ಹಣೆಯ ಬೊಟ್ಟು, ಕುತ್ತಿಗೆಯ ಮಡಕೆ ಮತ್ತು ದಲಿತ ಚಳವಳಿಯ ಹೊಣೆ

3 years ago

ಬೇಸರವಾಗುತ್ತಿದೆ. ಬಹಳವೇ ಬೇಸರವಾಗುತ್ತಿದೆ. ಆದರೂ ಬರೆಯುತ್ತಿದ್ದೇನೆ. ನೊಂದವರ ಕ್ಷಮೆಯಾಚಿಸುತ್ತಾ… ಕೆಲವೊಂದು ನೆನಪುಗಳು ಹಳೆಯ ಗಾಯಗಳಿದ್ದಂತೆ. ಅವುಗಳನ್ನು ನೀವಿಕೊಳ್ಳುವುದು ಆರೋಗ್ಯಕ್ಕೆ ಒಳಿತಲ್ಲ. ಆದರೆ ಯಾರೋ ಆ ಗಾಯವನ್ನು ಉದ್ದೇಶಪೂರ್ವಕವಾಗಿ ಕೆರೆದು ಹಸಿ ಮಾಡಿದಾಗ, ಮುಲಾಮು ಹಚ್ಚುವುದಕ್ಕಾದರೂ ಆ ಗಾಯವನ್ನು ತಡವಬೇಕಾಗುತ್ತದೆ.

“ಹೇ, ನೀನು ಹೆಂಗಸಾಗಿ ಹಣೆಗೆ ಬೊಟ್ಟು ಯಾಕಿಟ್ಟಿಲ್ಲ. ನಿನ್ನ ಗಂಡ ಬದುಕಿದ್ದಾನೆ ತಾನೆ? ದುಡ್ಡು ಕೊಡ್ತಾರೆ ಅಂದ್ರೆ ಮತಾಂತರ ಆಗಿಬಿಡ್ತೀರಾ!” ಈ ಮಾತು ಇತ್ತೀಚೆಗೆ ಸೋಶಿಯಲ್ ಮೀಡಿಯಾಗಳಲ್ಲಿ ಹೆಚ್ಚು ಚರ್ಚೆಯಾಗುತ್ತಿದೆ. ಹೇಳಿದ್ದು ಕೋಲಾರದ ಬಿಜೆಪಿ ಸಂಸದ ಎಸ್.ಮುನಿಸ್ವಾಮಿ, ಅಂಗಡಿಯಲ್ಲಿ ಬಟ್ಟೆ ಮಾರುತ್ತಿದ್ದ ಒಬ್ಬ ಹೆಂಗಸನ್ನು ಉದ್ದೇಶಿಸಿ.

ಇಲ್ಲಿ ಮುನಿಸ್ವಾಮಿ, ಆ ಹೆಂಗಸಿನ ಹಣೆಯ ಬೊಟ್ಟಿನ ಪ್ರಶ್ನೆ ಮಾಡಿದ್ದು, ತನ್ನ ಪಕ್ಷವು ಬಲವಾಗಿ ಪ್ರತಿಪಾದಿಸುವ ಮನುವಾದದ ಆಚರಣೆಯನ್ನು ಆಧಾರವಾಗಿಟ್ಟುಕೊಂಡು. ಆತನ ಹಾಗೂ ಆತ ನಂಬುವ ಸಿದ್ದಾಂತದ ಪ್ರಕಾರ ಮದುವೆಯಾದ ಹೆಣ್ಣು ಹಣೆಗೆ ಬೊಟ್ಟು ಇಡಬೇಕಾದ್ದು ಸನಾತನ ಆಚರಣೆ. ಮುನಿಸ್ವಾಮಿ ಯಾವ ಮನುವಾದವನ್ನು ಉಲ್ಲೇಖಿಸಿ ಈ ಪ್ರಶ್ನೆ ಕೇಳಿದ್ದಾರೋ, ಅದೇ ಮನುವಾದದ ಆಚರಣೆಯ ಆಯಾಮವನ್ನೇ ಆಧಾರವಾಗಿಸಿಕೊಳ್ಳುವುದಾದರೆ, ಆ ಹೆಂಗಸನ್ನು ಪ್ರಶ್ನಿಸುವ ಮುನ್ನ ’ನನ್ನ ಕುತ್ತಿಗೆಗೆ ನೇತುಹಾಕಿಕೊಳ್ಳಬೇಕಿದ್ದ ಮಡಕೆ ಏನಾಯ್ತು?’ ಎಂದು ಆತ ಕೇಳಿಕೊಳ್ಳಬೇಕಿತ್ತಲ್ಲವೇ?

