ಜನರ ಬದುಕಿನ ಮೇಲೆ ಕ್ರಿಮಿನಲ್ ದಾಳಿ ನಡೆಸುತ್ತಿರುವ ಸರಕಾರವನ್ನು ಕಿತ್ತೆಸೆಯಬೇಕು: ತಪನ್‌ ಸೇನ್‌

3 years ago

ಬೆಂಗಳೂರು: ಕಾರ್ಮಿಕ ಚಳುವಳಿಯು ರೈತ ಚಳುವಳಿಯೊಂದಿಗಿನ ಸಖ್ಯದೊಂದಿಗೆ ಮುನ್ನಡೆಯುತ್ತದೆ ಎಂದು ಸಿಐಟಿಯು ಅಖಿಲ ಭಾರತ ಪ್ರಧಾನ ಕಾರ್ಯದರ್ಶಿ ತಪನ್‌ ಸೇನ್‌ ಹೇಳಿದರು.

ಸೆಂಟರ್‌ ಆಫ್‌ ಇಂಡಿಯನ್‌ ಟ್ರೇಡ್‌ ಯೂನಿಯನ್‌(ಸಿಐಟಿಯು) 17ನೇ ಅಖಿಲ ಭಾರತ ಸಮ್ಮೇಳನ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಸಮ್ಮೇಳನದ ಮೊದಲ ದಿನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತಾಡಿದ ಅವರು,  ದೇಶದ ಆಳುವ ಸರಕಾರಗಳು ನವ ಉದಾರವಾದಿ ನೀತಿಗಳ ಏಜೆಂಟರಂತೆ, ಕಾರ್ಪೋರೇಟ್ ಕಂಪನಿಗಳ ಪರವಾಗಿ ಕೆಲಸ ಮಾಡುತ್ತಿರುವುದರಿಂದ ಜನ ದಿವಾಳಿ ಆಗುತ್ತಿದ್ದಾರೆ. ದೇಶದ ಮುಖ್ಯ ವಾಹಿನಿ ಮಾಧ್ಯಮಗಳ ದೊಡ್ಡ ವಿಭಾಗವೂ ಇದಕ್ಕೆ ಬೆಂಬಲ ನೀಡುತ್ತಿದೆ. ಇಂತಹ ವಿಷಕಾರಿ ನೀತಿಗಳ ಪರಿಣಾಮಗಳ ವಿರುದ್ಧ, ಸರ್ವಾಧಿಕಾರಿ ರೀತಿಯಲ್ಲಿ ನಡೆದುಕೊಳ್ಳುತ್ತಾ, ಜನರ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಕಿತ್ತುಕೊಳ್ಳುತ್ತಿರುವ ಸರಕಾರದ ನೀತಿಗಳು ಜಾರಿಗೊಳ್ಳುತ್ತಿವೆ ಎಂದರು.

ಆಳುವ ಸರ್ಕಾರ ಜನರ ಒಗ್ಗಟ್ಟನ್ನು ಮುರಿಯುವ ವಿಭಜನಕಾರಿ ನೀತಿಗಳನ್ನು ಹೇರುತ್ತಾ ಸಮಾಜದ ಸಾಮಾಜಿಕ ಸಾಮರಸ್ಯವನ್ನು ಹಾಳುಗೆಡಹುತ್ತಿದೆ. ದೇಶದ ಹಿತಾಸಕ್ತಿಗೆ ಮತ್ತು ದುಡಿಯುವ ವರ್ಗದ ಹಿತಗಳಿಗೆ ವಿರುದ್ಧವಾಗಿ ಇಂತಹ ಕ್ರಿಮಿನಲ್ ದಾಳಿಗಳನ್ನು ನಡೆಸುತ್ತಿರುವ ಸರಕಾರವನ್ನು ರೈತ-ಕಾರ್ಮಿಕ ಚಳುವಳಿಯ ಸಖ್ಯದೊಂದಿಗೆ ಅಧಿಕಾರದಿಂದ ಕಿತ್ತೆಸೆಯಲಾಗುವುದು. ಈ ನಿಟ್ಟಿನಲ್ಲಿ ಕಾರ್ಮಿಕ ಹೋರಾಟಗಳನ್ನು ಬಲಪಡಿಸುವ ಕುರಿತು ಸಿಐಟಿಯು ಸಂಘಟನೆಯ 17 ನೇ ಅಖಿಲ ಭಾರತ ಸಮ್ಮೇಳನವು ಗಂಭೀರವಾಗಿ ಚರ್ಚಿಸಲಿದೆ ಎಂದರು.

