ಪಕ್ಷಕ್ಕೆ ನಿಷ್ಟರಾಗಿಲ್ಲದವರಿಂದ ಮತದಾರರ ನಿಷ್ಟೆಯನ್ನು ಬಯಸುವುದಾದರೂ ಹೇಗೆ?

3 years ago

ಹಲವಾರು ದಶಕಗಳ ಕಾಲ ಹಲವಾರು ಬಾರಿ ಶಾಸಕರಾಗಿ, ಮಂತ್ರಿಗಳಾಗಿ ಅಧಿಕಾರವನ್ನು ಅನುಭವಿಸಿದ ನಾಯಕರುಗಳು ಉಸಿರುವತನಕ ತಾವೇ ಅಧಿಕಾರದಲ್ಲಿರಬೇಕೆಂದು ಬಯಸುತ್ತಾರೆ. ಇಲ್ಲವೇ ತಮ್ಮ ನಂತರ ತಮ್ಮ ಕುಟುಂಬದ ಕುಡಿಗಳು ತಮ್ಮ ಕ್ಷೇತ್ರಗಳಲ್ಲಿ ಚಕ್ರವರ್ತಿಗಳಾಗಿ ಮೆರೆಯಬೇಕೆಂದು ಭಾವಿಸುತ್ತಾರೆ. ಒಂದೊಮ್ಮೆ ಇವರಿಗೆ ಸ್ಪರ್ಧೆಗೆ ಅವಕಾಶ ಸಿಗದಿದ್ದರೆ ಅಥವಾ ಇವರ ಕುಟುಂಬದ ಸದಸ್ಯರಿಗೆ ಅವಕಾಶ ಮಾಡಿಕೊಡದಿದ್ದರೆ ಹಲವಾರು ದಶಕಗಳು ಇದ್ದಂತಹ ಪಕ್ಷವನ್ನು ಪಕ್ಷವನ್ನು ರಾತ್ರೋರಾತ್ರಿ ತ್ಯಜಿಸಿ ಅಲ್ಲಿಯ ನಾಯಕರುಗಳನ್ನು ನಿಂದಿಸುತ್ತಾ ಮತ್ತೊಂದು ಪಕ್ಷದ ಬಾಗಿಲು ಬಡಿಯುತ್ತಾ ತಮ್ಮ ನಾಲಿಗೆಯನ್ನು ಹೇಗೆಂದರೆ ಹಾಗೆ ಬಳಸಿಕೊಂಡು ಮಾತನಾಡುವ ಮಂದಿಯನ್ನು ನೋಡುತ್ತಿದ್ದರೆ ಇವರುಗಳಿಗೆ ಯಾರಿಗೂ ಸಹ ಯಾವ ಪಕ್ಷದ ಮೇಲು ನಿಷ್ಟೆಯಿಲ್ಲ. ಯಾವ ಸಿದ್ಧಾಂತಕ್ಕೂ ಬದ್ದರಲ್ಲ, ಯಾವ ತತ್ವವು ಇವರಿಗೆ ಬೇಕಿಲ್ಲ. ಇವರಿಗೆ ಬೇಕಿರುವುದು ಕೇವಲ ಅಧಿಕಾರ. ಅದಕ್ಕಾಗಿ ಪಕ್ಷ ನಿಷ್ಠೆಯನ್ನು ವ್ಯಕ್ತಿ ನಿಷ್ಠೆಯನ್ನು ಬದಲಾಯಿಸುವಂತಹ ಇಂತಹ ನಾಯಕರುಗಳಿಂದ ಇನ್ನು ಮತದಾರರು ಯಾವ ನಿಷ್ಟೆಯನ್ನು ಬಯಸಲು ಸಾಧ್ಯವಿದೆ.

ಆಶ್ರಯ ಕೊಟ್ಟವರಿಗೆ ಅವಕಾಶ ಮಾಡಿಕೊಟ್ಟವರಿಗೆ ಬೆಳವಣಿಗೆಗೆ ದಾರಿ ಮಾಡಿಕೊಟ್ಟವರಿಗೆ ರಾತ್ರೋರಾತ್ರಿ ಬೈದಾಡಿಕೊಂಡು ಬರುವವರು ನಿಜಕ್ಕೂ ಕ್ಷೇತ್ರಕ್ಕೂ ಅಥವಾ ಮತದಾರರಿಗೂ ನಿಷ್ಟರಾಗಿರುವುದಿಲ್ಲ ಎನ್ನುವುದಕ್ಕೆ ಇವರುಗಳು ನಡೆದುಕೊಳ್ಳುವ ರೀತಿ ಇವರ ಮಾತುಗಳೇ ಸಾಕ್ಷಿಯಾಗಿದೆ.

ಚುನಾವಣೆಯ ಸಂದರ್ಭದಲ್ಲಿ ಅಂಗಿ ಬದಲಾಯಿಸಿದಂತೆ ಪಕ್ಷವನ್ನು ಬದಯಾಲಿಸುತ್ತಾ, ಸ್ವಾರ್ಥಕ್ಕಾಗಿ ಧ್ವಜಗಳನ್ನು ಹಿಡಿಯುತ್ತಾ ಸಾಗಿರುವ ನಾಯಕರುಗಳನ್ನು ಗಮನಿಸುತ್ತಿದ್ದರೆ ನಿಜಕ್ಕೂ ಪ್ರಜಾಪ್ರಭುತ್ವದಲ್ಲಿ ಮೌಲ್ಯಗಳು ಮೂಲೆ ಸೇರಿದೆ. ತತ್ವಗಳು ಕಾಲಕಸವಾಗಿದೆ. ಸಿದ್ಧಾಂತಗಳು ಅವಕಾಶವಾಗದ ಮಾತುಗಳಾಗಿರುವುದು ಬಹಿರಂಗವಾಗುತ್ತಿದೆ.

ಒಟ್ಟಾರೆ ಚುನಾವಣೆಗಳು ಬಂದಾಗ ಅಧಿಕಾರ ಸಿಗದಿದ್ದಾಗ ಮಾತ್ರವೇ ಇವರ ನಿಜವಾದ ಬಣ್ಣಗಳು ಬಯಲಾಗುವುದು. ಇದರ ನಡುವೆಯೂ ಸಹ ಪಕ್ಷಕ್ಕೆ ನಿಷ್ಟರಾಗಿ ತತ್ವಕ್ಕೆ ಬದ್ದರಾಗಿ ಸಿದ್ದಾಂತಗಳಿಗೆ ಅನುಗುಣವಾಗಿ ಸಾರ್ವಜನಿಕ ಬದುಕನ್ನು ನಡೆಸುತ್ತಿರುವ ಕೆಲವೇ ಕೆಲವು ಮಂದಿಯನ್ನು ನೋಡಿ ಸಮಾಧಾನ ಹೊಂದಬೇಕಾಗಿದೆ.

– ಕೆ.ಎಸ್.ನಾಗರಾಜ್‌, ಬೆಂಗಳೂರು

Leave a Reply