ಬೆಂಗಳೂರು: ಬಹುಕಾಲದಿಂದ ನೆನೆಗುದಿಗೆ ಬಿದ್ದಿರುವ ಜಿಲ್ಲಾ, ತಾಲ್ಲೂಕು ಪಂಚಾಯತ್ ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಗೆ ರಾಜ್ಯ ಸರ್ಕಾರ ಸಿದ್ಧವಿದೆ. ಇದಕ್ಕಾಗಿ ಕೋರ್ಟ್ ಆದೇಶದ ನಿರೀಕ್ಷಿಸಲಾಗಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಪ್ರದೇಶ ಕಾಂಗ್ರೆಸ್ ಸರ್ವ ಸದಸ್ಯರ ಸಭೆಯಲ್ಲಿ ಮಾತನಾಡಿದ ಅವರು, ನಮ್ಮ ಮುಂದಿನ ಸವಾಲು ಜಿಲ್ಲಾ, ತಾಲೂಕು ಪಂಚಾಯ್ತಿ ಹಾಗೂ ಪಾಲಿಕೆ ಚುನಾವಣೆ. ಪಾಲಿಕೆ ಚುನಾವಣೆ ವಿಚಾರದಲ್ಲಿ ನಿನ್ನೆ ನ್ಯಾಯಾಲಯದ ಅವಧಿ ಮುಗಿದಿದೆ. ಈ ವಿಚಾರವಾಗಿ ನಾವು ಸಹಿ ಮಾಡಿದ್ದೇವೆ ಎಂದು ತಿಳಿಸಿದರು.
ಬಿಜೆಪಿ ಸರ್ಕಾರ ಬಿಬಿಎಂಪಿ ವ್ಯಾಪ್ತಿಯಲ್ಲಿ 243 ವಾರ್ಡ್ ಗಳನ್ನು ಮಾಡಿತ್ತು. ಇದರಲ್ಲಿ ಕಾನೂನು ರೀತಿಯ ವ್ಯತ್ಯಾಸಗಳಿದ್ದವು. ನಾವು ಅದನ್ನು ಸರಿ ಮಾಡಲಿದ್ದೇವೆ. ಇದಕ್ಕಾಗಿ ಪ್ರತ್ಯೇಕ ಸಮಿತಿ ರಚಿಸಿದ್ದೇವೆ. 243 ವಾರ್ಡ್ ಗಳ ಬದಲಿಗೆ 225 ವಾರ್ಡ್ ರಚನೆಗೆ ತೀರ್ಮಾನ ಮಾಡಲಾಗಿದೆ. ಅದನ್ನು ನ್ಯಾಯಾಲಯಕ್ಕೆ ನೀಡಿ ಚುನಾವಣೆಗೆ ಸಿದ್ಧ ಎಂದು ತಿಳಿಸಲಿದ್ದೇವೆ. ಹೀಗಾಗಿ ಯಾವುದೇ ಕ್ಷಣದಲ್ಲಿ ಚುನಾವಣೆ ಬಂದರೂ ಎದುರಿಸಲು ಸಿದ್ಧರಿರಬೇಕು ಎಂದು ಕರೆ ನೀಡಿದರು.
ಇನ್ನು ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿ ವಿಚಾರವಾಗಿ ಸಚಿವ ಪ್ರಿಯಾಂಕ ಖರ್ಗೆ ಅವರು ಕೂಡ ಸಮಿತಿ ರಚನೆ ಮಾಡಿದ್ದಾರೆ. ಈ ಎರಡೂ ಚುನಾವಣೆಗಳಿಗೆ ನ್ಯಾಯಾಲಯದ ಅನುಮತಿ ನೀಡಿದರೆ ನಾವು ಚುನಾವಣೆ ಮಾಡಲು ಸಿದ್ಧ. ಇದರಿಂದ ಹಿಂದೆ ಸರಿಯುವ ಪ್ರಶ್ನೆ ಇಲ್ಲ. ರಾಜೀವ್ ಗಾಂಧಿ ಅವರು 74ನೇ ತಿದ್ದುಪಡಿ ಮೂಲಕ ನೀಡಿರುವ ಮಾರ್ಗದರ್ಶನದಂತೆ ನಾವು ನಡೆಯುತ್ತೇವೆ. ಕೆಲವರು ಸಂಸತ್ ಚುನಾವಣೆ ನಂತರ ಈ ಚುನಾವಣೆ ಮಾಡಿ ಎಂದು ಸಲಹೆ ನೀಡುತ್ತಿದ್ದಾರೆ. ಆದರೆ ನಾವು ಮಾತ್ರ ನ್ಯಾಯಾಲಯದ ಅನುಮತಿ ಸಿಕ್ಕರೆ ತಕ್ಷಣವೇ ಚುನಾವಣೆ ಮಾಡುತ್ತೇವೆ. ನೀವು ನಿಮ್ಮ ವಾರ್ಡ್ ಹಾಗೂ ಬ್ಲಾಕ್ ಗಳಲ್ಲಿ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಸಲಹೆ ಮಾಡಿದರು.
