ಭಾರತೀಯ ಸನಾತನ ಧರ್ಮವನ್ನು ಉಳಿಸಲು ತುರ್ತಾಗಿ ಮಾಡಬೇಕಿರುವ ಕಾರ್ಯಗಳು
(ಭಾರತೀಯರು ಜನವರಿ 1ರಂದು ಹೊಸ ವರ್ಷಾಚರಣೆ ಮಾಡಬಾರದು ಎಂದು ಇಷ್ಟು ಉದ್ದದ ಪಟ್ಟಿಯೊಂದನ್ನು ನನ್ನ ವಾಟ್ಸಪ್ ಗೆಳೆಯರೊಬ್ಬರು ಹಂಚಿಕೊಂಡಿದ್ದರು. ಅವರಿಗೆ ಕೊಟ್ಟಿರುವ ಪ್ರತಿಕ್ರಿಯೆ)
ನೀವು ಹೇಳುತ್ತಿರುವುದು ಸತ್ಯ! ಜನವರಿ 1ರಂದು ಹೊಸ ವರ್ಷಾಚರಣೆಯನ್ನು ಆಚರಿಸದ ಸನಾತನ ಭಾರತೀಯರು ಏನನ್ನು ಮಾಡಬೇಕು? ಮಾಡಬಾರದು? ಎಂಬ ಪಟ್ಟಿ ಇಲ್ಲಿದೆ.
- ಭಾರತೀಯ ಸನಾತನಿಗಳು ಕಾರು, ಬೈಕ್, ಬಸ್, ರೈಲು, ಹಡಗು, ವಿಮಾನ ಮೊದಲಾದವುಗಳನ್ನು ಬಳಸಬಾರದು. ಅವರು ಬರಿಗಾಲಿನಲ್ಲಿ ಅಥವಾ ಚಕ್ಕಡಿ ಗಾಡಿಯಲ್ಲಿ ಪ್ರಯಾಣಿಸಬೇಕು. ಏಕೆಂದರೆ ಇವುಗಳನ್ನೆಲ್ಲ ಕಂಡುಹಿಡಿದಿದ್ದು ಹೊರದೇಶದ ಕ್ರಿಶ್ಚಿಯನ್ನರು.
- ಗಂಡಸರು ಪ್ಯಾಂಟ್ ಮತ್ತು ಷರ್ಟ್, ಟೀಷರ್ಟ್, ಬರ್ಮುಡಾ, ಹಾಫ್ ಪ್ಯಾಂಟ್ ಇತ್ಯಾದಿ ಧರಿಸಬಾರದು. ಅವರೇನಿದ್ದರೂ ದೊಗಳೆ ಚಡ್ಡಿ, ಪಂಚೆ, ಹಳೆಯ ಮಾದರಿಯ ಅಂಗಿಗಳನ್ನು ಧರಿಸಬೇಕು. ಇನ್ನು ಮಹಿಳೆಯರು ಸಲ್ವಾರ್, ಚೂಡಿದಾರ ಇತ್ಯಾದಿಗಳನ್ನು ಧರಿಸಬಾರದು. (ಬೇಕಿದ್ದರೆ ಕೇರಳದಲ್ಲಿ ಸನಾತನ ರಾಜ ರಾಜ ಮಾರ್ತಾಂಡ ದಲಿತ ಹೆಣ್ಣು ಮಕ್ಕಳಿಗೆ ಮೊಲೆ ಮುಚ್ಚದಂತೆ, ಕೆಳ ಸಮುದಾಯದ ಗಂಡಸರು ಮೊಣಕಾಲಿನಿಂದ ಕೆಳಗೆ ಬಟ್ಟೆ ಹಾಕದ ನಿಯಮದ ಕುರಿತು ಅಧ್ಯಯನ ಮಾಡಿ)
- ಬಿರಿಯಾನಿ ಮತ್ತು ವಿದೇಶಿ ಆಹಾರ, ಪಾನೀಯಗಳನ್ನು ಕುಡಿಯಬಾರದು. ಏಕೆಂದರೆ ಬಿರಿಯಾನಿಯನ್ನು ದೇಶಕ್ಕೆ ಪರಿಚಯಿಸಿದವರು ಮುಸ್ಲಿಮರು.
