲ್ಲಿ ವಿಧಿಸಿ ಖಜಾನೆಯನ್ನು ತುಂಬಿಸಿಕೊಳ್ಳುತ್ತಿರುವ ಬೇರೆ ಏನು ಆಗಿರುವುದಿಲ್ಲ.
ಜನಸಾಮಾನ್ಯರಿಗೆ ದೇಶದ ಆರ್ಥಿಕ ಪರಿಸ್ಥಿತಿ ಚೆನ್ನಾಗಿದೆ ಎನಿಸಬೇಕಾದರೆ ನಿಮ್ಮ ಬೊಗಳೆ ಮಾತುಗಳಿಂದ ಹೊಟ್ಟೆ ತುಂಬುವುದಿಲ್ಲ. ನಿಮ್ಮ ಪ್ರಾಸಬದ್ಧವಾದ ಮಾತುಗಳಿಂದ ಬದುಕು ಕಟ್ಟಿಕೊಳ್ಳಲಾಗುವುದಿಲ್ಲ.
ಉದ್ಯೋಗ ದೊರೆಯಬೇಕು, ಆಹಾರ ಪದಾರ್ಥಗಳ ಬೆಲೆ ಇಳಿಯಬೇಕು, ಹಣಕಾಸಿನ ಸಮಸ್ಯೆಗಳು ಮಾಯವಾಗಬೇಕು, ಬ್ಯಾಂಕ್‌ಗಳಲ್ಲಿ ಸಾಲದ ಮೇಲಿನ ಬಡ್ಡಿಯ ದರ ಇಳಿಯಬೇಕು. ಇವೆಲ್ಲವೂ ಏನು ಆಗದೇ ಯಾರೋ ಒಂದಷ್ಟು ಶ್ರೀಮಂತರ ಬದುಕು ಬಂಗಾರವಾದ ಮಾತ್ರಕ್ಕೆ ದೇಶ ಉದ್ಧಾರವಾಯಿತು ಎಂದು ಹೇಳಿದ ಮಾತ್ರಕ್ಕೆ ಒಪ್ಪಿಕೊಳ್ಳಲು ದೇಶದ ಎಲ್ಲ ಜನರು ಮೂರ್ಖರಲ್ಲ.
ಲೋಕಸಭೆಯಲ್ಲಿ ಮತ್ತು ರಾಜ್ಯಸಭೆಯಲ್ಲಿ ವಿರೋಧ ಪಕ್ಷಗಳ ಟೀಕೆಗಳಿಗೆ ಉತ್ತರ ಕೊಡುವ ಸಂದರ್ಭದಲ್ಲಿ ಯಾವ ಪ್ರಶ್ನೆಗಳಿಗೂ ಉತ್ತರಿಸಿದೆ ಮತ್ತೆ ಹೇಳಿದ್ದನ್ನೇ ಹೇಳುತ್ತಾ ಜನರ ದಿಕ್ಕನ್ನು ತಪ್ಪಿಸುವ ಜಾಣತನವನ್ನು ಮೆರೆದಿರುವುದು ಸ್ಪಷ್ಟವಾಗುತ್ತದೆ.
ಆಡಳಿತ ಪಾರದರ್ಶಕವಾಗಿರುವುದೇ ಸತ್ಯವಾಗಿದ್ದರೆ ಅದಾನಿಯ ಪ್ರಕರಣವನ್ನು ಹಾಲಿ ಸುಪ್ರೀಂ ಕೋರ್ಟಿನ ನ್ಯಾಯಾಧೀಶರ ತನಿಖೆಗೆ ಒಪ್ಪಿಸಿ ಸತ್ಯವನ್ನು ಬಹಿರಂಗಗೊಳಿಸಿ, ಈ ವಿಚಾರದಲ್ಲಿ ಎತ್ತಿದ ಯಾವ ಪ್ರಶ್ನೆಗಳಿಗೂ ಬಿ.ಜೆ.ಪಿ.ಯ ಯಾವೊಬ್ಬ ನಾಯಕರಿಂದ ಉತ್ತರ ಬರುವುದಿಲ್ಲ. ಬದಲಿಗೆ ಬೆದರಿಸುವ, ಹೆದರಿಸುವ, ವ್ಯಂಗದ, ಕುಚೇಷ್ಟೆಯೇ ಪ್ರಾಸಬದ್ಧವಾದ ಮಾತುಗಳನ್ನಾಡುತ್ತಾ ತಮ್ಮ ಬುದ್ಧಿವಂತಿಕೆಯನ್ನು ಪ್ರದರ್ಶಿಸಿರುವುದು ದೊಡ್ಡ ಸಾಧನೆಯಾಗಿದೆ.
– ಕೆ.ಎಸ್. ನಾಗರಾಜ್, ಬೆಂಗಳೂರು




