ಇಂಫಾಲ: ದಿಢೀರ್ ಬೆಳವಣಿಗೆಯಲ್ಲಿ ಮಣಿಪುರದ 5 ಜೆಡಿಯು ಶಾಸಕರು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಈ ಮೂಲಕ ಬಿಹಾರ ಸಿಎಂ ನಿತೀಶ್ ಕುಮಾರ್ ಅವರಿಗೆ ಹಿನ್ನಡೆ ಆಗಿದೆ.
ಈ ಸಂಬಂಧ ಮಣಿಪುರ ವಿಧಾನಸಭೆ ಕಾರ್ಯದರ್ಶಿ ಕೆ.ಮೇಘಜಿತ್ ಸಿಂಗ್ ಹೇಳಿಕೆ ಬಿಡುಗಡೆ ಮಾಡಿದ್ದು, ಐದು ಜೆಡಿಯು ಶಾಸಕರು ಬಿಜೆಪಿ ಸೇರ್ಪಡೆಯಾಗಿರುವುದನ್ನು ಸ್ಪೀಕರ್ ಅನುಮೋದಿಸಿದ್ದಾರೆ ಎಂದಿದ್ದಾರೆ.
ಬಿಹಾರದಲ್ಲಿ ಕಳೆದ ತಿಂಗಳು ಬಿಜೆಪಿ ಜೊತೆಗಿನ ಸಖ್ಯ ತೊರೆದ ನಿತೀಶ್ ಕುಮಾರ್, ಮಹಾಮೈತ್ರಿ ಮೂಲಕ ಆರ್ಜೆಡಿ ಮತ್ತು ಕಾಂಗ್ರೆಸ್ ಜೊತೆ ಕೈಜೋಡಿಸಿ ಹೊಸ ಸರ್ಕಾರ ರಚಿಸಿದ್ದರು. ಈ ನಡುವೆ ಮಣಿಪುರದಲ್ಲಿ ಜೆಡಿಯು ಶಾಸಕರು ಬಿಜೆಪಿ ಸೇರ್ಪಡೆಯಾಗುವ ಮೂಲಕ ಬಿಜೆಪಿ ತಿರುಗೇಟು ಕೊಟ್ಟಿದೆ.
ಮಾರ್ಚ್ ತಿಂಗಳಲ್ಲಿ ನಡೆದ ಮಣಿಪುರ ವಿಧಾನಸಭೆ ಚುನಾವಣೆಯಲ್ಲಿ ಜೆಡಿಯು 7 ಕ್ಷೇತ್ರಗಳಲ್ಲಿ ಗೆಲುವು ದಾಖಲಿಸಿತ್ತು. 60 ಸದಸ್ಯ ಬಲದ ವಿಧಾನಸಭೆಯಲ್ಲಿ ಬಿಜೆಪಿ 32 ಸ್ಥಾನಗಳಲ್ಲಿ ಗೆಲುವು ದಾಖಲಿಸಿ, ಸರ್ಕಾರ ರಚಿಸಿತ್ತು. ಬಿರೇನ್ ಸಿಂಗ್ ನೇತೃತ್ವದಲ್ಲಿ ಸರ್ಕಾರ ರಚನೆಯಾಗಿದೆ.
ಕೆ.ಎಚ್. ಜೋಯ್ಕಿಶನ್, ಎನ್.ಸನತೆ, ಅಚಾಬ್ ಉದ್ದೀನ್, ಎಲ್ ಎಂ ಖೌಟೆ ಮತ್ತು ತಂಗಜಮ್ ಅರುಣ್ಕುಮಾರ್ ಬಿಜೆಪಿ ಸೇರ್ಪಡೆಯಾಗಿರುವ ಶಾಸಕರು. ಮಣಿಪುರದಲ್ಲಿ ಜೆಡಿಯು ಶಾಸಕರು ಬಿಜೆಪಿ ಸರ್ಕಾರಕ್ಕೆ ಬೆಂಬಲ ನೀಡಿದ್ದರು. ಬಿಹಾರ ಬೆಳವಣಿಗೆಯ ಹಿನ್ನೆಲೆಯಲ್ಲಿ ಮಣಿಪುರದಲ್ಲೂ ಜೆಡಿಯು ಶಾಸಕರು ಬಿಜೆಪಿಗೆ ನೀಡಿದ್ದ ಬೆಂಬಲ ವಾಪಸ್ ಪಡೆಯುತ್ತಾರೆ ಎಂಬ ಚರ್ಚೆ ನಡೆದಿತ್ತು. ಇದೀಗ . ಐದು ಶಾಸಕರು ಬಿಜೆಪಿ ಸೇರಿದ್ದಾರೆ.



