ಬೆಂಗಳೂರು: ಸರ್ಕಾರದ ಕಾಮಗಾರಿ ಪಡೆದಿರುವ ಗುತ್ತಿಗೆದಾರರಿಗೆ ಬಿಲ್ ಪಾವತಿಸಲು ನಿಗದಿತ ಪರ್ಸೆಂಟೇಜ್ ಪಡೆಯಲು ಸರ್ಕಾರದಲ್ಲಿನ ಪ್ರಮುಖರು ಸೂಚನೆ ನೀಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ವಿವಾದದ ಬಾಂಬ್ ಸಿಡಿಸಿದ್ದಾರೆ. ಈ ಹೇಳಿಕೆ ಸಾಕಷ್ಟು ವಿವಾದ ಸೃಷ್ಟಿಸಿದ್ದು, ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಗೃಹ ಮಂತ್ರಿ ಸೇರಿದಂತೆ ಸರ್ಕಾರದ ಹಲವು ಪ್ರಮುಖರು ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ವಿಧಾನಸಭೆ ಚುನಾವಣೆ ಸೋಲಿನ ನಂತರ ಕುಟುಂಬ ಸಮೇತ ಯೂರೋಪ್ ಪ್ರವಾಸಕ್ಕೆ ತೆರಳಿದ್ದಅವರು, ಕಳೆದ ರಾತ್ರಿ ಆಗಮಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಗುತ್ತಿಗೆದಾರರಿಗೆ ಇಂತಿಷ್ಟು ಪರ್ಸೆಂಟೇಜ್ ನೀಡಲು ಹೇಳಿದ್ದಾರೆ ಎಂಬ ಮಾಹಿತಿ ಯೂರೋಪ್ನಲ್ಲಿದ್ದಾಗಲೇ ಬಂದಿತು. ಮಂತ್ರಿಗಳು, ಮಂತ್ರಿಗಳ ಚೇಲಾಗಳು ಕಮಿಷನ್ ಕೇಳುತ್ತಿದ್ದಾರಂತೆ. ಇಂತವರು ರಾಹುಲ್ ಮುಂದೆ ಭ್ರಷ್ಟಾಚಾರದ ಬಗ್ಗೆ ಚರ್ಚೆ ಮಾತಾಡುತ್ತಾರಂತೆ ಎಂದು ವ್ಯಂಗ್ಯವಾಡಿದರು.
ಬಿಡಿಎ ಅಧಿಕಾರಿಗಳಿಗೆ 250 ಕೋಟಿ ರೂಪಾಯಿ ಸಂಗ್ರಹ ಮಾಡಲು ಹೇಳಿದ್ದಾರಂತೆ. ದೆಹಲಿಗೆ ಆ ಹಣ ತಲುಪಿಸಲು ಪಟ್ಟಿ ಕೊಡುವುದಾಗಿ ಹೇಳಿದ್ದಾರಂತೆ. ಕೆಲ ಬಿಡಿಎ ಅಧಿಕಾರಿಗಳೇ ಈ ವಿಚಾರವನ್ನು ನನ್ನ ಬಳಿ ಹೇಳಿದ್ದಾರೆ. ಸದ್ಯ ಯಾವುದೇ ಪೆನ್ ಡ್ರೈವ್ ಬಿಡುಗಡೆ ಮಾಡಲ್ಲ, ಜನರಿಗೆ ಗೊತ್ತಾಗಲಿ ಎಂದು ಹೇಳಿದರು.
ಹೊರನೋಟಕ್ಕೆ ಭ್ರಷ್ಟಾಚಾರ ನಿರ್ಮೂಲನೆ ಮಾಡುತ್ತೇವೆ ಎನ್ನುತ್ತಾರೆ. ಆದರೆ ಕಾಂಗ್ರೆಸ್ ಸ್ವಾತಂತ್ರ್ಯ ಬಂದಾಗಿನಿಂದಲೂ ಅಧಿಕಾರ ನಡೆಸಿದೆ. ಅಂದಿನಿಂದಲೂ ವಸೂಲಿಗಾಗಿಯೇ ಕಾಂಗ್ರೆಸ್ ಪಕ್ಷ ಇದೆ ಎಂದು ಕಿಡಿಕಾರಿದರು.
