ಗ್ಯಾರಂಟಿಗಳು ಬಿಟ್ಟಿ ಕೊಡುಗೆಗಳಲ್ಲ; ಸಂಪತ್ತಿನ ಅಸಮಾನ ಹಂಚಿಕೆಯ ಕಂದಕವನ್ನು ಸರಿಪಡಿಸುತ್ತವೆ: ಸಿದ್ದರಾಮಯ್ಯ

3 years ago

#Guarantees #exclusive #offers #Fixing #gap #unequal #distribution #wealth #Siddaramaiah #budget

3.27 ಲಕ್ಷ ಕೋಟಿ ರೂಪಾಯಿ ಗಾತ್ರದ ಬಜೆಟ್

ಬೆಂಗಳೂರು: ವಿಧಾನಸಭೆ ಚುನಾವಣೆಗೆ ಮುನ್ನ ರಾಜ್ಯದ ಜನತೆಗೆ ನೀಡಿದ ಗ್ಯಾರಂಟಿ ಭರವಸೆಗಳ ಈಡೇರಿಕೆ ಸೇರಿದಂತೆ, ಶಿಕ್ಷಣ, ಕೃಷಿ, ಆರೋಗ್ಯ ಹಾಗೂ ಮಹಿಳಾ ಸಬಲೀಕರಣದ ಯೋಜನೆಗಳೊಂದಿಗೆ ಸರ್ವರಿಗೂ ಸಮಪಾಲಿನ ಘೋಷಣೆ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ  3.27 ಲಕ್ಷ ಕೋಟಿ ರೂಪಾಯಿ ಗಾತ್ರದ ಬಜೆಟ್ ಅನ್ನು ಮಂಡಿಸಿದ್ದಾರೆ. ಇದು ಈ ಸರ್ಕಾರದ ಮೊದಲ ಹಾಗೂ ಸಿದ್ದರಾಮಯ್ಯ ಮಂಡಿಸಿದ 14ನೇ ಬಜೆಟ್ ಆಗಿದೆ.

ಕಾಂಗ್ರೆಸ್ ಶಾಸಕರ ಕರತಾಡನ, ಸಂಪುಟ ಸಹದ್ಯೋಗಿಗಳ ಶ್ಲಾಘನೆಯೊಂದಿಗೆ ಶ್ವೇತ ವಸ್ತ್ರಧಾರಿಯಾಗಿ ಸದನಕ್ಕೆ ಪ್ರವೇಶಿಸಿದ ಸಿದ್ದರಾಮಯ್ಯ ತಮ್ಮ ಎಂದಿನ ಶೈಲಿಯಲ್ಲಿ ಬಜೆಟ್ ಮಂಡನೆ ಆರಂಭಿಸಿದರು.

ಬಸವಣ್ಣನವರಿಂದ ಹಿಡಿದು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರವರೆಗೆ ಅಭಿವೃದ್ಧಿಯ ಜತೆ ಸಾಮಾಜಿಕ ನ್ಯಾಯಕ್ಕೆ ಬೆಂಬಲ ನೀಡುವುದು ಕರ್ನಾಟಕದ ಘನ ಪರಂಪರೆ. ಈಗ ಮಂಡಿಸಲಿರುವ ಆಯವ್ಯಯದಲ್ಲಿ ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎನ್ನುವ ಧ್ಯೇಯವನ್ನು ಮೂಲಮಂತ್ರವಾಗಿ ಇರಿಸಿಕೊಳ್ಳಲಾಗಿದೆ ಎಂದು ಹೇಳಿದರು.

ಕಾಂಗ್ರೆಸ್ ಮತದಾರರಿಗೆ ನೀಡಿದ ಐದು ಗ್ಯಾರಂಟಿಗಳು ಬಿಟ್ಟಿ ಕೊಡುಗೆಗಳಲ್ಲ. ಇವುಗಳು ಸಂಪತ್ತಿನ ಅಸಮಾನ ಹಂಚಿಕೆಯ ಕಂದಕವನ್ನು ಸರಿಪಡಿಸುತ್ತದೆ. ಕೇಂದ್ರ ಸರ್ಕಾರದ ವೈಫಲ್ಯದಿಂದ ಅನಿಯಂತ್ರಿತ ಬೆಲೆ ಏರಿಕೆಯಿಂದ ತತ್ತರಿಸುತ್ತಿರುವ ಕುಟುಂಬಗಳಿಗೆ ಗೃಹಜ್ಯೋತಿ ಮತ್ತು ಗೃಹಲಕ್ಷ್ಮಿ ಯೋಜನೆಗಳು ನಿರಾಳತೆ ತಂದುಕೊಡಲಿವೆ ಎಂದು ಬಣ್ಣಿಸಿದರು.

