ಅನ್ನಭಾಗ್ಯ ಯೋಜನೆ ನಿಲ್ಲಿಸಲು ಬಿಜೆಪಿಗರು ನೆಪಹುಡುಕುತ್ತಿರಿತ್ತಾರೆ: ಸಿದ್ದರಾಮಯ್ಯ
40% ಕಮಿಷನ್ ಈಗ 50%ಗೆ ಏರಿದೆಯಂತೆ
ಕತ್ತಿಯವರೇ ಬಡವರ ಹೊಟ್ಟೆಗೆ ಹೊಡೆಯುವ ನಿಮ್ಮ ದುಷ್ಟತನದ ಕತ್ತಿಯನ್ನು ಒರೆಯಲ್ಲಿಟ್ಟುಬಿಡಿ
ಬೆಂಗಳೂರು: ಅನ್ನಭಾಗ್ಯ ಯೋಜನೆಗೆ ಅಡ್ಡಗಾಲು ಹಾಕುತ್ತಲೇ ಇದ್ದ ಬಿಜೆಪಿ ನಾಯಕರು ಈ ಯೋಜನೆ ನಿಲ್ಲಿಸಲು ನೆಪಗಳನ್ನು ಹುಡುಕುತ್ತಿರುತ್ತಾರೆ. ರಾಜ್ಯದ ಆಹಾರ ಸಚಿವ ಉಮೇಶ್ ಕತ್ತಿ ಅವರಿಗೆ ಅಂತಹದ್ದೊಂದು ನೆಪ ಸುಪ್ರೀಂ ಕೋರ್ಟ್ ನ ಆದೇಶದಲ್ಲಿ ಸಿಕ್ಕಿದ್ದಕ್ಕೆ ಸಂತಸ ಪಟ್ಟಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ರಾಜಕೀಯ ಪಕ್ಷಗಳ ಉಚಿತ ಕೊಡುಗೆ ಕುರಿತು ಸುಪ್ರೀಂ ಕೋರ್ಟ್ ಪರಿಶೀಲನೆ ನಡೆಸುತ್ತಿರುವ ಕುರಿತು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಉಮೇಶ್ ಕತ್ತಿ ಪ್ರತಿಕ್ರಿಯೆ ನೀಡಿದ್ದು, ಕೇಂದ್ರ ಸರ್ಕಾರ ಒಪ್ಪಿದರೆ ಅನ್ನ ಭಾಗ್ಯ ಯೋಜನೆ ನಿಲ್ಲಿಸುವುದಾಗಿ ಹೇಳಿಕೆ ನೀಡಿದ್ದಾರೆ. ಈ ಕುರಿತು ಜಾಲತಾಣಗಳಲ್ಲಿ ಪ್ರತಿಕ್ರಿಯೆ ನೀಡಿರುವ ಸಿದ್ದರಾಮಯ್ಯ, ರೂ.2,65,000 ಕೋಟಿ ಗಾತ್ರದ ಬಜೆಟ್ ನಲ್ಲಿ 2022-23ರ ಸಾಲಿನ ಅನ್ನಭಾಗ್ಯ ಯೋಜನೆಗೆ ಮೀಸಲಿಟ್ಟಿರುವ ಹಣ ರೂ.2,800 ಕೋಟಿ ಮಾತ್ರ. ಇಷ್ಟು ಹಣವನ್ನು ಉಳಿತಾಯ ಮಾಡಲು ನೆಪಗಳನ್ನು ಹುಡುಕುತ್ತಿರುವ ಸರ್ಕಾರ ಮತ್ತು ಸಚಿವರ ಮನಸ್ಸಿನಲ್ಲಿ ಬಡವರ ಬಗ್ಗೆ ಎಷ್ಟೊಂದು ದ್ವೇಷ-ಅಸಹನೆ ಇರಬಹುದು? ಎಂದಿದ್ದಾರೆ.
ಅಭಿವೃದ್ದಿ ಚಟುವಟಿಕೆಗಳು ಸ್ಥಗಿತಗೊಂಡು, ಕಲ್ಯಾಣ ಕಾರ್ಯಕ್ರಮಗಳು ದುಡ್ಡಿಲ್ಲದೆ ನೆನೆಗುದಿಗೆ ಬೀಳಲು ಕಾರಣ ಈ ಸರ್ಕಾರದ ಕಮಿಷನ್ ದಾಹ. 40% ಕಮಿಷನ್ ಈಗ 50%ಗೆ ಏರಿದೆಯಂತೆ. ಉಮೇಶ್ ಕತ್ತಿಯಂತಹ ಬೇಜವಾಬ್ದಾರಿ ಸಚಿವರು ಅನ್ನಭಾಗ್ಯ ಯೋಜನೆ ನಿಲ್ಲಿಸಲು ಹೊರಟಿದ್ದಾರೆ ಎಂದಿದ್ದಾರೆ.
ಸಚಿವ ಉಮೇಶ್ ಕತ್ತಿಯವರೇ ಬಡವರ ಹೊಟ್ಟೆಗೆ ಹೊಡೆಯುವ ನಿಮ್ಮ ದುಷ್ಟತನದ ಕತ್ತಿಯನ್ನು ಒರೆಯಲ್ಲಿಟ್ಟುಬಿಡಿ. ಅನ್ನಭಾಗ್ಯ ಯೋಜನೆಯನ್ನು ನಿಲ್ಲಿಸುವ ಯೋಚನೆ ಮಾಡಿದರೂ ಬಡವರ ಹಸಿವಿನ ಬೆಂಕಿಯಲ್ಲಿ ಬೆಂದು ಹೋಗುತ್ತೀರಿ, ಎಚ್ಚರ ಇರಲಿ…!! ಎಂದಿದ್ದಾರೆ.



