ಬೆಂಗಳೂರು: ಮಾದಿಗ ಸಮುದಾಯ ಸರ್ಕಾರದಿಂದ ರಕ್ಷಣೆ ಪಡೆಯಲು ಕಾನೂನು ಬದ್ಧವಾಗಿ ಅಧಿಕಾರ ಹೊಂದಿದ್ದಾರೆ. ರಾಜಕೀಯ ದ್ವೇಷದಿಂದ ಈ ಸಮುದಾಯ ಕಡೆಗಣಿಸದಿರಿ ಎಂದು ಜನಪರ ಚಿಂತಕ ದಾಸನೂರು ಕೂಸಣ್ಣ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ. ಆ ಪತ್ರದ ಪೂರ್ಣ ಪಾಠ ಈ ಕೆಳಗಿನಂತಿದೆ.
ಶ್ರೀ ಸಿದ್ದರಾಮಯ್ಯ,
ಮಾನ್ಯ ಮುಖ್ಯ ಮಂತ್ರಿಗಳು,
ಕರ್ನಾಟಕ ಸರ್ಕಾರ, ಬೆಂಗಳೂರು
ಮಾನ್ಯರೇ,
ವಿಷಯ: ಮಾದಿಗ ಸಮುದಾಯ ಸರ್ಕಾರದಿಂದ ರಕ್ಷಣೆ ಪಡೆಯಲು ಕಾನೂನು ಬದ್ಧವಾಗಿ ಅಧಿಕಾರ ಹೊಂದಿದ್ದಾರೆ. ರಾಜಕೀಯ ದ್ವೇಷದಿಂದ ಈ ಸಮುದಾಯ ಕಡೆಗಣಿಸದಿರಿ
ನಿಮ್ಮ ಸರ್ಕಾರ ಅಸ್ತಿತ್ವಕ್ಕೆ ಬಂದ ಮುಂಜಾನೆಯ ಬೆಳಕಿನಲ್ಲಿ ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳು ಗಗನ ಚುಂಬಿಯಂತೆ ಮೇಲೆರುತ್ತಿವೆ. ಚಿತ್ರದುರ್ಗದ ಕಾವಾಡಿಗರ ಹಟ್ಟಿಯಲ್ಲಿ ಆಗಿರುವ ಘಟನೆ ಯಾವ ಸಂವಿಧಾನ ಪ್ರಿಯರೂ ಸಮ್ಮತಿಸುವುದಿಲ್ಲ.
ಕಲ್ಯಾಣ ಕರ್ನಾಟಕ ಮತ್ತು ಮಧ್ಯಮ ಕರ್ನಾಟಕ ಜಿಲ್ಲೆಗಳಲ್ಲಿ ವಾಸಿಸುವ ಬಹುಸಂಖ್ಯಾತ ಮಾದಿಗ ಸಮುದಾಯ ಪ್ರತಿ ದಿನವೂ ಒಂದಿಲ್ಲೊಂದು ರೀತಿಯಲ್ಲಿ ಬಹಿರಂಗವಾಗಿ ಅಸ್ಪ್ರಶ್ಯತೆ ಅನುಭವಿಸುವ ಜೊತೆಗೆ ದೌರ್ಜನ್ಯ ಪ್ರಕರಣಗಳ ಭೀಕರತೆಯಲಿ ಬದುಕುತ್ತಿದ್ದಾರೆ ಆದರೂ ಸರಕಾರದ ಕಣ್ಣಿಗೆ ಕಾಣುತ್ತಿಲ್ಲವೆ? ದೌರ್ಜನ್ಯ ಎಗ್ಗಿಲ್ಲದೆ ಜರುಗುತ್ತವೆ ಅಂದರೆ ಆಡಳಿತ ಯಂತ್ರ ಏನು ಮಾಡುತ್ತಿದೆ ಎಂದು ತಿಳಿಯದಾಗಿದೆ.
