ರಾಜ್ಯದಲ್ಲೂ ಮುನ್ನೆಚ್ಚರಿಕೆ ಕ್ರಮ
ಬೆಂಗಳೂರು: ದೆಹಲಿಯ ಕೆಂಪು ಕೋಟೆಯ ಸಮೀಪದಲ್ಲಿ ನಡೆದ ಸ್ಫೋಟ ಪ್ರಕರಣದ ನಂತರ ದೇಶದೆಲ್ಲೆಡೆ ಹೈ ಅಲರ್ಟ್ ಘೋಷಿಸಲಾಗಿದ್ದು, ರಾಜ್ಯದಲ್ಲೂ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ.
- ಗದಗವನ್ನು ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರಿಸದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ: ಎಚ್ ಕೆ ಪಾಟೀಲ್
- ತುಳು ರಾಜ್ಯದ ಎರಡನೇ ಹೆಚ್ಚುವರಿ ಅಧಿಕೃತ ಭಾಷೆಯಾಗಿ ಮಾನ್ಯತೆ: ಸಿದ್ದರಾಮಯ್ಯ
- ಪೆರಿಯಾರ್ ಆಗ್ನೇಯ ಏಷ್ಯಾದ ಸಾಕ್ರೆಟಿಸ್: ಎ.ಜಿ.ಕಾಂಬಳೆ
- ಕೇಂದ್ರ ಸಚಿವ ಸಂಪುಟ ಸಭೆ ಬೇರೆ ರಾಜ್ಯಗಳಲ್ಲಿ ನಡೆಯಲಿ
- ಪಿ.ಪಿ.ಪಿ ಮಾದರಿ ಕೈ ಬಿಡಲು ಒತ್ತಾಯಿಸಿ ಸಚಿವ ಸಂಪುಟ ಸಭೆಗೆ ಮೆರವಣಿಗೆ: ಸಿಪಿಐಎಂ
ಅಲ್ಲದೆ ಸ್ಫೋಟ ಪ್ರಕರಣದ ಬೆನ್ನು ಹತ್ತಿರುವ ಪೊಲೀಸರು ಶಂಕಿತ ಉಗ್ರರು ಮತ್ತು ನಿಷೇಧಿತ ಸಂಘಟನೆಗಳ ಜೊತೆಗೆ ನಂಟು ಹೊಂದಿದ್ದ ಆರೋಪದ ಮೇಲೆ ಈ ಹಿಂದೆ ವಿಚಾರಣೆಗೆ ಒಳಪಡಿಸಿದ್ದ ಹಾಗೂ ಬಂಧಿಸಲಾಗಿದ್ದ ಹಲವರನ್ನು ಮತ್ತೆ ವಿಚಾರಣೆಗೆ ಒಳಪಡಿಸಲಾಗುತ್ತಿದೆ.
ಕೇಂದ್ರ ತನಿಖಾ ತಂಡದ ಸೂಚನೆ ಮೇರೆಗೆ ರಾಜ್ಯ ಪೊಲೀಸರು ಬೆಂಗಳೂರು ತುಮಕೂರು, ಮಂಗಳೂರು ದಾವಣಗೆರೆ ಧಾರವಾಡ ಸೇರಿದಂತೆ ಹಲವಾರು ಕಡೆಗಳಲ್ಲಿ ಬಂಧಿತ ಉಗ್ರರು ಮತ್ತು ಅವರ ಜೊತೆಗೆ ಸಖ್ಯ ಹೊಂದಿದ್ದ ಕೆಲವರನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಈ ಹಿಂದೆ ಬೆಂಗಳೂರಿನಲ್ಲಿ ಬಂಧಿಸಲಾಗಿದ್ದ ಇಬ್ಬರು ಶಂಕಿತ ಉಗ್ರರನ್ನು ಇಲ್ಲಿನ ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಐದು ವರ್ಷಗಳ ಹಿಂದೆ ಬೆಂಗಳೂರಿನ ಸಂಜಯನಗರದಲ್ಲಿ ಬಂಧಿಸಲಾಗಿದ್ದ ವೈದ್ಯನಿಗೂ ದೆಹಲಿ ಕಾರ್ ಸ್ಫೋಟ ಪ್ರಕರಣಕ್ಕೂ ಸಂಬಂಧವಿದೆಯೇ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ.
ನಗರದ ವೈದ್ಯನನ್ನು ದೇಶದ್ರೋಹಿ ಚಟುವಟಿಕೆಯಲ್ಲಿ ಭಾಗಿಯಾಗಿದ್ದಾರೆಂಬ ಆರೋಪದ ಮೇಲೆ ಈ ಹಿಂದೆ ಬಂಧಿಸಲಾಗಿತ್ತು. ಇದೀಗ ವೈಟ್ ಕಾಲರ್ ಉಗ್ರ ಚಟುವಟಿಕೆಗಳಲ್ಲಿ ಭಾಗಿಯಾಗಿರುವವರು ಬಹುತೇಕ ವೈದ್ಯರೇ ಆಗಿರುವುದರಿಂದ ಈ ಹಿಂದೆ ಬಂಧಿಸಲಾಗಿದ್ದ ವೈದ್ಯ ಇದೇ ಗುಂಪಿಗೆ ಸೇರಿದವನಿರಬೇಕು ಎಂಬ ಅನುಮಾನ ಪೊಲೀಸರನ್ನು ಕಾಡತೊಡಗಿದೆ.