ಆರಂಭದಲ್ಲಿ ಹೇಳಿದಂತೆ, ಕ್ಷಮೆಯೊಂದಿಗೇ ಈ ಪ್ರಸ್ತಾಪವನ್ನು ಮುಂದಿಡುತ್ತಿದ್ದೇನೆ. ಎಸ್.ಮುನಿಸ್ವಾಮಿಯವರು ದಲಿತ ಸಮುದಾಯದಿಂದ ಬಂದ ರಾಜಕೀಯ ವ್ಯಕ್ತಿ. ಹೆಣ್ಣಾದವಳು ಹಣೆಗೆ ಬೊಟ್ಟು ಇಡಬೇಕು, ಮುಟ್ಟಾದರೆ ಮನೆಯಿಂದ ಹೊರಗಿರಬೇಕು, ಗಂಡ ಸತ್ತರೆ ಅವನ ಚಿತೆಗೆ ಹಾರಿ ಸಹಗಮನ ಆಚರಿಸಬೇಕು ಎಂದು ಕಟ್ಟಳೆ ವಿಧಿಸಿದ್ದ ಅದೇ ಸನಾತನ ಪರಂಪರೆ ದಲಿತರ ಬದುಕಿನಿಂದಲೂ ಘನತೆಯನ್ನು ಕಿತ್ತುಕೊಂಡಿತ್ತು. ಮುಟ್ಟಬಾರದ, ಮುಟ್ಟಿಸಿಕೊಳ್ಳಬಾರದವರೆಂಬ ಹಣೆಪಟ್ಟಿ ಅಂಟಿಸಿದ್ದ ಅವರು ಊರಿಂದ ಆಚೆ ಇರಬೇಕು; ಕುಡಿಯುವ ನೀರಿನ ಬಾವಿಗಳನ್ನು ಮುಟ್ಟಬಾರದು; ಅವರ ನೆರಳೂ ಸವರ್ಣೀಯರ ಮೇಲೆ ಬೀಳಬಾರದು…. ಅಬ್ಬಬ್ಬಾ ಎಷ್ಟೆಲ್ಲ ಹೀನ ಆಚರಣೆಗಳು. ಅವನ ಉಗುಳು ನೆಲಕ್ಕೆ ಬೀಳಬಾರದೆಂಬ ಕಾರಣಕ್ಕೆ ದಲಿತರಾದವರು ತಮ್ಮ ಕುತ್ತಿಗೆಗೆ ಮಡಕೆಯನ್ನು ತೂಗುಹಾಕಿಕೊಳ್ಳಬೇಕಿತ್ತು. ಅವರ ಹೆಜ್ಜೆ ಗುರುತುಗಳು ನೆಲದಲ್ಲಿ ಅಳಿಸಿಹೋಗಬೇಕೆಂದು ಸೊಂಟಕ್ಕೆ ಪೊರಕೆಯನ್ನು ಬಿಗಿದು, ಬಾಲದಂತೆ ಎಳೆದುಕೊಂಡು ಓಡಾಡಬೇಕಿತ್ತು.

ಇವೆಲ್ಲ ಅನಿಷ್ಟ ಪದ್ಧತಿಗಳು ಕಣ್ಮರೆಯಾಗಿದ್ದು ಬಾಬಾ ಸಾಹೇಬರ ಸಂಘರ್ಷಯುತ ಬದುಕಿನಿಂದ, ಅವರು ಕೊಟ್ಟ ಸಂವಿಧಾನದಿಂದ! ಶೋಷಿತ ಸಮುದಾಯಗಳ ಮುಂಚಲನೆ ಮತ್ತು ವಿಮೋಚನೆಗಳೆ ಅವರ ಹೋರಾಟದ ಮೂಲ ಸಾರ. ಎಲ್ಲಾ ಜಾತಿ, ಎಲ್ಲಾ ವರ್ಗಗಗಳಲ್ಲಿ ಶೋಷಿತಳಾದ ಹೆಣ್ಣಿನ ವಿಮೋಚನೆಯೂ ಅವರ ಹೋರಾಟದ ಭಾಗವಾಗಿತ್ತು.

