ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಜೀವಾವಧಿ ಶಿಕ್ಷೆ

10 months ago

ಬೆಂಗಳೂರು: ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರು ಮೊಮ್ಮಗ, ಜೆಡಿಎಸ್ ನಾಯಕ ಮಾಜಿ ಸಚಿವ ಎಚ್ ಡಿ ರೇವಣ್ಣ ಪುತ್ರ ಹಾಗೂ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿರುವ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ 10 ಲಕ್ಷ ರೂಪಾಯಿಗಳ ತಂಡ ವಿಧಿಸಿದೆ.

ತಮ್ಮ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯ ಮೇಲೆ ನಿರಂತರವಾಗಿ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಅಪರಾಧಿ ಎಂದು ನಿನ್ನೆ ತೀರ್ಪು ನೀಡಿದ್ದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಇಂದು ಶಿಕ್ಷೆಯ ಪ್ರಮಾಣ ಪ್ರಕಟಿಸಿದ್ದು, ಗರಿಷ್ಠ ಶಿಕ್ಷೆ ಪ್ರಕಟಿಸಿದೆ. 

ಮಾಜಿ ಸಚಿವ ರೇವಣ್ಣ ನಿವಾಸದಲ್ಲಿ ಮನೆ ಕೆಲಸ ಮಾಡುತ್ತಿದ್ದ 47 ವರ್ಷದ ಮಹಿಳೆ ಮೇಲೆ ಪ್ರಜ್ವಲ್ ರೇವಣ್ಣ ಅತ್ಯಾಚಾರ ಎಸಗಿದ ಆರೋಪ ಎದುರಿಸುತ್ತಿದ್ದರು. ಇವರ ವಿರುದ್ಧ ಮೈಸೂರಿನ ಕೆ ಆರ್‌ ನಗರದ ಸಂತ್ರಸ್ತ ಮಹಿಳೆ ದೂರು ನೀಡಿದ್ದರು. ಈ ಸಂಬಂಧ 2024ರ ಏಪ್ರಿಲ್‌ 28ರಂದು ಹೊಳೆನರಸೀಪುರ ಠಾಣೆಯಲ್ಲಿ ಮೊದಲ ಪ್ರಕರಣ ದಾಖಲಾಗಿತ್ತು. 

ಅವರು ನೀಡಿದ ದೂರಿನ ಮೇರೆಗೆ ಸೈಬರ್‌ ಅಪರಾಧ ಠಾಣೆಯಲ್ಲಿ ಐಪಿಸಿ ಸೆಕ್ಷನ್‌ಗಳಾದ 376(2)(ಎನ್‌), 376(2)(ಕೆ), 506, 354-ಎ, 354(ಎ), 354(ಬಿ), 354(ಸಿ) ಮತ್ತು ಮಾಹಿತಿ ತಂತ್ರಜ್ಞಾನ ಕಾಯಿದೆ ಸೆಕ್ಷನ್‌ 66ಇ ಅಡಿ ಪ್ರಕರಣ ಪ್ರಜ್ವಲ್‌ ರೇವಣ್ಣ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.

ಪ್ರಕರಣದ ತನಿಖೆಗಾಗಿ ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡ ರಚಿಸಿತ್ತು. ತಂಡದ ಅಧಿಕಾರಿಗಳು 123 ಸಾಕ್ಷ್ಯಗಳನ್ನು ಸಂಗ್ರಹಿಸಿ, ಸುಮಾರು 2,000 ಪುಟಗಳ ಆರೋಪ ಪಟ್ಟಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. 2024ರ ಅಂತ್ಯದಲ್ಲಿ ಈ ಚಾರ್ಜ್‌ಶೀಟ್‌ ಸಲ್ಲಿಕೆಯಾಗಿತ್ತು.

ಪ್ರಕರಣದ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ 2000 ಪುಟಗಳ ಆರೋಪ ಪಟ್ಟಿ ಮತ್ತು 122 ಸಾಕ್ಷಿಗಳನ್ನು ವಿಚಾರಣೆಗೆ ಒಳಪಡಿಸಿ ತೀರ್ಪು ಕಾಯ್ದಿರಿಸಿತ್ತು. ಅದರಂತೆ ನಿನ್ನೆ ತೀರ್ಪು ಪ್ರಕಟಿಸಿರುವ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶ, ಸಂತೋಷ್ ಗಜಾನನ ಭಟ್ ಈ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ವಿರುದ್ಧ ಆರೋಪ ಸಾಬೀತಾಗಿದೆ ಎಂದಿದ್ದರು.