- ಬಾಟಲ್ ಗಳಲ್ಲಿ ನೀರು ಕುಡಿಯಬಾರದು. ಏಕೆಂದರೆ, ಬಾಟಲ್ ಗಳನ್ನು ಕಂಡುಹಿಡಿದದ್ದು ವಿದೇಶಿಯರು. ಆದ್ದರಿಂದ ಭಾರತೀಯ ಸನಾತನಿಗಳು ಕುಡಿಕೆ, ಮಡಿಕೆ, ಗಡಿಗೆಗಳಲ್ಲಿ ನೀರು ಹೊತ್ತೊಯ್ಯಬೇಕು.
- ಯಾವುದೇ ಕಾರಣಕ್ಕೂ ಎಲ್.ಪಿ.ಜಿ ಬಳಸಿ ಅಡುಗೆ ಮಾಡಬಾರದು. ಏಕೆಂದರೆ, ಇದು ವಿದೇಶಿಯರಾದ ಮುಸ್ಲಿಮರಿಂದ ಭಾರತಕ್ಕೆ ಆಮದಾಗುತ್ತಿದೆ. ಆದ್ದರಿಂದ ಭಾರತೀಯ ಸನಾತನಿಗಳು ಕಟ್ಟಿಗೆಗಳನ್ನು ಬಳಸಿ ಅಡುಗೆ ಮಾಡಬೇಕು. ಕಟ್ಟಿಗೆ ಸಿಗದಿದ್ದರೆ ಕಾಡು ಕಡಿದು ಕೇಸು ಹಾಕಿಸಿಕೊಳ್ಳಬೇಕೇ ಹೊರತು, ಎಲ್.ಪಿ.ಜಿ. ಬಳಸಬಾರದು. ಏಕೆಂದರೆ ಅದು ಮುಸ್ಲಿಂ ದೇಶಗಳ ಉತ್ಪಾದನೆ.
- ಭಾರತೀಯ ಸನಾತನಿಗಳು ಯಾರೂ ಕೂಡ ಸರ್ಕಾರಿ ಅಥವಾ ಖಾಸಗಿ ಅಥವಾ ಅಂತರರಾಷ್ಟ್ರೀಯ ಶಾಲೆಗಳಿಗೆ ಹೋಗಬಾರದು. ಏಕೆಂದರೆ, ಇದು ಬ್ರಿಟಿಷರು ನಮಗೆ ಕಲಿಸಿಕೊಟ್ಟ ಶಿಕ್ಷಣ ಕ್ರಮ. ಭಾರತೀಯ ಸನಾತನಿಗಳು ಏನಿದ್ದರೂ ಗುರುಕುಲ ಪದ್ಧತಿ ಅಡಿಯಲ್ಲಿ ಶಿಕ್ಷಣ ಪಡೆಯಬೇಕು. (ಗುರುಕುಲ ಪದ್ಧತಿಯಲ್ಲಿ ಶೂದ್ರ ಸಮುದಾಯಗಳಾದ ಲಿಂಗಾಯತರು, ಒಕ್ಕಲಿಗರು, ಕುರುಬರು, ಬಂಟರು ಮತ್ತು ಇತರ ಸಮುದಾಯಗಳಿಗೆ, ದಲಿತ, ಆದಿವಾಸಿಗಳಿಗೆ, ಮಹಿಳೆಯರಿಗೆ ಶಿಕ್ಷಣ ಕಲಿಸುತ್ತಿರಲಿಲ್ಲವೆಂಬುದನ್ನು ಮನುಸ್ಮೃತಿಯ ಅಧ್ಯಯನದಿಂದ ತಿಳಿದುಕೊಳ್ಳಬಹುದು)
- ಭಾರತೀಯ ಸನಾತನಿಗಳು ಯಾವುದೇ ಕಾರಣಕ್ಕೂ ಕಂಪ್ಯೂಟರ್ ಬಳಸಬಾರದು. ಏಕೆಂದರೆ ಕಂಪ್ಯೂಟರ್ ಗಳನ್ನು ಕಂಡುಹಿಡಿದವರು ವಿದೇಶಿಯರು.
