ವಿಧಾನ ಮಂಡಲದಲ್ಲೂ ಗ್ಯಾರಂಟಿ ಗದ್ದಲ

3 years ago

#guarantee #scheme #uproar #legislature

ಬೆಂಗಳೂರು: ವಿಧಾನಸಭೆಯ ಕಲಾಪದಲ್ಲಿಂದು ಪಂಚಖಾತ್ರಿಗಳು ಪ್ರತಿಧ್ವನಿಸಿ ಆಡಳಿತ ಹಾಗೂ ವಿರೋಧ ಪಕ್ಷಗಳ ನಡುವೆ ಗದ್ದಲ, ಕೋಲಾಹಲ ಉಂಟಾಗಿ ಅಧಿವೇಶನ ಕೆಲ ಕಾಲ ಮುಂದೂಡಿದ ಪ್ರಸಂಗ ನಡೆಯಿತು.

ಕಲಾಪ ಆರಂಭಗೊಳ್ಳುತ್ತಿದ್ದಂತೆ ಸಭಾಧ್ಯಕ್ಷ ಯು.ಟಿ.ಖಾದರ್ ಪ್ರಶ್ನೋತ್ತರವನ್ನು ಕೈಗೆತ್ತಿಕೊಂಡರು. ಆಡಳಿತ ಪಕ್ಷದ ಅರಸೀಕೆರೆ ಕ್ಷೇತ್ರದ ಶಾಸಕ ಕೆ.ಎನ್.ಶಿವಲಿಂಗೇಗೌಡ ಕೇಳಿದ ಪ್ರಶ್ನೆಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಉತ್ತರ ನೀಡಲು ಆರಂಭಿಸಿದರು. ಈ ಹಂತದಲ್ಲಿ ಎದ್ದು ನಿಂತ ಬಿಜೆಪಿ ನಾಯಕ ಬಸವರಾಜ ಬೊಮ್ಮಾಯಿ, ತಾವು ಕಳುಹಿಸಿರುವ ನಿಲುವಳಿ ಸೂಚನೆಯ ಪ್ರಾಥಮಿಕ ಪ್ರಸ್ತಾಪಕ್ಕೆ ಅವಕಾಶ ನೀಡಬೇಕು ಎಂದು ಮನವಿ ಮಾಡಿದರು.

ಈಗಾಗಲೇ ಪ್ರಶ್ನೋತ್ತರ ಕಲಾಪ  ಆರಂಭವಾಗಿದೆ ಇದು ಮುಗಿದ‌ನಂತರ ಅವಕಾಶ ನೀಡುವುದಾಗಿ ಸಭಾಧ್ಯಕ್ಷರು ಭರವಸೆ ನೀಡಿದರು. ಆದರೆ ಅದಕ್ಕೆ ಒಪ್ಪದ ಬಿಜೆಪಿ ಶಾಸಕರು, ವಿಷಯ ಮಂಡನೆಗೆ ಅವಕಾಶ ನೀಡಲೇಬೇಕೆಂದು ಪಟ್ಟು ಹಿಡಿದು ಗದ್ದಲ ಆರಂಭಿಸಿದರು.

ಸದನ ನಿಯಮಾವಳಿಗಳ ಪ್ರಕಾರ ನಡೆಯಬೇಕು. ಹಾಗಾಗಿ ಪ್ರಶ್ನೋತ್ತರ ಈಗಾಗಲೇ ಆರಂಭವಾಗಿದೆ. ಶಾಸಕರ ಹಕ್ಕುಗಳನ್ನು ಗೌರವಿಸಬೇಕಿದೆ. ಮೊದಲು ಪ್ರಶ್ನೋತ್ತರಕ್ಕೆ ಅವಕಾಶ ನೀಡಿ. ನಂತರ ನಿಮ್ಮ ವಾದವನ್ನು ಕೇಳುತ್ತೇನೆ ಎಂದು ಸಭಾಧ್ಯಕ್ಷರು ಮನವೊಲಿಸುವ ಪ್ರಯತ್ನ ಮಾಡಿದರು. ಆದರೆ ಇದಕ್ಕೆ ಸೊಪ್ಪು ಹಾಕದ ಬಿಜೆಪಿ ಸದಸ್ಯರು ಚರ್ಚೆ ಗೆ ಆಗ್ರಹಿಸಿ,ಸಭಾಧ್ಯಕ್ಷರ ಪೀಠದ ಮುಂದೆ ಧರಣಿ ಆರಂಭಿಸಿದರು.