ನಿಮ್ಮ ಸರ್ಕಾರದಲ್ಲಿ ಗೃಹ ಸಚಿವ ಮತ್ತು ಸಮಾಜ ಕಲ್ಯಾಣ ಇಲಾಖೆ ಸಚಿವ ಸಹ ದಲಿತ ಸಮುದಾಯದವರು. ಉತ್ತರ ಕರ್ನಾಟಕದ ಪ್ರದೇಶದಲ್ಲಿ ಆಗುತ್ತಿರುವ ದೌರ್ಜನ್ಯ ಪ್ರಕರಣಗಳ ಸಂಬಂಧವಾಗಿ ಚರ್ಚಿಸಲು ಸೌಜನ್ಯಕ್ಕೂ ಆ ಪ್ರದೇಶಗಳಿಗೆ ಭೇಟಿ ನೀಡದಿರುವುದು ಯಾವ ಮತ್ಸರದ ಸಾಮಾಜಿಕ ಸಂಕೇತ ಎಂಬುದನ್ನು ನೀವೇ ಹೇಳಿ ಬಿಡಿ.
ಕಾಂಗ್ರೆಸ್ ಪಕ್ಷದ ಬೆಳೆವಣಿಗೆಗೆ ಮಾದಿಗ ಮತ್ತು ಅದರ ಉಪ ಸಮುದಾಯಗಳು ಪರಿವರ್ತನೆಗೆ ಸ್ಪಂದನೆ ನೀಡಿರುವ ಕಾರಣ ನಿಮಗೆ ಶೇ. 42ರಷ್ಟು ಮತದಾನ ಬಂದಿರೋದು. ಇದನ್ನು ಮತಗಟ್ಟೆಯ ಅಂಕಿ ಅಂಶಗಳು ದೃಢವಾಗಿಸಿವೆ. ಅಥವಾ ಗೆದ್ದಿರುವ ನಿಮ್ಮ ಪಕ್ಷದ ಯಾವ ಶಾಸಕರೂ ಅಲ್ಲಗಳೆಯಲು ಸಾಧ್ಯವಿಲ್ಲ. ಅಥವಾ ಮಾದಿಗರು ಮತದಾನ ಮಾಡದಿದ್ದರೂ ಸಹ ಚುನಾಯಿತ ಸರಕಾರ ಆಡಳಿತ ನಡೆಸುವಾಗ ಸರ್ವರೂ ಸಮಾನರೆಂದು ಗೌರವಿಸಬೇಕು. ಇದುವೇ ಉದಾತ್ತ ಸಾರ್ವಜನಿಕ ಆಡಳಿತ ಮಂತ್ರಗಳು.
ಇಂದು ಅಸ್ಪ್ರಶ್ಯತೆ ಹಾಗೂ ದೌರ್ಜನ್ಯ ನಿಯಂತ್ರಣಕ್ಕೆ ಬೇಕಾದ ಮನಃಪರಿವರ್ತನೆ ಈ ಸಮುದಾಯದ ಕೇರಿಗಳಲ್ಲಿ ಆಗಬೇಕೆಂದು ಸರಕಾರ ಬಯಸಿದಂತೆ ಇದೆ. ಶೂದ್ರರು ಬಳುವಳಿಯ ಜಾತಿವಾದದಿಂದ ನರಳುತ್ತಿರುವ ಜನರಿಗೆ ಕಾನೂನಿನ ಪ್ರಕಾರ ಪಾಠ ಮಾಡುವ ನಾಯಕತ್ವ ಬೇಕಿದೆ. ಉದಾಹರಣೆಗೆ ಚಿತ್ರದುರ್ಗ ಜಿಲ್ಲೆಯ ಅಡವಿ ರಾಮೋಹಳ್ಳಿಯ ದೌರ್ಜನ್ಯ ಪ್ರಕರಣದಲ್ಲಿ ಕುರುಬರು ಮತ್ತು ಒಕ್ಕಲಿಗರು ಸಮಭಾಗಿಗಳಾಗಿದ್ದಾರೆ. ಇದರ ಸಂದೇಶ ಏನು ಹೇಳುತ್ತದೆ?
ಸಮಾಜ ಕಲ್ಯಾಣ ಇಲಾಖೆ ಸಚಿವರು ಏಕೆ ಮಾದಿಗ ಸಮುದಾಯ ರಾಜ್ಯಾದ್ಯಂತ ಇಷ್ಟೊಂದು ಅಪಮಾನ ಮತ್ತು ದೌರ್ಜನ್ಯ ಅನುಭವಿಸುತ್ತಿರುವ ಸನ್ನಿವೇಶದಲ್ಲಿ ಅವರೇಕೆ ಮೌನವಾಗಿಯೇ ಇದ್ದಾರೆ. ಇಂದು ಅವರು ಅನುಸರಿಸುವ ಸಂವಿಧಾನ ನಡೆಯ ಧೋರಣೆ ಅನ್ನಬಹುದೇ ಹೇಳಿ.