- ಭಾರತೀಯ ಸನಾತನಿಗಳು ಯಾವುದೇ ಕಾರಣಕ್ಕೂ ಮೊಬೈಲ್ ಮತ್ತು ಟೆಲಿಫೋನ್, ಪೋಸ್ಟ್ ಮತ್ತು ಕೊರಿಯರ್ ಸೇವೆಗಳನ್ನು ಬಳಸಬಾರದು. ಏಕೆಂದರೆ, ಇವುಗಳನ್ನು ಕಂಡುಹಿಡಿದವರು ಭಾರತೀಯರಲ್ಲ. ನಾವು ಏನಿದ್ದರೂ ಪಕ್ಷಿಗಳ ಕಾಲಿಗೆ ಚೀಟಿ ಕಟ್ಟಿ ಸಂದೇಶ ಕಳಿಸಬೇಕು. ಇಲ್ಲವಾದಲ್ಲಿ ಅಂತವರು ನಿಜವಾದ ಸನಾತನಿಗಳಾಗಲು ಸಾಧ್ಯವಿಲ್ಲ.
- ಭಾರತೀಯ ಸನಾತನಿಗಳು ಯಾವುದೇ ಕಾರಣಕ್ಕೂ ಬೃಹತ್ ಕಾರ್ಖಾನೆಗಳನ್ನು ಸ್ಥಾಪಿಸಬಾರದು. ಏಕೆಂದರೆ ಇವುಗಳನ್ನೆಲ್ಲ ಕಂಡುಹಿಡಿದವರು ವಿದೇಶಿಯರು. ಭಾರತೀಯ ಸನಾತನಿಗಳು ಏನಿದ್ದರೂ ಜಮೀನ್ದಾರರುಗಳ ಮನೆಯಲ್ಲಿ ಜೀತ ಮಾಡಬೇಕು. ಕೂಲಿ ಕೇಳಬಾರದು. ಏಕೆಂದರೆ ಕೆಲಸ ಮಾಡು ಕೂಲಿ ಕೇಳಬೇಡ ಎನ್ನುವುದು ಭಾರತದ ನಿಯಮ. ವರ್ಷವಿಡೀ ಕೆಲಸ ಮಾಡಿ ಅವರು ಕೊಟ್ಟಷ್ಟು ಧವಸಧಾನ್ಯಗಳನ್ನು ಪಡೆದು ‘ತೃಪ್ತ ಜೀವನ’ ನಡೆಸಬೇಕು.
- ಭಾರತೀಯ ಸನಾತನಿಗಳು ಯಾವುದೇ ಕಾರಣಕ್ಕೂ ಧನ ಸಂಗ್ರಹ ಮಾಡಬಾರದು. ಬೇಕಿದ್ದರೆ ಮನುಸ್ಮೃತಿಯನ್ನು ಅಧ್ಯಯನ ಮಾಡಿ. ಅದರಲ್ಲಿ ಸ್ಪಷ್ಟವಾಗಿ ಶೂದ್ರರು, ದಲಿತರು ಮತ್ತು ಮಹಿಳೆಯರು ಯಾವುದೇ ಕಾರಣಕ್ಕೂ ಧನಸಂಗ್ರಹ ಮಾಡಬಾರದು ಎಂದು ನಿಯಮ ಮಾಡಲಾಗಿದೆ.