ದೇಶದ ಹತ್ತು ಕೇಂದ್ರ ಕಾರ್ಮಿಕ ಸಂಘಟನೆಗಳ ಒಕ್ಕೂಟ ಒಂದುಗೂಡಿ ಕಾರ್ಮಿಕರ ಹಕ್ಕುಗಳು, ರೈತರ ಹಕ್ಕುಗಳು ಮಾತ್ರವಲ್ಲ, ದೇಶದ ರಕ್ಷಣೆಗಾಗಿ ದೇಶವಿರೋಧಿ ಕುತಂತ್ರಗಳ ವಿರುದ್ಧ ಹೋರಾಟ ರೂಪಿಸಲಿವೆ. ಇತ್ತೀಚಿನ ಎರಡು ದಿನಗಳ ದೇಶವ್ಯಾಪಿ ಯಶಸ್ವಿ ಮುಷ್ಕರ ಈ ಹೋರಾಟದ ಭಾಗವಾಗಿದೆ. ನಾಲ್ಕು ವರ್ಷಗಳ ಹೋರಾಟದ ಅನುಭವವು – ವಿದ್ಯುತ್ – ಕಲ್ಲಿದ್ದಲು ಮುಂತಾದ ಕ್ಷೇತ್ರದಲ್ಲಿ ಸರಕಾರದ ಧೋರಣೆಗಳನ್ನು ಹಿಮ್ಮೆಟ್ಟಿಸಲು ಸಾಧ್ಯ ಹಾಗೂ ಯಾವುದೇ ರಂಗದಲ್ಲೇ ಇರಲಿ ಹಿಮ್ಮೆಟ್ಟಿಸಲು ಸಾಧ್ಯ ಎಂದು ತೋರಿಸಿಕೊಟ್ಟಿದೆ ಎಂದರು.

ನವ ಉದಾರೀಕರಣ ನೀತಿಗಳ ಸವಾಲು ಕೇವಲ ಕಾರ್ಮಿಕ ವರ್ಗಕ್ಕೆ ಮಾತ್ರ ಸೀಮಿತವಲ್ಲ. ಇದು ಇಡೀ ಮನುಕುಲದ ಮುಂದಿನ ಸವಾಲು. ಪ್ರಜಾಸತ್ತಾತ್ಮಕ ಸಮಾಜಕ್ಕೆ ಮಾರಕ. ಕೆಲವು ಸ್ವದೇಶಿ ಮತ್ತು ವಿದೇಶಿ ಕಾರ್ಪೋರೇಟ್ ಹಿತರಕ್ಷಣೆಗಾಗಿ, ವಿಶಾಲ ಜನ ಸಮುದಾಯಗಳ ಜನರ ಹಿತ ಬಲಿ ಕೊಡಲಾಗುತ್ತಿದೆ. ದೇಶದ ಕಾರ್ಮಿಕ ಚಳುವಳಿಯ ಸರಕಾರವು ದೇಶವನ್ನು ಮಾರಲು ಅವಕಾಶ ನೀಡಲಾಗದು ಎಂದರು.

ಉದ್ಘಾಟನಾ ಸಮಾರಂಭದ ಸಭೆಯ ಸಿ.ಐ.ಟಿ.ಯು. ಅಖಿಲ ಭಾರತ ಅಧ್ಯಕ್ಷೆ ಡಾ. ಕೆ. ಹೇಮಲತಾ ಮಾತನಾಡಿ, ಭಾರತದಲ್ಲಿ ಹೆಚ್ಚುತ್ತಿರುವ ಅಸಮಾನತೆ, ಸಂಪತ್ತಿನ ಕೇಂದ್ರೀಕರಣ, ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಕಾರ್ಮಿಕ ವರ್ಗದ ಐಕ್ಯ ಹೋರಾಟವನ್ನು ಬಲಗೊಳಿಸಲಾಗುವುದು ಎಂದರು.

ಕೇಂದ್ರ ಸರ್ಕಾರ ಅರ್ಥ ವ್ಯವಸ್ಥೆಯನ್ನು ಹಾಳು ಮಾಡುತ್ತಿವೆ

ಐಎನ್‌ಟಿಯುಸಿ ಮುಖಂಡ ಚಂದ್ರಶೇಖರನ್‌ ಮಾತನಾಡಿ, ಕೇಂದ್ರ ಸರ್ಕಾರ ದೇಶದ ಅರ್ಥ ವ್ಯವಸ್ಥೆಗೆ ತುಂಬಾ ಹಾನಿಯುಂಟು ಮಾಡಿದೆ. ಪ್ರತಿಯೊಂದು ಸಮುದಾಯವನ್ನು ವಿಭಜಿಸುತ್ತಿದೆ. ಈ ಹಿಂದಿನ ಸರ್ಕಾರಗಳು ಮಾಡಿದ ಯೋಜನೆಗಳನ್ನು ಸ್ಥಗಿತಗೊಳಿಸಿದೆ ಎಂದರು.