ಈಸ್ಟ್ ಇಂಡಿಯಾ ಕಂಪನಿ ಕಾಂಗ್ರೆಸ್ ಗೆ ಅಧಿಕಾರ ನೀಡಿ ಹೋಯ್ತು. ಈಸ್ಟ್ ಇಂಡಿಯಾ ಕಂಪನಿಯ ವಸೂಲಿಯನ್ನು ಕಾಂಗ್ರೆಸ್ ಮುಂದುವರಿಸಿದೆ. ಕಾಂಗ್ರೆಸ್ನವರು ಭ್ರಷ್ಟಾಚಾರ ನಿಲ್ಲಿಸುತ್ತಾರಾ ಎಂದು ಪ್ರಶ್ನಿಸಿದರು.
ವೈಎಸ್ ಟಿ.ತೆರಿಗೆ: ರಾಜ್ಯ ಪೊಲೀಸ್ ಇಲಾಖೆಯಲ್ಲಿ ನಡೆಯುತ್ತಿರುವ ಇನ್ಸ್ ಪೆಕ್ಟರ್ ವರ್ಗಾವಣೆ ದೊಡ್ಡ ದಂಧೆಯಾಗಿದೆ. ಪೊಲೀಸ್ ಅಧಿಕಾರಿಗಳ ಮೆಸ್ ನಲ್ಲಿ ವರ್ಗಾವಣೆ ಪಟ್ಟಿ ಸಿದ್ದಗೊಂಡಿದೆ. ಗೃಹ ಮಂತ್ರಿ ಹಾಗೂ ಮುಖ್ಯಮಂತ್ರಿ ಅಲ್ಲಿ ಕುಳಿತು ವರ್ಗಾವಣೆ ಪಟ್ಟಿ ಸಿದ್ದ ಪಡಿಸುತ್ತಿದ್ದರೆ ವೈಎಸ್ ಟಿ ಗೆ ಸಂಬಂಧಿಸಿದ ವ್ಯಕ್ತಿ ಅಲ್ಲಿ ಹಾಜರಿದ್ದರು. ಅಲ್ಲಿ ಅವರಿಗೇನು ಕೆಲಸ ಎಂದರು.
ಪೊಲೀಸ್ ಅಧಿಕಾರಿಗಳನ್ನ ಯಾವ ಮಟ್ಟಿಗೆ ಬಳಸಿಕೊಳ್ಳುತ್ತಿದ್ದಾರೆ ಎಂದು ನಾನು ವಿದೇಶದಲ್ಲಿದ್ದರೂ ಪ್ರತಿನಿತ್ಯದ ಬೆಳವಣಿಗೆಗಳನ್ನ ಗಮನಿಸಿದ್ದೇನೆ ಎಂದರು.
ವಿದೇಶದಲ್ಲಿ ಕುಳಿತು ಸರ್ಕಾರ ಅಸ್ತಿರಗೊಳಿಸಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ನಾವು ಕುಟುಂಬ ಸಮೇತ ಯುರೋಪ್ ಪ್ರವಾಸಕ್ಕೆ ಹೋಗಿದ್ದು. ಆದ್ರೆ ಸರ್ಕಾರ ಕೆಡುವಲು ಹೋಗಿದ್ದೇವೆ ಎಂಬ ರೀತಿ ಬಿಂಬಿಸಲಾಗಿದೆ. 19 ಸ್ಥಾನ ಗೆದ್ದ ನಮ್ಮ ಬಗ್ಗೆ ಎಷ್ಟು ಭಯ ಇದೆ ಎಂದು ಗೊತ್ತಾಗುತ್ತದೆ. ಬಹುಶಃ ಅವರಿಗೆ ಈ ಸರ್ಕಾರದ ಅವಧಿ ಬಹಳ ದಿನ ಇರಲ್ಲ ಎಂದು ಅಂದುಕೊಂಡಿರಬೇಕು. ನಮಗಿಂತ ಜಾಸ್ತಿ ಅವರೇ ಶಾಸ್ತ್ರ ಕೇಳುತ್ತಾರೆ. ಜೋತಿಷ್ಯವನ್ನು ಬಹಳ ನಂಬಿರೋರು ಅವರು ಹಲವಾರು ರೀತಿ ಕುತಂತ್ರಗಳನ್ನ ಮಾಡುತ್ತಾರೆ, ಆ ಜೋತಿಷ್ಯದಲ್ಲಿ ಅದರ ಕೃತಕವಾದ ಶಕ್ತಿಯನ್ನ ಚುನಾವಣೆಯಲ್ಲಿ ತುಂಬಿಕೊಂಡಿದ್ದಾರೆ. ಆ ಕೃತಕವಾದ ಶಕ್ತಿ ಬಹುಶಃ ಬಹಳ ದಿನ ಇರಲ್ಲ ಎಂದು ಅವರ ತಲೆಯಲ್ಲಿ ಇರಬಹುದು. ಅದಕ್ಕಾಗಿ ಇಂತಹ ಹೇಳಿಕೆ ನೀಡಿರಬೇಕು ಎಂದು ವ್ಯಂಗ್ಯವಾಡಿದರು.
