ಮಧುಗಿರಿ ವಿಧಾನಸಭೆ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿ ಯಾರು? ಹಿನ್ನೆಲೆ ಏನು?

3 years ago

ಬೆಂಗಳೂರು: ಐಎಂಎ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಲಂಚ ಸ್ವೀಕಾರ ಆರೋಪದ ಬಂಧಿತನಾಗಿ ಅಮಾನತ್ತಿನಲ್ಲಿದ್ದ ಕೆಎಎಸ್ ಅಧಿಕಾರಿ ಎಲ್ ಸಿ ನಾಗರಾಜ್ ಅವರು ತಮ್ಮ ಹುದ್ದೆಗೆ ನೀಡಿದ ರಾಜೀನಾಮೆಯನ್ನು ರಾಜ್ಯ ಸರ್ಕಾರ ಅಂಗೀಕರಿಸಿದೆ.

ಇದರೊಂದಿಗೆ ಮಧುಗಿರಿ ವಿಧಾನಸಭೆ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿ ದೊರೆತಂತಾಗಿದೆ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ನಾಗರಾಜ್ ಮಧುಗಿರಿ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಸಿದ್ದತೆ ನಡೆಸಿದ್ದರು. ಆದರೆ ಅವರ ರಾಜೀನಾಮೆ ಕುರಿತು ಸರ್ಕಾರ ಯಾವುದೇ ತೀರ್ಮಾನ ಕೈಗೊಳ್ಳದ ಹಿನ್ನೆಲೆಯಲ್ಲಿ , ಕುಮಾರಸ್ವಾಮಿ ಈ ಕ್ಷೇತ್ರಕ್ಕೆ ಹಾಲಿ ಶಾಸಕ ವೀರಭದ್ರಯ್ಯ ಅವರನ್ನೇ ಜೆಡಿಎಸ್ ಅಭ್ಯರ್ಥಿ ಎಂದು ಘೋಷಿಸಿದರು.

ಇದರಿಂದ ವಿಚಲಿತರಾದ ನಾಗರಾಜ್ ನಂತರದಲ್ಲಿ ಬಿಜೆಪಿ ನಾಯಕರೊಂದಿಗೆ ಸಂಧಾನ ಮಾಡಿಕೊಂಡು ಮಧುಗಿರಿ ಕ್ಷೇತ್ರದಿಂದ ಕಣಕ್ಕಿಳಿಯಲು ಸಜ್ಜುಗೊಂಡರು. ಈ ಕ್ಷೇತ್ರದಲ್ಲಿ ವಾಲ್ಮೀಕಿ ಸಮುದಾಯಕ್ಕೆ ಸೇರಿದ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿರುವ ಕಾರಣ ಜೆಡಿಎಸ್ ಮತ್ತು ಕಾಂಗ್ರೆಸ್ ಗೆ ಸೆಡ್ಡು ಹೊಡೆಯಬಹುದು ಎಂಬ ಲೆಕ್ಕಾಚಾರದಲ್ಲಿ ಬಿಜೆಪಿ ಎಲ್.ಸಿ.ನಾಗರಾಜ್ ಅವರನ್ನು ಕಣಕ್ಕಿಳಿಸಲು ಸಿದ್ದತೆ ನಡೆಸಿದೆ. ಹೀಗಾಗಿ ಇವರ ರಾಜೀನಾಮೆ ಇದೀಗ ಅಂಗೀಕಾರಗೊಂಡಿದೆ.

ಲಂಚ ಸ್ವೀಕಾರ ಆರೋಪದಡಿ ಈಗಾಗಲೇ ಅಮಾನತ್ತಿನಲ್ಲಿದ್ದ ಎಲ್ ಸಿ ನಾಗರಾಜ್ ತಮ್ಮ ವೈಯಕ್ತಿಕ ಕಾರಣಗಳ ನಿಮಿತ್ತ ಕೆ ಎ ಎಸ್ (ಕಿರಿಯ ಶ್ರೇಣಿ) ಹುದ್ದೆಗೆ ರಾಜೀನಾಮೆ ನೀಡಿದ್ದು, ಅವರ ರಾಜೀನಾಮೆಯನ್ನು ಸರ್ಕಾರ ಅಂಗೀಕರಿಸಿದೆ.
ಆದರೆ, ಅವರ ವಿರುದ್ಧ ಹೂಡಲು ಪ್ರಸ್ತಾಪಿಸಲಾಗಿರುವ, ಪರಿಶೀಲನೆಯಲ್ಲಿರುವ ಮತ್ತು ಈಗಾಗಲೇ ಹೂಡಲಾಗಿರುವ ತನಿಖಾ ಹಂತದಲ್ಲಿರುವ ಶಿಸ್ತು ಕ್ರಮ ಪ್ರಕರಣಗಳು, ಇಲಾಖಾ ವಿಚಾರಣೆ, ಜಂಟಿ ಇಲಾಖಾ ವಿಚಾರಣೆ, ಲೋಕಾಯುಕ್ತ ಪ್ರಕರಣಗಳು, ಸಿವಿಲ್‌ ಹಾಗೂ ಕ್ರಿಮಿನಲ್ ಮೊಕದ್ದಮೆ ಪ್ರಕರಣಗಳನ್ನು ನಿಯಮಾನುಸಾರ ಮುಂದುವರಿಸುವ ಹಾಗೂ ಭವಿಷ್ಯದಲ್ಲಿಯೂ ಸಹ ಇವರ ವಿರುದ್ಧ ಯಾವುದೇ ಇಲಾಖೆಯಲ್ಲಿ ಶಿಸ್ತು ಕ್ರಮ ಪ್ರಕರಣಗಳನ್ನು / ಸಿವಿಲ್ ಮತ್ತು ಕ್ರಿಮಿನಲ್ ಮೊಕದ್ದಮೆ ಪ್ರಕರಣಗಳನ್ನು ಹೂಡುವ ಸಂಭವವಿದ್ದಲ್ಲಿ ನಿಯಮಾನುಸಾರ ಹೂಡುವ ಷರತ್ತಿಗೆ ಒಳಪಟ್ಟು ತಕ್ಷಣದಿಂದ ಜಾರಿಗೆ ಬರುವಂತೆ ರಾಜೀನಾಮೆಯನ್ನು ಸರ್ಕಾರ ಅಂಗೀಕರಿಸಿ ಆದೇಶ ಹೊರಡಿಸಿದೆ.

