ಹರೀಶ್ ಪೂಂಜಾಗೆ ಪೊಲೀಸ್ ಠಾಣೆಯಲ್ಲಿ ಜಾಮೀನು ದೊರಕಿದ್ದು ಹೇಗೆ ?

2 years ago

ಹರೀಶ್ ಪೂಂಜಾ ವಿರುದ್ದ ಜಾಮೀನು ರಹಿತ IPC 353 ಸೆಕ್ಷನ್ ಹಾಕಲಾಗಿತ್ತು‌. ಪೊಲೀಸ್ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದಕ್ಕಾಗಿ ದಾಖಲಾಗುವ ಪ್ರಕರಣ ಇದು. ಪೊಲೀಸ್ ಠಾಣೆಯಲ್ಲಿ ಬಿಡಿ, ಸಾಮಾನ್ಯವಾಗಿ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದಾಗ ಸರಕಾರದ ಪರ ವಕೀಲರ ತಕರಾರು ಸಲ್ಲಿಕೆಯಾಗದೆ ನ್ಯಾಯಾಧಿಶರು ಜಾಮೀನು ಅರ್ಜಿಯನ್ನು ಇತ್ಯರ್ಥ ಮಾಡುವುದಿಲ್ಲ.

ಕನಿಷ್ಟ ಒಂದೆರಡು ದಿನಗಳ ಕಾಲವಾದರು ನ್ಯಾಯಾಂಗ ಬಂಧನಕ್ಕೆ ಒಳಪಡಬೇಕು. ಅದಲ್ಲದೆ, ಹರೀಶ್ ಪೂಂಜಾ ಮೇಲೆ ಪುನರಾವರ್ತಿತ ಅಪರಾಧಕ್ಕಾಗಿ ಮತ್ತೊಂದು ಸೆಕ್ಷನ್ ಕೂಡಾ ಹಾಕಲಾಗಿತ್ತು. ಹಾಗಿದ್ದರೂ ಪೊಲೀಸ್ ಠಾಣೆಯಲ್ಲಿ ಜಾಮೀನು ದೊರಕಿದ್ದು ಹೇಗೆ ?

ಸುಮಾರು ಒಂಬತ್ತು ವರ್ಷಗಳ ಹಿಂದೆ mrpl ವಿರುದ್ದದ ಹೋರಾಟದ ಸಂದರ್ಭ (ಆಗಲೂ ಕಾಂಗ್ರೆಸ್ ಸರಕಾರ ಆಡಳಿತದಲ್ಲಿತ್ತು), ಪೊಲೀಸರು ಕಂಪೆನಿಯ ಕಾಮಗಾರಿಯನ್ನು ತಿಂಗಳುಗಳ ಕಾಲ ತಡೆಹಿಡಿದಿದ್ದ ಗ್ರಾಮಸ್ಥರನ್ನು ಬಂಧಿಸಿ ವಾಹನದಲ್ಲಿ ತುಂಬಿಸಿ ಸುರತ್ಕಲ್ ಠಾಣೆಯ ಕಡೆಗೆ ಕರೆದೊಯ್ತುತ್ತಿದ್ದರು. ವಿಷಯ ತಿಳಿದು ಬೈಕ್ ನಲ್ಲಿ ಜೋಕಟ್ಟೆ ಕಡೆಗೆ ನಾನು ಧಾವಿಸುತ್ತಿದ್ದಾಗ ಮಧ್ಯದಲ್ಲಿ ಗ್ರಾಮಸ್ಥರನ್ನು ಕೂಡಿ ಹಾಕಿದ್ದ ಪೊಲೀಸ್ ಬಸ್ ಹಾಗೂ ಜೀಪ್ ಗಳು ಎದುರಾದವು. ನಾನು ತಕ್ಷಣವೇ ಬೈಕ್ ನಿಲ್ಲಿಸಿ ಪೊಲೀಸ್ ವಾಹನಗಳಿಗೆ ಅಡ್ಡಲಾಗಿ ಮಲಗಿದೆ. ಅದು ದೊಡ್ಡ ಸುದ್ದಿಯಾಯಿತು. ಸುತ್ತಮುತ್ತಲ ಗ್ರಾಮದ ಜನರು ಸ್ಥಳಕ್ಕೆ ಧಾವಿಸಿ ಬಂದರು.  ಆ ನಂತರ ಮತ್ತಷ್ಟು ಬಲದೊಂದಿಗೆ ಬಂದ ಪೊಲೀಸರು ನನ್ನನ್ನೂ ಬಂಧಿಸಿ ಗ್ರಾಮಸ್ಥರ ಜೊತೆಗೆ ಸುರತ್ಕಲ್ ಠಾಣೆಯಲ್ಲಿ ಕೂಡಿ ಹಾಕಿದ್ದರು. ವಿಷಯ ತಿಳಿದ ನಾಗರಿಕರು ದೊಡ್ಡ ಸಂಖ್ಯೆಯಲ್ಲಿ ಸುರತ್ಕಲ್ ಠಾಣೆಯ ಮುಂಭಾಗ ಸೇರಿ ಧರಣಿ ನಡೆಸಿದರು. (ನೆನಪಿರಲಿ, ನಾವ್ಯಾರೂ ಪೊಲೀಸರನ್ನು ಅವಾಚ್ಯವಾಗಿ ನಿಂದಿಸಿರಲಿಲ್ಲ, ಬೆದರಿಕೆಯ ಧ್ವನಿಯಲ್ಲಿ ಮಾತಾಡಿರಲಿಲ್ಲ, ಅದೊಂದು ಶುದ್ದವಾದ ಜನತೆಯ ಪರವಾಗಿ ನಡೆದ ನ್ಯಾಯಯುತ ಹೋರಾಟವಾಗಿತ್ತು)