ಕುತ್ತಿಗೆಗೆ ಮಡಕೆಯನ್ನು ನೇತುಹಾಕಿಕೊಂಡು, ಸೊಂಟಕ್ಕೆ ಪೊರಕೆ ಬಿಗಿದುಕೊಂಡು, ಊರು ಪ್ರವೇಶಿಸುವ ಮುನ್ನ ‘ಸಂಬೋಳಿ, ಸಂಬೋಳಿ’ ಎಂದು ಕೂಗಬೇಕಿದ್ದ ಸನಾತನ ಬೇಲಿಯಿಂದ ಆಚೆ ಬಂದು ಇವತ್ತು ಮುನಿಸ್ವಾಮಿಯಂತವರು ಸಂಸದರಾಗಿ ಆಯ್ಕೆಯಾಗಿದ್ದಾರೆಂದರೆ ಅದು ಬಾಬಾ ಸಾಹೇಬರ ಹೋರಾಟದ ಫಲದಿಂದ, ನಮ್ಮ ಸಂವಿಧಾನದಿಂದ!

ನಮ್ಮ ಸಂವಿಧಾನ ಮಹಿಳೆಯ ವಿಮೋಚನೆ ಮತ್ತು ಅವಳ ಸ್ವಾತಂತ್ರ್ಯದ ಹಕ್ಕನ್ನೂ ಖಾತ್ರಿಗೊಳಿಸುತ್ತದೆ. ಇದು ಈ ಸಂಸದರಿಗೆ ಅರಿವಿಲ್ಲವೇ? ಅಥವಾ ಅವರ ಪಾಲಿಗೆ ಸಮಾನತೆಯ ಸಂವಿಧಾನಕ್ಕಿಂತ, ಅಸಮಾನತೆಯ ಮನುವಾದವೇ ಶ್ರೇಷ್ಠವಾಯಿತೆ? ಅದು ನಿಜವಾಗಿದ್ದರೆ, ಆ ಹೆಣ್ಣಿನ ಬೊಟ್ಟು ಪ್ರಶ್ನಿಸುವ ಮುನ್ನ, ತನ್ನ ಕುತ್ತಿಗೆಯಲ್ಲಿದ್ದ ಮಡಕೆ ಹೋಗಿದ್ದೆಲ್ಲಿಗೆ ಎಂಬುದನ್ನು ಪ್ರಶ್ನಿಸಿಕೊಳ್ಳುವುದು ಬೇಡವೆ? ಅಂಬೇಡ್ಕರರ ಸಂವಿಧಾನದ ಕಾರಣಕ್ಕೆ ಅಧಿಕಾರವನ್ನುಣ್ಣುತ್ತಾ, ಅದೇ ಅಂಬೇಡ್ಕರರು ನಡುಬೀದಿಯಲ್ಲಿ ಸುಟ್ಟ ಮನುಸ್ಮೃತಿಯ ಸಮರ್ಥಕರಂತೆ ಆಡುವ ಇವರನ್ನು ಏನೆನ್ನಬೇಕು?

ಮುನಿಸ್ವಾಮಿಯವರಾಗಲಿ, ಅಥವಾ ಮತ್ತ್ಯಾವುದೇ ಮನುಷ್ಯರಾಗಲಿ ಅಂತಹ ಕರಾಳ ಕಾಲಕ್ಕೆ ಮತ್ತೆ ಮರಳುವುದು ಖಂಡಿತ ಬೇಡ. ಅದೇ ರೀತಿ ಹೆಣ್ಣನ್ನು ಸಹಾ ಆ ಕರಾಳ ಕಾಲಕ್ಕೆ ತಳ್ಳುವುದೂ ಬೇಡ.