- ಭಾರತೀಯ ಸನಾತನಿಗಳು ಯಾವುದೇ ಕಾರಣಕ್ಕೂ ಕುಕ್ಕರ್, ಓವನ್, ರೆಫ್ರಿಜರೇಟರ್, ವಾಷಿಂಗ್ ಮಿಷಿನ್, ಮಿಕ್ಸರ್, ಗ್ರೈಂಡರ್, ವಾಟರ್ ಫಿಲ್ಟರ್, ಐರನ್ ಬಾಕ್ಸ್ ಇತ್ಯಾದಿ ಯಂತ್ರೋಪಕರಣಗಳನ್ನು ಬಳಸಬಾರದು. ಏಕೆಂದರೆ ಇವುಗಳನ್ನೆಲ್ಲ ಕಂಡುಹಿಡಿದವರು ವಿದೇಶಿಗರು. ನಾವು ಒರಳುಕಲ್ಲು, ಬೀಸುಕಲ್ಲು, ದುಂಡಿಬಂಡೆಗಳನ್ನು ಬಳಸಿ ಎಲ್ಲ ವಸ್ತುಗಳನ್ನು ಪುಡಿ, ಚಟ್ನಿಗಳನ್ನು ಸಿದ್ಧಮಾಡಿಕೊಳ್ಳಬೇಕು. ಹಿಟ್ಟು ಹಾಕಿಸಿಕೊಳ್ಳಲು ಯಾವುದೇ ಕಾರಣಕ್ಕು ಗಿರಣಿಗಳಿಗೆ ಹೋಗಬಾರದು. ಇದು ಧರ್ಮದ್ರೋಹವಾಗುತ್ತದೆ.
- ಭಾರತೀಯ ಸನಾತನಿಗಳು ಹಸುವಿನ ಗಂಜಳ ಕುಡಿಯಬೇಕು. ಹಾಲು, ಮೊಸರು, ಬೆಣ್ಣೆ, ತುಪ್ಪಗಳನ್ನು ಅಭಿಷೇಕ, ಅಲಂಕಾರ, ದೀಪ ಉರಿಸಲು ಬಳಸಬೇಕು. ಗಂಜಳವನ್ನು ಮಾತ್ರ ಕುಡಿಯಬೇಕು. ಹಾಲು, ಮಜ್ಜಿಗೆ, ಬೆಣ್ಣೆ ತುಪ್ಪಗಳನ್ನು ಸೇವಿಸಬಾರದು.
- ಭಾರತೀಯ ಸನಾತನಿಗಳು ನಾಯಿ, ಹಂದಿಗಳನ್ನು ಸಾಕಬೇಕು. ಅಪ್ಪಿತಪ್ಪಿ ಕೋಳಿ, ಕುರಿ, ಹಸುಗಳನ್ನು ಸಾಕಬಾರದು. ಈ ಕುರಿತ ಹೆಚ್ಚಿನ ಮಾಹಿತಿಗೆ ಮನುಸ್ಮೃತಿಯನ್ನು ಅಧ್ಯಯನ ಮಾಡಬಹುದು. ಅದರಲ್ಲಿ ಶೂದ್ರರು, ದಲಿತರು ಯಾವ ಪ್ರಾಣಿಗಳನ್ನು ಏಕೆ ಸಾಕಬೇಕು ಎಂದು ಲಕ್ಷ ವರ್ಷಗಳ ಕಾಲ ಅಧ್ಯಯನ ನಡೆಸಿ ನಿಯಮ ಮಾಡಿ ಇಟ್ಟಿದ್ದಾರೆ.
- ಭಾರತೀಯ ಸನಾತನಿಗಳು ಯಾವುದೇ ಕಾರಣಕ್ಕೂ ಬರೆಯಲು ಪೆನ್ನು ಮತ್ತು ಪೇಪರ್ ಬಳಸಬಾರದು. ಹಾಗೊಂದು ವೇಳೆ ಬರೆಯಲೇಬೇಕು ಎಂದರೆ, ತಾಳೆ ಪತ್ರಗಳನ್ನು ಮತ್ತು ಕಂಠಗಳನ್ನು ಬಳಸಬೇಕು. ಇದಕ್ಕೆ ಕೂಡ ಇಂಕ್ ಬಳಸಬಾರದು. ಹಾಗೊಂದು ವೇಳೆ ಬಳಸಬೇಕು ಎಂದರೆ ಇದ್ದಿಲನ್ನು ಬಳಸಿ ಮಾಡಿದ ಮಸಿಯನ್ನೇ ಬಳಸಬೇಕು.