ರಾಜ್ಯದ ಇತರೇ ಜಿಲ್ಲೆಯ ಭೂಭಾಗಗಳಲ್ಲಿ ವಾಸಿಸುವ ಸಮಸ್ತ ದಲಿತರನ್ನು ಸಮಾನ ದೃಷ್ಟಿಯಿಂದ ನೋಡಬೇಕು ಎಂದು ನೀವು ಹೇಳಿದ ಆಡಳಿತ ಸಾಮರಸ್ಯದ ವಾಕ್ಯ ಇಷ್ಟು ಬೇಗ ತೆರೆಮರೆಗೆ ಸರಿಯಬೇಕೆ? ಮುಖ್ಯಮಂತ್ರಿಗಳು ಪ್ರತಿಯೊಂದು ಘಟನೆಗಳಿಗೆ ಉತ್ತರದಾಯಿತ್ವ ಹೊಂದಿದ್ದಾರೆ ಅನ್ನುವುದಾದರೆ ಗೃಹ ಮತ್ತು ಸಮಾಜ ಕಲ್ಯಾಣ ಇಲಾಖೆ ಸಚಿವರ ಇರುವಿಕೆ ಬೇಕಿತ್ತಾ ಈ ರಾಜ್ಯದಲ್ಲಿ?
ರಾಜ್ಯಾದ್ಯಂತ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರು ನಿಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳ ಜೊತೆ ಅವರಿಗೆ ಸಾಮಾಜಿಕ ಭದ್ರತೆಯ ಗ್ಯಾರಂಟಿ ಸರ್ಕಾರದ ಅಭಯವಾಗಬೇಕಿದೆ. ಈ ನಿಟ್ಟಿನಲ್ಲಿ ತಾವು ಜಿಲ್ಲಾ ಆಡಳಿತಗಳು ನನ್ನು ಸಜ್ಜುಗೊಳಿಸಲು ಮುಂದಾಗಬೇಕು. ಈ ಪರಿಸ್ಥಿತಿ ಹಾಗೆಯೇ ಮುಂದುವರಿದರೆ ನಿಮ್ಮ ಗ್ಯಾರಂಟಿ ಯೋಜನೆ ಫಲಶೃತಿ ಹೊಳೆಯಲ್ಲಿ ಹುಣಸೆಹಣ್ಣು ಸರಸ ಸೇರಿದಂತಾಗುತ್ತದೆ.
ದಯಮಾಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಜನರು ಇಂದು ಸಾಮಾಜಿಕ ಭದ್ರತೆ ಗ್ಯಾರಂಟಿ ಯೋಜನೆಗಳ ಜಾರಿಗಾಗಿ ಕಾಯುತ್ತಾ ನಿಂತಿದ್ದಾರೆ. ಅವುಗಳನ್ನು ಆದಷ್ಟು ಬೇಗ ಕರುಣುಸುತ್ತೀರಾ ಎಂದು ಭಾವಿಸಿರುವೆ. ಅಥವಾ ಮಾದಿಗ ಸಮುದಾಯ ಸರ್ಕಾರದಿಂದ ರಕ್ಷಣೆ ಪಡೆಯಲು ಆಗದೆಂದು ಹೇಳಿ ಬಿಡಿ. ನಿಮ್ಮ ಸರ್ಕಾರದ ಬಾಗಿಲಿಗೆ ಯಾರೂ ಬರುವುದಿಲ್ಲ. ಪ್ರತಿ ಜಿಲ್ಲೆಯ ಜನರು ನನಗೆ ತೋಡಿಕೊಂಡ ಧರ್ಮಸಂಕಟಗಳನ್ನು ಈ ಸಾಮಾಜಿಕ ಜಾಲತಾಣಗಳಲ್ಲಿ ನಿಮಗೆ ಮನವರಿಕೆ ಮಾಡಿಕೊಡುವುದಕ್ಕೆ ಪ್ರಯತ್ನ ಮಾಡಿರುವೆ.
ವಂದನೆಗಳೊಂದಿಗೆ
ಇಂತು ನಿಮ್ಮವ
- ದಾಸನೂರು ಕೂಸಣ್ಣ




