ಬಿಜೆಪಿಯಿಂದ ಮಾ. 25ರವರೆಗೆ ವಿಜಯ ಸಂಕಲ್ಪ ರಥಯಾತ್ರೆ

3 years ago

ಬೆಂಗಳೂರು: ರಾಜ್ಯದಲ್ಲಿ ಮತ್ತೆ ಶತಾಯಗತಾಯ ಅಧಿಕಾರ ಹಿಡಿಯಲೇ ಬೇಕೆಂದು ದೃಢಸಂಕಲ್ಪ ಮಾಡಿರುವ ಬಿಜೆಪಿ ಮಾ.1ರಿಂದ ರಾಜ್ಯದ 224 ಕ್ಷೇತ್ರಗಳಲ್ಲಿ ನಾಲ್ಕು ತಂಡಗಳಾಗಿ ವಿಜಯ ಸಂಕಲ್ಪ ರಥಯಾತ್ರೆ ಮೂಲಕ ಚುನಾವಣೆಗೆ ಅಧಿಕೃತ ರಣಕಹಳೆ ಮೊಳಗಿಸಲಿದೆ.

ಮಾ.1ರಿಂದ ಮಾ.22ರವರೆಗೆ ರಾಜ್ಯದ 224 ಕ್ಷೇತ್ರಗಳಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ರಾಜ್ಯ ಬಿಜೆಪಿ ಅಧ್ಯಕ್ಷ ನಳೀನ್‍ಕುಮಾರ್ ಕಟೀಲ್, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಮಾಜಿ ಸಿಎಂ ಡಿ.ವಿ.ಸದಾನಂದಗೌಡ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ನೇತೃತ್ವದಲ್ಲಿ ರಾಜ್ಯದ ಉದ್ದಗಲಕ್ಕೂ ವಿಜಯ ಸಂಕಲ್ಪ ಯಾತ್ರೆ ನಡೆಯಲಿದೆ.

ರೋಡ್ ಶೋ, ಸಾರ್ವಜನಿಕ ಸಮಾರಂಭ, ಕಾರ್ಯಕರ್ತರೊಂದಿಗೆ ಸಂಭಾಷಣೆ, ಮುಖಾಮುಖಿ ಭೇಟಿ ಮೂಲಕ ಎಲ್ಲಾ ಕ್ಷೇತ್ರಗಳಲ್ಲೂ ವಿಜಯ ಸಂಕಲ್ಪ ರಥಯಾತ್ರೆ ನಡೆಯಲಿದ್ದು, ಮಾ.25ರಂದು ಮಧ್ಯ ಕರ್ನಾಟಕದ ರಾಜಧಾನಿ ದಾವಣಗೆರೆಯಲ್ಲಿ ಮಹಾಸಮಾವೇಶದೊಂದಿಗೆ ಮುಕ್ತಾಯವಾಗಲಿದೆ.

ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಲೋಕೋಪಯೋಗಿ ಸಚಿವ ಹಾಗೂ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯ ಸಂಚಾಲಕ ಸಿ.ಸಿ.ಪಾಟೀಲ್, ಒಟ್ಟು ನಾಲ್ಕು ತಂಡಗಳಿಂದ ಮಾ.1ರಿಂದ ಯಾತ್ರೆ ಆರಂಭವಾಗಲಿದೆ ಎಂದರು.

ಫೆ.28ರಂದು ರಥಯಾತ್ರೆಗೆ ಬಿಜೆಪಿ ಕಚೇರಿಯಲ್ಲಿ ಪೂಜೆ ಮಾಡಿ ಕಳುಹಿಸಿಕೊಡಲಾಗುವುದು. 224 ವಿಧಾನಸಭಾ ಕ್ಷೇತ್ರ ಹಾಗೂ 8 ಸಾವಿರ ಕಿ.ಮೀ ಈ ರಥಯಾತ್ರೆ ಸಂಚರಿಸಲಿದ್ದು, 50ಕ್ಕೂ ಹೆಚ್ಚು ಬಿಜೆಪಿ ಪ್ರಭಾವಿ ನಾಯಕರು ಭಾಗಿಯಾಗಲಿದ್ದಾರೆ ಎಂದರು.

ಮಾರ್ಚ್ 1ರಂದು ಮಲೆಮಹಾದೇಶ್ವರ ಬೆಟ್ಟ, ಹನೂರು ತಾಲ್ಲೂಕಿನಿಂದ ಮೊದಲನೇ ಯಾತ್ರೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಚಾಲನೆ ನೀಡಲಿದ್ದಾರೆ. ಮಾರ್ಚ್ 2ರಂದು ಸಂಗೊಳ್ಳಿ ರಾಯಣ್ಣ ಸ್ಮಾರಕ, ನಂದಗಢದಿಂದ ಯಾತ್ರೆಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಚಾಲನೆ ಸಿಗಲಿದೆ. ನಂದಗಢದಿಂದ ಹೊರಡುವ ಯಾತ್ರೆಯು ಕಿತ್ತೂರು ಚೆನ್ನಮ್ಮನ ಹುಟ್ಟೂರಾದ ಕಿತ್ತೂರಿಗೂ ಹೋಗಲಿದೆ. ಮಾರ್ಚ್ 3ರಂದು ನೂತನ ಅನುಭವ ಮಂಟಪ ನಿರ್ಮಾಣವಾಗುತ್ತಿರುವ ಸ್ಥಳ, ಬಸವಕಲ್ಯಾಣ, ಬೀದರ್ ಜಿಲ್ಲೆಯಿಂದ ಕೇಂದ್ರ ಗೃಹ ಸಚಿವ ಅಮಿತ್ ಶಾ ಚಾಲನೆ ನೀಡಲಿದ್ದಾರೆ. ಅಲ್ಲದೆ ನಾಡಪ್ರಭು ಕೆಂಪೇಗೌಡ ಪ್ರತಿಮೆ, ದೇವನಹಳ್ಳಿ, ಬೆಂಗಳೂರು ಯಾತ್ರೆಗೂ ಅಮಿತ್ ಷಾ ಚಾಲನೆ ನೀಡಲಿದ್ದಾರೆ.

Leave a Reply