- ಭಾರತೀಯ ಸನಾತನಿಗಳು ಯಾವುದೇ ಕಾರಣಕ್ಕೂ ಶೌಚಾಲಯಗಳನ್ನು ಬಳಸಬಾರದು. ಚೆಂಬು ಹಿಡಿದುಕೊಂಡು ಹೊಲದ ಕಡೆ ಅಥವಾ ಕೆರೆ ಕಡೆಗೆ ಹೋಗಬೇಕು. ಮೇಲ್ಜಾತಿಯವರು ಮಾಡಿದ ಹೊಲಸನ್ನು ತಲೆಯ ಮೇಲೆ ಕೆಳಜಾತಿಯವರು ಹೊತ್ತೊಯ್ಯಬೇಕು.
- ಭಾರತೀಯ ಸನಾತನಿಗಳು ಯಾವುದೇ ಕಾರಣಕ್ಕೂ ನಲ್ಲಿ ಮತ್ತು ಟ್ಯಾಂಕ್ ಹಾಗೂ ಕೊಳವೆ ಬಾವಿಗಳನ್ನು ಬಳಸಬಾರದು. ಅದರಲ್ಲೂ ನೀರನ್ನು ಪಂಪ್ ಮಾಡಲು ಮೋಟರ್ ಬಳಸಬಾರದು. ಎಂತದ್ದೇ ಪರಿಸ್ಥಿತಿಯಲ್ಲೂ ಬಾವಿಯಿಂದ ನೀರನ್ನು ಸೇದಿ ಬಳಸಬೇಕು.
- ಭಾರತೀಯ ಸನಾತನಿಗಳು ಯಾವುದೇ ಕಾರಣಕ್ಕೂ ಟಿವಿ ನೋಡಬಾರದು. ರೇಡಿಯೋ ಕೇಳಬಾರದು. (ಹಾಗಾದರೆ ನಮ್ಮ ಪ್ರಧಾನಿ ನರೇಂದ್ರ ಮೋದಿಯವರು ಭಾಷಣ ಮಾಡುವ ದೃಶ್ಯಗಳನ್ನು ನೋಡುವುದು ಹೇಗೆ? ಮಂಕಿ ಬಾತ್ ಕೇಳುವುದು ಹೇಗೆ?) ಏಕೆಂದರೆ ಇವುಗಳನ್ನು ಕಂಡುಹಿಡಿದವರು ಭಾರತೀಯರಲ್ಲ.
- ಭಾರತೀಯ ಸನಾತನಿಗಳು ಯಾವುದೇ ಕಾರಣಕ್ಕೂ ಎಟಿಎಂ, ಕ್ರೆಡಿಟ್ ಕಾರ್ಡ್, ಪೇಟಿಎಂ, ಫೋನ್ ಪೇ, ಗೂಗಲ್ ಪೇ, ಭಾರತ್ ಪೇ ಮೊದಲಾದವುಗಳನ್ನು ಬಳಸಬಾರದು. ಅದರ ಬದಲಿಗೆ ಠಂಕ ಸಾಲೆಗೆ ಹೋಗಿ ನಾಣ್ಯಗಳನ್ನು ಅಚ್ಚುಹಾಕಿಸುವ ವ್ಯವಸ್ಥೆ ಮಾಡಬೇಕು.
- ಭಾರತೀಯ ಸನಾತನಿಗಳು ಯಾವುದೇ ಕಾರಣಕ್ಕೂ ಬಂಗಾರ, ಬೆಳ್ಳಿ ಆಭರಣಗಳನ್ನು ಧರಿಸಬಾರದು. ಮನುಸ್ಮೃತಿಯಲ್ಲಿ ನಿಯಮ ಮಾಡಿರುವಂತೆ ಕಬ್ಬಿಣದ ಆಭರಣಗಳನ್ನು ಧರಿಸಬೇಕು.
- ಭಾರತೀಯ ಸನಾತನಿಗಳು ಯಾವುದೇ ಕಾರಣಕ್ಕೂ ತೂಕ ಮಾಡುವ ಯಂತ್ರಗಳನ್ನು ಬಳಸಬಾರದು. ನಮ್ಮ ಸನಾತನ ಧರ್ಮದಲ್ಲಿ ವಸ್ತು ವಿನಿಮಯ ಪದ್ಧತಿ ಇದೆ. ಅದನ್ನು ಮಾತ್ರ ಅನುಸರಿಸಬೇಕು.
