ಆರೋಗ್ಯ, ಪೌಷ್ಟಿಕ ಸಮೀಕ್ಷೆ ಹೊರೆ ಹಾಕಿ ಅಂಗನವಾಡಿ ನೌಕರರ ಆರೋಗ್ಯ ಕೆಡಿಸುವ ಸರಕಾರ: ಬಿ.ಎಂ.ಭಟ್

3 years ago

ಮಂಗಳೂರು: ಅಂಗನವಾಡಿ ನೌಕರರಿಗೆ ಪದೇ ಪದೇ  ಹೆಚ್ಚುವರಿ ಇಲಾಖೇತರ ಕೆಲಸ‌ ನೀಡಿ ಮಹಿಳಾ‌ ನೌಕರರ ಅನಾರೋಗ್ಯಕ್ಕೆ‌ ಕಾರಣವಾಗುವ ಮಹಿಳಾ ಇಲಾಖೆಯ ನಡೆ ಖಂಡನೀಯ. ಆರೋಗ್ಯ ಮತ್ತು ಪೌಷ್ಠಿಕ ಸಮೀಕ್ಷೆಯ ಹೊರೆಯನ್ನು ಅಂಗನವಾಡಿ ನೌಕರರ ಮೇಲೆ ಹೊರಿಸಿ ಅವರ ಆರೋಗ್ಯವನ್ನು ಕೆಡಿಸಲು ರಾಜ್ಯ ಸರಕಾರ ಮುಂದಾಗಿದೆ ಎಂದು CITU ರಾಜ್ಯ ಸಮಿತಿ ಸದಸ್ಯ ಬಿ.ಎಂ.ಭಟ್ ಆಕ್ರೋಶ ವ್ಯಕ್ತಪಡಿಸಿದರು.

ಮಂಗಳೂರಿನ ಯುವವಾಹಿನಿ ಸಭಾಭವನದಲ್ಲಿ ಜರುಗಿದ  ಅಂಗನವಾಡಿ ನೌಕರರ ಜಿಲ್ಲಾ ಮಟ್ಟದ ಪ್ರತಿಭಟನಾ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು, ಕಳೆದ ಫೆಬ್ರವರಿಯಲ್ಲಿ ಸರಕಾರ ಆರೋಗ್ಯ ಮತ್ತು ಪೌಷ್ಟಿಕ ಸರ್ವೆ ಮಾಡಲು ನಮ್ಮ ಇಲಾಖೆಗೆ  ಜವಾಬ್ದಾರಿ ನೀಡಿದ್ದನ್ನು ನಮ್ಮ ಸಂಘ ಪ್ರಬಲವಾಗಿ ವಿರೋದಿಸಿತ್ತು. ಚುನಾವಣೆ ನಿಮಿತ್ತ ಮುಂದೂಡಲ್ಪಟ್ಟ ಸರ್ವೆ ಕಾರ್ಯವನ್ನು ಈಗ ಮತ್ತೆ ಅಂಗನವಾಡಿ ನೌಕರರ ಮೇಲೆ ಹೊರಿಸಲು ಮುಂದಾಗಿದೆ. ನಮ್ಮ ಐಸಿಡಿಎಸ್ ಯೋಜನೆಯ ಕೆಲಸಗಳ ಹೊರೆಯೇ ಸಾಕಷ್ಟು ಇರುವಾಗ ಹೆಚ್ಚುವರಿ ಕೆಲಸ ಮಾಡೋದು ಹೇಗೆ ? ಜಗತ್ತಿನಲ್ಲಿ ಅತ್ಯಂತ‌ ಹೆಚ್ಚು ದುಡಿಯುವವರೆಂದರೆ ಮಹಿಳೆಯೇ. ಇಡೀ ಸಮಾಜ ಮಹಿಳೆಯ ಋಣ ತೀರಿಸಲಾಗದು.ಹೊಸ ಜೀವಿಯ ಜನನಕ್ಕೆ ಒಮ್ಮೆ ಸತ್ತು ಬದುಕುವ ಮಹಿಳೆಯರನ್ನು ಈ ರೀತಿ ಶೋಷಿಸುತ್ತಿರುವುದು ಯಾವುದೇ ಸರಕಾರಕ್ಕೆ ಶೋಬೆ ತರಲಾರದು ಎಂದು ಟೀಕಿಸಿದರು.

