ಬಿಜೆಪಿಯಿಂದ ನಾನು ಕರಸೇವಕ ನನ್ನನ್ನು ಬಂಧಿಸಿ ಅಭಿಯಾನ

2 years ago

ಬೆಂಗಳೂರು: ಹಳೆಯ ಪ್ರಕರಣಗಳನ್ನು ಉಲ್ಲೇಖಿಸಿ ಕರ ಸೇವಕರನ್ನು ಬಂಧಿಸಲಾಗುತ್ತಿದೆ ಎಂದು ಆರೋಪಿಸಿ ರಾಜ್ಯ ಸರ್ಕಾರದ ವಿರುದ್ಧ ಸಮರ ಸಾರಿರುವ ಬಿಜೆಪಿ ಇದೀಗ ನಾನು  ಕರಸೇವಕ ನನ್ನನ್ನು ಬಂಧಿಸಿ ಎಂಬ ಅಭಿಯಾನ ಆರಂಭಿಸಿದೆ.

ಇದರ ಅಂಗವಾಗಿ, ಶಾಸಕ ಸುನಿಲ್‌ಕುಮಾರ್ ಹಾಗೂ ಮಾಜಿ ಶಾಸಕ ಸಿ.ಟಿ ರವಿ ಅವರು ಇಂದು ಏಕಾಂಗಿಯಾಗಿ ಧರಣಿ ನಡೆಸಿ ಕರ ಸೇವಕರ ಬಿಡುಗಡೆಗೆ ಆಗ್ರಹಿಸಿದರು.

ಶಾಸಕ ಸುನಿಲ್‌ಕುಮಾರ್ ಬೆಂಗಳೂರಿನ ಸದಾಶಿವ ನಗರ ಪೊಲೀಸ್ ಠಾಣೆಯ ಮುಂದೆ ಏಕಾಂಗಿಯಾಗಿ ಧರಣಿ ನಡೆಸಿದರೆ, ಮಾಜಿ ಸಚಿವ ಸಿ.ಟಿ ರವಿ ಅವರು ಚಿಕ್ಕಮಗಳೂರು ಪೊಲೀಸ್ ಠಾಣೆಯ ಮುಂದೆ ನಾನು ಕರ ಸೇವಕ ನನ್ನನ್ನು ಬಂಧಿಸಿ ಎಂದು ಭಿತ್ತಿಪತ್ರವನ್ನು ಹಿಡಿದು ಧರಣಿ ನಡೆದಿದರು.

ಪೊಲೀಸ್ ಠಾಣೆಯ ಮುಂದೆ ಧರಣಿಗೆ ಅವಕಾಶವಿಲ್ಲದಿರುವುದರಿಂದ ಈ ಇಬ್ಬರು ನಾಯಕರನ್ನು ಪೊಲೀಸರು ವಶಕ್ಕೆ ಪಡೆದು ನಂತರ ಬಿಡುಗಡೆ ಮಾಡಿದರು.

ಈ ವೇಳೆ ಮಾತನಾಡಿದ ಸುನಿಲ್ ಕುಮಾರ್, ಕಾಂಗ್ರೆಸ್ ಸರ್ಕಾರದ ರಾಮ ವಿರೋಧಿ ನೀತಿಯನ್ನು ಖಂಡಿಸಿ ನಾನೊಬ್ಬ ಕರ ಸೇವಕ ನನ್ನನ್ನು ಬಂಧಿಸಿ ಎಂಬ ಅಭಿಯಾನ ಇವತ್ತಿನಿಂದ ಆರಂಭವಾಗಿದೆ. ರಾಜ್ಯದೆಲ್ಲೆಡೆ ಈ ಅಭಿಯಾನ ಮುಂದುವರೆಯಲಿದೆ ಎಂದರು.

ರಾಮಭಕ್ತರ್‍ನು ಬೆದರಿಸುವ ಕಾರ್ಯವನ್ನುಸರ್ಕಾರ ಬಿಡಬೇಕು. ಮಂದಿರ ಉದ್ಘಾಟನಾ ಕಾರ್ಯಕ್ರಮಕ್ಕೆ ಸಹಕಾರ ಕೊಡಬೇಕು ಎಂದು ಮನವಿ ಮಾಡಿದರು.

ಮತ್ತೊಂದೆಡೆ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಪ್ರತಿಪಕ್ಷ ನಾಯಕ ಆರ್.ಅಶೋಕ್, ಅಯೋಧ್ಯೆಯ ಶ್ರೀರಾಮ ಮಂದಿರ ಯಾವ ಪಕ್ಷಕ್ಕೂ ಸೇರಿಲ್ಲ. ಮಂದಿರ ಉದ್ಘಾಟನೆಗೆ ಎಲ್ಲರಿಗೂ ಆಹ್ವಾನ ಕೊಡಬೇಕು ಎಂದು ನಿರೀಕ್ಷೆ ಮಾಡಬೇಕಿಲ್ಲ. ಆದರೆ ಆಹ್ವಾನವಿಲ್ಲ ಎಂದು ಹೇಳುವ ಕಾಂಗ್ರೆಸ್‌ ನಾಯಕರು ರಾಜಕಾರಣ ಮಾಡುತ್ತಿದ್ದಾರೆ ಎಂದು ಆಪಾದಿಸಿದರು.

ಒಂದು ಕಾಲದಲ್ಲಿ ಶ್ರೀರಾಮ ಕಾಲ್ಪನಿಕ ವ್ಯಕ್ತಿ ಎಂದಿದ್ದರು, ರಾಮನ ಜನ್ಮ ಪ್ರಮಾಣಪತ್ರ ಕೇಳಿದ್ದರು, ರಾಮ ಕಾಲ್ಪನಿಕ ವ್ಯಕ್ತಿ ಎಂದು ಕೋರ್ಟ್‌ಗೆ ಅಫಿಡವಿಟ್‌ ಸಲ್ಲಿಸಿದ್ದರು ಇದೀಗ ಮಂದಿರ ಉದ್ಘಾಟನೆಗೆ ಆಹ್ವಾನಿಸಿಲ್ಲ ಎಂದು ಟೀಕಿಸುತ್ತಾರೆ ಎಂದು ವ್ಯಂಗ್ಯವಾಡಿದರು.

ಅಯೋಧ್ಯಾ ಶ್ರೀರಾಮಮಂದಿರ ಉದ್ಘಾಟನೆಗೆ ಅಡ್ಡಿಪಡಿಸಲು ಕರ ಸೇವಕರನ್ನು ಹಳೆಯ ಪ್ರಕರಣದಲ್ಲಿ ಬಂಧಿಸುವ ಕೆಲಸ ಮಾಡುತ್ತಿದ್ದಾರೆ. ಗೋಧ್ರಾ ಹತ್ಯಾಕಾಂಡದ ಕುರಿತು ಬಿ.ಕೆ.ಹರಿಪ್ರಸಾದ್‌ ಹೇಳಿಕೆ ನೀಡಿ ಬೆದರಿಕೆ ಹಾಕಿದ್ದಾರೆ. ಹಿಂದೂ ರಾಷ್ಟ್ರವಾದರೆ ಇದು ಪಾಕಿಸ್ತಾನ ಆಗಲಿದೆ ಎಂದು ಮಾಜಿ ಶಾಸಕ ಯತೀಂದ್ರ ಹೇಳಿದ್ದಾರೆ ಎಂದು ಆಪಾದಿಸಿದರು.

Leave a Reply