ಸೋಮಣ್ಣ ಪ್ರತಿಷ್ಠಾನ ನಾಡಪ್ರಭು ಕೆಂಪೇಗೌಡ 512ನೇ ಜಯಂತಿ
ಚಲನಚಿತ್ರ ಕಲಾವಿದರು, ರಂಗಭೂಮಿ ಕಲಾವಿದರಿಗೆ ಸರ್ಕಾರಿ ದರದಲ್ಲಿ ನಿವೇಶನ ಹಂಚಿಕೆ
ಬೆಂಗಳೂರು: ಬೆಂಗಳೂರು ನಗರ ನಿರ್ಮಾತೃ ನಾಡಪ್ರಭು ಕೆಂಪೇಗೌಡರ ದೂರದೃಷ್ಟಿ ಚಿಂತನೆಯಿಂದ ಬೆಂಗಳೂರು ನಗರ ನಿರ್ಮಾಣ ಮಾಡಿದರು. ಅವರು ಜಾತ್ಯತೀತ ನಿಲುವು ಹೊಂದಿದ್ದು, ಎಲ್ಲ ಕಾಯಕ ಸಮಾಜಗಳಾದ ನೇಕಾರ, ಮಂಡಿ ವ್ಯಾಪಾರಿ, ಕುಂಬಾರಿಕೆ, ವಿವಿಧ ಕುಶಲಕರ್ಮಿ ಕೆಲಸಗಾರರಿಗೆ ಪೇಟೆಗಳ ನಿರ್ಮಾಣ ಮಾಡಿ ಉದ್ಯಮಕ್ಕೆ ಹೆಚ್ಚಿನ ಪ್ರಾಧಾನ್ಯತೆ ನೀಡಿದರು. ಕಾಯಕಯೋಗಿ ಬಸವೇಶ್ವರರು ಮತ್ತು ನಾಡಪ್ರಭು ಕೆಂಪೇಗೌಡರು ಜಾತ್ಯತೀತ ನಿಲುವಿನ ಪ್ರತಿಪಾದಕರು ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದರು.
ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ, ಗೋವಿಂದರಾಜನಗರ ವಾರ್ಡ್ ಪಾಲಿಕೆ ಸೌಧ ಅವರಣದಲ್ಲಿ ವಿ.ಸೋಮಣ್ಣ ಪ್ರತಿಷ್ಠಾನ ವತಿಯಿಂದ ನಾಡಪ್ರಭು ಕೆಂಪೇಗೌಡರ 512ನೇ ಜಯಂತಿ ಹಾಗೂ ಚಲನಚಿತ್ರ ಕಲಾವಿದರು ಮತ್ತು ರಂಗಭೂಮಿ ಕಲಾವಿದರುಗಳಿಗೆ ದಿನಸಿ ಸಾಮಾಗ್ರಿಗಳ ವಿತರಣೆ ಸಮಾರಂಭದಲ್ಲಿ ಮಾತಾಡಿದ ಅವರು, ನಿವೇಶನ ಇಲ್ಲದಿರುವ ಚಲನಚಿತ್ರ ಕಲಾವಿದರು ಮತ್ತು ರಂಗಭೂಮಿ ಕಲಾವಿದರುಗಳನ್ನು ಪಟ್ಟಿ ಮಾಡಿ, ಅರ್ಜಿ ಕೊಟ್ಟರೆ ಕೂಡಲೆ ಮುಖ್ಯಮಂತ್ರಿಗಳ ಹತ್ತಿರ ಚರ್ಚಿಸಿ ಒಂದೂವರೆ ತಿಂಗಳಲ್ಲಿ ವಸತಿ ಅಥವಾ ನಿವೇಶನ ಹಂಚಿಕೆ ಮಾಡಲಾಗುವುದು ಎಂದು ಭರವಸೆ ನೀಡಿದರು.
ಇದೇ ವೇಳೆ ಮಾತಾಡಿದ ಸಿಎಂ ರಾಜಕೀಯ ಕಾರ್ಯದರ್ಶಿ ಎಸ್.ಆರ್.ವಿಶ್ವನಾಥ್, ಬೆಂಗಳೂರು ನಗರ ವಿಶ್ವವಿಖ್ಯಾತಿ ಪಡೆಯಲು ಮೂಲ ಕಾರಣ ಪುರುಷರು ನಾಡಪ್ರಭು ಕೆಂಪೇಗೌಡರು. ಅವರ ಅಭಿವೃದ್ದಿಪರ ಚಿಂತನೆ, ಯೋಜನೆಗಳು ಜಾರಿಗೆ ಬಂದರೆ ಬೆಂಗಳೂರು ನಗರ ಇನ್ನಷ್ಟು ಅಭಿವೃದ್ದಿಯತ್ತ ಸಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ರಾಜ್ಯ ಬಿ.ಜೆ.ಪಿ. ಯುವ ಮೋರ್ಚಾ ನಾಯಕ ಡಾ. ಅರುಣ್ ಸೋಮಣ್ಣ ಮತ್ತು ಚಲನಚಿತ್ರ ನಟ ಗೋಲ್ಡನ್ ಸ್ಟಾರ್ ಗಣೇಶ್, ಅರಣ್ಯ ಅಭಿವೃದ್ದಿ ನಿಗಮ ಅಧ್ಯಕ್ಷೆ ನಟಿ ತಾರ ಆನುರಾಧ, ಬಿ.ಬಿ.ಎಂ.ಪಿ. ಮಾಜಿ ಸದಸ್ಯ ಕೆ.ಉಮೇಶ್ ಶೆಟ್ಟಿ, ವಾಗೇಶ್, ದಾಸೇಗೌಡ, ಗಂಗಭೈರಯ್ಯ, ಶಕುಂತಲ ದೊಡ್ಡಲಕ್ಕಪ್ಪ, ರೂಪ ಲಿಂಗೇಶ್ವರ್, ಸವಿತಾ ಎಂ ಕೃಷ್ಣ, ನಟ ಶ್ರೀನಿವಾಸಮೂರ್ತಿ, ಚಿತ್ರ ಸಾಹಿತಿ ನಾಗೇಂದ್ರ ಪ್ರಸಾದ್ ಮತ್ತು ಗೋವಿಂದರಾಜನಗರ ಮಂಡಲ ಬಿ.ಜೆ.ಪಿ. ಅಧ್ಯಕ್ಷ ವಿಶ್ವನಾಥಗೌಡ ಮತ್ತು ವಿ.ಸೋಮಣ್ಣ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಪಾಲನೇತ್ರ ಮೊದಲಾದವರು ಹಾಜರಿದ್ದರು.
ಕಾರ್ಯಕ್ರಮಕ್ಕೆ ದೀಪ ಬೆಳಗಿಸಿ ಉದ್ಘಾಟನೆ ಮಾಡಿ ನಾಡಪ್ರಭು ಕೆಂಪೇಗೌಡ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದರು. ನಂತರ ಚಲನಚಿತ್ರ ಕಲಾವಿದರು ಮತ್ತು ರಂಗಭೂಮಿ ಕಲಾವಿದರಿ ದಿನಸಿ, ಆಹಾರ ಕಿಟ್ ಗಳನ್ನು ವಿತರಿಸಲಾಯಿತು.




