ದೆಹಲಿಗೆ ಬರುವಂತೆ ಡಿ.ವಿ.ಸದಾನಂದಗೌಡಗೆ ಹೈಕಮಾಂಡ್ ಕರೆ

2 years ago

#HighCommand #called #DVSadanandGowda #Delhi #Bjp #alliance #jds

ಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಾಡಿಕೊಂಡಿರುವ  ಬಿಜೆಪಿ-ಜೆಡಿಎಸ್ ಮೈತ್ರಿ ವಿರೋಧಿಸಿರುವ  ಸಂಸದ ಡಿ.ವಿ.ಸದಾನಂದಗೌಡ ಅದರ ವಿರುದ್ಧ ಹೇಳಿಕೆ ನೀಡಿದ್ದು, ಪಕ್ಷ ತೊರೆಯಲಿದ್ದಾರೆ ಎಂಬ ವರದಿಗಳ ಬೆನ್ನಲ್ಲೇ ಬಿಜೆಪಿ ಹೈಕಮಾಂಡ್ ಅವರಿಗೆ ಬುಲಾವ್ ನೀಡಿದೆ.

ಇದೇ ತಿಂಗಳ 25ರಂದು ದೆಹಲಿಗೆ ಬಂದು ಭೇಟಿ ಮಾಡುವಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸೂಚಿಸಿದ್ದಾರೆಂದು ತಿಳಿದು ಬಂದಿದೆ. ಹೀಗಾಗಿ ದೆಹಲಿಗೆ ತೆರಳುವ ಮಾಜಿ ಮುಖ್ಯಮಂತ್ರಿ ಸದಾನಂದಗೌಡ ಅವರು ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ.

2024ರ ಲೋಕಸಭಾ ಚುನಾವಣೆ ಹಿನ್ನೆಲೆ ಜೆಡಿಎಸ್ ಪಕ್ಷದ ಜೊತೆಗೆ ಮೈತ್ರಿ ಮಾಡಿಕೊಳ್ಳುವ ಬಗ್ಗೆ ನಮ್ಮ ಕರ್ನಾಟಕದ ಯಾವುದೇ ಬಿಜೆಪಿ ನಾಯಕರ ಜೊತೆಗೂ ವರಿಷ್ಠರು ಚರ್ಚೆ ಮಾಡಿಲ್ಲ. ನಮ್ಮನ್ನು ಹೊರಗಿಟ್ಟೇ ಅವರೇ ಜೆಡಿಎಸ್ ಜೊತೆಗಿನ ಮೈತ್ರಿ ಬಗ್ಗೆ ತೀರ್ಮಾನ ಮಾಡಿದ್ದಾರೆ ಎಂದು ಅಸಮಾಧಾನಗೊಂಡಿದ್ದರು.

ಈಗಾಗಲೇ ಜೆಡಿಎಸ್ ಜೊತೆಗಿನ ಮೈತ್ರಿಯಿಂದಾಗಿ ಹಲವು ನಾಯಕರು ಕಾಂಗ್ರೆಸ್ ಸೇರ್ಪಡೆಯಾಗಿದ್ದು, ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಸದಾನಂದಗೌಡ ಅವರು ಕಾಂಗ್ರೆಸ್ ಪಕ್ಷವನ್ನು ಸೇರುತ್ತಾರಾ ಎಂಬ ಪ್ರಶ್ನೆ ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದ್ದು, ಈ ಚರ್ಚೆಯ ಬೆನ್ನಲ್ಲೇ ಬಿಜೆಪಿ ಹೈಕಮಾಂಡ್ ಡಿ.ವಿ.ಸದಾನಂದಗೌಡ ಅವರ ಅಸಮಾಧಾನವನ್ನು ಶಮನಗೊಳಿಸಲು ದೆಹಲಿಗೆ ಬುಲಾವ್ ನೀಡಿದೆ.

Leave a Reply