ಹೈದರಾಬಾದ್: ತಿರುಪತಿ ತಿಮ್ಮಪ್ಪನ ದರ್ಶನ ಮುಗಿಸಿಕೊಂಡು ಮನೆಗೆ ಬರುತ್ತಿದ್ದವರ ಮೇಲೆ ದುತ್ತನೆ ಎರಗಿದ ಜವರಾಯ ಒಂದೇ ಕುಟುಂಬದ ಐವರ ಪ್ರಾಣ ಅಪಹರಿಸಿಕೊಂಡು ಹೋಗಿದ್ದಾನೆ.
ತೆಲಂಗಾಣದ ಸೂರ್ಯಪೇಠ ಜಿಲ್ಲೆಯ ಮಠಮಪಲ್ಲಿಯ ಬಳಿ ಇಂದು ನಸುಕಿನಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಅಥಣಿ ತಾಲೂಕಿನ ಬಡಚಿ ಗ್ರಾಮದ ಒಂದೇ ಕುಟುಂಬದ ಐವರು ಮೃತಪಟ್ಟಿದ್ದಾರೆ.
ಸೂರ್ಯಪೇಟೆ ಜಿಲ್ಲೆಯ ಕಡಪ-ಚಿತ್ತೂರ ರಾಷ್ಟ್ರೀಯ ಹೆದ್ದಾರಿಯಲ್ಲಿ ವೇಗವಾಗಿ ಬರುತ್ತಿದ್ದ ಕ್ರೂಸರ್ ಹಾಗೂ ಲಾರಿ ನಡುವೆ ಮುಖಾಮುಖಿ ಅಪಘಾತ ಸಂಭವಿಸಿದೆ.
ಈ ದುರ್ಘಟನೆಯಲ್ಲಿ ಕ್ರೂಸರ್‌ನಲ್ಲಿದ್ದ ಬಡಚಿ ಗ್ರಾಮದ ಒಂದೇ ಕುಟುಂಬದ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಮೃತರನ್ನು ಶೋಭಾ ಆಜೂರ (36), ಅಂಬಿಕಾ ಆಜೂರ (14), ಮಾನಂದಾ ಆಜೂರ (32), ಹನುಮಂತ ಆಜೂರ (42) ಚಾಲಕ ಹನುಮಂತ ಜಾಧವ (32) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನು 11 ಮಂದಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕ್ರೂಸರ್ ವಾಹನ ಮಾಡಿಕೊಂಡು ಮೊದಲು ಶ್ರೀಶೈಲ ದರ್ಶನ ಪಡೆದು ಬಳಿಕ ತಿರುಪತಿಗೆ ತೆರಳಿದ್ದರು. ಬಳಿಕ ತಿರುಪತಿ ತಿಮ್ಮಪ್ಪನ ದರ್ಶನ ಮಾಡಿ ಇಂದು ಮನೆಗೆ ವಾಪಸ್ ಆಗುತ್ತಿದ್ದರು. ಆದರೆ, ಜವರಾಯ ಅಟ್ಟಹಾಸ ಮೆರೆದಿದ್ದು, ತಿರುಪತಿ ತಿಮ್ಮಪ್ಪನ ದರ್ಶನ ಪಡೆದು ವಾಪಾಸ್ ಮನೆ ಬರುತ್ತಿದ್ದವರ ಪೈಕಿ ಐವರು ಮಸಣ ಸೇರಿದ್ದಾರೆ. ಸೂರ್ಯಪೇಠ ಜಿಲ್ಲಾ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.