ಜಾಗತೀಕರಣ ಮತ್ತು ಖಾಸಗೀಕರಣ ನೀತಿಗಳಿಂದ ಕಾರ್ಮಿಕ ವರ್ಗ ಇಂದು ಅತ್ಯಂತ ಹೀನಾಯ ಸ್ಥಿತಿಯಲ್ಲಿದೆ. ದೇಶವನ್ನು ಕೋಮುವಾದ ಆವರಿಸಿದೆ. ಕಾರ್ಮಿಕ ಹಕ್ಕುಗಳ ರಕ್ಷಣೆಗಾಗಿ ಇದ್ದ 26 ಕಾನೂನುಗಳನ್ನು ಬದಲಾವಣೆ ಮಾಡಿ ನಾಲ್ಕು ನೀತಿ ಸಂಹಿತೆಗಳನ್ನಾಗಿ ಮಾಡಲಾಗಿದೆ. ಇದರಿಂದ ಕಾರ್ಮಿಕರು ತಮ್ಮ ಹಕ್ಕುಗಳನ್ನು ಕಳೆದುಕೊಂಡಿದ್ದಾರೆ. ದೇಶವಿರೋಧಿ ಕಾರ್ಮಿಕ ವಿರೋಧಿ ಕಾನೂನುಗಳನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ ಎಂದು ಟೀಕಿಸಿದರು.

ಸಾರ್ವಜನಿಕ ಉದ್ದಿಮೆಗಳನ್ನು ಖಾಸಗೀಕರಣಗೊಳಿಸುತ್ತಿದೆ. ಎಲ್ಲಾ ಸಾರ್ವಜನಿಕ ಉದ್ದಿಮೆಗಳನ್ನು ಅಂದರೆ, ವಿಮೆ, ರೈಲ್ವೇ, ರಕ್ಷಣಾ ಇಲಾಖೆ, ಕಲ್ಲಿದ್ದಲು, ಉಕ್ಕು, ಸೇರಿದಂತೆ ಇತರೆ ಕ್ಷೇತ್ರಗಳನ್ನು ಖಾಸಗೀಕರಣಗೊಳಿಸುತ್ತಿರುವುದರಿಂದ ಕಾರ್ಮಿಕರು ಆತಂಕಕ್ಕೆ ಸಿಲುಕಿದ್ದಾರೆ. ಬಿಜೆಪಿಯದೇ ಕಾರ್ಮಿಕರ ಸಂಘಟನೆಯಾದ ಬಿಎಂಎಸ್‌ ಈ ನೀತಿಗಳನ್ನು ವಿರೋಧಿಸುತ್ತಿವೆ ಎಂದರು.

ಕೇಂದ್ರ ಸರ್ಕಾರ ಕೋಮು ಅಜೆಂಡಾವನ್ನು ಜಾರಿಗೊಳಿಸುತ್ತಿದ್ದು, ಇಡೀ ದೇಶವನ್ನು ಇಂದು ಕೋಮು ದಳ್ಳುರಿಯಲ್ಲಿ ತಳ್ಳಿದೆ. ಇದರಿಂದ ಅಮರ್ತ್ಯ ಸೇನ್‌, ರಘುರಾಮ್‌ ರಾಜನ್‌ ಮುಂತಾದ ಆರ್ಥಿಕ ತಜ್ಞರ ಸಲಹೆಗಳನ್ನು ಲೆಕ್ಕಿಸುತ್ತಿಲ್ಲ. ತಮ್ಮದೇ ಆದ ಆರ್ಥಿಕ ನೀತಿಗಳನ್ನು ಜಾರಿಗೊಳಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಕಾರ್ಮಿಕರು ತಮ್ಮ ಹಕ್ಕುಗಳ ರಕ್ಷಣೆಗೆ ಒಗ್ಗೂಡಿ ಹೋರಾಟಗಳನ್ನು ನಡೆಸಬೇಕಾಗಿದೆ ಎಂದರು.