CITU ಜಿಲ್ಲಾಧ್ಯಕ್ಷ ಜೆ. ಬಾಲಕೃಷ್ಣ ಶೆಟ್ಟಿ ಮಾತನಾಡಿ, ಅಂಗನವಾಡಿ ನೌಕರರ ಬವಣೆಯನ್ನು ಸರಕಾರದ‌ ಗಮನಕ್ಕೆ ತಂದಿದ್ದರೂ ಅದಕ್ಕೆ ಸೂಕ್ತ ಉತ್ತರ ನೀಡದೆ, ಪರಿಹಾರವನ್ನೂ ಸೂಚಿಸದೆ, ಇಲಾಖೆ ಕೇವಲ ನೋಟೀಸು ಜಾರಿ ಮಾಡಿ ನೌಕರರನ್ನು ಬೆದರಿಸುವುದು ಮಹಿಳಾ ಶೋಷಣೆಯ ಪರಮಾವಧಿ ಎಂದು ಹೇಳಿದರು

DYFI ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಮಾತನಾಡಿ, ಅಂಗನವಾಡಿ ತಾಯಂದಿರ ಹೋರಾಟ ಇಡೀ ದೇಶಕ್ಕೆ ಮಾದರಿಯಾಗಿದ್ದು, ಯಾವುದೇ ಬದುಕಿನ ಪ್ರಶ್ನೆಯಲ್ಲಿ ಬೀದಿಗಿಳಿದು ಹೋರಾಟ ನಡೆಸಿದರೆ ಜಿಲ್ಲೆಯ ಯುವಜನತೆ ಸದಾ ನಿಮ್ಮೊಂದಿಗೆ ಇದ್ದಾರೆ ಎಂದರು.

ಸಮಾರೋಪ ಭಾಷಣ ಮಾಡಿದ CITU ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್, ಸರಕಾರದ ಎಲ್ಲಾ ಯೋಜನೆಗಳನ್ನು ಜನತೆಗೆ ತಲುಪಿಸುವಲ್ಲಿ ಸಕ್ರಿಯ ಪಾತ್ರ ವಹಿಸುವ ಅಂಗನವಾಡಿ ನೌಕರರ ಪ್ರಶ್ನೆಗಳನ್ನು ಇತ್ಯರ್ಥ ಪಡಿಸಲು ಯಾವುದೇ ಸರಕಾರಗಳು ಗಂಭೀರ ಗಮನ ಕೊಡುತ್ತಿಲ್ಲ. ಮುಂಬರುವ ದಿನಗಳಲ್ಲಿ ದ.ಕ. ಜಿಲ್ಲೆಯಾದ್ಯಂತ ಬಲಿಷ್ಠ ಚಳುವಳಿಯನ್ನು ಕಟ್ಟಲು ಈ ಸಮಾವೇಶ ಮುನ್ನುಡಿ ಬರೆಯಬೇಕಾಗಿದೆ ಎಂದು ಹೇಳಿದರು.

ಸಭೆಯ ಅಧ್ಯಕ್ಷತೆಯನ್ನು ಅಂಗನವಾಡಿ ನೌಕರರ ಸಂಘದ ಜಿಲ್ಲಾಧ್ಯಕ್ಷ ರವಿಕಲ ಬಂಟ್ವಾಳ ವಹಿಸಿದ್ದರು. ವೇದಿಕೆಯಲ್ಲಿ ಸಂಘದ ಮುಖಂಡರಾದ ಲಕ್ಷ್ಮಿ, ಗಾಯತ್ರಿದೇವಿ, ರೇಣುಕಾ, ವಸಂತಿ,ಸಾವಿತ್ರಿ ಮುಂತಾದವರು ಉಪಸ್ಥಿತರಿದ್ದರು.

Leave a Reply