ಬೆಂಗಳೂರು: ವಿಧಾನಸಭೆ ಚುನಾವಣೆಗೆ ವೇಳಾಪಟ್ಟಿ ಪ್ರಕಟಿಸಲು ದಿನಗಣನೆ ಆರಂಭವಾಗಿರುವಂತೆ ಮತದಾರರನ್ನು ಒಲಿಸಿಕೊಳ್ಳಲು ಆಕಾಂಕ್ಷಿಗಳು ಭರಪೂರ ಕೊಡುಗೆಗಳನ್ನು ನೀಡುತ್ತಿದ್ದಾರೆ. ಪ್ರವಾಸ, ಉಡುಗೊರೆ, ಔತಣಕೂಟಗಳನ್ನು ಆಯೋಜಿಸುತ್ತಿದ್ದು, ಇವುಗಳ ಮೇಲೆ ಇದೀಗ ಚುನಾವಣಾ ಆಯೋಗ ಹದ್ದಿನ ಕಣ್ಣಿಡಲಿದೆ.
ಚುನಾವಣೆ ತಯಾರಿ ಕುರಿತಂತೆ ಕಳೆದ ಮೂರು ದಿನಗಳಿಂದ ಹಲವು ಸಭೆ ನಡೆಸಿದ ಕೇಂದ್ರ ಚುನಾವಣಾ ಆಯುಕ್ತರಿಗೆ ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳು ಮತದಾರರಿಗೆ ಒಡ್ಡುತ್ತಿರುವ ಆಮಿಷಗಳ ಬಗ್ಗೆ ವ್ಯಾಪಕ ದೂರುಗಳು ಸಲ್ಲಿಕೆಯಾಗಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಲು ನಿರ್ಧರಿಸಲಾಗಿದೆ.
ಈ ಸರಣಿ ಸಭೆಗಳ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್
ಕರ್ನಾಟಕದಲ್ಲಿ ಮತದಾರರಿಗೆ ಆಮಿಷ ಒಡ್ಡುತ್ತಿರುವ ಪ್ರಕರಣಗಳಲ್ಲಿ ತಕ್ಷಣದಿಂದಲೇ ಕ್ರಮ ಜರುಗಿಸಲಾಗುವುದು. ಈ ದಿಸೆಯಲ್ಲಿ ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದರು
ಕರ್ನಾಟಕದ ಚುನಾವಣೆಯಲ್ಲಿ ಹಣದ ಬಳಕೆ ಮತ್ತು ಆಮಿಷಗಳನ್ನು ತಡೆಯುವುದು ದೊಡ್ಡ ಸವಾಲು. ಅದನ್ನು ತಡೆಯಲು ನೀತಿಸಂಹಿತೆ ಜಾರಿಯಾಗುವವರೆಗೂ ಕಾಯುವ ಅಗತ್ಯವಿಲ್ಲ. ಅಂತಹ ಪ್ರಕರಣಗಳಲ್ಲಿ ಕ್ರಮ ಜರುಗಿಸಲು ಸಂಪೂರ್ಣ ಅಧಿಕಾರ ನೀಡಲಾಗಿದೆ ಎಂದರು.
ಹಣದ ಸಾಗಣೆ ಮೇಲೆ ನಿಗಾ ಇರಿಸಲಾಗುವುದು. ಬ್ಯಾಂಕ್ ಮತ್ತು ಎಟಿಎಂಗಳಿಗೆ ಹಣ ಸಾಗಿಸುವ ವಾಹನಗಳು ಸಂಜೆ ಐದು ಗಂಟೆಯ ನಂತರ ಸಂಚರಿಸುವಂತಿಲ್ಲ. ದೊಡ್ಡ ಮೊತ್ತದ ಹಣ ಡ್ರಾ ಮಾಡುವವರ ಮೇಲೆ ನಿಗಾ ಇಡಲು ಸೂಚಿಸಲಾಗಿದೆ. ಗೃಹೋಪಯೋಗಿ ವಸ್ತುಗಳ ಸಗಟು ಖರೀದಿ ಮೇಲೆ ನಿಗಾ ಇರಿಸುವಂತೆ ನಿರ್ದೇಶನ ನೀಡಲಾಗಿದೆ ಎಂದು ಹೇಳಿದರು.
ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸಲು ಆಯೋಗ ಸಜ್ಜಾಗಿದೆ. ಯಾವುದೇ ಅಧಿಕಾರಿಗಳು ಪಕ್ಷಪಾತ ಮಾಡುತ್ತಿರುವ ದೂರು ಬಂದರೆ ತನಿಖೆ ನಡೆಸಿ, ಕಠಿಣ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು
ಚುನಾವಣಾ ಸಿದ್ಧತೆಯನ್ನು ಪರಿಶೀಲಿಸಲಾಗಿದೆ. ಎಷ್ಟು ಹಂತದಲ್ಲಿ ಚುನಾವಣೆ ನಡೆಸಬೇಕು ಮತ್ತು ಯಾವ ದಿನಾಂಕದಂದು ಚುನಾವಣಾ ವೇಳಾಪಟ್ಟಿ ಪ್ರಕಟಿಸಬೇಕು ಎಂಬುದನ್ನು ದೆಹಲಿಯಲ್ಲಿ ಸಭೆ ನಡೆಸಿದ ಬಳಿಕ ನಿರ್ಧರಿಸಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಈ ಚುನಾವಣೆಯಲ್ಲಿ 80 ವರ್ಷಕ್ಕಿಂತ ಹೆಚ್ಚಿನ ವಯಸ್ಸಾದವರು ಹಾಗೂ ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಮನೆಯಲ್ಲೇ ಮತದಾನಕ್ಕೆ ಅವಕಾಶ ನೀಡಲಾಗುವುದು. ರಾಜಕೀಯ ಪಕ್ಷಗಳೂ ಈ ಪ್ರಸ್ತಾವಕ್ಕೆ ಸಹಮತ ಸೂಚಿಸಿವೆ ಎಂದರು.
ಈ ವೇಳೆ ಚುನಾವಣಾ ಆಯುಕ್ತರಾದ ಅನೂಪ್ ಚಂದ್ರ ಪಾಂಡೆ, ಅರುಣ್ ಗೋಯಲ್, ರಾಜ್ಯದ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಉಪಸ್ಥಿತರಿದ್ದರು.



