ಬಾಬಾ ಸಾಹೇಬರ ಸಂವಿಧಾನದಲ್ಲಿ ಮೀಸಲಾತಿಯ ಸೌಲಭ್ಯವನ್ನು ಕೆಲವು ಸಮುದಾಯಗಳಿಗೆ ಹಲವು ಪ್ರಮುಖ ಕಾರಣಕ್ಕೆ ನೀಡಲಾಗಿದೆ.
ಮೂಲದಲ್ಲಿ ಐತಿಹಾಸಿಕವಾಗಿ ದೌರ್ಜನ್ಯಕ್ಕೆ ಒಳಗಾಗಿ ಏಳಿಗೆ ಕಾಣದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಮಾತ್ರ ಮೀಸಲಾತಿಯನ್ನು ಕಲ್ಪಿಸಲಾಗಿತ್ತು. ಐತಿಹಾಸಿಕವಾಗಿ ರೂಢಿಗತವಾಗಿದ್ದ ಸಾಮಾಜಿಕ ಅವಮಾನ, ಕಳಂಕ ಮತ್ತು ದೌರ್ಜನ್ಯಗಳೇ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೀಸಲಾತಿಗೆ ಇರುವ ಮೂಲ ನಿಯಮಾವಳಿ ಆಗಿದ್ದು ಇದನ್ನು ಸಂವಿಧಾನದಲ್ಲಿ ಅತ್ಯಂತ ಸ್ಪಷ್ಟವಾಗಿ ನಮೂದಿಸಲಾಗಿದೆ.
ಇದಾದ ಬಳಿಕ ಮಂಡಲ್ ಆಯೋಗದ ವರದಿಯ ಅನುಷ್ಠಾನದ ಬಳಿಕ ಹಿಂದುಳಿದ ವರ್ಗಗಳಿಗೂ ಕೂಡಾ ಮೀಸಲಾತಿ ಸೌಲಭ್ಯವನ್ನು ಕಲ್ಪಿಸಲಾಯಿತು.
ಆದರೆ ಈ ದಿನ ಬೇಡ ಜಂಗಮದ ಹೆಸರಿನಲ್ಲಿ ಪರಿಶಿಷ್ಟ ಜಾತಿಯ ಸ್ಥಾನಮಾನಕ್ಕೆ ಕೆಲವರು ಪ್ರಯತ್ನ ಮಾಡುತ್ತಿರುವುದು ನಿಜಕ್ಕೂ ಬೇಸರದ ಸಂಗತಿ. Social Stigma ದ ಅರಿವು ಇಲ್ಲದೇ ಸಂವಿಧಾನವು ನಿಗದಿಪಡಿಸಿದ ನಿಯಮಾವಳಿಗಳನ್ನು ಪರಿಗಣಿಸದೇ ನೇರಾ ನೇರ ನಮಗೆ ಪರಿಶಿಷ್ಟ ಜಾತಿಯ ಸ್ಥಾನ ಮಾನ ಕೊಡಿ ಎಂದು ಮಾಡುತ್ತಿರುವ ಅರ್ಥವಿಲ್ಲದ ಹೋರಾಟವನ್ನು ನಾನು ಖಂಡಿಸುತ್ತೇನೆ.
ಸಂವಿಧಾನದ ನಿಯಮಾವಳಿಗಳ ಪ್ರಕಾರ ಸಿಕ್ಕ ಸಿಕ್ಕವರಿಗೆಲ್ಲಾ ಕೊಡುವುದಕ್ಕೆ ಬರುವುದಿಲ್ಲ.
ಪೂನಾ ಒಪ್ಪಂದದ ಸಮಯದಲ್ಲಿ ಬಾಬಾ ಸಾಹೇಬರು ಅಸ್ಪೃಶ್ಯರಿಗೆ ಪ್ರತ್ಯೇಕ ಮತದಾನ ಹಕ್ಕುಗಳನ್ನು ಮತ್ತು ಪ್ರತಿನಿಧಿಸಲು ಮತಕ್ಷೇತ್ರವನ್ನು ಯಾವ ಕಾರಣಕ್ಕೆ ಕೇಳಿದರು ಎಂಬುದಕ್ಕೆ ಅವರಂತಹ ಕೋಟ್ಯಾಂತರ ಜನರ ಬದುಕಿನ ಐತಿಹಾಸಿಕ ಅವಮಾನಗಳೇ ನಮಗೆ ಸಾಕ್ಷಿಯಾಗಿವೆ.
ಹೀಗಾಗಿ ಮೀಸಲಾತಿಗೆ ಸಂಬಂಧಿಸಿದಂತೆ ಅರ್ಥವಿಲ್ಲದ ಹೋರಾಟ ಮಾಡುವವರನ್ನು, ಅದಕ್ಕೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಬೆಂಬಲಿಸುವವರನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ.
ಬೇಡ ಜಂಗಮ ಎಂಬುದಕ್ಕೂ ಕಾಡಿನಲ್ಲಿ ವಾಸವಿರುವ ಆದಿವಾಸಿ ಬೇಡರ ಲಕ್ಷಣಗಳಿಗೂ ಬಹಳಷ್ಟು ನೈಜ ವ್ಯತ್ಯಾಸಗಳಿವೆ.
ಹೀಗಾಗಿ ಅಸಂವಿಧಾನಿಕ ಬೇಡಿಕೆಗಳಿಗೆ ಬೆಂಬಲ ನೀಡುವ ಯಾರೇ ಆದರೂ ಸಹ ಮೊದಲು ಸಂವಿಧಾನದ ಆಶಯಗಳು ಮತ್ತು ಮೀಸಲಾತಿಗೆ ಸಂಬಂಧಿಸಿದ ಅದರ ನೀತಿ ನಿಯಮಾವಳಿಗಳನ್ನು ತಿಳಿದುಕೊಳ್ಳದೇ ಹೋದರೆ ನಾವು ಸಾಮಾಜಿಕ ನ್ಯಾಯಕ್ಕೆ ಅಪಚಾರ ಎಸಗಿದಂತೆ ಆಗುತ್ತದೆ.
ಕೊನೆಯದಾಗಿ ಮೀಸಲಾತಿ ಎಂಬುದು ಸಾಮಾಜಿಕ ಅವಮಾನದ ಕಾರಣಕ್ಕಾಗಿ ಇರುವ ಸಂಗತಿಯೇ ವಿನಃ ಆರ್ಥಿಕವಾಗಿ ಹಿಂದುಳಿದ ಕಾರಣಕ್ಕಾಗಿ ಅಲ್ಲ. ಆರ್ಥಿಕವಾಗಿ ಹಿಂದುಳಿದವರಿಗೆ ಸಹಕರಿಸಲು ಸರ್ಕಾರಗಳು ಪೂರಕ ಯೋಜನೆಗಳನ್ನು ರೂಪಿಸುವುದು ಸೂಕ್ತ ನಡೆಯಾಗಿದ್ದು ಆರ್ಥಿಕತೆ ಆಧಾರಿತವಾದ ಮೀಸಲಾತಿಗೆ ಸಂವಿಧಾನದಲ್ಲಿ ಅವಕಾಶವೇ ಇಲ್ಲ!
ಇದನ್ನು ಸಾಧ್ಯವಾದಷ್ಟು ಬೇಗ ತಿಳಿದುಕೊಂಡರೆ ಎಲ್ಲರಿಗೂ ಉತ್ತಮ.
– ಡಾ.ಎಚ್.ಸಿ.ಮಹದೇವಪ್ಪ, ಮಾಜಿ ಸಚಿವ