ಈ ನಡುವೆ ಮಧ್ಯ ಪ್ರವೇಶಿಸಿದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ನಮ್ಮ ಸರ್ಕಾರ ಪಂಚಖಾತ್ರಿ ಯೋಜನೆಗಳನ್ನು ಜಾರಿಗೊಳಿಸುತ್ತಿರುವುದರಿಂದ ಬಿಜೆಪಿಯವರಿಗೆ ಹೊಟ್ಟೆಹುರಿಯನ್ನು ತಡೆದುಕೊಳ್ಳಲು ಆಗುತ್ತಿಲ್ಲ. ಅದಕ್ಕಾಗಿ ಗದ್ದಲ ಮಾಡುತ್ತಿದ್ದಾರೆ. ಮೊದಲು ಪ್ರಶ್ನೋತ್ತರ ಮುಗಿಯಲಿ. ಅನಂತರ ಬಿಜೆಪಿ ಮುಖಂಡರ 45 ದಿನಗಳ ನುಡಿಮುತ್ತುಗಳನ್ನು ಕೇಳಿಸಿಕೊಳ್ಳೋಣ. ಸರ್ಕಾರ ಎಲ್ಲಾ ರೀತಿಯ ಚರ್ಚೆಗೆ ಸಿದ್ಧವಿದೆ. ಪ್ರತಿ ಪದಕ್ಕೂ ಉತ್ತರ ನೀಡಲು ಬದ್ಧ ಎಂದು ಹೇಳಿದರು.

ಇದನ್ನು ಕೇಳದ ಬಿಜೆಪಿ ಸದಸ್ಯರು ತಕ್ಷಣವೇ ಚರ್ಚೆ ಕೈಗೆತ್ತಿಕೊಳ್ಳಬೇಕು ಎಂದು ಆಗ್ರಹಿಸಿದರೆ, ಹಲವರು ಸರ್ಕಾರದ ವಿರುದ್ಧ ಘೋಷಣೆ ಮೊಳಗಿಸಿದರು. ಪ್ರತಿಯಾಗಿ ಕಾಂಗ್ರೆಸ್ ಸದಸ್ಯರು ಕೂಡ ಬಿಜೆಪಿ ವಿರುದ್ಧ ಘೋಷಣೆ ಹಾಕತೊಡಗಿದರು. ಇದರಿಂದ ಗದ್ದಲದ ವಾತಾವರಣ ಸೃಷ್ಟಿಯಾದ ಪರಿಣಾಮ ಸಭಾಧ್ಯಕ್ಷ ಖಾದರ್ ಕಲಾಪವನ್ನು ಅಲ್ಪ‌ ಕಾಲಾವಧಿಗೆ ಮುಂದೂಡಿದರು.

ಅತ್ತ ವಿಧಾನ ಪರಿಷತ್ ನಲ್ಲೂ  ಗ್ಯಾರಂಟಿ ಯೋಜನೆಗಳ ಜಾರಿಗೆ ವಿಳಂಬ ಮಾಡುತ್ತಿರುವುದರ ಕುರಿತು ಚರ್ಚೆಗೆ ಅವಕಾಶ ಮಾಡಬೇಕೆಂದು ಆಗ್ರಹಿಸಿ ಬಿಜೆಪಿ‌ ಸದಸ್ಯರು ಧರಣಿ ನಡೆಸುವ  ಮೂಲಕ ಕೋಲಾಹಲ ಸೃಷ್ಟಿಸಿದ್ದರಿಂದ  ಕಲಾಪವನ್ನು ಮುಂದೂಡಿದ ಪ್ರಸಂಗ ನಡೆಯಿತು.