ಇಂದು ಶಿಕ್ಷೆಯ ಪ್ರಮಾಣ ಪ್ರಕಟಿಸುವ ಕುರಿತಂತೆ ಕೋರ್ಟ್ ನಲ್ಲಿ ನಡೆದ ವಿಚಾರಣೆ ಗಮನ ಸೆಳೆಯಿತು. ಸರಕಾರದ ಪರವಾಗಿ ವಾದ ಮಂಡಿಸಿದ ವಿಶೇಷ ಸರಕಾರಿ ಅಭಿಯೋಜಕ ಬಿಎನ್ ಜಗದೀಶ್, ಪ್ರಜ್ವಲ್ ಕೃತ್ಯ ಅತ್ಯಂತ ಹೀನವಾದುದು. ಜೀವನೋಪಾಯಕ್ಕಾಗಿ ಕೆಲಸಕ್ಕೆ ಸೇರಿದ್ದ ಅನಕ್ಷರಸ್ಥ ಮಹಿಳೆಯ ಮೇಲೆ ಈ ಘೋರ ಕೃತ್ಯ ಎಸಗಲಾಗಿದೆ. ವಿಡಿಯೋಗಳು ಬಹಿರಂಗಗೊಂಡ ನಂತರ ಸಂತ್ರಸ್ತೆ ತೀವ್ರ ಮಾನಸಿಕ ಹಿಂಸೆ ಅನುಭವಿಸಿ, ಆತ್ಮಹತ್ಯೆಗೂ ಯತ್ನಿಸಿದ್ದರು ಎಂದು ನ್ಯಾಯಾಲಯದ ಗಮನ ಸೆಳೆದರು.

ಪ್ರಜ್ವಲ್ ಓರ್ವ ಚಟಗಾರನಾಗಿದ್ದು, ಅವರ ವಿರುದ್ಧ ಇನ್ನೂ ಮೂರು ಅತ್ಯಾಚಾರ ಪ್ರಕರಣಗಳು ವಿಚಾರಣೆಗೆ ಬಾಕಿ ಇವೆ ಎಂದು ಕೋರ್ಟ್‌ ಗಮನಕ್ಕೆ ತಂದರು.

ಸಮಾಜದಲ್ಲಿ ತಮಗಿದ್ದ ಉನ್ನತ ಸ್ಥಾನವನ್ನು ದುರುಪಯೋಗಪಡಿಸಿಕೊಂಡು, ಪಶ್ಚಾತ್ತಾಪವಿಲ್ಲದೆ ಅಪರಾಧವನ್ನು ಎಸಗಿದ್ದಾರೆ. ಸಂತ್ರಸ್ತೆಯು ಬೇಡಿಕೊಂಡರೂ ಲೆಕ್ಕಿಸದೆ ಅತ್ಯಾಚಾರ ಮಾಡಿ, ಅದನ್ನು ವಿಡಿಯೋ ಕೂಡ ಮಾಡಿರುವುದು ಪ್ರಜ್ವಲ್ ವಿಕೃತ ಮನಸ್ಥಿತಿಗೆ ಹಿಡಿದ ಕನ್ನಡಿಯಾಗಿದೆ. ಸಮಾಜಕ್ಕೆ ಕಠಿಣ ಸಂದೇಶ ರವಾನಿಸಲು ಅವರಿಗೆ ಜೀವಾವಧಿ ಶಿಕ್ಷೆಯನ್ನೇ ವಿಧಿಸಬೇಕು ಎಂದು ಜಗದೀಶ್ ವಾದಿಸಿದರು.

ಅತಿ ಕಿರಿಯ ವಯಸ್ಸಿನಲ್ಲಿ ಸಂಸದರಾಗಿ ಆಯ್ಕೆಯಾಗಿದ್ದ ಪ್ರಜ್ವಲ್ ರೇವಣ್ಣ, ತಮ್ಮ ಸ್ಥಾನಕ್ಕೆ ಕಳಂಕ ತಂದಿದ್ದಾರೆ. ಅವರಿಗೆ ಗರಿಷ್ಠ ಶಿಕ್ಷೆಯ ಜೊತೆಗೆ, ಸಂತ್ರಸ್ತೆಯು ಸಾಮಾಜಿಕವಾಗಿ ಅನುಭವಿಸಿದ ಅವಮಾನ ಮತ್ತು ಮುಜುಗರಕ್ಕಾಗಿ ದೊಡ್ಡ ಮೊತ್ತದ ದಂಡವನ್ನು ವಿಧಿಸಿ, ಅದನ್ನು ಪರಿಹಾರವಾಗಿ ನೀಡಬೇಕು ಎಂದು ಮನವಿ ಸಲ್ಲಿಸಿದರು.

