ಬೆಂಗಳೂರಿನಲ್ಲಿ ತಾಜಾ ಹಾಲನ್ನು ಎಲ್ಲಿಂದ ತಂದು, ಎಲ್ಲಿ ಸಂಸ್ಕರಿಸಿ ಮಾರಲಿದ್ದಾರೆ?

3 years ago

ಅಮುಲ್ E-Commerce ಮೂಲಕ ಬೆಂಗಳೂರಿನಲ್ಲಿ ತಾಜಾ ಹಾಲು ಮಾರಲು ಆರಂಭಿಸುತ್ತಿದೆ. ಆದರೆ ಈ ತಾಜಾ ಹಾಲು ಎಲ್ಲಿಂದ ಬರುತ್ತೆ, ಎಲ್ಲಿ ಸಂಸ್ಕರಣೆಗೊಳ್ಳುತ್ತೆ, ಎಲ್ಲಿ ಪ್ಯಾಕ್ ಆಗುತ್ತೆ ಎನ್ನುವುದನ್ನು ಅಮುಲ್‍ ಬಹಿರಂಗಪಡಿಸಿದೆಯೇ? ಗುಜರಾತ್‍ನಿಂದ ರಸ್ತೆ ಮೂಲಕ ಬೆಂಗಳೂರಿಗೆ ಹಾಲು ತಂದು ಮಾರುವುದು ಬಹಳ ಕಷ್ಟದ ಕೆಲಸ. ಹಾಗಾಗಿ ಬಹುಷ ಅಮುಲ್ ಸ್ಥಳೀಯರಿಂದಲೇ ಹಾಲು ಖರೀದಿಸಿ, ಇಲ್ಲೇ ಎಲ್ಲೋ ಒಂದ್ಕಡೆ ಸಂಸ್ಕರಿಸಿ, ಪ್ಯಾಕ್ ಮಾಡಿ, ತನ್ನ ಲೇಬಲ್ ಅಂಟಿಸಿ ಮಾರಲಿದೆ. ಇವತ್ತು ಸಣ್ಣ ಮಟ್ಟದಲ್ಲಿ ಆರಂಭಿಸಿದವರು ಹಂತ-ಹಂತವಾಗಿ KMF ಗೆ ಹಾಲು ಸರಬರಾಜು ಮಾಡುವ ಹೈನುಗಾರರನ್ನೇ ಸಂಪರ್ಕಿಸಿ, ಹೆಚ್ಚಿನ ಬೆಲೆಯೋ ಇನ್ಯಾವುದೋ ಆಮಿಷವೊಡ್ಡಿ ಅವರಿಂದ ಹಾಲು ಖರೀದಿಸಿ, ನಂದಿನಿಯ supply chain ನ್ನೇ ಗುರಿ ಮಾಡಲಿದ್ದಾರೆ. ಇದು ಬೆಂಗಳೂರಿಗೆ ಸೀಮಿತವಾಗಿ ಉಳಿಯುವುದಿಲ್ಲ. ಮುಂದೆ ಬೆಳಗಾವಿ, ಹಾಸನ, ಮಂಗಳೂರು, ಮೈಸೂರು ಹೀಗೆ ಪ್ರಮುಖ ನಗರಗಳಿಗೆ ವ್ಯಾಪಿಸಲಿದೆ. ಅಲ್ಲಿಯೂ ಸ್ಥಳೀಯ ಹೈನುಗಾರರೇ ಇವರ ಗುರಿ. ಮುಂದೆ ನಂದಿನಿಗೆ ಹಾಲು ಸರಬರಾಜು ಮಾಡುತ್ತಿರುವ ರೈತರನ್ನು ತಮ್ಮೆಡೆ ಸೆಳೆದು, ಮಾರುಕಟ್ಟೆಯಲ್ಲಿ ನಂದಿನಿ ಹಾಲಿನ ಅಭಾವ ಸೃಷ್ಟಿಸಿ, ನಂದಿನಿ ಸಮರ್ಪಕವಾಗಿ ಹಾಲು ಪೂರೈಸುತ್ತಿಲ್ಲವೆಂದು ಹೇಳಿ, ನೇರವಾಗಿ ನಂದಿನಿಯ ಕತ್ತು ಹಿಸುಕಲಿದ್ದಾರೆ.

