ಬೆಂಗಳೂರು: ಕೊವೀಡ್ ಎರಡನೇ ಸೊಂಕಿನಲ್ಲಿ ಸಂಕಷ್ಟಕ್ಕೀಡಾಗಿದ್ದ ಕಾರ್ಮಿಕರಿಗೆ ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿಯು ವಲಸೆ ಕಟ್ಟಡ ಕಾರ್ಮಿಕರಿಗೆ ಆಹಾರದಕಿಟ್ ವಿತರಿಸುತ್ತಿದೆ. ಆದರೆ ವಿತರಿಸಲಾಗುವ ಆಹಾರ ಕಿಟ್ ಗಳ ಗುಣಮಟ್ಟ ಮತ್ತು ಖರೀದಿಸಲಾದ ಆಹಾರ ಕಿಟ್ ಗಳಲ್ಲಿ ನಡೆದಿರಬಹುದಾದ ಭ್ರಷ್ಟಚಾರದ ಕುರಿತು ಮಾಧ್ಯಮಗಳು ಬೆಳಕು ಚೆಲ್ಲಿ ವರದಿ ಮಾಡಿವೆ. ಈ ಹಿನ್ನಲೆಯಲ್ಲಿ ಇಡೀ ಆಹಾರ ಕಿಟ್ ವಿತರಣೆಯ ವ್ಯವಹಾರವನ್ನು ಸಂಪೂರ್ಣ ತನಿಖೆಗೆ ಒಳಪಡಿಸಬೇಕು ಒಂದು ವೇಳೆ ಆರೋಪ ಸಾಬೀತಾದರೆ ಅಪರಾಧಿಗಳನ್ನು ಶಿಕ್ಷೆಗೊಳಪಡಿಸಬೇಕು ಎಂದು ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್(ಸಿಐಟಿಯು) ರಾಜ್ಯ ಸಮಿತಿ ಆಗ್ರಹಿಸಿದೆ.
ಜೂನ್ 9 ರಂದು ಕಾರ್ಮಿಕ ಸಚಿವರ ಅಧ್ಯಕ್ಷತೆಯಲ್ಲಿ ಕಲ್ಯಾಣ ಮಂಡಳಿಯಲ್ಲಿ ನಡೆದ ಕಾರ್ಮಿಕ ಸಂಘಗಳ ಸಭೆಯಲ್ಲಿ ಎಲ್ಲ ಕಾರ್ಮಿಕ ಸಂಘಗಳು ಕೊವೀಡ್ ಸೋಂಕು ವ್ಯಾಪಕವಾಗಿ ಹರಡಿರುವ ಈ ಸನ್ನಿವೇಶದಲ್ಲಿ ಆಹಾರ ಕಿಟ್ ಗಳನ್ನು ವಿತರಿಸುವ ಪ್ರಸ್ತಾಪ ಕೈ ಬಿಟ್ಟು ನೋಂದಾಯಿತ ಪ್ರತಿ ಕಾರ್ಮಿಕನಿಗೆ ಮಾಸಿಕ ರೂ 10 ಸಾವಿರ ಹಣವನ್ನು ನೇರವಾಗಿ ಖಾತೆಗೆ ವರ್ಗಾಹಿಸಲು ಆಗ್ರಹಿಸಿದ್ದವು. ಅಲ್ಲದೆ ಕಲ್ಯಾಣ ಮಂಡಳಿ ಹಣದಲ್ಲಿ ಶಾಸಕರಿಗೆ ಆಹಾರ ಕಿಟ್ ಗಳನ್ನು ನೀಡುವ ಕ್ರಮವನ್ನು ವಿರೋಧಿಸಿದ್ದವು.
