ಬೆಂಗಳೂರು: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಮತ್ತು ಐಪಿಎಸ್ ಅಧಿಕಾರಿ ಡಿ.ರೂಪಾ ನಡುವಿನ ಸಂಘರ್ಷ ಇದೀಗ ತೀವ್ರ ಸ್ವರೂಪ ಪಡೆದುಕೊಂಡಿದೆ. ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಈ ಇಬ್ಬರೂ ನಡೆಸುತ್ತಿರುವ ವಾಕ್ಸಮರ ಸರ್ಕಾರವನ್ನು ಮುಜುಗರಕ್ಕೆ ಸಿಲುಕುವಂತೆ ಮಾಡಿದೆ.
ಕಳೆದೆರಡು ದಿನಗಳಿಂದ ನಡೆಯುತ್ತಿರುವ ವಿದ್ಯಮಾನಗಳನ್ನು ಗಂಭೀರವಾಗಿ ಪರಿಗಣಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಬ್ಬರ ವಿರುದ್ಧವೂ ಕ್ರಮ ಜರುಗಿಸುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರಿಗೆ ಸೂಚಿಸಿದ್ದಾರೆ.
ಇದರ ಬೆನ್ನಲ್ಲೇ ಶಿಸ್ತು ಉಲ್ಲಂಘನೆ, ದುರ್ನಡತೆ ಹಾಗೂ ಕರ್ನಾಟಕ ಸರ್ಕಾರದ ಸೇವಾ ನಿಯಮಗಳನ್ನು ಉಲ್ಲಂಘಿಸಿದ ಆರೋಪದಡಿ ನೋಟಿಸ್ ನೀಡಲಾಗಿದೆ. ರಾಜ್ಯ ಸರ್ಕಾರದ ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತೆ ಹಾಗೂ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರಿಗೆ ಸೇವಾ ನಿಯಮ ಉಲ್ಲಂಘನೆ ಮಾಡಿರುವ ಆರೋಪದ ಮೇಲೆ ಕಾರಣ ಕೇಳಿ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ ನೋಟಿಸ್ ನೀಡಿದ್ದಾರೆ.
ಐಪಿಎಸ್ ಅಧಿಕಾರಿ(ಐಜಿಪಿ)ಕರಕುಶಲ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ರೂಪ ಮೌದ್ಗಿಲ್ ಅವರಿಗೆವಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ನೋಟೀಸ್ ನೀಡಿದ್ದಾರೆನ್ನಲಾಗಿದೆ.
ಈ ನಡುವೆ ಬೆಂಗಳೂರಿನಲ್ಲಿ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗೃಹ ಸಚಿವ ಆರಗ ಜ್ಞಾನೇಂದ್ರ, ಐಪಿಎಸ್ ಹಾಗೂ ಐಎಎಸ್ ಅಧಿಕಾರಿಗಳು ತಮ್ಮನ್ನು ತಾವು ದೇವಮಾನವರು ಎಂದುಕೊಂಡಿದ್ದಾರಾ? ಇಲ್ಲಿ ಒಂದು ಆಡಳಿತ ವ್ಯವಸ್ಥೆಯೂ ಇದೆ. ಯಾವುದೇ ಅಕಾರಿಗಳು ಶಿಸ್ತು ಉಲ್ಲಂಘನೆ ಮಾಡಬಾರದೆಂಬ ನಿಯಮ ಇದ್ದರೂ ಇಬ್ಬರು ಜಿದ್ದಿಗೆ ಬಿದ್ದವರಂತೆ ಪರಸ್ಪರ ಆರೋಪಿಸಿದ್ದಾರೆ.
ಈ ಇಬ್ಬರಿಗೂ ಕಾನೂನಿನ ಚೌಕಟ್ಟಿನಲ್ಲಿ ಏನು ಆಗಬೇಕೋ ಅದೇ ಆಗುತ್ತದೆ ಎಂದರು. ಮುಖ್ಯಮಂತ್ರಿಗಳು ಇದರ ಬಗ್ಗೆ ಈಗಾಗಲೇ ಗಮನಹರಿಸಿದ್ದಾರೆ. ಮುಖ್ಯ ಕಾರ್ಯದರ್ಶಿ ಮತ್ತು ಪೊಲೀಸ್ ಮಹಾನಿರ್ದೇಶಕರೊಂದಿಗರ ಸ್ವತಃ ನಾನೇ ಮಾತುಕತೆ ನಡೆಸಿದ್ದೇನೆ. ಯಾರೇ ಆಗಲಿ ಇತಿಮಿತಿ ಇರಬೇಕು ಎಂದು ಕಿಡಿಕಾರಿದರು.
