ಬೆಂಗಳೂರು: ಆರ್ಥಿಕವಾಗಿ, ಸಾಮಾಜಿಕವಾಗಿ ಮತ್ತು ರಾಜಕೀಯವಾಗಿ ಹಿಂದುಳಿದಿರುವ ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದ ಪ್ರಜ್ಞಾವಂತ ಪ್ರತಿನಿಧಿಯನ್ನು ವಿಧಾನಪರಿಷತ್ ಗೆ ನಾಮನಿರ್ದೇಶನ ಮಾಡುವಂತೆ ಸರ್ಕಾರಕ್ಕೆ ಆಗ್ರಹ ವ್ಯಕ್ತವಾಗಿದೆ.
ಈ ಸಂಬಂಧ ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿರುವ ಕರ್ನಾಟಕ ರಾಜ್ಯ ಮುಸ್ಲಿಂ ಜನಾಂಗದ ಜಾಗೃತ ವೇದಿಕೆ, ಸಾಮಾಜಿಕ ನ್ಯಾಯದ ಧ್ಯೇಯೋದ್ದೇಶ ಎಲ್ಲಾ ಸಮುದಾಯಗಳಿಗೂ ಸಮಾನವಾಗಿ ದೊರೆಯಬೇಕು ಎನ್ನುವ ನಮ್ಮ ಸಂವಿಧಾನ ಮೂಲ ಉದ್ದೇಶದಂತೆ ನಮ್ಮ ಅಲ್ಪಸಂಖ್ಯಾತ ಮುಸಲ್ಮಾನ ಸಮುದಾಯವನ್ನೂ ರಾಜಕೀಯವಾಗಿ ಸಮಾನವಾಗಿ ಪರಿಗಣಿಸಿದಾಗ ಮಾತ್ರ ನಮ್ಮ ಸಮುದಾಯದ ಆಮೂಲಾಗ್ರ ಅಭಿವೃದ್ಧಿ ಸಾಧ್ಯವಿದೆ. ಸರ್ವ ಸಮುದಾಯಗಳ ಹಿತರಕ್ಷಣೆ ಮಾಡಬಹುದಾದ ಸೈದ್ಧಾಂತಿಕ ಬದ್ಧತೆಯ ಪಕ್ಷ ಎನಿಸಿಕೊಂಡಿರುವ ಕಾಂಗ್ರೆಸ್ ನಿಂದ ಇದು ಸಾಧ್ಯವಿದೆ ಎಂದು ನಮ್ಮ ನಿರೀಕ್ಷೆಯಿತ್ತು ಎಂದು ಹೇಳಿದೆ.
ಆದರೆ, ಅಪರಾಧ ಹಿನ್ನೆಲೆಯಿರುವ, ಆರ್ಥಿಕ ಅಪರಾಧ ಮನಿ ಲಾಂಡ್ರಿಂಗ್ ತರಹದ ವಂಚನೆಯ ಚರಿತ್ರೆ ಹೊಂದಿರುವ ವ್ಯಕ್ತಿಗಳಿಗೆ ವಿಧಾನಪರಿಷತ್ ಗೆ ನಾಮನಿರ್ದೇಶನ ಮಾಡಲು ತೀರ್ಮಾನಿಸಿರುವ ಸರ್ಕಾರದ ನಿರ್ಧಾರ ನಮಗೆ ಬೇಸರ ಮೂಡಿಸಿದೆ. ಸದ್ಯ ಶೈಕ್ಷಣಿಕ, ಸಹಕಾರ, ಸಾಂಸ್ಕೃತಿಕ ಹಾಗೂ ಸಮಾಜಸೇವಾ ಕ್ಷೇತ್ರಗಳಿಗೆ ಮೀಸಲಿಟ್ಟಿರುವ ಮೂರು ವಿಧಾನಪರಿಷತ್ ಸದಸ್ಯ ಸ್ಥಾನಗಳಿಗೆ ಎಂ.ಆರ್.ಸೀತಾರಾಮ್ ಅವರನ್ನು, ಮನ್ಸೂರ್ ಖಾನ್ ಅವರನ್ನು ಹಾಗೂ ಸುಧಾಮ್ ದಾಸ್ ಅವರನ್ನು ನೇಮಕಗೊಳಿಸುವ ತೀರ್ಮಾನಕ್ಕೆ ನಮ್ಮ ಉಗ್ರ ವಿರೋಧವಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಆಕ್ಷೇಪ ವ್ಯಕ್ತಪಡಿಸಲಾಗಿದೆ.
ರಿಯಲ್ ಎಸ್ಟೇಟ್ ಉದ್ಯಮಿಯಾಗಿರುವ ಎಂ.ಆರ್.ಸೀತಾರಾಮ್ ವಿರುದ್ಧ ಲೋಕಾಯುಕ್ತದಲ್ಲಿ ಮನಿ ಲಾಂಡ್ರಿಂಗ್ ಪ್ರಕರಣವಿದೆ. ಮನ್ಸೂರ್ ಖಾನ್ ಹಾಗೂ ಅವರ ತಂದೆ ರೆಹಮಾನ್ ಖಾನ್ ವಿರುದ್ಧ ಅಮಾನತ್ ಕೋ ಆಪರೇಟೀವ್ ಬ್ಯಾಂಕ್ ಹಗರಣ ನಡೆಸಿದ ಆರೋಪವಿದೆ. ಸುಧಾಮ್ ದಾಸ್ ಅವರು ಐಟಿ ಇಲಾಖೆಯಲ್ಲಿ ಕೆಲಸ ಮಾಡಿ ಸ್ವಯಂ ನಿವೃತ್ತಿ ಪಡೆದು ರಾಜಕಾರಣಕ್ಕೆ ಬಂದವರು, ಕಾಂಗ್ರೆಸ್ ಪಕ್ಷದ ಸಂಘಟನೆಯಲ್ಲಿ ಅವರ ಕೊಡುಗೆಯೇನು ಎನ್ನುವುದು ಯಾರಿಗೂ ಗೊತ್ತಿಲ್ಲ. ಎಲ್ಲಾ ದಲಿತ ನಾಯಕರು ಸುದಾಮ್ ದಾಸ್ ನೇಮಕಾತಿ ವಿರುದ್ಧ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದೆ.