ಒಂದು ಲಕ್ಷ ಷೇರುದಾರರಿಂದ 4 ಸಾವಿರ ಕೋಟಿ ದೋಚಿ, ವಂಚಿಸಿದ್ದ ಐ ಮಾನಿಟರಿ ಅಡ್ವೈಸರಿ (ಐ ಎಂ ಎ) ಕಂಪನಿ ಪರ ವರದಿ ಕೊಡಲು 4.5 ಕೋಟಿ ಲಂಚ ಪಡೆದ ಆರೋಪದ ಮೇಲೆ ಉತ್ತರ ಉಪ ವಿಭಾಗಾಧಿಕಾರಿ ಎಲ್‌. ಸಿ. ನಾಗರಾಜ್‌ ಬಂಧನಕ್ಕೊಳಗಾಗಿದ್ದರು. ಕೆ ಎ ಎಸ್‌ 1998ನೇ ಬ್ಯಾಚ್‌ಗೆ ಸೇರಿದ ಇವರು, ಮೂರು ಕಂತುಗಳಲ್ಲಿ ಲಂಚ ಪಡೆದ ಆರೋಪ ಎದುರಿಸುತ್ತಿದ್ದಾರೆ.

ಎಲ್ ಸಿ ನಾಗರಾಜ್ ಅವರ ನೆಲಮಂಗಲ ಪರಮಣ್ಣ ಬಡಾವಣೆಯ ಮೇಲೆ ಈ ಹಿಂದೆ ಎಸಿಬಿ ದಾಳಿ ನಡೆದಿತ್ತು. ಎಲ್ ಸಿ ನಾಗರಾಜ್ ಹಾಗೂ ಸಂಬಂಧಿಗಳ ಮನೆ ಮೇಲೆ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದರು. ಈ ವೇಳೆ ಅಪಾರ ಪ್ರಮಾಣದ ನಗದು, ದಾಖಲೆಗಳನ್ನು ವಶಕ್ಕೆ ಪಡೆದಿದ್ದರು.

ಹಿರಿಯ ಅಧಿಕಾರಿಯೊಬ್ಬರು ಬೇಕು ಅಂತಲೇ ದಾಳಿ ಮಾಡಿಸಿದ್ದಾರೆ. ನಾನು ಪ್ರಮಾಣಿಕವಾಗಿ ಇದ್ದೇನೆ. ಪದೇ ಪದೇ ನನ್ನ ಮೇಲೆ ದಾಳಿ ಮಾಡಲಾಗುತ್ತಿದೆ. ದಾಳಿಗೆ ಭಯ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ. ನನ್ನನ್ನು ಗುರಿಯಾಗಿಸಿ ಇದು 3 ನೇ ಬಾರಿ ದಾಳಿ ಮಾಡಲಾಗಿದೆ. ವಶಪಡಿಸಿಕೊಂಡಿರುವ ಹಣಕ್ಕೆ ದಾಖಲಾತಿಗಳು ಇವೆ. ನನ್ನ ಪತ್ನಿಗೆ ಸಂಬಂಧಿಸಿದ ಆಸ್ತಿ ಮಾರಾಟ ಮಾಡಲು ಯತ್ನಿಸಿದ್ದೆ. 2.4 ಕೋಟಿಗೆ ಆಸ್ತಿ ಮಾರಾಟ ಮಾಡಿದ್ದೆ. ಅದರ ಹಣವನ್ನು ನಾನು ಪಡೆದಿದ್ದೆ. ಎಲ್ಲಾ ಕೂಡ ವೈಟ್ ಎಂದು ನಾಗರಾಜ್ ಸ್ಪಷ್ಟಪಡಿಸಿದ್ದರು.

Leave a Reply