ಗ್ಯಾರಂಟಿ ಯೋಜನೆಗಳು ಅರ್ಹರಿಗೆ ನೇರವಾಗಿ ತಲುಪುವುದರಿಂದ ಬವಣೆಗಳ ಭಾರದಿಂದ ಏದುಸಿರು ಬಿಡುತ್ತಿರುವ ಬಡವರ ಬದುಕಿನಲ್ಲಿ ಪ್ರಾಣವಾಯುವಿನಂತೆ ಕೆಲಸ ಮಾಡಲಿವೆ ಎಂದರು.

ಈಗಾಗಲೇ ಶಕ್ತಿ ಯೋಜನೆ ಜಾರಿಯಾಗಿದೆ. ಗೃಹಜ್ಯೋತಿಗೆ ನೋಂದಣಿ ಪ್ರಾರಂಭವಾಗಿದೆ. ಯೋಜನೆ ಜುಲೈನಿಂದ ಜಾರಿಯಾಗಲಿದೆ. ಗೃಹಲಕ್ಷ್ಮಿ ನೋಂದಣಿಯನ್ನು ಶೀಘ್ರವೇ ಆರಂಭಿಸಿ ಆಗಸ್ಟ್ ನಿಂದ ಜಾರಿಗೆ ತರಲಾಗುವುದು. ಯುವನಿಧಿ 2023ರಲ್ಲಿ ಪದವಿ ಪಡೆದ ನಿರುದ್ಯೋಗಿ ಯುವಜನರಿಗೆ ಜಾರಿಯಾಗಲಿದೆ. ಅನ್ನಭಾಗ್ಯ ಯೋಜನೆ ಅನುಷ್ಠಾನಕ್ಕೂ ಬದ್ಧರಾಗಿದ್ದೇವೆ ಎಂದರು.

ಗೃಹಬಳಕೆಗೆ 200 ಯುನಿಟ್‍ವರೆಗೆ ಉಚಿತ ವಿದ್ಯುತ್ ನೀಡುವ ಗೃಹಜ್ಯೋತಿಗೆ 13,910 ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗುವುದು. ಇದರಿಂದ 2 ಕೋಟಿ ಮನೆಗಳಿಗೆ ಲಾಭವಾಗಲಿದೆ ಎಂದು ತಿಳಿಸಿದರು.

ಬಡವರ ಕೈಗೆ ಹಣ ನೀಡುವುದರ ಹಿಂದಿರುವ ಪ್ರಬಲ ಆರ್ಥಿಕ ತರ್ಕವನ್ನು ಗಮನಿಸಬೇಕಿದೆ. ಜಿಎಸ್‍ಟಿಯ ಬಹುಪಾಲು ಮೊತ್ತ ಸಮಾಜದ ತಳಹಂತದ ಶೇ.60ರಷ್ಟು ಜನರಿಂದ ಸಂಗ್ರಹವಾಗುತ್ತಿದೆ. ಆದರೆ ಆರ್ಥಿಕ ವ್ಯವಸ್ಥೆಯ ಹೆಚ್ಚಿನ ಲಾಭ ಸಮಾಜದ ಮೇಲ್ಪಟ್ಟ ಶೇ.10ರಷ್ಟು ಜನರಿಗೆ ತಲುಪುತ್ತಿದೆ. ಆದ್ದರಿಂದ ಬಡವರಿಗೆ ಸಂಪತ್ತನ್ನು ಮರುಹಂಚಿಕೆ ಮಾಡುವ ನೀತಿಗಳನ್ನು ಅನುಸರಿಸುವ ನಿಟ್ಟಿನಲ್ಲಿ ಗ್ಯಾರಂಟಿ ಯೋಜನೆಗಳು ಕೆಲಸ ಮಾಡುತ್ತವೆ ಎಂದು  ವಿಶ್ಲೇಷಣೆ ಮಾಡಿದರು.

ಗ್ಯಾರಂಟಿ ಯೋಜನೆಗೆ ಅಗತ್ಯವಾದ ಸಂಪನ್ಮೂಲವನ್ನು ಜನರಿಗೆ ಹೆಚ್ಚಿನ ಹೊರೆಯಾಗದಂತೆ ಹೊಂದಿಸಲಾಗುವುದು. ಈ ನಿಟ್ಟಿನಲ್ಲಿ ತೆರಿಗೆ ಸಂಗ್ರಹ ವ್ಯವಸ್ಥೆಯಲ್ಲಿ ಸುಧಾರಣೆ, ಸೋರಿಕೆ ತಡೆಗಟ್ಟುವುದು, ದುಂದುವೆಚ್ಚಗಳಗೆ ಕಡಿವಾಣ ಹಾಕುವ ಮೂಲಕ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.

Leave a Reply