ಪರಿಹಾರ ನೀಡಲು ಸರ್ಕಾರ ಮೀನಾಮೇಷ ಎಣಿಸುತ್ತಿರುವುದು ಏಕೆ?
ಸಂತ್ರಸ್ತರ ಮಕ್ಕಳ ಭವಿಷ್ಯವನ್ನು ರೂಪಿಸುವುದು ಹೇಗೆ?
ಸಾವಿಗೆ ನೀವು ನೈತಿಕ ಹೊಣೆ ಹೊರುತ್ತೀರಾ? ಎಂದ ಕೆಪಿಸಿಸಿ ಅಧ್ಯಕ್ಷ
ಚಾಮರಾಜನಗರ: ಬಿಜೆಪಿ ಸರ್ಕಾರ ಸರಿಯಾದ ಪ್ರಮಾಣದಲ್ಲಿ ಮೆಡಿಕಲ್ ಆಕ್ಸಿಜನ್ ವ್ಯವಸ್ಥೆ ಮಾಡದೆ ನಿರ್ಲಕ್ಷ್ಯ ತೋರಿದ ಪರಿಣಾಮ ಕಳೆದ ತಿಂಗಳು ಚಾಮರಾಜನಗರದಲ್ಲಿ 36 ಕೋವಿಡ್ ಸೋಂಕಿತರು ಆಸ್ಪತ್ರೆಯಲ್ಲಿ ಅಸುನೀಗಿದರು. ಅಷ್ಟೇ ಅಲ್ಲದೆ ಬಿಜೆಪಿ ಸರ್ಕಾರವು 36ರಲ್ಲಿ ಕೇವಲ 24 ಕುಟುಂಬಗಳಿಗಷ್ಟೇ ಅಲ್ಪ ಪ್ರಮಾಣದ ಅಂದರೆ 2 ಲಕ್ಷ ರೂ.ಪರಿಹಾರ ನೀಡಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪಿಸಿದರು.
ಚಾಮರಾಜನಗರದಲ್ಲಿ ಆಕ್ಸಿಜನ್ ಕೊರತೆಯಿಂದ ಬಲಿಯಾದವರ ಕುಟುಂಬದವರನ್ನು ಭೇಟಿಯಾಗಿ ಪಕ್ಷದ ವತಿಯಿಂದ ಧನಸಹಾಯ ನೀಡಿದ ಅವರು, ಚಾಮರಾಜನಗರದಲ್ಲಿ ಸಿದ್ದರಾಜಮ್ಮನವರನ್ನು ಭೇಟಿ ಮಾಡಿದೆ. ಕುಟುಂಬಕ್ಕೆ ಆಧಾರವಾಗಿದ್ದ ಗಂಡನನ್ನು ಕಳೆದುಕೊಂಡ ದುಃಖದ ಜೊತೆಗೆ ಆರ್ಥಿಕವಾಗಿ ಜರ್ಝರಿತವಾಗಿರುವ ನೋವು ಅವರನ್ನು ಕಾಡುತ್ತಿದೆ. ಪರಿಹಾರದ ಮಾತು ಪಕ್ಕಕ್ಕಿರಲಿ, ಅವರಿಗೆ ಮರಣ ಪ್ರಮಾಣಪತ್ರವನ್ನು ನೀಡಲೂ ಬಿಜೆಪಿ ಸರ್ಕಾರ ನಿರಾಕರಿಸುತ್ತಿದೆ ಎಂದಿದ್ದಾರೆ.
ಚಾಮರಾಜನಗರದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ 36 ಕುಟುಂಬಗಳಿಗೆ 1 ಲಕ್ಷ ರೂ.ಗಳ ಆರ್ಥಿಕ ನೆರವು ನೀಡಲಾಯಿತು. ಸರ್ಕಾರದ ಕೆಲಸವನ್ನು ನಾವು ಮಾಡುತ್ತಿದ್ದೇವೆ. ನಮ್ಮಿಂದಾಗುವ ಗರಿಷ್ಠ ಮಟ್ಟದ ಆರ್ಥಿಕ ನೆರವನ್ನು ನಾವು ನೀಡಿದ್ದೇವೆ ಎಂದಿದ್ದಾರೆ.