ಕಟ್ಟಡ ಕಾರ್ಮಿಕರ ಕಲ್ಯಾಣ ನಿಧಿಯಲ್ಲಿ ಸಂಗ್ರಹವಾಗಿರುವ ಹಣವನ್ನು ಕಟ್ಟಡ ಕಾರ್ಮಿಕರ ಕಲ್ಯಾಣ ಯೋಜನೆಗಳಿಗೆ ಮಾತ್ರ ಉಪಯೋಗಿಸ ಬೇಕೆಂಬ ಸರ್ವೋಚ್ಚ ನ್ಯಾಯಾಲಯದ ಆದೇಶ ಇರುವದನ್ನು ಮಂಡಳಿಯ ಗಮನಕ್ಕೆ ಕಾರ್ಮಿಕ ಸಂಘಟನೆಗಳ ಪ್ರತಿನಿಧಿಗಳು ತಂದರು. ಕಟ್ಟಡ ಕಾರ್ಮಿಕರ ಕಲ್ಯಾಣ ನಿಧಿಯಲ್ಲಿ ಸಂಗ್ರಹವಾಗಿರುವ ಹಣವನ್ನು ಸರಕಾರಿ ಯೋಜನೆಗಳಿಗೆ ಹಾಗು ಇತರೆ ರಾಜಕೀಯ ಪ್ರೇರಿತ ಉದ್ದೇಶಗಳಿಗೆ ಹಾಗು ಹಣವನ್ನು ಇನ್ಯಾವುದೋ ಯೋಜನೆಗಳ ಹೆಸರಲ್ಲಿ ರಾಜಕಾರಣಿಗಳು ಹಾಗು ಪ್ರಭಾವಿ ವ್ಯಕ್ತಿಗಳು ಲೂಟಿ ಮಾಡುವ ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ. ಅಂತಹದೇ ಲೂಟಿಯ ಪ್ರಯತ್ನವನ್ನು ಕೋವಿಡ್ ಪರಿಹಾರದ ಹೆಸರಲ್ಲಿ ಮಾಡಲಾಗುತ್ತದೆ ಎಂದು ಸಿಐಟಿಯು ರಾಜ್ಯ ಸಮಿತಿ ಅಭಿಪ್ರಾಯ ಪಟ್ಟಿದೆ. ಹಾಗು ಈ ಅಕ್ರಮ ಹಣದ ಲೂಟಿಯನ್ನು ಖಂಡಿಸುತ್ತದೆ. ಸಮರ್ಪಕ ತಣಿಕೆಯಾಗಬೇಕೆಂದು ಒತ್ತಾಯಿಸಿದೆ.
ಆದರೆ ಕಾರ್ಮಿಕ ಸಚಿವರು ಕಟ್ಟಡ ಕಾರ್ಮಿಕ ಸಂಘಗಳು ವ್ಯಕ್ತಪಡಿಸಿದ ಅಭಿಪ್ರಾಯವನ್ನು ಧಿಕ್ಕರಿಸಿ ಏಕಪಕ್ಷೀಯವಾಗಿ ಆಹಾರ ಕಿಟ್ ವಿತರಿಸುವ ನಿರ್ಧಾರ ಕೈಗೊಂಡಿದ್ದರು. ಈಗ ವಿತಸಲಾಗುತ್ತಿರುವ ಆಹಾರದ ಗುಣಮಟ್ಟ ಹಾಗೂ ಖರೀದಿಯಲ್ಲೂ ಹತ್ತಾರು ಕೋಟೀ ರೂಪಾಯಿಗಳ ಭ್ರಷ್ಟಾಚಾರವಾಗಿರುವ ಸಾಧ್ಯತೆಗಳ ಬಗ್ಗೆ ಕಟ್ಟಡ ಕಾರ್ಮಿಕ ಸಂಘಗಳು ಆರೋಪ ಮಾಡಿವೆ ಮತ್ತು ಮಾಧ್ಯಮಗಳು ವಿಶೇಷ ವರದಿಗಳನ್ನು ಪ್ರಕಟಿಸಿವೆ ಎಂದು ಸಿಐಟಿಯು ಹೇಳಿದೆ.
ಈ ಹಿನ್ನೆಲೆಯಲ್ಲಿ ಕರೋನಾ ನೆಪದಲ್ಲಿ ಕಾರ್ಮಿಕರಿಗೆ ಆಹಾರ ಕಿಟ್ ವಿತರಿಸುವ ನೆಪದಲ್ಲಿ ಕಾರ್ಮಿಕ ಸಚಿವಾಲಯ ಹಾಗೂ ಕಲ್ಯಾಣ ಮಂಡಳಿಯಲ್ಲಿ ಈ ನಿರ್ಧಾರವನ್ನು ಕೂಡಲೇ ತನಿಖೆಗೆ ಒಳಪಡಿಸಬೇಕೆಂದು ಸಿಐಟಿಯು ಆಗ್ರಹಿಸಿದೆ.