ಹಿರಿಯ ಅಧಿಕಾರಿಗಳು ಈ ರೀತಿಯಾಗಿ ಮಾಧ್ಯಮದ ಮುಂದೆ ಮಾತನಾಡುವುದು ಸರಿಯಲ್ಲ. ಶಿಸ್ತು ಉಲ್ಲಂಘನೆ ಮಾಡುವವರಿಗೆ ಕಾನೂನು ಚೌಕಟ್ಟಿನಲ್ಲಿ ಏನು ಮಾಡಬೇಕೋ ಅದನ್ನು ಮುಖ್ಯಮಂತ್ರಿಗಳು ಮಾಡಲಿದ್ದಾರೆ ಎಂದರು.
ಇಬ್ಬರ ನಡುವೆ ಯಾವುದೋ ಹಳೆಯ ವೈಯಕ್ತಿಕ ದ್ವೇಷ ಇಲ್ಲವೇ ಸಮಸ್ಯೆಗಳಿರಬಹುದು. ಪರಸ್ಪರ ಕುಳಿತು ಮಾತುಕತೆ ಮೂಲಕ ಸಮಸ್ಯೆಯನ್ನು ಇತ್ಯರ್ಥಪಡಿಸಿಕೊಳ್ಳಬಹುದು. ಆದರೆ ಹಿರಿಯ ಅಧೊಕಾರಿಗಳಾಗಿ ಇವರೇ ಈ ರೀತಿ ವರ್ತಿಸಿರುವುದು ಸರಿಯಲ್ಲ. ಈ ಹಿಂದೆಯೂ ಕೂಡ ಇವರಿಬ್ಬರಿಗೆ ಎಚ್ಚರಿಕೆ ಕೊಡಲಾಗಿತ್ತು. ಆದರೂ ಈ ವರ್ತನೆ ಅತ್ಯಂತ ನೋವಿನ ಸಂಗತಿ. ಕಾನೂನಿನ ಪ್ರಕಾರ ಏನು ಶಿಕ್ಷೆಯಾಗಬೇಕೊ ಅದು ಆಗೇ ಆಗುತ್ತದೆ. ಸರ್ಕಾರ ಕಣ್ಣಮುಚ್ಚಿ ಕುಳಿತಿಲ್ಲ ಎಂದರು.
ಇಬ್ಬರು ಕೂಡ ಅತ್ಯಂತ ಕೆಟ್ಟದಾಗಿ ವರ್ತಿಸಿದ್ದಾರೆ. ಅವರು ವೈಯಕ್ತಿಕವಾಗಿ ಏನಾದರೂ ಮಾಡಿಕೊಳ್ಳಲಿ ಅದು ನಮಗೆ ಸಂಬಂಸಿದ್ದಲ್ಲ. ಆದರೆ ಮಾಧ್ಯಮಗಳ ಮುಂದೆ ಬಂದು ಈ ರೀತಿ ಆಪಾದನೆ ಮಾಡಿದ್ದು ಸರಿಯಲ್ಲ. ಇಲಾಖೆಗಳಲ್ಲಿ ಅವ್ಯವಹಾರ ನಡೆದಿದ್ದರೆ ಸಂಬಂಧಪಟ್ಟವರ ಗಮನಕ್ಕೆ ತರಬೇಕು. ಅಂಥವರ ಮೇಲೆ ತನಿಖೆ ನಡೆಸಿ ನಾವು ಕ್ರಮ ತೆಗೆದುಕೊಳ್ಳುತ್ತೇವೆ. ಹಾದಿಬೀದಿಯಲ್ಲಿ ಮಾತನಾಡಲು ಇವರಿಗೆ ಅಧಿಕಾರ ಕೊಟ್ಟವರು ಯಾರು ಎಂದು ಪ್ರಶ್ನಿಸಿದರು.
ಸಿಂಧೂರಿ ಭೇಟಿ: ಇದರ ನಡುವೆ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ ಅವರನ್ನು ಭೇಟಿಯಾಗಿ ಲಿಖಿತ ದೂರು ಸಲ್ಲಿಸಿದರು. ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ ಅವರಿಗೆ 3 ಪುಟಗಳ ಲಿಖಿತ ದೂರು ನೀಡಿದ ಅವರು ನಂತರ ಮಾತನಾಡಿದ ಅವರು, ಮಾಧ್ಯಮಗಳ ಮುಂದೆ ಬರಬಾರದೆಂಬ ನಿಯಮವಿದೆ ಹಾಗಾಗಿ ನಾನು ಮಾತನಾಡಲಿಲ್ಲ. ನನ್ನ ಬಗ್ಗೆ ಇಲ್ಲಸಲ್ಲ್ದ ಆರೋಪ ಮಾಡಿದ ಹಿನ್ನೆಲೆ ಮುಖ್ಯ ಕಾರ್ಯದರ್ಶಿಗಳಿಗೆ ದೂರು ನೀಡಿದ್ದೇನೆ ಎಂದರು.