ಮುನಿಸ್ವಾಮಿಯ ಮನುವಾದದ ಮಾತುಗಳನ್ನು ಪ್ರಜ್ಞಾವಂತರೆಲ್ಲ ಖಂಡಿಸಬೇಕು, ಖಂಡಿಸುತ್ತಿದ್ದಾರೆ. ಆದರೆ, ಈ ಹೊಣೆ ಮಿಕ್ಕೆಲ್ಲರಿಗಿಂತ ದಲಿತ ಸಂಘಟನೆಗಳ ಮೇಲೆ ಈಗ ಹೆಚ್ಚಿದೆ. ದಲಿತ ಚಳವಳಿ ಹುಟ್ಟಿದ್ದೇ ಅಂಬೇಡ್ಕರ್‌ವಾದದ ಮೇಲೆ. ಅಂಬೇಡ್ಕರ್‌ವಾದವೆಂದರೆ ಅದು ವಿಮೋಚನೆಯ ಹಾದಿ, ಶೋಷಣೆಯ ವಿರುದ್ಧದ ಪ್ರತಿರೋಧದ ಪಥ. ಸಮುದಾಯದ ಹಿತಕ್ಕಿಂತ, ಸ್ವಾರ್ಥಕ್ಕಾಗಿ ಕೋಮುವಾದದ ಸಮರ್ಥಕರಾಗಿ ಬದಲಾದ ಇಂತವರು, ತಮ್ಮ ಮೇಲೆ ಕೇಳಿಬರುವ ಟೀಕೆಗಳಿಗೆ ‘ದಲಿತ’ ಎಂಬ ಗುರಾಣಿಯನ್ನೇ ಅಡ್ಡ ಹಿಡಿಯುವ ಸಾಧ್ಯತೆಯುಂಟು. ಹಿಂದೆ ಇದೇರೀತಿ, ತಲೆ ಮೇಲೆ ಚೆಡ್ಡಿಗಳನ್ನು ಹೊತ್ತು ಮೆರವಣಿಗೆ ಹೋಗಿದ್ದ ವ್ಯಕ್ತಿಯೊಬ್ಬ, ಅದನ್ನು ಟೀಕಿಸಿದವರ ಮೇಲೆ ‘ಜಾತಿನಿಂದನೆ’ ಕೇಸು ಹಾಕಿದ್ದು ಇನ್ನೂ ಹಸಿರಾಗಿದೆ. ಕೇಸಿನ ಕಾರಣಕ್ಕೆ ಅಂತ ಅಲ್ಲ, ಅಂಬೇಡ್ಕರ್‌ರ ವಿಮೋಚನೆಯ ತಳಹದಿ ಮೇಲೆ ಕಟ್ಟಿಕೊಂಡ ಸ್ವಾಭಿಮಾನಿ ದಲಿತ ಚಳವಳಿಯು, ವಿಮೋಚನೆಗೆ ಅಡ್ಡ ಬರುವ ಯಾರೇ ಆಗಿದ್ದರೂ, ಆತ ನಮ್ಮವನೇ ಆಗಿದ್ದರೂ, ನಾವು ಸಹಿಸಲೊಲ್ಲೆವು ಎಂಬುದನ್ನು ಪುನರುಚ್ಛರಿಸಲಿಕ್ಕಾದರೂ ಮುನಿಸ್ವಾಮಿಯ ವಿರುದ್ಧ ದಲಿತ ಸಂಘಟನೆಗಳಿಂದಲೇ ದೊಡ್ಡ ಪ್ರತಿರೋಧ ಹುಟ್ಟಬೇಕಿದೆ. ಶುದ್ಧ ಮನುವಾದಿ ಪಕ್ಷದಲ್ಲಿ ಇಂತವರಿಗೆ ಮಣೆ ಹಾಕಿರುವುದೇ ‘ದಲಿತ’ ಎಂಬ ರಾಜಕೀಯ ಲಾಭದ ಕಾರಣಕ್ಕೆ. ಅದೇ ಕಾರಣಕ್ಕೆ ಇವರು ಮನುವಾದವನ್ನು ಹೇರುವ ಸಲಾಕೆಗಳಂತೆ ಬಳಕೆಯಾಗುತ್ತಾರೆ. ಇಂತವರಿಗೆ ದಲಿತ ಚಳವಳಿಗಳಲ್ಲದೆ ಮತ್ತ್ಯಾವುದೂ ಸಮರ್ಪಕ ಮದ್ದಲ್ಲ!

– ಮಾಚಯ್ಯ ಎಂ ಹಿಪ್ಪರಗಿ

Leave a Reply