ರಾಜ್ಯ ಸರ್ಕಾರದಿಂದ ಕನ್ನಡ ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಮಹತ್ವದ ಕಾರ್ಯ

4 years ago

ಕನ್ನಡವನ್ನು ಎಲ್ಲಾ ಆಡಳಿತ ಹಂತಗಳಲ್ಲಿ ಅಧಿಕೃತ ಭಾಷೆಯನ್ನಾಗಿ ಅನುಷ್ಠಾನಗೊಳಿಸುವ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕವನ್ನು ಸದನದಲ್ಲಿ ಮಂಡಿಸಲಾಗಿದೆ. ಇಂತಹದ್ದೊಂದು ವಿಧೇಯಕವನ್ನು ಮಂಡಿಸುವ ಮೂಲಕ ಕನ್ನಡವನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಮಹತ್ವದ ಕಾರ್ಯಕ್ಕೆ ಮುಂದಾದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಕನ್ನಡ ಮತ್ತು ಸಂಸ್ಕೃತಿ ಸಚಿವರಾದ ಸುನಿಲ್ ಕುಮಾರ್ ಕಾರ್ಕಳ ಅವರನ್ನು ಅಭಿನಂದಿಸುತ್ತೇನೆ.

ವಿಧೇಯಕದ ನಿಯಮಗಳನ್ನು ಗಟ್ಟಿಯಾಗಿ ಅನುಷ್ಟಾನಕ್ಕೆ ತರಲು ಮತ್ತು ನಿಯಮವನ್ನು ಉಲ್ಲಂಘಿಸಿದವರಿಗೆ ದಂಡ ವಿಧಿಸುವವರ ವಿರುದ್ಧ ಶಿಸ್ತು ಕ್ರಮ ಜರುಗಿಸುವ ನಿಟ್ಟಿನಲ್ಲಿ ಸರಕಾರ ಗಟ್ಟಿಯಾದ ನಿರ್ಧಾರಗಳನ್ನು ಕೈಗೊಳ್ಳುತ್ತದೆ ಎಂದು ನಾನು ಭಾವಿಸಿದ್ದೇನೆ.

ಸ್ಥಳೀಯ ಪ್ರಾಧಿಕಾರ ಸಂಘಗಳ ಉದ್ಯೋಗ ಪಡೆದುಕೊಳ್ಳಲು ಕನ್ನಡ ಕಡ್ಡಾಯವಾಗಿರುವುದರಿಂದ ಕನ್ನಡದ ಯುವಕರಿಗೆ ಉದ್ಯೋಗದಲ್ಲಿ ಆದ್ಯತೆ ಸಿಗುವ ಜೊತೆಗೆ, ಪ್ರಾಧಿಕಾರಗಳು ಮತ್ತು ಸಂಘಗಳೊಡನೆ ವ್ಯವಹರಿಸುವ ಕನ್ನಡಿಗರಿಗೂ ಕೂಡ ಅನುಕೂಲವಾಗಲಿದೆ.

ಆಡಳಿತದಲ್ಲಿ ಕನ್ನಡದ ಬಳಕೆ ದಶಕಗಳ ಕನಸು, ಈ ಕನಸು ಇಂದಿಗೂ ಕನಸಾಗಿಯೇ ಉಳಿದಿದೆ, ಈ ವಿಧೇಯಕದ ಮೂಲಕವಾದರೂ ಆಡಳಿತದಲ್ಲಿ ಕನ್ನಡದ ಬಳಕೆಗೆ ಶಕ್ತಿ ಸಿಗಲಿ. ಕನ್ನಡ ಬಳಸದ ಅಧಿಕಾರಿಗಳು ಕರ್ನಾಟಕಕ್ಕೆ ಬೇಡ. ಅಂಥವರ ಮೇಲೆ ಶಿಸ್ತುಕ್ರಮ ಜರುಗಿಸಲಿ.

ತಂತ್ರಜ್ಞಾನದ ಮೂಲಕ ಕನ್ನಡಕ್ಕೆ ಹೆಚ್ಚಿನ ಪ್ರಾಮುಖ್ಯತೆ ದೊರಕಿಸಿಕೊಡಲು ಹೊರಟಿರುವುದೂ ಸಹ ಕನ್ನಡವನ್ನು ಗಟ್ಟಿಯಾಗಿ ಕಟ್ಟಿ ಮುಂದಿನ ಪೀಳಿಗೆಗೆ ಕೊಡಲು ಸಹಕಾರಿಯಾಗಿದೆ. ವಿಧೇಯಕ ತಂದಿರುವುದು ಎಷ್ಟು ಮುಖ್ಯವೋ ಅದನ್ನು ಜಾರಿಮಾಡುವುದು ಅಷ್ಟೇ ಮುಖ್ಯ. ಸರ್ಕಾರ ಅಧಿಕಾರಿಗಳ ನಡೆಯ ಮೇಲೆ ಕಣ್ಗಾವಲು ಇಟ್ಟು ಅನುಷ್ಠಾನಗೊಳಿಸಬೇಕು.

ಕನ್ನಡ-ಕನ್ನಡಿಗ-ಕರ್ನಾಟಕದ ಹಿತಾಸಕ್ತಿಯನ್ನು ಕಾಪಾಡಲು ವಿಶೇಷ ಕಾಳಜಿಯೊಂದಿಗೆ ಕಾನೂನು ರೂಪಿಸುವ ಧೈರ್ಯ ಮಾಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಮತ್ತೊಮ್ಮೆ ಅಭಿನಂದನೆಗಳು.

– ಟಿ.ಎ.ನಾರಾಯಣಗೌಡ, ರಾಜ್ಯಾಧ್ಯಕ್ಷ, ಕರ್ನಾಟಕ ರಕ್ಷಣಾ ವೇದಿಕೆ

Leave a Reply