ನನ್ನ ಕಾರ್ಯವ್ಯಾಪ್ತಿ ಬೇರೆ ಅವರ ಕಾರ್ಯವ್ಯಾಪ್ತಿ ಬೇರೆ. ಅವರು ನನ್ನ ವೈಯುಕ್ತಿಕ ವಿಚಾರಗಳನ್ನು ಮಾತನಾಡಿದ್ದಾರೆ. ಅವರ ಆರೋಪಗಳು ಸತ್ಯಕ್ಕೆ ದೂರವಾಗಿವೆ ಎಂದು ಸ್ಪಷ್ಟಪಡಿಸಿದರು.
ರೂಪ ವಿರುದ್ಧ ಬ್ಲೂಟೂಥ್ ಹ್ಯಾಕ್ ಮಾಡಿ ಆರೋಪ: ಈ ನಡುವೆ ಐಎಎಸ್ ಅಧಿಕಾರಿಯಾಗಿರುವ ನನ್ನ ಪತ್ನಿ ರೋಹಿಣಿ ಸಿಂಧೂರಿ ಅವರ ಮೊಬೈಲ್ ಅನ್ನು ಬ್ಲೂಟೂತ್ ಮೂಲಕ ಹ್ಯಾಕ್ ಮಾಡಿ ಎಲ್ಲಾ ವೈಯಕ್ತಿಕ ಫೋಟೋಗಳನ್ನು ಐಜಿಪಿ ಡಿ. ರೂಪಾ ಅವರು ಕಳವು ಮಾಡಿದ್ದಾರೆ ಎಂದು ಪತಿ ಸುಧೀರ್ ರೆಡ್ಡಿ ಅವರು ಬಾಗಲಗುಂಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ರೋಹಿಣಿ ಸಿಂಧೂರಿ ಅವರ ಮೊಬೈಲ್ ಅನ್ನು ಬ್ಲೂಟೂತ್ ಮೂಲಕ ಹ್ಯಾಕ್ ಮಾಡಿ ಎಲ್ಲ ವೈಯಕ್ತಿಕ ಫೋಟೋಗಳನ್ನು ಕಳವು ಮಾಡಿರುವ ಐಜಿಪಿ ಡಿ. ರೂಪಾ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ದಾಖಲಿಸಿದ್ದಾರೆ.
ದೂರಿನಲ್ಲಿ ನನ್ನ ಪತ್ನಿ ರೋಹಿಣಿ ಸಿಂಧೂರಿ ಅವರ ಮೊಬೈಲ್ ಅನ್ನು ಬ್ಲೂಟೂತ್ ಮೂಲಕ ಹ್ಯಾಕ್ ಮಾಡಿ ಎಲ್ಲ ವೈಯಕ್ತಿಕ ಫೋಟೋಗಳನ್ನು ಕದಿಯಲಾಗಿದೆ. ಈ ಬಗ್ಗೆ ರೂಪಾ ಅವರ ವಿರುದ್ಧ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ತಮ್ಮನ್ನು ಪ್ರಶ್ನಿಸಲು ಈ ರೂಪಾ ಯಾರು ಎಂದು ಕೇಳಿರುವ ಅವರು ರೋಹಿಣಿ ಸಿಂಧೂರಿಗೆ ಯಾವುದೇ ಪ್ರಚಾರ ಬೇಡ. ಯಾವ್ಯಾವ ಅಧಿಕಾರಿಗಳಿಗೆ ಫೋಟೋ ಕಳುಹಿಸಿದ್ದಾರೆ ಮೊದಲು ಹೇಳಿ. ನಾನು ಹುಟ್ಟಿದ್ದು ಇಲ್ಲೇ, ನಾನು ಕನ್ನಡಿಗ. ಆಂಧ್ರಪ್ರದೇಶದಲ್ಲಿ ನಮ್ಮ ಸಂಬಂಧಿಕರು ಯಾರೂ ಇಲ್ಲ. ನಮ್ಮ ಕುಟುಂಬದ ಎಲ್ಲರೂ ಇಲ್ಲೇ ಇದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.



