ಗೃಹಜ್ಯೋತಿ ಯೋಜನೆಗೆ ನೋಂದಾಯಿಸಿಕೊಳ್ಳಲು ಯಾವುದೇ ಗಡುವು ಇಲ್ಲ
ಬೆಂಗಳೂರು: ರಾಜ್ಯ ಸರ್ಕಾರದ ಗ್ಯಾರಂಟಿಗಳಲ್ಲಿ ಒಂದಾದ ಗೃಹಜ್ಯೋತಿ ಯೋಜನೆಯಡಿ ರಾಜ್ಯದಲ್ಲಿ 1.43 ಕೋಟಿ ಗ್ರಾಹಕರು ನೋಂದಾಯಿಸಿಕೊಂಡಿದ್ದಾರೆ. ಜುಲೈ 1ರಿಂದ ಬಳಕೆಯಾಗುತ್ತಿರುವ ವಿದ್ಯುತ್‍ಗೆ ಯೋಜನೆ ಅನ್ವಯವಾಗುತ್ತಿದ್ದು, 200 ಯೂನಿಟ್ ಒಳಗೆ ಬಳಕೆದಾರರು ಯೋಜನೆ ವ್ಯಾಪ್ತಿಗೆ ಒಳಪಡಲಿದ್ದಾರೆ. ಇದೇ 5ರಂದು ಕಲಬುರಗಿಯಲ್ಲಿ ಯೋಜನೆ ಉದ್ಘಾಟಿಸಲಾಗುತ್ತಿದೆ ಎಂದು ಇಂಧನ ಸಚಿವ ಕೆ ಜೆ ಜಾರ್ಜ್ ಹೇಳಿದರು.
ಗೃಹಜ್ಯೋತಿ ಯೋಜನೆಗೆ ನೋಂದಾಯಿಸಿಕೊಳ್ಳಲು ಯಾವುದೇ ಗಡುವು ಇಲ್ಲ. ಜುಲೈ 27 ರವರೆಗೆ ನೋಂದಾಯಿಸಿಕೊಡಿರುವವರು ಜುಲೈ ತಿಂಗಳ ವಿದ್ಯುತ್ ಬಳಕೆಗೆ ಶೂನ್ಯ ಬಿಲ್ ಪಡೆಯುತ್ತಾರೆ. ಇನ್ನೂ ನೋಂದಣಿ ಮಾಡಿಕೊಳ್ಳದ ಗ್ರಾಹಕರು ಈಗಲೂ ನೋಂದಣಿ ಮಾಡಿಕೊಂಡು ಗೃಹಜ್ಯೋತಿಯ ಲಾಭ ಪಡೆಯಬಹುದಾಗಿದೆ ಎಂದು ಹೇಳಿದರು.
ಯಾವ ತಿಂಗಳ ಅರ್ಜಿ ಸಲ್ಲಿಸುತ್ತಾರೋ ಅದರ ಮುಂದಿನ ತಿಂಗಳಿಂದ ಯೋಜನೆಯ ಲಾಭ ಸಿಗುತ್ತದೆ ಎಂದು ಅವರು ಹೇಳಿದರು.
ಈಗಾಗಲೇ ಜಾರಿಯಲ್ಲಿದ್ದ ಭಾಗ್ಯಜ್ಯೋತಿ, ಕುಟೀರ ಜ್ಯೋತಿ ಮತ್ತು ಅಮೃತಜ್ಯೋತಿ ಯೋಜನೆಗಳನ್ನು ಗೃಹಜ್ಯೋತಿ ಯೋಜನೆಯಲ್ಲಿ ವಿಲೀನ ಮಾಡಲಾಗಿದೆ. ಭಾಗ್ಯಜ್ಯೋತಿ ಮತ್ತು ಕುಟೀರ ಜ್ಯೋತಿ ಕುಟುಂಬದವರಿಗೆ 40 ಯೂನಿಟ್‌ನಿಂದ 53 ಯೂನಿಟ್ ಉಚಿತ ವಿದ್ಯುತ್, ಅಮೃತ ಜ್ಯೋತಿಗೆ 75 ಯೂನಿಟ್‌ಗೆ ಜತೆಗೆ ಶೇ.10 ರಷ್ಟು ಹೆಚ್ಚುವರಿ ವಿದ್ಯುತ್‌ನ್ನು ಉಚಿತವಾಗಿ ನೀಡಲಾಗುವುದು ಎಂದು ಅವರು ಹೇಳಿದರು.
ಗೃಹಜ್ಯೋತಿ ಯೋಜನೆಯಿಂದ ಇಂಧನ ಇಲಾಖೆ ಮೇಲೆ ಯಾವುದೇ ಹೊರೆ ಬೀಳುವುದಿಲ್ಲ. ಉಚಿತ ವಿದ್ಯುತ್‌ನ ಬಿಲ್ ಮೊತ್ತವನ್ನು ಸರ್ಕಾರ ಇಂಧನ ಇಲಾಖೆಗೆ ಪಾವತಿಸುತ್ತದೆ ಎಂದು ಅವರು ಸ್ಪಷ್ಟಪಡಿಸಿ, ಇಂಧನ ಇಲಾಖೆಗೆ ಇದರಿಂದ ಆರ್ಥಿಕ ಹೊರೆಯಾಗುವುದಿಲ್ಲ ಎಂದರು.