ತಮ್ಮನಾಗಿ ಕೇಳುತ್ತೇನೆ: ಇದಕ್ಕೆ ಪ್ರತಿಕ್ರಿಯಿಸಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ವಿದೇಶದಲ್ಲಿ ವಿಶ್ರಾಂತಿ ಪಡೆದು ಬಂದಿದ್ದಾರೆ. ಅವರು ಖುಷಿಗೆ ಮಾತನಾಡುತ್ತಾರೆ, ನಮ್ಮಣ್ಣ ಮಾತನಾಡಲಿ, ತಮ್ಮನಾಗಿ ಕೇಳುತ್ತೇನೆ ಎಂದು ಹೇಳಿದ್ದಾರೆ.
ಮಾಟ, ಮಂತ್ರ, ಜ್ಯೋತಿಷ್ಯ ಫಲದ ಮೂಲಕ ಚುನಾವಣೆ ಗೆದ್ದು ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ ಎಂಬುದನ್ನು ಆರೋಪಕ್ಕೆ ತಿರುಗೇಟು ನೀಡಿದ ಅವರು, ಮಾಯೆನೋ, ಮಾಟನೋ, ಜ್ಯೋತಿಷ್ಯನೋ, ಧರ್ಮನೋ, ಶ್ರಮನೋ ಮನಸ್ಸಿದ್ದರೆ ಮಾರ್ಗ, ಭಕ್ತಿ ಇದ್ದರೆ ಭಗವಂತ ಎಂದು ಮಾರ್ಮಿಕವಾಗಿ ಹೇಳಿದರು.
ಮೂರು ವರ್ಷದಿಂದ ನಾನು ನಿದ್ದೆ ಮಾಡಿಲ್ಲ, ಸರಿಯಾಗಿ ಊಟ ಮಾಡಿಲ್ಲ. ಹಗಲೂ-ರಾತ್ರಿ ದುಡಿದಿದ್ದೇನೆ. ಕಾರ್ಯಕರ್ತರನ್ನೂ ಮಲಗಲು ಬಿಟ್ಟಿಲ್ಲ. ಜನ ನಮ್ಮ ಮೇಲೆ ವಿಶ್ವಾಸ ಇಟ್ಟು ಅಧಿಕಾರ ನೀಡಿದ್ದಾರೆ. ಈಗ ನಾವು ಅವರ ಋಣ ತೀರಿಸುವ ಕೆಲಸ ಮಾಡುತ್ತಿದ್ದೇವೆ ಎಂದರು.
ಕುಮಾರಸ್ವಾಮಿಯವರಿಗೆ ಅವರದೇ ಆದ ಅನುಭವವಿದೆ. ಖುಷಿಗೆ ಏನು ಬೇಕಾದರೂ ಮಾತನಾಡಲಿ. ಅವರ ಆಶೀರ್ವಾದ, ಮಾಗದರ್ಶನ ನಮಗೆ ಬಹಳ ಮುಖ್ಯ. ವಿದೇಶದಲ್ಲಿ ವಿಶ್ರಾಂತಿ ಪಡೆದುಕೊಂಡು ಬಂದಿದ್ದಾರೆ. ಸಮಾಧಾನಕ್ಕಾಗಿ ಮಾತನಾಡುತ್ತಾರೆ. ನಮ್ಮ ಅಭ್ಯಂತರವಿಲ್ಲ, ಅಣ್ಣ ಮಾತನಾಡಲಿ ಬಿಡಿ, ತಮ್ಮನಾಗಿ ಕೇಳುತ್ತೇನೆ ಎಂದು ಹೇಳಿದರು.