ಕಲಾಪ ಆರಂಭವಾಗುತ್ತಿದ್ದಂತೆ ಹಿರಿಯ ಸದಸ್ಯ ಕೋಟಾ ಶ್ರೀನಿವಾಸ್ ಪೂಜಾರಿ ವಿಷಯ ಪ್ರಸ್ತಾಪಿಸಿ 5 ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ವಿಳಂಬ ಮಾಡುತ್ತಿರುವ ಕುರಿತು ಚರ್ಚೆಗೆ ಅವಕಾಶ ಮಾಡಿಕೊಡಬೇಕೆಂದು ಮನವಿ ಮಾಡಿದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಕಂದಾಯ ಸಚಿವ ಕೃಷ್ಣಭೈರೇಗೌಡ, ಪ್ರತಿಪಕ್ಷಗಳ ಬೇಡಿಕೆಗೆ ತೀವ್ರ ವಿರೋಧ ವ್ಯಕ್ತಪಡಿಸಿ ಸದನವು ನಿಯಮಗಳ ಅನುಸಾರವಾಗಿ ನಡೆಯಬೇಕು. ಮೊದಲು ಪ್ರಶ್ನೋತ್ತರ, ಶೂನ್ಯವೇಳೆ, ಬಳಿಕ ಉಪಸಭಾಪತಿಗಳು ಬಯಸಿದರೆ ನಿಲುವಳಿ ಸೂಚನೆ ಗಮನಕ್ಕೆ ತರಬೇಕು. ಅದು ಎಷ್ಟರಮಟ್ಟಿಗೆ ನಡೆಯಬೇಕು. ಇದು ಆಡಳಿತ ನಡೆಸಿದ ಬಿಜೆಪಿಯವರಿಗೆ ಗೊತ್ತಿಲ್ಲವೇ ಎಂದು ಪ್ರಶ್ನಿಸಿದರು.

ಇದಕ್ಕೆ ಬಿಜೆಪಿ ಸದಸ್ಯರು ವಿರೋಧ ವ್ಯಕ್ತಪಡಿಸಿದರೆ, ಆಡಳಿತ ಪಕ್ಷದ ಸದಸ್ಯರು ಎದ್ದು ನಿಂತು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಈ ವೇಳೆ ಪರಸ್ಪರರ ನಡುವಿನ ವಾಕ್ಸಮರ ತೀವ್ರಗೊಂಡು, ಬಿಜೆಪಿ ಸದಸ್ಯರು ಸಭಾಪತಿಗಳ ಪೀಠದ ಮುಂದೆ ಧರಣಿ ಆರಂಭಿಸಿ ಘೋಷಣೆ ಮೊಳಗಿಸಿದರು. ಪ್ರತಿಯಾಗಿ ಕಾಂಗ್ರೆಸ್ ಸದಸ್ಯರು ಘೋಷಣೆ ಕೂಗತೊಡಗಿದ್ದರಿಂದ ಸದನದಲ್ಲಿ ಕೋಲಾಹಲದ ವಾತಾವರಣ ಸೃಷ್ಟಿಯಾಯಿತು.

ಸಭಾಪತಿ ಪೀಠದಲ್ಲಿದ್ದ ಎಂ.ಕೆ.ಪ್ರಾಣೇಶ್ ಪರಿಸ್ಥಿತಿ ನಿಭಾಯಿಸಲು ಮಾಡಿದ ಎಲ್ಲಾ ಪ್ರಯತ್ನ ವಿಫಲವಾದ ಪರಿಣಾಮ ಕಲಾಪವನ್ನು ಅಲ್ಪಕಾಲಾವಧಿಗೆ ಮುಂದೂಡಿದರು.

Leave a Reply