- ಭಾರತೀಯ ಸನಾತನಿಗಳು ಯಾವುದೇ ಕಾರಣಕ್ಕು ಮುದ್ರಣ ಯಂತ್ರಗಳನ್ನು ಬಳಸಬಾರದು.
- ಭಾರತೀಯ ಸನಾತನಿಗಳು ಯಾವುದೇ ಕಾರಣಕ್ಕೂ ದಿನ ಪತ್ರಿಕೆಗಳನ್ನು ಓದಬಾರದು. ಏಕೆಂದರೆ ಇದನ್ನು ಕಂಡುಹಿಡಿದವರು ವಿದೇಶಿಯರು. (ಹಾಗಾದರೆ ನರೇಂದ್ರ ಮೋದಿಯವರ ಭಜನೆಯನ್ನು ಪ್ರಚಾರ ಮಾಡುವುದು ಹೇಗೆ?)
- ಭಾರತೀಯ ಸನಾತನಿಗಳು ಯಾವುದೇ ಕಾರಣಕ್ಕೂ ದೇವಸ್ಥಾನಗಳ ಒಳಗೆ ಪ್ರವೇಶ ಮಾಡಬಾರದು. ಇದು ಧರ್ಮದ್ರೋಹ. ಹೆಚ್ಚಿನ ಮಾಹಿತಿಗೆ ಮನುಸ್ಮೃತಿಯನ್ನು ಅಧ್ಯಯನ ಮಾಡಬಹುದು.
- ಭಾರತೀಯ ಸನಾತನಿಗಳು ಯಾವುದೇ ಕಾರಣಕ್ಕೂ ಅಂತರ್ಜಾತಿ ಮತ್ತು ಅಂತರ್ಧಮೀಯ ವಿವಾಹ ಆಗಬಾರದು. ಹೆಚ್ಚಿನ ಮಾಹಿತಿಗೆ ಮನುಸ್ಮೃತಿಯನ್ನು ಅಧ್ಯಯನ ಮಾಡಬಹುದು.
- ಭಾರತೀಯ ಸನಾತನಿಗಳ ಪೈಕಿ ಹೆಣ್ಣುಮಕ್ಕಳು ಯಾವುದೇ ಕಾರಣಕ್ಕೂ ಹೊರಗಡೆ ಕೆಲಸಕ್ಕೆ ಹೋಗಬಾರದು. ಅವರದು ಏನಿದ್ದರೂ ಅಡುಗೆ ಮನೆಯಲ್ಲಿ ಕೆಲಸ. ಹೆಚ್ಚಿನ ಮಾಹಿತಿಗೆ ಮನುಸ್ಮೃತಿಯನ್ನು ಅಧ್ಯಯನ ಮಾಡಬಹುದು.
ಸದ್ಯಕ್ಕೆ ಭಾರತೀಯ ಧರ್ಮ, ಸಂಸ್ಕೃತಿ, ಸನಾತನ ಧರ್ಮವನ್ನು ಉಳಿಸಬೇಕು ಎಂದು ಮಾತಾಡುವವರು ತುರ್ತಾಗಿ ಇಷ್ಟನ್ನು ಮಾಡಬೇಕು. ಇನ್ನು ಸನಾತನ ಧರ್ಮವನ್ನು ಉಳಿಸಲು ಯಾವೆಲ್ಲ ಕೆಲಸಗಳನ್ನು ಮಾಡಬಹುದು ಎಂಬ ವಿಷಯಗಳು ಹೊಳೆದಾಗ ಮತ್ತಷ್ಟು ವಿಷಯಗಳನ್ನು ತಿಳಿಸುತ್ತೇನೆ.
ವಂದನೆಗಳೊಂದಿಗೆ
- ಡಾ.ಪ್ರದೀಪ್ ಮಾಲ್ಗುಡಿ, ಸಂಶೋಧಕ