ಎಐಟಿಯುಸಿಯ ಅಮರ್‌ಜಿತ್‌ ಕೌರ್‌ ಮಾತನಾಡಿ, ದೇಶದಲ್ಲಿ ಇಂದಿನ ಪರಿಸ್ಥಿತಿ ತುಂಬಾತುಂಬಾ ವಿಷಮವಾಗಿದೆ. ಸಾರ್ವಜನಿಕ ವಲಯ ಸಂಸ್ಥೆಗಳನ್ನು ಖಾಸಗೀಕರಣ ಮಾಡಲಾಗುತ್ತಿದೆ. ದಿನಗೂಲಿ ನೌಕರರು ಉದ್ಯೋಗ ಸಿಗದೆ ಆತ್ಮಹತ್ಯೆಯ ಹಾದಿ ಹಿಡಿದಿದ್ದಾರೆ. ನಿರುದ್ಯೋಗದ ಪ್ರಮಾಣ ದಿನೇದಿನೇ ಏರಿಕೆ ಕಂಡಿದೆ. ಹಾಗಿದ್ದರೂ ಕೇಂದ್ರ ಸರ್ಕಾರ ಖಾಸಗೀಕರಣದ ಹಾದಿಯನ್ನು ಕೈಬಿಟ್ಟಿಲ್ಲ ಎಂದರು.

ಹೆಚ್‌ಎಂಎಸ್‌ ಸಂಘಟನೆಯ ನಾಗನಾಥ್‌ ಮಾತನಾಡಿ, ಕಾರ್ಮಿಕರ ಹಕ್ಕುಗಳ ಮೇಲೆ ದಾಳಿ ನಡೆಯುತ್ತಿವೆ. ದೇಶದಲ್ಲಿ ಶೋಷಣೆ, ಬಡತನ ಹೆಚ್ಚಾಗುತ್ತಿದೆ. ಇದರ ವಿರುದ್ಧ ಕಾರ್ಮಿಕರು ಒಗ್ಗಟ್ಟಿನಿಂದ ಹೋರಾಟ ನಡೆಸಬೇಕಾಗಿದೆ ಎಂದು ಕರೆ ನೀಡಿದರು.

ಕಾರ್ಮಿಕ ಮುಖಂಡರಾದ ರಾಜೇಂದ್ರ ನಾಯಕ್‌ ಮಾತನಾಡಿ, ಎಲ್ಲಾ ಸಾರ್ವಜನಿಕ ವಲಯಗಳ ಸಂಸ್ಥೆಗಳನ್ನು ಸಂಪೂರ್ಣವಾಗಿ ಮಾರಾಟ ಮಾಡಲಾಗುತ್ತಿದೆ. ಲಕ್ಷಾಂತರ ಕಾರ್ಮಿಕರು ದಿನೇದಿನೇ ಉದ್ಯೋಗ ವಂಚನೆಗೆ ಒಳಗಾಗುತ್ತಿದ್ದಾರೆ. ಆರೋಗ್ಯ, ಶಿಕ್ಷಣ ಸೇರಿದಂತೆ ಎಲ್ಲಾ ವಲಯಗಳು ಖಾಸಗೀಕರಣ ಮಾಡಲಾಗುತ್ತಿದೆ ಎಂದರು.

ಸೇವಾ ಸಂಘಟನೆ ರಾಷ್ಟ್ರೀಯ ಕಾರ್ಯದರ್ಶಿ ಸೂರ್ಯ ಜಾರ್ಜ್‌ ಮಾತನಾಡಿ, ಶೇ. 93ರಷ್ಟು ಇದ್ದ ಅಸಂಘಟಿತರ ಕಾರ್ಮಿಕರ ಸಂಖ್ಯೆ ಶೇ. 98ಕ್ಕೆ ಏರಿದೆ. ಮೋದಿ ನೇತೃತ್ವದ ಸರ್ಕಾರದಲ್ಲಿ ಕನಿಷ್ಠ ಸಾಮಾಜಿಕ ಭದ್ರತೆಯೂ ಇಲ್ಲ. ಹೆಚ್ಚು ಹೆಚ್ಚು ಕಾರ್ಮಿಕರನ್ನು ಬಡತನದ ಅಂಚಿಗೆ ತಳ್ಳಲಾಗುತ್ತಿದೆ. ಕೇಂದ್ರದ ಬಿಜೆಪಿ ಸರ್ಕಾರದ ಆಡಳಿತದಲ್ಲಿ ಕೆಲವೇ ಕೆಲವು ಶ್ರೀಮಂತ ಉದ್ಯಮಿಗಳ 13.5 ಲಕ್ಷ ಕೋಟಿ ಸಾಲಗಳನ್ನು ಮನ್ನಾ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Leave a Reply