ಹಿಟ್ ಅಂಡ್ ರನ್: ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯಿಸಿ, ಕುಮಾರಸ್ವಾಮಿಯವರದ್ದು ಯಾವಾಗಲೂ ಹಿಟ್ ಅಂಡ್ ರನ್ ಕೇಸು. ವೃಥಾ ಆರೋಪಗಳನ್ನು ಮಾಡುತ್ತಾರೆ ಎಂದರು.
ಈ ಹಿಂದೆ ಪೆನ್ಡ್ರೈವ್ ತೋರಿಸಿದ್ದರು. ಅದನ್ನು ಸಾಬೀತು ಮಾಡಿದರೆ ಎಂದು ಪ್ರಶ್ನಿಸಿದ ಅವರು ಪೆನ್ಡ್ರೈವ್ ಇದ್ದರಲ್ಲವೇ ಹೊರಗೆಬಿಡುವುದು ಎಂದರು.
ಯಾವ ದಂಧೆ: ಗೃಹಸಚಿವ ಡಾ.ಜಿ.ಪರಮೇಶ್ವರ್ ಮಾತನಾಡಿ, ಗೃಹ ಇಲಾಖೆಯಲ್ಲಿ ವರ್ಗಾವಣೆ ದಂಧೆ ನಡೆದಿದೆ ಎಂಬ ಆರೋಪವನ್ನು ನಿರಾಕರಿಸಿದರು. ಕಾನೂನು ಸುವ್ಯವಸ್ಥೆ ಕಾಪಾಡುವ ಹಾಗೂ ಆಡಳಿತ ದೃಷ್ಟಿಯಿಂದ ವರ್ಗಾವಣೆ ಮಾಡಲಾಗಿದೆ ಎಂದು ಸಮರ್ಥಿಸಿಕೊಂಡರು.
ಕಾರಣಾಂತರದಿಂದ ಕೆಲವು ವರ್ಗಾವಣೆಯನ್ನು ತಡೆ ಹಿಡಿದಿದ್ದೇವೆ. ಒಬ್ಬ ಇನ್ಸ್ ಪೆಕ್ಟರ್ ಗೆ ಐದಾರು ಕಡೆ ಅವಕಾಶವಿರುತ್ತದೆ. ಅದನ್ನು ನೋಡಿಕೊಂಡು ಸರಿ ಮಾಡುತ್ತೇವೆ ಎಂದರು.
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ವರ್ಗಾವಣೆ ದಂಧೆ ಆರೋಪ ಮಾಡಿರುವುದು ಸರಿಯಲ್ಲ. ಯಾರು ಏನು ಬೇಕಾದರೂ ಮಾತನಾಡಲಿ. ಸರ್ಕಾರ ನಡೆಸುವವರು ನಾವು. ಯಾವುದು ಸರಿ ಎನಿಸುತ್ತದೆಯೋ ಅದನ್ನು ಮಾಡುತ್ತೇವೆ ಎಂದು ಹೇಳಿದರು.
ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದಾಗ ನಾನು ಗೃಹಸಚಿವನಾಗಿದ್ದೆ. ಆಗ ಅವರು ಯಾವ ರೀತಿ ಸಲಹೆ ಸೂಚನೆ ಕೊಡುತ್ತಿದ್ದರು ಎಂಬುದು ಗೊತ್ತಿದೆ. ಆದರೂ ಅದನ್ನು ಯಾವತ್ತೂ ಹೇಳಿಲ್ಲ. ಹೇಳುವುದು ಸರಿ ಕಾಣುವುದಿಲ್ಲ ಎಂದು ತಿಳಿಸಿದರು.