ಜನತೆಯ ಪ್ರತಿಭಟನೆ ತೀವ್ರವಾದಾಗ ಬಂಧಿತರಾಗಿದ್ದ ಮಹಿಳೆಯರು ಸಹಿತ 50 ರಷ್ಟು ಗ್ರಾಮಸ್ಥರನ್ನು ಜಾಮೀನು ದೊರಕುವ ಸೆಕ್ಷನ್ ಗಳಡಿ fir ಹಾಕಿ ಸಾಯಂಕಾಲದ ಹೊತ್ತಿಗೆ ಠಾಣಾ ಜಾಮೀನಿನಲ್ಲಿ ಬಿಡುಗಡೆಗೊಳಿಸಿದರು. ನನ್ನನ್ನು ಮಾತ್ರ ಪೊಲೀಸರ ಬಸ್ ಗೆ ಅಡ್ಡ ಮಲಗಿದ ಘಟನೆ ಪೊಲೀಸರ ಕಾರ್ಯಾಚರಣೆಗೆ ಅಡ್ಡಿ ಎಂದು ಪರಿಗಣಿಸಿ IPC 353 ಅಡಿ ಪ್ರತ್ಯೇಕ FIR ಹಾಕಿ ಪಣಂಬೂರು ಠಾಣೆಗೆ ಸಾಗಿಸಲು ತೀರ್ಮಾನಿಸಿದರು. ಸೇರಿದ ಜನ ಉದ್ರಿಕ್ತರಾಗಿ ನನ್ನನ್ನು ಬಿಡಲೇ ಬೇಕು ಎಂದು ಆಗ್ರಹಿಸಿದರು, ಪಣಂಬೂರು ಠಾಣೆಗೆ ಸಾಗಿಸಲು ಬಿಡುವುದಿಲ್ಲ ಎಂದು ಹಠ ಹಿಡಿದು ಕೂತರು.

ನಾನು ಆ ಸಂದರ್ಭದಲ್ಲಿ ಜನತೆಯನ್ನು ಸಮಾಧಾನಿಸಿ ಪೊಲೀಸ್ ಜೀಪ್ ಹತ್ತಿದೆ. ಪಣಂಬೂರು ಠಾಣೆಯಲ್ಲಿ ಬಂಧನ ಪ್ರಕ್ರಿಯೆ ಪೂರೈಸಿ, ಜಾಮೀನು ರಹಿತ ಸೆಕ್ಷನ್ 353 ಆಗಿರುವುದರಿಂದ ರಾತ್ರೆ ಹತ್ತು ಗಂಟೆ ಸುಮಾರಿಗೆ ನ್ಯಾಯಾಧೀಶರ ಮನೆಗೆ ನನ್ನನ್ನು ಹಾಜರು ಪಡಿಸಿದರು. ಹಾಜರು ಪಡಿಸುವಾಗ ನನ್ನ ಪರವಾಗಿ ಜಾಮೀನಿಗೆ ವಾದ ಮಂಡಿಸಲು ಸ್ಥಳಕ್ಕೆ  ಬಂದ ವಕೀಲರಾದ ದಿನೇಶ್ ಹೆಗ್ಡೆ ಉಳೆಪಾಡಿ “ಈ ಸೆಕ್ಷನ್ ನಲ್ಲಿ ನ್ಯಾಯಾಧೀಶರು ಮನೆಯಲ್ಲಿ ಜಾಮೀನು ನೀಡುವುದು ಸಾಮಾನ್ಯವಾಗಿ ಇಲ್ಲ, ಕನಿಷ್ಟ ಎರಡರಿಂದ ಮೂರು ದಿನ ಜೈಲು ವಾಸಕ್ಕೆ ಸಿದ್ದತೆ ಮಾಡಿಕೊಳ್ಳಿ” ಎಂದು ಹೇಳಿದ್ದರು.