ಹೀಗಾಗಿ ಈ ಹಿಂದೆ ಬಂಧಿಸಲಾಗಿದ್ದ ವೈದ್ಯ ಎಲ್ಲಿದ್ದಾನೆ? ಏನು ಮಾಡುತ್ತಿದ್ದಾನೆ? ಎಂಬ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಅವನು ಪತ್ತೆಯಾದರೆ ಆತನನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಆತನ ಇರುವಿಕೆ ಪತ್ತೆ ಹಚ್ಚುವ ಕಾರ್ಯವನ್ನು ಪೊಲೀಸರು ಚುರುಕುಗೊಳಿಸಿದ್ದಾರೆ. ಅದೇ ರೀತಿ ಕರ್ನಾಟಕದ ತುಮಕೂರು ಜಿಲ್ಲೆಯಲ್ಲಿ ನೆಲೆಸಿರುವ ಮಾಜಿ ಉಗ್ರ ಮುಜಾಹಿದ್ದೀನ್ ಎಂಬಾತನನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ.
ಕಳೆದ 2016ರಲ್ಲಿ ಎನ್‌ಐಎ ಅಧಿಕಾರಿಗಳಿಂದ ಬಂಧಿಸಲಾಗಿದ್ದ ಮುಜಾಹಿದ್ದೀನ್ ಎಂಬಾತನನ್ನು ಎಎಸ್‌ಪಿ ಪುರುಷೋತ್ತಮ ನೇತೃತ್ವದ ತಂಡ ತೀವ್ರ ವಿಚಾರಣೆ ನಡೆಸಿದೆ. ಇದರ ನಡುವೆ ರಾಜ್ಯದಲ್ಲಿರುವ ಶಂಕಿತ ವ್ಯಕ್ತಿಗಳ ಮಾಹಿತಿ ಸಂಗ್ರಹಿಸಿ ಅವರನ್ನು ವಿಚಾರಣೆಗೊಳಪಡಿಸಲು ರಾಜ್ಯದ ಪೊಲೀಸರು ತೀರ್ಮಾನಿಸಿದ್ದಾರೆ ಎಂದು ತಿಳಿದುಬಂದಿದೆ.
ದೆಹಲಿಯ ಕೆಂಪು ಕೋಟೆ ಬಳಿ ಸಂಭವಿಸಿದ ಕಾರು ಸ್ಫೋಟಕ್ಕೂ ಕರ್ನಾಟಕಕ್ಕೂ ಸಂಬಂಧವಿದೆಯೇ ಎಂಬ ಬಗ್ಗೆ ಈಗಾಗಲೇ ರಾಷ್ಟ್ರೀಯ ತನಿಖಾ ಸಂಸ್ಥೆ ತನಿಖೆ ನಡೆಸುತ್ತಿದೆ. ದೆಹಲಿಯಲ್ಲಿ ಸಂಭವಿಸಿದ ಕಾರು ಸ್ಫೋಟಕ್ಕೆ ಸಂಬಂಧಿಸಿದಂತೆ ಎನ್‌ಐಎ ಈಗಾಗಲೇ ತನಿಖೆ ಚುರುಕುಗೊಳಿಸಿದ್ದು, ವಿವಿಧ ಆಯಾಮಗಳಲ್ಲಿ ಮಾಹಿತಿಗಳನ್ನು ಕಲೆಹಾಕುತ್ತಿದೆ.
ದೆಹಲಿ ಸ್ಫೋಟದ ರೂವಾರಿ ಎಂದು ಹೇಳಲಾಗಿರುವ ಉಮರ್ ಸಂಬಂಧಿಕರನ್ನು ಹಾಗೂ ಎನ್‌ಐಎ ವಶದಲ್ಲಿರುವ ಮೂವರನ್ನು ವಿಚಾರಣೆಗೆ ಒಳಪಡಿಸಿದಾಗ ಎನ್‌ಐಎ ಅಧಿಕಾರಿಗಳಿಗೆ ಕೆಲವು ಮಾಹಿತಿಗಳು ತಿಳಿದುಬಂದಿವೆ. ಈ ಮಾಹಿತಿ ಬೆನ್ನತ್ತಿರುವ ಎನ್‌ಐಎ ಅಧಿಕಾರಿಗಳ ತಂಡ ರಾಜ್ಯಕ್ಕೂ ಭೇಟಿ ನೀಡಿ ಅಗತ್ಯ ದಾಖಲೆ ಸಂಗ್ರಹಿಸಲು ಹಾಗೂ ಕೆಲವರನ್ನು ವಿಚಾರಣೆಗೊಳಪಡಿಸಲು ನಿರ್ಧರಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.