ಬಿಜೆಪಿ ನಾಯಕರು ಬೆಂಗಳೂರಿನಲ್ಲಿ ಐಸಿಯು ಬೆಡ್ ಮತ್ತು ವ್ಯಾಕ್ಸಿನ್ಗಳ ಕಾಳಸಂತೆಯಲ್ಲಿ ದುಡ್ಡು ಮಾಡುವುದರಲ್ಲಿ ನಿರತರಾಗಿದ್ದಾರೆ. ಸಿದ್ದರಾಜಮ್ಮ ಹಾಗೂ ಅವರಂತೆಯೆ ರಾಜ್ಯದಲ್ಲಿ ಸಂಕಷ್ಟಕ್ಕೊಳಗಾದವರ ಕುರಿತು ಯೋಚಿಸಲು ಅವರ ಬಳಿ ಸಮಯವಿಲ್ಲ ಎಂದಿದ್ದಾರೆ.
ಮುಖ್ಯಮಂತ್ರಿಗಳು, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಗಳ ಬಳಿ ಕೇಳಲು ನನ್ನದೊಂದಿಷ್ಟು ಪ್ರಶ್ನೆಗಳಿವೆ. 1) ಸಿದ್ದರಾಜಮ್ಮ ಮತ್ತು ಇತರ 11 ಮೃತರ ಕುಟುಂಬಗಳಿಗೆ ಇದುವರೆಗೂ ಯಾಕೆ ಮರಣ ಪ್ರಮಾಣಪತ್ರಗಳನ್ನು ನೀಡಿಲ್ಲ? 2) ಕುಟುಂಬದ ಆಧಾರವಾಗಿದ್ದವರೇ ಮರಣ ಹೊಂದಿರುವಾಗ ಸಿದ್ದರಾಜಮ್ಮ ತನ್ನ ಕುಟುಂಬ ನಿರ್ವಹಣೆ ಮಾಡುವುದು ಹೇಗೆ? ನಿಮ್ಮ ಸರ್ಕಾರವೂ ಪರಿಹಾರ ನೀಡಲು ಮೀನಾಮೇಷ ಎಣಿಸುತ್ತಿರುವುದು ಏಕೆ? 3) 2 ಲಕ್ಷ ಪರಿಹಾರ ನೀಡಿದರೂ ಕೂಡ ಸಿದ್ದರಾಜಮ್ಮ ತನ್ನ ಅತ್ತೆ-ಮಾವನನ್ನು ನೋಡಿಕೊಳ್ಳುವುದು ಹೇಗೆ? ತನ್ನ ಇಬ್ಬರು ಮಕ್ಕಳ ಭವಿಷ್ಯವನ್ನು ರೂಪಿಸುವುದು ಹೇಗೆ? 4) ಎರಡನೇ ಅಲೆ ಬಂದಾಗ ನಿಮ್ಮ ಸರ್ಕಾರ ನಿದ್ರಿಸುವುದನ್ನು ಬಿಟ್ಟು ಕನಿಷ್ಠ ಪಕ್ಷ ಮೆಡಿಕಲ್ ಆಕ್ಸಿಜನ್ ವ್ಯವಸ್ಥೆ ಮಾಡಿದ್ದರೆ ಸಿದ್ದರಾಜಮ್ಮರ ಗಂಡ ಬದುಕುತ್ತಿದ್ದರು. ಇದೀಗ ಅವರ ಸಾವಿಗೆ ನೀವು ನೈತಿಕ ಹೊಣೆ ಹೊರುತ್ತೀರಾ? ಎಂದು ಪ್ರಶ್ನಿಸಿದ್ದಾರೆ.
ಬಿಜೆಪಿ ಸರ್ಕಾರ ಸರಿಯಾದ ಪ್ರಮಾಣದಲ್ಲಿ ಮೆಡಿಕಲ್ ಆಕ್ಸಿಜನ್ ವ್ಯವಸ್ಥೆ ಮಾಡದೆ ನಿರ್ಲಕ್ಷ್ಯ ತೋರಿದ ಪರಿಣಾಮ ಕಳೆದ ತಿಂಗಳು ಚಾಮರಾಜನಗರದಲ್ಲಿ 36 ಕೋವಿಡ್ ಸೋಂಕಿತರು ಆಸ್ಪತ್ರೆಯಲ್ಲಿ ಅಸುನೀಗಿದರು. ಅಷ್ಟೇ ಅಲ್ಲದೆ ಬಿಜೆಪಿ ಸರ್ಕಾರವು 36ರಲ್ಲಿ ಕೇವಲ 24 ಕುಟುಂಬಗಳಿಗಷ್ಟೇ ಅಲ್ಪ ಪ್ರಮಾಣದ ಅಂದರೆ 2 ಲಕ್ಷ ರೂ. ಪರಿಹಾರ ನೀಡಿದೆ ಎಂದಿದ್ದಾರೆ.