ವಂಶಪಾರಂಪರ್ಯ ರಾಜಕಾರಣ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ. ಸರ್ಕಾರಿ ಹುದ್ದೆಯಲ್ಲಿ ಕೆಲಸ ಮಾಡಿದವರು ರಾಜಕಾರಣ ಕ್ಷೇತ್ರಕ್ಕೆ ಬರುವ ಕೆಟ್ಟ ಪರಂಪರೆಯನ್ನೂ ಕೊನೆಗೊಳಿಸಬೇಕಿದೆ. ಜೊತೆಗೆ ಅಪರಾಧ ಹಿನ್ನೆಯಲ್ಲಿರುವ ಹಾಗೂ ಸಮಾಜಕ್ಕೆ ಯಾವ ಪ್ರಯೋಜನವೂ ಇಲ್ಲದ ವ್ಯಕ್ತಿಗಳನ್ನು ಚಿಂತಕರ ಚಾವಡಿ ಎಂದು ಕರೆಸಿಕೊಂಡಿರುವ ಪರಿಷತ್ ಗೆ ನಾಮನಿರ್ದೇಶನ ಮಾಡುವುದು ಸೂಕ್ತವಲ್ಲ. ಈ ಎಲ್ಲಾ ಕಾರಣಗಳಿಂದ ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಹಾಗೂ ರಾಜಕೀಯವಾಗಿ ಹಿಂದುಳಿದಿರುವ ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದ ಪ್ರಜ್ಞಾವಂತ ನಾಯಕರಾದ ಗುಲ್ಷಾದ್ ಅಹಮದ್ ಅವರನ್ನು ವಿಧಾನ ಪರಿಷತ್ ಸ್ಥಾನಕ್ಕೆ ನಾಮನಿರ್ದೇಶನ ಮಾಡಬೇಕು ಎಂದು ನಮ್ಮ ಕರ್ನಾಟಕ ರಾಜ್ಯ ಮುಸ್ಲಿಂ ಜನಾಂಗದ ಜಾಗೃತಿ ವೇದಿಕೆ ವತಿಯಿಂದ ಸರ್ಕಾರವನ್ನು ಆಗ್ರಹಿಸಲಾಗಿದೆ.
ಗುಲ್ಷಾದ್ ಅಹಮದ್ ಅವರು ಪಿ.ಹೆಚ್.ಡಿ., ಪದವೀಧರರು ಹಾಗೂ ತಮ್ಮದೇ ಶಿಕ್ಷಣ ಸಂಸ್ಥೆಯನ್ನು ನಡೆಸುತ್ತಾ ಬಂದಿದ್ದಾರೆ. ಕಳೆದ ಹಲವು ವರ್ಷಗಳಿಂದ ಅವರು ಕಾಂಗ್ರೆಸ್ ಪಕ್ಷ ಸಂಘಟನೆಯಲ್ಲಿ ಗುರುತರ ಜವಾಬ್ದಾರಿಯನ್ನು ನಿಭಾಯಿಸಿದ್ದಾರೆ. ಹೀಗಾಗಿ ಗುಲ್ಷಾದ್ ಅಹಮದ್ ಅವರ ಆಯ್ಕೆಯನ್ನು ಅತ್ಯಂತ ಗಂಭೀರವಾಗಿ ಸರ್ಕಾರ ಪರಿಗಣಿಸಬೇಕು. ಹೀಗಾದಾಗ ಮಾತ್ರ ಪ್ರಬಲ ಸಮುದಾಯಗಳಾದ ಒಕ್ಕಲಿಗ, ಲಿಂಗಾಯಿತ, ಬ್ರಾಹ್ಮಣ, ಕುರುಬ ಸಮುದಾಯಗಳ ಜೊತೆ ಮುಸ್ಲಿಂ ಜನಾಂಗವೂ ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಂಡಂತಾಗುತ್ತದೆ ಎಂದು ಹೇಳಿದೆ.
ಇದರ ಜೊತೆ ಯಾವ ಕಾರಣದಿಂದ ಎಂ.ಆರ್ ಸೀತಾರಾಮ್, ಮನ್ಸೂರ್ ಖಾನ್ ಹಾಗೂ ಸುಧಾಮದಾಸ್ ಅವರನ್ನು ವಿಧಾನಪರಿಷತ್ ಸದಸ್ಯ ಸ್ಥಾನಕ್ಕೆ ಪರಿಗಣಿಸಬಾರದು ಎನ್ನುವ ಕುರಿತು ರಾಜ್ಯಪಾಲರಿಗೆ ನಾವು ಸಲ್ಲಿಸಿರುವ ಅರ್ಜಿಯನ್ನು ಕಳಿಸುತ್ತಿದ್ದೇವೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.