ಎಲ್ಲರಿಗೂ ಅಧಿಕಾರ: ಪಕ್ಷ ಅಧಿಕಾರಕ್ಕೆ ಬಂದಿದೆ ನಮಗೆ ಏನು ಸಿಕ್ಕಿದೆ ಎಂಬ ಅನೇಕ ಪ್ರಶ್ನೆ ನಿಮ್ಮ ಮನಸ್ಸಿನಲ್ಲಿ ಕೂತಿದೆ ಎಂಬುದು ನಮಗೆ ಗೊತ್ತಿದೆ ಇದಕ್ಕೆ ಉತ್ತರ ನೀಡಲಿದ್ದೇವೆ. ವಿಧಾನಸಭೆ ಚುನಾವಣೆಗೆ ಮುನ್ನ ನಾವು ಹೇಗೆ ಬೂತ್ ಮಟ್ಟದಲ್ಲಿ ಬಿಜೆಪಿ ಹಾಗೂ ದಳವನ್ನು ಸೋಲಿಸಲು ಶ್ರಮಿಸಿದೆವೋ ಅದೇ ರೀತಿ ಸರ್ಕಾರದ ನೆರವು ಪಡೆದು ಪಕ್ಷ ಸಂಘಟನೆ ಮಾಡಬೇಕು. ಪ್ರತಿ ಬೂತ್ ನಲ್ಲಿ ಬೇರೆ ಪಕ್ಷದವರನ್ನು ಕಾಂಗ್ರೆಸ್ ನತ್ತ ಸೆಳೆದು ಮತಪ್ರಮಾಣವನ್ನು ಹೆಚ್ಚಳ ಮಾಡಿಕೊಳ್ಳಬೇಕು ಎಂದು ಸೂಚಿಸಿದರು.
ಪ್ರತಿ ಪಂಚಾಯ್ತಿ ಹಾಗೂ ತಾಲೂಕು ಮಟ್ಟದಲ್ಲಿ ಸಮಿತಿಗಳನ್ನು ಪಟ್ಟಿ ಮಾಡಿ ಎಲ್ಲಾ ವರ್ಗಕ್ಕೆ ಸಾಮಾಜಿಕವಾಗಿ ಪ್ರತಿ ಕ್ಷೇತ್ರದಲ್ಲಿ 50-100 ಸದಸ್ಯರ ನೇಮಕಾತಿ ಮಾಡಬೇಕು. ರಾಜ್ಯ ಮಟ್ಟದ ಪದಾಧಿಕಾರಿಗಳ ಹೆಸರು ಸೂಚಿಸುವಂತೆ ಕೇಳಿದ್ದೇವೆ. ಸಹಕಾರ ಸಚಿವಾಲಯದಲ್ಲಿ, ಇಂಧನ ಇಲಾಖೆಯಲ್ಲಿ ನಮ್ಮ ಕಾರ್ಯಕರ್ತರನ್ನು ನಾಮನಿರ್ದೇಶನ ಮಾಡಲು ಸಚಿವರ ಜತೆ ಸೂಚನೆ ನೀಡಿದ್ದೇವೆ. ನಿಮ್ಮೆಲ್ಲರಿಗೂ ಅಧಿಕಾರ ನೀಡಬೇಕು ಎಂಬುದು ನಮ್ಮ ಉದ್ದೇಶವಾಗಿದೆ ಎಂದು ತಿಳಿಸಿದರು.
ನಮ್ಮ ಸರ್ಕಾರ ಕೊಟ್ಟ ಮಾತಿನಂತೆ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ್ದು, ಇದನ್ನು ಸಹಿಸಲಾಗದೆ ಬಿಜೆಪಿಯವರು ನಮ್ಮ ಸರ್ಕಾರದ ಮೇಲೆ ಸುಳ್ಳು ಭ್ರಷ್ಟಾಚಾರದ ಆರೋಪ ಮಾಡುತ್ತಿದ್ದಾರೆ. ಅವರ ಆರೋಪ ಸಾಬೀತಾದರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ. ಬೇರೆಯವರಿಗೆ ಹೆದರಿಸಿದಂತೆ ನನಗೆ ಹೆದರಿಸಲು ಸಾಧ್ಯವಿಲ್ಲ. ಇದಕ್ಕೆಲ್ಲಾ ನಾನು ಹೆದರುವುದಿಲ್ಲ. ನಾನು ಎಂದಿಗೂ ಪಕ್ಷ ಹಾಗೂ ಸರ್ಕಾರಕ್ಕೆ ಮುಜುಗರ ತರುವ, ಕಾರ್ಯಕರ್ತರ ಸ್ವಾಭಿಮಾನಕ್ಕೆ ಧಕ್ಕೆ ತರುವ ಕೆಲಸ ಮಾಡಲ್ಲ ಎಂದು ನುಡಿದರು.
ಪಕ್ಷಕ್ಕಾಗಲಿ, ಸರ್ಕಾರಕ್ಕಾಗಲಿ, ಮುಜುಗರ ಮಾಡುವ, ನಿಮ್ಮ ಸ್ವಾಭಿಮಾನಕ್ಕೆ ಧಕ್ಕೆ ತರುವ ಕೆಲಸ ಮಾಡುವುದಿಲ್ಲ. ನಾನು ಹಾಗೆ ಮಾಡಿದ್ದರೆ, ಸೋನಿಯಾ ಗಾಂಧಿ ಅವರು ಜೈಲಿಗೆ ಬಂದು ನನಗೆ ಧೈರ್ಯ ತುಂಬುತ್ತಿದ್ದರಾ? ಆಗ ನಾನು ಕೇವಲ ಶಾಸಕ ಹಾಗೂ ಕಾರ್ಯಕರ್ತ ಮಾತ್ರ. ಆ ತಾಯಿ ನನಗೆ ಶಕ್ತಿ ತುಂಬಿದ್ದಾರೆ ಎಂದು ತಿಳಿಸಿದರು.