ಪ್ರಜ್ವಲ್ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲೆ ನಳಿನಾ ಮಾಯೇಗೌಡ, ಪ್ರಜ್ವಲ್ ಹಣಕ್ಕಾಗಿ ರಾಜಕೀಯಕ್ಕೆ ಬಂದವರಲ್ಲ, ಜನಸೇವೆ ಅವರ ಉದ್ದೇಶ ಆಗಿತ್ತು. 2024ರ ಲೋಕಸಭಾ ಚುನಾವಣೆಗೆ ಕೆಲವೇ ದಿನ ಇರುವಾಗ ಈ ವಿಡಿಯೋಗಳನ್ನು ದುರುದ್ದೇಶದಿಂದ ಹರಿಬಿಡಲಾಗಿತ್ತು. ಇದು ಅವರ ರಾಜಕೀಯ ಭವಿಷ್ಯವನ್ನೇ ನಾಶಮಾಡಲು ನಡೆಸಿದ ಕುತಂತ್ರ ಎಂದು ನ್ಯಾಯಾಲಯದ ಮುಂದೆ ವಾದಿಸಿದರು.

ಪ್ರಜ್ವಲ್ ಇನ್ನೂ ಕೇವಲ 34 ವರ್ಷದ ಯುವಕ. ಈಗಾಗಲೇ ಒಂದು ವರ್ಷ ನಾಲ್ಕು ತಿಂಗಳಿಂದ ಜೈಲಿನಲ್ಲಿ ಇದ್ದಾರೆ. ಈ ಪ್ರಕರಣದಿಂದ ಅವರ ತೇಜೋವಧೆಯಾಗಿದ್ದು, ಅಪಾರ ನಷ್ಟವನ್ನೂ ಅನುಭವಿಸಿದ್ದಾರೆ. ಅವರ ವೃತ್ತಿ ಜೀವನಕ್ಕೆ ಮಾರಕವಾಗುವಂತಹ ಶಿಕ್ಷೆಯನ್ನು ಯಾವುದೇ ಕಾರಣಕ್ಕೂ ನೀಡಬಾರದು. ಸಂತ್ರಸ್ತೆಗಿಂತ ಪ್ರಜ್ವಲ್‌ಗೆ ಹೆಚ್ಚು ಹಾನಿಯಾಗಿದೆ ಎಂದರು.

ಈ ವೇಳೆ ನ್ಯಾಯಾಲಯದಲ್ಲಿ ವೈಯಕ್ತಿಕವಾಗಿ ವಾದಿಸಿದ ಪ್ರಜ್ವಲ್ ರೇವಣ್ಣ, ನಾನು ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವೀಧರ. ಮೆರಿಟ್‌ ವಿದ್ಯಾರ್ಥಿ. ಸಂಸದನಾಗಿ ಉತ್ತಮ ಕೆಲಸ ಮಾಡಿದ್ದೇನೆ. ನಾನು ಅತ್ಯಾಚಾರ ಮಾಡಿದ್ದೇನೆ ಎಂದು ಯಾರೂ ಚಕಾರವನ್ನೂ ಎತ್ತಿಲ್ಲ. ರಾಜಕೀಯದಲ್ಲಿ ವೇಗವಾಗಿ ಬೆಳೆದಿದ್ದೇ ನನಗೆ ಮುಳುವಾಯಿತು. ಚುನಾವಣೆಯ ಹೊತ್ತಲ್ಲಿ ಈ ಆರೋಪ ಹೊರಿಸಲಾಗಿದೆ. ಆರು ತಿಂಗಳಿಂದ ನನ್ನ ತಂದೆ-ತಾಯಿಯನ್ನೂ ನೋಡಿಲ್ಲ ಎಂದು ಅತ್ತು ಅಲವತ್ತುಕೊಂಡರು. 

ವಾದ ವಿವಾದ ಆಲಿಸಿದ ನ್ಯಾ. ಸಂತೋಷ್ ಗಜಾನನ ಭಟ್ ಅವರು, ಐಪಿಸಿ ಸೆಕ್ಷನ್ 376 (2) (K), 376 (2) (N) ಅಡಿಯಲ್ಲಿ ಜೀವಿತಾವಧಿ ಶಿಕ್ಷೆ ಪ್ರಕಟಿಸಿದರು.  ಅಲ್ಲದೇ 5 ಲಕ್ಷ ರೂ. ದಂಡವನ್ನೂ ವಿಧಿಸಿದರು. ಜೊತೆಗೆ ಸಂತ್ರಸ್ತೆಗೂ 7 ಲಕ್ಷ ರೂ. ಪರಿಹಾರವನ್ನು ಘೋಷಿಸಿದರು. 

ಕೋರ್ಟ್ ತೀರ್ಪು ಪ್ರಕಟಿಸಿದ ನಂತರ ಪ್ರಾಥಮಿಕ ವಿಧಿ ವಿಧಾನಗಳನ್ನು ಕೋರ್ಟಿನಲ್ಲಿ ಮುಗಿಸಿ ನಂತರ ಪ್ರಜ್ವಲ್ ರೇವಣ್ಣ ಅವರನ್ನು ವಿಶೇಷ ಭದ್ರತೆಯೊಡನೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕರೆದೊಯ್ಯಲಾಯಿತು.

Leave a Reply