ನಮಗೆ ಅಮುಲ್‍ನೊಂದಿಗೆ ಯಾವುದೇ ಸಮಸ್ಯೆ ಇಲ್ಲ. ಹತ್ತಿಪ್ಪತ್ತು ವರುಷಗಳಿಂದ ಅಮುಲ್‍ನ ಉತ್ಪನ್ನಗಳು ಕರ್ನಾಟಕದೆಲ್ಲೆಡೆ ಲಭ್ಯವಿವೆ. ಒಮ್ಮೆಯಾದರೂ, ಯಾರಾದರೂ ಇದರ ಬಗ್ಗೆ ಚಕಾರವೆತ್ತಿದ್ದಾರಾ? ಸಮಸ್ಯೆ ಆರಂಭವಾಗಿರುವುದು ಅಮಿತ್ ಶಾ ಅಸ್ಸಾಂನಲ್ಲಿ ನಿಂತು ದೇಶದ ಐದು ಸಹಕಾರಿ ಮಂಡಳಿಗಳನ್ನು ಅಮುಲ್‍ನೊಂದಿಗೆ ವಿಲೀನಗೊಳಿಸುತ್ತೇವೆಯೆಂದು ಅಕ್ಟೋಬರ್ 2022 ರಲ್ಲಿ ಘೋಷಿಸಿ, ಡಿಸೆಂಬರ್ 2022 ರ ಕೊನೆಗೆ ಕೆ‍ಎಮ್‍ಎಫ್ ಅಂಗಳದಲ್ಲಿ ನಿಂತು ಅಮುಲ್ ಹಾಗೂ ನಂದಿನಿ ವಿಲೀನದ ಬಗ್ಗೆ ಸೂಚ್ಯವಾಗಿ ಹೇಳಿದ ನಂತರ. ಅದು ಹೇಳಿ ಎರಡು ತಿಂಗಳಲ್ಲೇ ನಂದಿನಿ ತುಪ್ಪದ ಅಭಾವ ಸೃಷ್ಟಿಯಾಗಿದೆ, ನಂದಿನಿ ತೃಪ್ತಿ ಹಾಲು ಹಲವಾರು ಕಡೆ ಸಿಗುತ್ತಿಲ್ಲ ಹಾಗೂ ಇವೆಲ್ಲದರ ಮಧ್ಯೆ ಅಮುಲ್‍ ಬೆಂಗಳೂರಿನಲ್ಲಿ ತಾಜಾ ಹಾಲು ಸರಬರಾಜು ಮಾಡಲು ಆರಂಭಿಸುತ್ತಿದೆ. ನಮ್ಮ ಸರ್ ಹೇಳುವ ಹಾಗೆ ನಾವು ಈ ಎಲ್ಲಾ ಚುಕ್ಕಿ ಜೋಡಿಸುವಾಗ, ಇದರ ಹಿಂದಿರುವ ಮಸಲತ್ತು ಹಾಗೂ ಷಡ್ಯಂತ್ರ ಬೆಳಕಿಗೆ ಬರುತ್ತೆ.

ಹಾಗಾಗಿ ಈಗ ಮೊಟ್ಟಮೊದಲು ಅಮುಲ್‍ಗೆ ಕೇಳಬೇಕಾದ ಪ್ರಶ್ನೆಗಳೇನೆಂದರೆ, ಬೆಂಗಳೂರಿನಲ್ಲಿ ತಾಜಾ ಹಾಲನ್ನು ಎಲ್ಲಿಂದ ತಂದು, ಎಲ್ಲಿ ಸಂಸ್ಕರಿಸಿ ಮಾರಲಿದ್ದಾರೆಂದು. ಅವರು ಈ ಪ್ರಶ್ನೆಗಳಿಗೆ ಉತ್ತರ ಕೊಡುವ ತನಕ ಅಮುಲ್‍ಗೆ ಬೆಂಗಳೂರಿನಲ್ಲಿ ಹಾಲನ್ನು ಮಾರಲು ಬಿಡಲೇಬಾರದು. ಕರ್ನಾಟಕ, ಕನ್ನಡ, ಕನ್ನಡಿಗ, ಕನ್ನಡ ನೆಲ, ಕನ್ನಡ ಜಲದ ವಿಷಯ ಬಂದಾಗ ಇವೆಲ್ಲದರ ವಿರುದ್ಧ ಕೆಲಸ ಮಾಡುವವರು ಎಷ್ಟೇ ದೊಡ್ಡವರು, ಎಷ್ಟೇ ಬಲಶಾಲಿಗಳಾದರೂ ಅವರನ್ನು ವಿರೋಧಿಸಲೇಬೇಕು. ನಂದಿನಿ ನಮ್ಮ ಅಸ್ಮಿತೆ, ನಂದಿನಿ ನಮ್ಮ ಪ್ರಾಶಸ್ತ್ಯ, ನಂದಿನಿ ನಮ್ಮ ಆದ್ಯತೆ ಹಾಗೂ ನಂದಿನಿ ನಮ್ಮ ಆಯ್ಕೆ!

– Almeida Gladson

Leave a Reply