   ಕೊನೆಗೆ ನ್ಯಾಯವಾದಿ ಹೆಗ್ಡೆಯವರು ನನ್ನ ಪರವಾಗಿ ಮಂಡಿಸಿದ ವಾದ, ಹೋರಾಟದ ಹಿನ್ನಲೆ, mrpl ನಿಂದ ಜನತೆಗಾಗಿರುವ ಸಮಸ್ಯೆಗಳು, ಸರಿರಾತ್ರಿ ನ್ಯಾಯಾಧೀಶರ ಮನೆಯ ಮುಂದೆಯೂ ಸೇರಿದ್ದ ಗ್ರಾಮಸ್ಥರ ಆತಂಕಗಳನ್ನೆಲ್ಲ ಗಮನಿಸಿದ ನ್ಯಾಯಾಧೀಶರು ಆ ರಾತ್ರಿಯ ಮಟ್ಟಿಗೆ ಮಧ್ಯಂತರ ಜಾಮೀನು ಮಂಜೂರು ಮಾಡಿ ಮರು ದಿನ ಬೆಳಿಗ್ಗೆ ನ್ಯಾಯಾಲಯಕ್ಕೆ ಹಾಜರಾಗುವಂತೆ ಸೂಚಿಸಿ ಕಲಾಪ ಮುಂದೂಡಿದರು. (ನೆನಪಿಡಿ, ಆಗಲೂ ಇದ್ದದ್ದು ಇದೇ ಕಾಂಗ್ರೆಸ್ ಸರಕಾರ).

ನಮ್ಮಂತಹ ಜನಪರ ಹೋರಾಟಗಾರರಿಗೆ, ಜನರ ಪರವಾದ ಹೋರಾಟದ ಸಂದರ್ಭದಲ್ಲಿ,  ಜನಜಂಗುಳಿ ನಮ್ಮ ಪರವಾಗಿ ಸೇರಿದ್ದರೂ ಘನತೆಯಿಂದ ನಡೆದುಕೊಂಡ ಹೊರತಾಗಿಯೂ ದೊರಕದ ಸ್ಟೇಷನ್ ಜಾಮೀನು, ವಿನಾಯತಿ, ಗೌರವಗಳು ಅದೇ ಜಾಮೀನು ರಹಿತ ಪ್ರಕರಣದಲ್ಲಿ ನಿಜವಾಗಿಯೂ ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ, ಬೆದರಿಕೆ ಹಾಕಿದ, ಗೂಂಡಾಗಿರಿ ಮೆರೆದ ಬೆಳ್ತಂಗಡಿಯ ಬಿಜೆಪಿ ಶಾಸಕ ಹರೀಶ್ ಪೂಂಜಾ ಗೆ ದೊರಕಿದ್ದು ಹೇಗೆ ? ದಕ್ಷಿಣ ಕನ್ನಡ ಜಿಲ್ಲೆಯ ಎಸ್ ಪಿ ರಿಶ್ಯಂತ್, ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಗೃಹ ಸಚಿವ ಪರಮೇಶ್ವರ್, ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾಂಗ್ರೆಸ್ ಪಕ್ಷ ಉತ್ತರಿಸಬೇಕು. ನಮಗೆ ಉತ್ತರ ಸಿಗಲೇ ಬೇಕು. ಕಾಳಜಿಯುಳ್ಳ ಎಲ್ಲರೂ ಈ ಪ್ರಶ್ನೆ ಕೇಳಲೇ ಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನಗಳು ಮತ್ತಷ್ಟು ಕಠಿಣವಾಗಲಿದೆ. ತೋಳ್ಬಲ, ಅಧಿಕಾರ ಬಲ ಉಳ್ಳವರಿಗಷ್ಟೆ “ನ್ಯಾಯ” ಎಂಬಂತಾಗುತ್ತದೆ.

ನೆನಪಿಡಿ, ಹರೀಶ್ ಪೂಂಜಾ ಧ್ವನಿ ಎತ್ತಿದ್ದು, ಕೈ ಎತ್ತಿದ್ದು ಜನತೆಯ ಪರವಾಗಿಯೂ ಅಲ್ಲ, ನ್ಯಾಯದ ಪರವಾಗಿಯೂ ಅಲ್ಲ.

– ಮುನೀರ್ ಕಾಟಿಪಳ್ಳ, ಸಾಮಾಜಿಕ ಹೋರಾಟಗಾರರು

Leave a Reply